ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಚಿನ್ನದ ನಾಡಿನ ಕಲಾವಿದೆಯ ಪ್ರತಿಭೆ ಅನಾವರಣ

07:19 PM May 03, 2024 IST | Samyukta Karnataka

ಬೆಂಗಳೂರು: ಕೋಲಾರ ಮೂಲದ ಇಂಜಿನಿಯರ್ ಎಚ್.ಎಸ್. ಸುರೇಶ್ ಮತ್ತು ಸಂಸ್ಕೃತ ಶಿಕ್ಷಕಿ ಕೆ. ಸಿ. ನಾಗಶ್ರೀ ಅವರ ಪುತ್ರಿ ವಿದ್ಯಾಶ್ರೀ ಎಚ್.ಎಸ್. ಇದೀಗ ಭರತನಾಟ್ಯ ರಂಗಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಸಂಸ್ಕಾರವಂತ ಕುಟುಂಬದಿಂದ ಬಂದ ಯುವತಿಯು ವಿದುಷಿ ರೂಪಶ್ರೀ ಮಧುಸೂದನ ಅವರಲ್ಲಿ ಶಿಷ್ಯತ್ವ ಪಡೆದಿದ್ದು, ರಂಗಾರೋಹಣಕ್ಕೆ ಅಣಿಯಾಗಿರುವುದು ವಿಶೇಷ.
ಮೇ 4ರಂದು ಬೆಳಗ್ಗೆ 9.30ಕ್ಕೆ ರಾಜಧಾನಿ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಹಿರಿಯ ಕಲಾವಿದರು, ಖ್ಯಾತ ವಿದ್ವಾಂಸರ ಸಮ್ಮುಖ ರಂಗ ಪ್ರಸ್ತುತಿ ಸಂಪನ್ನಗೊಳ್ಳಲಿದೆ.
ಕಾರ್ಯಕ್ರಮಕ್ಕೆ ಗುರು ವಿದುಷಿ ರೂಪಶ್ರೀ ಮಧುಸೂದನರ ನಟುವಾಂಗ, ವಿದುಷಿ ದೀಪ್ತಿ ಶ್ರೀನಾಥ ಅವರ ಗಾಯನವಿದೆ. ಪಕ್ಕವಾದ್ಯ ಮೃದಂಗದಲ್ಲಿ ವಿದ್ವಾನ್ ಶ್ರೀಹರಿ ರಂಗಸ್ವಾಮಿ, ಕೊಳಲು-ವಿದ್ವಾನ್ ವಿವೇಕ ಕೃಷ್ಣ, ರಿದಂ ಪ್ಯಾಡ್‌ನಲ್ಲಿ ವಿದ್ವಾನ್ ಕಾರ್ತಿಕ್ ದಾತಾರ್ ಸಾಥ್ ನೀಡಲಿದ್ದಾರೆ. ಮನೋಜ್ಞ ನೃತ್ಯ ಪ್ರದರ್ಶನಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಲಾಶ್ರೀ, ಹಿರಿಯ ನೃತ್ಯ ಪ್ರವೀಣೆ ಡಾ. ಪದ್ಮಜಾ ಸುರೇಶ, ಭರತನಾಟ್ಯ ವಿದ್ವಾಂಸ ಪ್ರವೀಣ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಮನೆಯ ಸಂಸ್ಕಾರವೇ ಕಲೆಗೆ ಭೂಮಿಕೆಯಾಯಿತು:
ಸುಸಂಸ್ಕೃತ ಮನೆಯಲ್ಲಿ ಹಿರಿಯರಿಂದ ದೊರಕುವ ಸಂಸ್ಕಾರವೇ ಮಕ್ಕಳ ಕಲಾಸಕ್ತಿಗೆ ಭೂಮಿಕೆಯಾಗಿತ್ತದೆ ಎಂಬುದಕ್ಕೆ
ಯುವ ಪ್ರತಿಭೆ ವಿದ್ಯಾಶ್ರೀ ಪ್ರತೀಕವಾಗಿದ್ದಾರೆ ಎನ್ನಬಹುದು. ಹೌದು. ಕೋಲಾರ ಮೂಲದ ಇಂಜಿನಿಯರ್ ಎಚ್.ಎಸ್. ಸುರೇಶ್ ಮತ್ತು ಸಂಸ್ಕೃತ ಶಿಕ್ಷಕಿ ಕೆ. ಸಿ. ನಾಗಶ್ರೀ ಅವರ ವಂಶದಲ್ಲಿ ಎಲ್ಲರಿಗೂ ಸಂಗೀತ-ನೃತ್ಯದ ಬಗ್ಗೆ ಅಪಾರ ಗೌರವ ಇದೆ. ಆದರೆ ಯಾರೂ ಅದರಲ್ಲಿ ಈ ಮಟ್ಟಿನ ಸಾಧನೆ ಮಾಡಿದವರಿಲ್ಲ. ಆದರೂ ವಿದ್ಯಾಶ್ರೀಗೆ ಹೇಗೆ ಭರತನಾಟ್ಯ ಕಲೆ ಒಲಿಯಿತು ಎಂದು ಅವಲೋಕಿಸಿದಾಗ ಇದರ ಹಿಂದೆ ಅವರ ಮನೆಯ ಸಂಸ್ಕಾರ ಢಾಳಾಗಿ ಎದ್ದು ಕಾಣುತ್ತದೆ.
