For the best experience, open
https://m.samyuktakarnataka.in
on your mobile browser.

ಚುನಾವಣೆ ನಂತರ ಕಾಂಗ್ರೆಸ್‌ನಲ್ಲಿ ಭೀಕರ ಯುದ್ಧ

04:54 AM Mar 29, 2024 IST | Samyukta Karnataka
ಚುನಾವಣೆ ನಂತರ ಕಾಂಗ್ರೆಸ್‌ನಲ್ಲಿ ಭೀಕರ ಯುದ್ಧ

ಶಿವಕುಮಾರ್ ಮೆಣಸಿನಕಾಯಿ
ಲೋಕಸಭೆ ಚುನಾವಣೆ ಬಳಿಕ ಕರ್ನಾಟಕದ ಕಾಂಗ್ರೆಸ್ ಸರಕಾರದಲ್ಲಿ ಭೀಕರ ಯುದ್ಧ ಶುರುವಾಗಲಿದೆ. ಮಂತ್ರಿಗಳು ಚುನಾವಣೆಗೆ ಸ್ಪರ್ಧಿಸಲೇಬೇಕೆಂದು ಸಿಎಂ ಸಿದ್ದರಾಮಯ್ಯ ಧಮ್ಕಿ ಹಾಕಿದರೂ ಸಚಿವರು ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸಿದ್ದಾರೆ. ಅವರೆಲ್ಲರೂ ಸೋತ ಬಳಿಕ ಸಿಎಂ ಹಾಗೂ ಸಚಿವರ ನಡುವೆ ಕಾಳಗವೇ ನಡೆಯಲಿದೆ. ಆದಾಗ್ಯೂ ಈ ಸರಕಾರ ಇನ್ನೂ ೪ ವರ್ಷ ಇರಬೇಕೆಂದು ನಾವು ಬಯಸುತ್ತೇವೆ..
ಹೀಗೆಂದು ಭವಿಷ್ಯ ನುಡಿದಿದ್ದಾರೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್‌ವಾಲ್. ಒಂದೂವರೆ ತಿಂಗಳಿನಿಂದ ಬೆಂಗಳೂರಿನಲ್ಲೇ ಮನೆ ಮಾಡಿರುವ ಡಾ.ರಾಧಾಮೋಹನ್ ತಳ ಹಿಡಿದಿದ್ದ ರಾಜ್ಯ ಬಿಜೆಪಿ ಸಂಘಟನೆಯನ್ನು ಲೋಕಸಭೆ ಚುನಾವಣೆಗೆ ಅಣಿಗೊಳಿಸುವ ಜವಾಬ್ದಾರಿ ಹೊತ್ತಿದ್ದಾರೆ. ಈ ಕುರಿತು ಸಂಯುಕ್ತ ಕರ್ನಾಟಕದ ಜತೆ ಮಾತನಾಡಿದ್ದಾರೆ.

