ಚಿತ್ರಾಪುರದಲ್ಲಿ ಗಾಯತ್ರಿ ಸಂಗಮ, ಆದಿತ್ಯ ಯುವ ಸಂಗಮ
ಗಾಯತ್ರಿ ಜಪಾನುಷ್ಟಾನವೇ ಬ್ರಾಹ್ಮಣತ್ವದ ಮಹಾಶಕ್ತಿ : ಹರಿನಾರಾಯಣ ಆಸ್ರಣ್ಣ
ಮಂಗಳೂರು: ಗಾಯತ್ರಿ ಜಪಾನುಷ್ಟಾನವೇ ಬ್ರಾಹ್ಮಣರ ಮಹಾಶಕ್ತಿಯಾಗಿದೆ. ಬ್ರಾಹ್ಮಣ ಸಂಸ್ಕೃತಿ, ಸಂಪ್ರದಾಯಗಳು ಗಾಯತ್ರಿಮಂತ್ರದ ಒಡಲಲಿದ್ದು ನಮ್ಮ ಯುವ ಪೀಳಿಗೆಗೆ ಇದರ ಅನುಷ್ಟಾನಕ್ಕಾಗಿ ವಿಪ್ರ ಕುಟುಂಬಗಳು ಗಮನ ನೀಡಬೇಕಿದೆ ಎಂದು ಯಾಗ ಸಮಿತಿ ಸಂಚಾಲಕರಾದ ಕಟೀಲು ಕ್ಷೇತ್ರದ ಶ್ರೀ ಹರಿನಾರಾಯಣ ಆಸ್ರಣ್ಣ ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದೊಂದಿಗೆ ಅ. ೨೬ ಮತು ೨೭ರಂದು ನಡೆಸಲು ಉದ್ದೇಶಿಸಿದ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರೀ ಜಪಯಜ್ಞದ
ಪ್ರಯುಕ್ತ ಹಮ್ಮಿಕೊಂಡಿದ್ದ ಆದಿತ್ಯ ಯುವ ಸಂಗಮ ಕಾರ್ಯಕ್ರಮದ ಹಳೆ ಬೇರು ಹೊಸ ಚಿಗುರು ಕಾರ್ಯಕ್ರಮ ಸಂವಾದದಲ್ಲಿ ಮಾತನಾಡಿದರು.
ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ದೇವರ ಮುಂದೆ ಗಾಯತ್ರಿ ಜಪಾನುಷ್ಟಾನ ಮಾಡಿದಲ್ಲಿ ಶಿಸ್ತು, ಸಂಸ್ಕಾರ ಬೆಳೆಯುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣದ ಅವಶ್ಯಕತೆಯ ನಡುವೆ ನಮ್ಮ ವಿಪ್ರ ಬಾಂಧವರು ಮಕ್ಕಳನ್ನು ವೇದ ಪಾಠ ಶಾಲೆ, ವಸಂತ ಶಿಬಿರಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಮಾಡಿದಾಗ ದೇವತ್ವದೆಡೆಗೆ ಮನಸು ಹೊರಳಿ ರಾಕ್ಷಸತ್ವದ ನಾಶವಾಗುತ್ತದೆ. ಈ ಪ್ರಯತ್ನ ಇದೇ ವೇದಿಕೆಯಿಂದ ಆರಂಭವಾಗಲಿ ಎಂದು ಆಶಯ ವ್ಯಕ್ತ ಪಡಿಸಿದರು.
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಹಾಗೂ ತ್ರಿಮತಸ್ಥ ಬ್ರಾಹ್ಮಣ ಸಂಘದ ಪ್ರಮುಖರಾದ ಡಾ. ಬಿ.ಎಸ್.ರಾಘವೇಂದ್ರ ಭಟ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಬ್ರಾಹ್ಮಣರ ಸಂಖ್ಯೆ ೪೪ ಲಕ್ಷವಿದೆ. ಆದರೆ ಈಗಿನ ಜಾತಿ ಜನಗಣತಿಯಲ್ಲಿ ಕೇವಲ ೧೬ ಲಕ್ಷ ಮಾತ್ರವೇ ತೋರಿಸಲಾಗುತ್ತಿದೆ. ಹೀಗಾಗಿ ಇದರ ಮಂಡನೆಗೆ ಬ್ರಾಹ್ಮಣ ಸಂಘಟನೆಯ ವಿರೋಧವಿದೆ.ಸರಿಯಾದ ಜಾತಿ ಗಣತಿ ಆಗಬೇಕಿದೆ ಎಂದರು. ರಾಜಕೀಯವಾಗಿ ನಮ್ಮ ಬಲ ತೋರಿಸಲು ಬ್ರಾಹ್ಮಣ ಸಮುದಾಯದ ಎಲ್ಲಾ ಪಂಗಡ, ಉಪ ಪಂಗಡ ಒಂದೇ ಸಂಘಟನೆಯಡಿ ಒಗ್ಗೂಡಿ ಶಕ್ತಿ ಪ್ರದರ್ಶಿಸಬೇಕು.