ಈ ಬಗ್ಗೆ ವಿದ್ಯಾಶ್ರೀ ಅವರ ತಾಯಿ ನಾಗಶ್ರೀ ಪ್ರತಿಕ್ರಿಯಿಸಿದ್ದು ಹೀಗೆ. ನನ್ನ ಮಗಳು ವಿದ್ಯಾಶ್ರೀಗೆ 6ನೇ ವರ್ಷದಿಂದಲೇ ಸಂಗೀತ-ನೃತ್ಯದ ಆಸಕ್ತಿ ಕಾಣಿಸಿತು. ಮನೆಯ ಸಮೀಪದಲ್ಲೇ ಶಾರದಾ ಸುಗಮ ಸಂಗೀತ ಶಾಲೆಯಲ್ಲಿ ಗಾಯನ, ಚಿತ್ರಕಲಾ ತರಗತಿಗೆ ಸೇರಿದಳು. ಮಗಳು ವ್ಯಾಸಂಗ ಮಾಡುತ್ತಿದ್ದ ವಿದ್ಯಾನಿಕೇತನ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ವಿದುಷಿ ರೂಪಶ್ರೀ ಮಧುಸೂದನ ಅವರು ಈಕೆ ಪ್ರತಿಭೆ ಗುರುತಿಸಿದರು. ಸರಿ. ಅವರ ಬಳಿಯೇ
ನೃತ್ಯಗಂಗಾ ಕಲಾ ಶಾಲೆಯಲ್ಲಿ ನೃತ್ಯಾಭ್ಯಾಸ ಆರಂಭವಾಯಿತು. 16 ವರ್ಷದಿಂದ ನಾವು ಈಕೆಗೆ ಎಂದೂ ‘ಅಭ್ಯಾಸ ಮಾಡು’, ನೃತ್ಯ ಪರೀಕ್ಷೆ ಕಟ್ಟು ಎಂದು ಹೇಳಿಲ್ಲ. ಎಲ್ಲವೂ ಅವಳ ಸ್ವಯಂ ಸ್ಫೂರ್ತಿಯೇ-ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಶಾಲಾ ಕಲಿಕೆಗೆ ಪೂರಕವಾದ ನೃತ್ಯ
ಸಾಮಾನ್ಯವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಂತಕ್ಕೆ ಬಂದ ಮಕ್ಕಳಿಗೆ ಪಾಲಕರು ಸಂಗೀತ- ನೃತ್ಯ- ಕಲೆ- ಕ್ರೀಡೆ- ಹೀಗೆ ಎಲ್ಲ ಚಟುವಟಿಕೆಗಳನ್ನೂ ಸ್ಟಾಪ್ ಮಾಡಿಬಿಡುತ್ತಾರೆ. ‘ಓದಬೇಕು, ಅಂಕ ಗಳಿಸಬೇಕು’ ಅಷ್ಟೇ ಪರಮ ಗುರಿ ! ಆದರೆ ವಿದ್ಯಾಶ್ರೀ ವಿಭಿನ್ನ. ಕಲೆ ಎಂದಿಗೂ ಶಾಲಾ ಪಠ್ಯಕ್ರಮಕ್ಕೆ ಪೂರಕವಾಗಿ ಇರುತ್ತದೆ ಎಂದು ಶಿಕ್ಷಣ ತಜ್ಞರು ಹೇಳುವ ಮಾತನ್ನು ಈಕೆ ದಿಟಗೊಳಿಸಿದಳು. 10ನೇ ತರಗತಿ ವ್ಯಾಸಂಗದ ನಡುವೆಯೇ ಭರತನಾಟ್ಯ ಸೀನಿಯರ್ ಪರೀಕ್ಷೆಯನ್ನು ಉತ್ತಮ ಅಂಕದೊಂದಿಗೇ ಉತ್ತೀರ್ಣಳಾದಳು.
