ಚುನಾವಣೆಗೂ ವಕ್ಫ್ ಹೋರಾಟಕ್ಕೂ ಸಂಬಂಧವಿಲ್ಲ
ಸರ್ಕಾರ ವಕ್ಫ್ ಹೆಸರಲ್ಲಿ ಅನ್ಯಾಯಕ್ಕೆ ಇಳಿದರೆ ಜನ ಬುದ್ಧಿ ಕಲಿಸುತ್ತಾರೆ
ಹುಬ್ಬಳ್ಳಿ: ಚುನಾವಣೆ ಫಲಿತಾಂಶಕ್ಕೂ ವಕ್ಫ್ ವಿವಾದಕ್ಕೂ ಸಂಬಂಧವಿಲ್ಲ. ಅದೇ ಸ್ಪಿರಿಟ್ ಅಲ್ಲೇ ವಕ್ಫ್ ವಿರುದ್ಧದ ಹೋರಾಟ ನಡೆಯಲಿದೆ ಎಂದು ಕೇಂದ್ರ ಆಹಾರ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ವಕ್ಫ್ ಭೂ ಕಬಳಿಕೆ ವಿರುದ್ಧ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದರು.
ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜನ ತಮ್ಮ ಪರವಾಗಿದ್ದಾರೆ ಎಂದು ಭಾವಿಸಿ ಕಾಂಗ್ರೆಸ್ ಸರ್ಕಾರ ಮತ್ತೆ ವಕ್ಫ್ ಮುನ್ನಲೆಗೆ ತಂದರೆ ಮುಂದೆ ಜನರೇ ಇವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರ ಮುಂದೆ ಮತ್ತೆ ವಕ್ಫ್ ಆಸ್ತಿ ಮಾಡಲು ಉದ್ದೇಶಿಸಿದೆ. ಆದರೆ, ಯಾವುದೇ ಕಾರಣಕ್ಕೂ ಬಿಜೆಪಿ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಕ್ಫ್ ನಲ್ಲಿ ಅನ್ಯಾಯ ನಡೆಯುತ್ತಲೇ ಇದೆ. ಈಗೇನೋ ಮೂರು ಕ್ಷೇತ್ರಗಳನ್ನು ಗೆದ್ದಿರಬಹುದು. ಆದರೆ, ಯಾವತ್ತೂ ಇದೇ ಹವಾ ಇರುತ್ತದೆ ಎಂದಲ್ಲ. ವಕ್ಫ್ ವಿಚಾರದಲ್ಲಿ ಹುಚ್ಚುತನ ಮಾಡುವುದನ್ನು ಕಾಂಗ್ರೆಸ್ಸಿಗರು ಬಂದ್ ಮಾಡಲಿ ಎಂದು ಸಚಿವ ಪ್ರಲ್ಹಾದ ಜೋಶಿ ಕಿವಿಮಾತು ಹೇಳಿದರು.
ಕಾಂಗ್ರೆಸ್ ಬೀಗುವುದು ಬೇಡ : ಹಿಂದೆ ನಾವೂ ಉಪಚುನಾವಣೆ ಎದುರಿಸಿದ್ದೇವೆ. ಇವರೀಗ ೩ ಕ್ಷೇತ್ರ ಗೆದ್ದಿದ್ದಾರೆ ಅಷ್ಟೇ. ಆದರೆ, ನಾವು ೧೭, ೧೮ ಕ್ಷೇತ್ರಗಳನ್ನು ಗೆದ್ದಿದ್ದೆವು. ಬಳಿಕ ಸಾರ್ವತ್ರಿಕ ಚುನಾವಣೆ ಸೋತೆವು. ಹೀಗೆ ಯಾವಾಗಲೂ ಒಂದೇ ರೀತಿಯ ವಾತಾವರಣ ಇರುವುದಿಲ್ಲ. ಏರುಪೇರು ಇದ್ದೇ ಇರುತ್ತದೆ. ಕಾಂಗ್ರೆಸ್ ಇಷ್ಟಕ್ಕೇ ಬೀಗುವುದು ಬೇಡ ಎಂದು ಸಲಹೆ ನೀಡಿದರು.