ಮುಂದಿನ ಜನವರಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಬೃಹತ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಆಯೋಜಿಸಲಿದ್ದು ಸರ್ವರೂ ಭಾಗವಹಿಸಬೇಕೆಂದರು.
ಚಿತ್ರಾಪುರ ಮಠದ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ , ಬ್ರಾಹ್ಮಣ ಸಮುದಾಯದ ಒಳಿತಿಗಾಗಿ ,ಒಗ್ಗಟ್ಟಿಗಾಗಿ ಹಾಗೂ ಲೋಕಾನುಗ್ರಹಕ್ಕಾಗಿ ಮಾಡುತ್ತಿರುವ ಕೋಟಿ ಜಪ ಯಜ್ನ ಶ್ರೇಷ್ಠ ಕಾರ್ಯಕ್ರಮವಾಗಿದೆ. ನಮ್ಮ ಆಚರಣೆ ,ಸಂಪ್ರದಾಯವೇ ನಮ್ಮ ಶಕ್ತಿಯಾಗಿದೆ. ಇದನ್ನು ಬಿಡದೆ ಈಗಿನ ಆಧುನಿಕ ಜೀವನದೊಂದಿಗೆ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ಉಮೇಶ್ ಶಾಸ್ತ್ರಿ, ಆರ್.ಡಿ ಶಾಸ್ತ್ರಿ, ಎಂ.ಎಸ್ ಗುರುರಾಜ್, ಕಶೆಕೋಡಿ ಸೂರ್ಯನಾರಾಯಣ ಭಟ್,ಶ್ರೀಖರ್ ದಾಮ್ಲೆ, ಪೊಳಲಿ ಗಿರಿ ಪ್ರಕಾಶ್ ತಂತ್ರಿ, ಸಂದೀಪ ಮಂಜ, ಚೇತನ ದತ್ತಾತ್ರೇಯ, ಉಮಾ ಸೋಮಯಾಜಿ, ಕ್ಯಾತ್ಯಾಯಿನಿ, ಕೃಷ್ಣ ಭಟ್ ಕದ್ರಿ,ಜಪ ಯಜ್ನ ಸಮಿತಿಯ ಮಹೇಶ್ ಕಜೆ, ಶ್ರೀಧರ ಹೊಳ್ಳ ಮತ್ತಿತರರು ವೇದಿಕೆಯಲ್ಲಿದ್ದರು. ಪುತ್ತಿಗೆ ಅನಂತ ಪದ್ಮನಾಭ ಭಟ್, ಪುತ್ತಿಗೆ ಬಾಲಕೃಷ್ಣ ಭಟ್ ವಿಚಾರ ಮಂಡನೆ ಮಾಡಿದರು. ಸುಬ್ರಹ್ಮಣ್ಯ ಕೊರಿಯಾರ್ ಕಾರ್ಯಕ್ರಮ ನಿರೂಪಿಸಿದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಗೋಪೂಜೆ, ಗಣಪತಿ ಹೋಮ, ದುರ್ಗಾಹೋಮ, ರುದ್ರ ಹೋಮ, ಕೃಷ್ಣ ಮಂತ್ರ ಹೋಮ, ಪವಮಾನ ಹೋಮ, ನಾಗದೇವರಿಗೆ ಅಭಿಷೇಕ ನೆರವೇರಿತು. ಆ ಬಳಿಕ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಗಾಯತ್ರಿ ಮಹಾತ್ಮೆ ಕಾರ್ಯಕ್ರಮ ನೆರವೇರಿತು.
ಅ.೨೭ರಂದು ಬೆಳಗ್ಗೆ ೬.೩೦ಕ್ಕೆ ಗಾಯತ್ರಿ ಯಜ್ನ ಆರಂಭವಾಗಲಿದ್ದು ,೧೦.೩೦ ಗಂಟೆಗೆ ಪೂರ್ಣಾಹುತಿ ನೆರವೇರಲಿದೆ. ವೇ.ಮೂ ಕುಡುಪು ಕೃಷ್ಣರಾಜ ತಂತ್ರಿ ಅವರು ನೇತೃತ್ವ ವಹಿಸುವರು.೧೧ ಗಂಟೆಗೆ ಧರ್ಮ ಸಭೆ ನಡೆಯಲಿದ್ದು,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಆಶೋಕ್ ಹಾರನಹಳ್ಳಿ, ಪೇಜಾವರ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು,ಎಡನೀರು ಶ್ರೀಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು, ಚಿತ್ರಾಪುರ ಮಠದ ಶ್ರೀಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರ ಸಹಿತ ಗಣ್ಯರು ಭಾಗವಹಿಸುವರು.