ಶೃಂಗೇರಿ ಶಾರದಾಪೀಠದಲ್ಲಿ ಶಂಕರ ಜಯಂತಿ
ಶೃಂಗೇರಿ: ಶೃಂಗೇರಿ ಶಾರದಾಪೀಠದಲ್ಲಿ ಭಾನುವಾರ ಶ್ರೀ ಶಂಕರಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಬೆಳಗ್ಗೆ ೮ಗಂಟೆಯಿಂದ ೧೨.೩೦ರ ತನಕ ಶ್ರೀ ಶಂಕರ ಭಗವತ್ಪಾದರ ಮೂರ್ತಿಗೆ ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ, ಸಹಸ್ರನಾಮಾರ್ಚನೆ, ಚತುರ್ವೇದ-ಪ್ರಸ್ಥಾನತ್ರಯಭಾಷ್ಯ-ವಿದ್ಯಾರಣ್ಯ ವೇದ ಭಾಷ್ಯ-ಶ್ರೀಶಂಕರ ದಿಗ್ವಿಜಯ ಇತ್ಯಾದಿ ಪಾರಾಯಣಗಳನ್ನು ಶ್ರೀಮಠದ ಋತ್ವ ಜರು ಪಠಣ ಮಾಡಿದರು.
ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಶ್ರೀಶಂಕರಾಚಾರ್ಯರ ಮೂರ್ತಿಗೆ ಪಂಚಾಮೃತ ಅಭಿಷೇಕ ವಿವಿಧ ಪುಷ್ಪಗಳನ್ನು ಸಮರ್ಪಿಸಿ ಸಾಲಂಕೃತಗೊಂಡ ಮೂರ್ತಿಗೆ ಯತಿವರ್ಯರು ವಿಶೇಷಪೂಜೆ ಸಲ್ಲಿಸಿದರು.
ಜಗದ್ಗುರು ಶ್ರೀಭಾರತೀ ತೀರ್ಥ ಮಹಾಸ್ವಾಮೀಜಿ ಅವರು ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು. ಸಾಯಂಕಾಲ ವೇದಸ್ವಸ್ತಿವಾಚನ ಮತ್ತು ಶ್ರೀಶಂಕರ ದಿಗ್ವಿ ಜಯ ಪಾರಾಯಣ, ಭಗವತ್ಪಾದರ ಮೂರ್ತಿಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮಾಡಲಾಯಿತು.
ತಾಲ್ಲೂಕಿನ ಮನೆ ಮನೆಗಳಲ್ಲಿ, ಶ್ರೀ ದುರ್ಗಾಪರಮೇಶ್ವರಿ ದೇವಾಲಯ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಹಾಗೂ ವಿಪ್ರ ವೇದಿಕೆಯಿಂದ ಉಳುವೆಬೈಲು ಶ್ರೀ ಪ್ರಸನ್ನ ದೇವಸ್ಥಾನದಲ್ಲಿ ಶ್ರೀ ಶಂಕರಾಚಾರ್ಯರ ಭಾವಚಿತ್ರ ಇರಿಸಿ, ವಿವಿಧ ಪುಷ್ಪಗಳಿಂದ ಅಲಂಕರಿಸಿ, ಶ್ರೀ ಭಗವತ್ಪಾದರು ರಚಿಸಿದ ಸ್ತೋತ್ರಗಳನ್ನು ಪಠಿಸಿ ಸದ್ಭಕ್ತರು ಪೂಜೆ ಸಲ್ಲಿಸಿದರು. ಸೋಮವಾರ ಬೆಳಗ್ಗೆ ಶ್ರೀ ಶಂಕರಾಚಾರ್ಯರ ಮಹಾರಥೋತ್ಸವ ನೆರವೇರಲಿದೆ.