೪.೨೧ ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ ವಶ
ಚಿಕ್ಕಮಗಳೂರು: ಸೂಕ್ತ ದಾಖಲೆಗಳು ಇಲ್ಲದೆ ಸಾಗಿಸುತ್ತಿದ್ದ ೪.೨೧ ಕೋಟಿ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ಬಿವಿಸಿ ಸಾರಿಗೆ ಸಂಸ್ಥೆಯ ಮಹೇಂದ್ರ ವಾಹನವನ್ನು ಎಂ.ಸಿ.ಹಳ್ಳಿ ಚೆಕ್ಪೋಸ್ಟ್ ಬಳಿ ತಡೆದು ಶೋಧಿಸಿದಾಗ ಭಾರಿ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿವೆ. ನಾಲ್ಕು ಕೋಟಿ ರೂ. ಬೆಳೆಯ ೬ ಕೆ.ಜಿ ೫೮೬ ಗ್ರಾಂ ತೂಕದ ಚಿನ್ನದ ಆಭರಣ, ೨,೪೭ ಲಕ್ಷ ರೂ. ಬೆಲೆ ಬಾಳುವ ಒಂದು ಕೆ.ಜಿ ೮೭೩ ಗ್ರಾಂ ತೂಕದ ಬೆಳ್ಳಿಯ ಆಭರಣಗಳು ದೊರಕಿವೆ.
೧೭.೪೭ ಲಕ್ಷ ರೂಪಾಯಿ ಬೆಲೆಯ ಒಂದು ಕೆ.ಜಿ ೭೭ ಗ್ರಾಂ ತೂಕದ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ವ್ಯವಸ್ಥಾಪಕ ಗೋಪಾಲ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ನಾಡ ಬಂದೂಕು ವಶ: ಅಕ್ರಮವಾಗಿ ಪರವಾನಗಿ ಇಲ್ಲದೆ ನಾಡ ಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯಲ್ಲಿ ನಡೆದಿದೆ. ಬಣಕಲ್ ಹೋಬಳಿಯ ಬಸನಿ ಹೆಗ್ಗುಡ್ಲು ಗ್ರಾಮದ ಲೋಕೇಶ್ ಯಾವುದೇ ಪರವಾನಗಿ ಇಲ್ಲದೇ ಮನೆಯಲ್ಲಿ ಅಕ್ರಮವಾಗಿ ನಾಡ ಬಂದೂಕು ಮತ್ತು ಚರೆಯನ್ನು ಇಟ್ಟುಕೊಂಡಿದ್ದ ಎನ್ನಲಾಗಿದೆ.
ಖಚಿತ ಮಾಹಿತಿ ಪಡೆದ ಬಣಕಲ್ ಪೊಲೀಸರು ದಾಳಿ ನಡೆಸಿ ಒಂಟಿ ನಳಿಕೆಯ ನಾಡ ಬಂದೂಕು ಹಾಗೂ ೧೨ ಚರೆಯನ್ನು ವಶಪಡಿಸಿಕೊಂಡು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.