ಮಾದರಿ ವಿದ್ಯಾರ್ಥಿ:
ವಿದುಷಿ ದಿವ್ಯಾ ಗಿರಿಧರ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪಾಠಕ್ರಮ ಪೂರ್ಣಗೊಳಿಸಿಕೊಂಡಳು. ಶಾಲಾ- ಕಾಲೇಜಿನ ಯಾವ ಹಂತದ ಪರೀಕ್ಷೆಗೂ ಸಂಗೀತ- ನೃತ್ಯ ಎಂಬುದು ಚೈತನ್ಯ ಕೊಟ್ಟಿತು. ಇದು ನಮ್ಮೆಲ್ಲಾ ಪಾಲಕರಿಗೆ ಮಾದರಿಯಾಗಬೇಕು. ಆ ಮಟ್ಟಿನ ಸಾಧನೆ ಮಾಡಿದ ವಿದ್ಯಾಶ್ರೀ, ಹಿಂತಿರುಗಿ ನೋಡಲೇ ಇಲ್ಲ. ಬಿಇ- ಎಂಎ. ಫೈನ್ ಆರ್ಟ್ಸ್ ಸಂದರ್ಭದಲ್ಲೂ ನೃತ್ಯ ಕಲಿಕೆ ಮರೆಯಲಿಲ್ಲ. ಆ ಮಟ್ಟಿಗಿನ ಬಾಂಧವ್ಯ, ಗುರು- ಶಿಷ್ಯ ಪರಂಪರೆಯನ್ನು ಬಿಗಿಗೊಳಿಸಿದ ಕೀರ್ತಿ ವಿದುಷಿ ರೂಪಶ್ರೀ ಅವರಿಗೂ ಸಲ್ಲುತ್ತದೆ. 16 ವರ್ಷ ನರ್ತನ ಕಲಿಕೆ ಫಲವಾಗಿ ವಿದ್ಯಾಶ್ರೀ ಇದೀಗ ಭರತನಾಟ್ಯ ವಿದ್ವತ್ ಪೂರ್ಣಗೊಳಿಸಿ ಕ್ರೈಸ್ಟ್ ವಿಶ್ವ ವಿದ್ಯಾಲಯದಲ್ಲಿ ಭರತನಾಟ್ಯ ಸ್ನಾತಕೋತ್ತರ ಪದವಿಯನ್ನೂ (ವಾರಾಂತ್ಯ ತರಗತಿಗೆ ಬದ್ಧವಾಗಿ) ಪಡೆದಿರುವುದು ಸಾಧನೆಯ ಛಾವಣಿಯ ನಿಚ್ಚಣಿಕೆಯಾಗಿದೆ.
ಬಹುಮುಖೀ-ಸಖೀ:
ಇದರೊಂದಿಗೆ ಈಕೆ ಸಂಸ್ಕೃತ ಭಾಷೆಯಲ್ಲೂ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. 15 ವರ್ಷಗಳಿಂದ ವಿದ್ವಾನ್. ಸುಬ್ರಮಣ್ಯಯನ್ ಅವರ ಮಾರ್ಗದರ್ಶನದಲ್ಲಿ ಸಂಸ್ಕೃತ ಭಾಷಾಧ್ಯಯನ ಸಾಗಿದೆ. ವಿದುಷಿ ಅನಂತಲಕ್ಷ್ಮೀ ನಟರಾಜನ್ ರವರು ಸ್ಥಾಪಿಸಿದ ಗೀತಾಗೋವಿಂದ ಸಂಸ್ಕೃತ ಸಂಘದಲ್ಲಿ ಈಕೆ ಸಂಸ್ಕೃತ ಶಿಕ್ಷಕಿಯಾಗಿದ್ದಾರೆ. ವ್ಯೋಮಾ ಲಿಂಗ್ವಿಸ್ಟಿಕ್ ಲ್ಯಾಬ್ಸ್, ಸಂಸ್ಕೃತ ಇ - ಲರ್ನಿಂಗ್ ಸಂಸ್ಥೆಯಲ್ಲಿ ಸ್ವಯಂ ಸೇವಕಿಯಾಗಿ ಸೇವೆ ಮಾಡುತ್ತಿದ್ದಾರೆ.
ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಅನ್ನ ನೀಡುವ ‘ ಆಪ್ತ ಸಹಾಯ ಫೌಂಡೇಷನ್’ ಎಂಬ ಎನ್‌ಜಿಒದಲ್ಲೂ ವಿದ್ಯಾಶ್ರೀ ವಾಲಂಟಿಯರ್. ಹೆತ್ತವರಿಗೆ, ವಿದ್ಯೆ ಕಲಿಸಿದ ಗುರುವಿಗೆ ಇದಕ್ಕಿಂತ ಇನ್ನೇನು ಕಾಣಿಕೆ ಬೇಕು? ಎಲ್ಲ ಮನೆಯಲ್ಲೂ ವಿದ್ಯಾಶ್ರೀ ಯಂಥಾ ಮಕ್ಕಳೇ ಜನಿಸಿದರೆ ನಮ್ಮ ಭರತಖಂಡದ ಕೀರ್ತಿ ಬಹುಬೇಗ ವಿಶ್ವವ್ಯಾಪಿ ಆಗಲಿದೆ.
ಬನ್ನಿ. ಚಿನ್ನದ ನಾಡು ಕೋಲಾರ ಮೂಲದ ಹೆಮ್ಮೆಯ ಪುತ್ರಿಯ ಕಲಾ ಸೊಬಗಿನ ದರ್ಶನ ಮಾಡೋಣ.

Next Article