ಚಿ-ಮುಲ್ ವಾಪಸ್ ಬೇಕು: ಕೆ.ಸುಧಾಕರ ಆಗ್ರಹ
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಸಂಸದ ಡಾ.ಕೆ.ಸುಧಾಕರ ನೇತೃತ್ವದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಬಿಜೆಪಿ ಕಾರ್ಯಕರ್ತರು ನಡೆಸಿದರು. ಈ ವೇಳೆ ಮಾತನಾಡಿದ ಅವರು ಚುನಾವಣೆ ಗೆಲ್ಲಲು ರೈತರ ಮತ ಪಡೆದ ಕಾಂಗ್ರೆಸ್ ಪಕ್ಷ, ಅಧಿಕಾರಕ್ಕೆ ಬಂದ ನಂತರ ರೈತರ ಹಾಲು ಪ್ರೋತ್ಸಾಹಧನವನ್ನು 2 ರೂ. ಕಡಿತಗೊಳಿಸಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ. ಸರ್ಕಾರ ಕೂಡಲೇ ಈ ಆದೇಶವನ್ನು ಹಿಂಪಡೆದು ಬದಲಿಗೆ ಪ್ರೋತ್ಸಾಹ ಧನವನ್ನ ಮೂರು ರೂಪಾಯಿ ಹೆಚ್ಚಿಸಬೇಕು. ಬೆಲೆ ಏರಿಕೆ ನಡುವೆ ಹೈನುಗಾರಿಕೆ ನಡೆಸುವುದು ಬಹಳ ಕಷ್ಟಕರವಾಗಿದ್ದು, ಆಹಾರ, ಮೇವಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ರೈತರು ಶ್ರಮ ವಹಿಸಿ ಹಾಲು ನೀಡಿದರೆ ಅದಕ್ಕೆ ಮಾರುಕಟ್ಟೆ ಒದಗಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಅಧಿಕಾರಾವಧಿ ಮುಗಿದರೂ ನಾಚಿಕೆ ಇಲ್ಲದೆ ಆಡಳಿತ ಮಂಡಳಿಯ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಸರ್ಕಾರಕ್ಕೆ ಯಾವುದೇ ಕಾನೂನು, ನಿಯಮ ಇಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಚಿಕ್ಕಬಳ್ಳಾಪುರಕ್ಕೆ ನೀಡಲಾಗಿದ್ದ ಪ್ರತ್ಯೇಕ ಒಕ್ಕೂಟ ಮರಳಿ ನೀಡಬೇಕು. ರಾಜ್ಯಕ್ಕೆ ಸೌಭಾಗ್ಯ ತರುತ್ತೇವೆ ಎಂದು ಹೇಳಿದ ಕಾಂಗ್ರೆಸ್ ಪಕ್ಷ, ರೈತರಿಗೆ ದೌರ್ಭಾಗ್ಯ ತಂದಿದೆ. ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಬೇರ್ಪಡಿಸಿ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ನೀಡಿದರೆ, ರಾಜಕೀಯ ದ್ವೇಷದಿಂದ ಅದನ್ನು ರದ್ದು ಮಾಡಿ ಮತ್ತೆ ವಿಲೀನ ಮಾಡಿದ್ದಾರೆ. ಹಾಲು ಉತ್ಪಾದಕರಿಗೆ ಸುಮಾರು 700 ಕೋಟಿ ರೂ. ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ. ಕಾಂಗ್ರೆಸ್ ಸರ್ಕಾರ ಗ್ರಾಹಕರಿಗೆ ಹಾಲಿನ ದರದಲ್ಲಿ 2 ರೂ. ಹೆಚ್ಚಳ ಮಾಡಿದ್ದರೂ, ಅದರಲ್ಲಿ ಸ್ವಲ್ಪ ಲಾಭವನ್ನೂ ರೈತರಿಗೆ ನೀಡಿಲ್ಲ. ಅದರ ಹೊರತಾಗಿಯೂ ಈಗ ಕೋಚಿಮುಲ್‌ನಲ್ಲಿ ರೈತರಿಂದ ಖರೀದಿ ಮಾಡುವ ಹಾಲಿನ ದರದಲ್ಲಿ 2 ರೂ. ಇಳಿಕೆ ಮಾಡಲಾಗಿದೆ. ಹೆಚ್ಚು ಹಾಲು ಸಂಗ್ರಹವಾಗುತ್ತಿದ್ದರೆ , ಅದರಿಂದ ಪನೀರ್, ಐಸ್‌ಕ್ರೀಮ್ ಮೊದಲಾದ ಮೌಲ್ಯವರ್ಧಿತ ಉತ್ಪನ್ನಗಳನ್ನ ತಯಾರಿಸಿ ಹೊರರಾಜ್ಯಕ್ಕೆ ಕಳುಹಿಸಬೇಕು, ಮಾರುಕಟ್ಟೆ ವಿಸ್ತರಿಸಲು ಯೋಜನೆ ರೂಪಿಸಬೇಕು. ಅದು ಬಿಟ್ಟು ರೈತರ ಜೇಬಿಗೆ ಕತ್ತರಿ ಹಾಕಲಾಗಿದೆ. ಇಂತಹ ಲಜ್ಜೆಗಟ್ಟ ಸೋಮಾರಿ ಆಡಳಿತಗಾರರು ಕೋಚಿಮುಲ್‌ನಲ್ಲಿ ಇರಲು ನಾಲಾಯಕ್ಕು. ಆಡಳಿತ ಮಂಡಳಿಯವರು ಆರು ತಿಂಗಳಿಗೊಮ್ಮೆ ಮಾಡುವ ಫಾರಿನ್ ಟ್ರಿಪ್‌ಗಳನ್ನು ಕಡಿಮೆ ಮಾಡಿದರೆ ಹಣ ಉಳಿಸಬಹುದು. ಇದೇ ಮಂಡಳಿಯವರು ನೇಮಕಾತಿಯಲ್ಲಿ, ಮಾರಾಟದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಹತ್ತಾರು ದೇಶಗಳಿಗೆ ಪ್ರವಾಸ ಹೋಗಿ, ರೈತರ ದುಡ್ಡ ಬಳಸಿ, ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಮಾಡಿದ್ದಾರೆ. ನಾನು ಸಚಿವನಾಗಿದ್ದಾಗ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ತಂದಿದ್ದೆ. ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಅದನ್ನ ರದ್ದು ಮಾಡಿದ್ದರೂ, ಉಸ್ತುವಾರಿ ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ. ಈಗ ಹಾಲು ಖರೀದಿ ದರ ಕಡಿಮೆ ಮಾಡಿರುವುದನ್ನೂ ಸಮರ್ಥನೆ ಮಾಡಿಕೊಂಡಿದ್ದಾರೆ. ಇಂಥ ಲಜ್ಜೆಗೆಟ್ಟ ಸರ್ಕಾರ, ಮಂತ್ರಿಗಳನ್ನ ಇತಿಹಾಸದಲ್ಲೇ ಎಂದೂ ಕಂಡಿಲ್ಲ ಎಂದರು.