 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತಿರಸ್ಕರಿಸಿದ್ದ ಜನರು, ಈಗ ಬೆಂಬಲಿಸುತ್ತಾರೆಂದು ಹೇಗೆ ನಂಬುತ್ತೀರಿ?
ರಾಧಾಮೋಹನ್: ಅಸೆಂಬ್ಲಿ ಚುನಾವಣೆಯಲ್ಲಿ ರಾಜ್ಯದ ಜನರಿಗೆ ಬಿಜೆಪಿ ಮೇಲೆ ತಾತ್ಕಾಲಿಕ ಕೋಪ ಇತ್ತು. ಕಾಂಗ್ರೆಸ್‌ನವರು ೪೦ ಪರ್ಸೆಂಟ್ ಕಮಿಷನ್ ವಿಚಾರದ ಮೂಲಕ ಸುಳ್ಳು ಅಜೆಂಡಾ ಸೃಷ್ಟಿಸಿದರು. ಜನರು ಭಾವುಕರಾಗಿ ಬಿಜೆಪಿ ವಿರುದ್ಧ ತಿರುಗಿಬಿದ್ದರು. ಆದರೆ ಕಳೆದ ೯ ತಿಂಗಳಲ್ಲಿ ಕಮಿಷನ್ ಆರೋಪ ಸುಳ್ಳು ಎಂಬುದು ಜನರಿಗೆ ಮನವರಿಕೆ ಆಗಿದೆ. ಈ ಬಾರಿ ಮೋದಿಗಾಗಿ ರಾಜ್ಯದ ಜನರು ಸಂಪೂರ್ಣ ಬೆಂಬಲ ಕೊಡುತ್ತಾರೆ. ನಾವು ಎಲ್ಲಾ ೨೮ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ.
 ಲೋಕಸಭೆ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ಸರಕಾರ ಪತನಗೊಳ್ಳುತ್ತದೆಯೇ?
ರಾಧಾಮೋಹನ್: ಇನ್ನೂ ನಾಲ್ಕು ವರ್ಷ ಈ ಸರಕಾರ ಇರಬೇಕೆಂದು ನಾವು ಬಯಸುತ್ತೇವೆ. ಆದರೆ ಕಳೆದ ೯ ತಿಂಗಳಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಲೋಕಸಭೆ ಚುನಾವಣೆ ನಂತರ ಕೇಂದ್ರ ಸರಕಾರ ಅನುದಾನ ಕೊಡುತ್ತಿಲ್ಲ ಎಂದು ನೆಪ ಹೇಳಿ ಗ್ಯಾರಂಟಿ ಸ್ಕೀಮ್‌ಗಳನ್ನು ಸಿದ್ದರಾಮಯ್ಯ ನಿಲ್ಲಿಸುತ್ತಾರೆ. ಸಚಿವರ ಮಕ್ಕಳಿಗೆ ಗೆಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಸಿದ್ದರಾಮಯ್ಯ ಅವರನ್ನೆಲ್ಲ ಕಿತ್ತು ಹಾಕುತ್ತಾರೆ. ಆಗ ಕಚ್ಚಾಡುತ್ತಲೇ ಸರಕಾರ ನಡೆಸಿ, ಗ್ಯಾರಂಟಿ ಕೈಬಿಡುತ್ತಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ ೧೩೫ರಿಂದ ೧೦ಕ್ಕೆ ಕುಸಿಯಲಿದೆ. ಆದರೆ ಚುನಾವಣೆ ಯಾವಾಗ ನಡೆಯಬೇಕು ಎಂಬುದು ಅವರಿಗೆ ಬಿಟ್ಟಿದ್ದು.
 ಯಡಿಯೂರಪ್ಪ ಕುಟುಂಬ ರಾಜಕಾರಣವನ್ನು ಈಶ್ವರಪ್ಪ ವಿರೋಧ ಮಾಡುತ್ತಿದ್ದಾರೆ, ಪಕ್ಷದ ನಿಲುವೇನು?
ರಾಧಾಮೋಹನ್: ಈಶ್ವರಪ್ಪ ಅವರ ಹೇಳಿಕೆ ಗಮನಿಸಿದ್ದೇನೆ. ಅವರು ಎರಡು ಹೃದಯಗಳ ಬಗ್ಗೆ ಮಾತನಾಡಿದ್ದಾರೆ. ಒಂದು ಹೃದಯಕ್ಕೆ ನಾಲ್ಕು ಕವಾಟ ಇರುತ್ತವೆ. ಯಡಿಯೂರಪ್ಪನವರ ಹೃದಯದ ಒಂದು ಕವಾಟದಲ್ಲಿ ಈಶ್ವರಪ್ಪನವರೂ ಇದ್ದಾರೆ. ಅವರಿಬ್ಬರೂ ಹಳೆಯ ಸ್ನೇಹಿತರು. ತಮಗಾದ ನೋವನ್ನು ಯಡಿಯೂರಪ್ಪ ಮೂಲಕ ಹೊರಹಾಕಿದ್ದಾರೆ. ಈಶ್ವರಪ್ಪ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಬಂಡಾಯ ಸ್ಪರ್ಧೆ ಮಾಡುವುದಿಲ್ಲ, ಕಾದು ನೋಡಿ.
 ಬಿ.ವೈ. ವಿಜಯೇಂದ್ರ ಕೆಲಸದ ಬಗೆಗೆ ಈಶ್ವರಪ್ಪ ಹಾಗೂ ಹಲವರು ಆಕ್ಷೇಪ ಎತ್ತುತ್ತಿದ್ದಾರೆ, ಪಕ್ಷಕ್ಕೆ ತೃಪ್ತಿ ಇದೆಯೇ?
ರಾಧಾಮೋಹನ್: ಯಡಿಯೂರಪ್ಪ ಕನ್ನಡಕದ ಮೂಲಕ ವಿಜಯೇಂದ್ರ ಅವರನ್ನು ನೋಡಲಾಗುತ್ತಿದೆ. ಆದರೆ ವಿಜಯೇಂದ್ರ ಪಕ್ಷದ ಜವಾಬ್ದಾರಿ ವಹಿಸಿಕೊಂಡ ಬಳಿಕ ತುಂಬಾ ಗುಣಾತ್ಮಕ ಬದಲಾವಣೆ ಆಗಿವೆ. ಅವರ ಶಕ್ತಿ ಏನೆಂಬುದು ನಿಮಗೆ ಚುನಾವಣೆ ಬಳಿಕ ಗೋಚರ ಆಗಲಿದೆ. ಯಡಿಯೂರಪ್ಪ ಅವರ ಪುತ್ರ ಎಂಬ ಒಂದೇ ಕಾರಣಕ್ಕೆ ಅವರಿಗೆ ಜವಾಬ್ದಾರಿ ನೀಡಿಲ್ಲ. ಬದಲಾಗಿ ಅವರಿಗಿರುವ ಸಂಘಟನಾ ಸಾಮರ್ಥ್ಯ, ಚತುರತೆ ಹಾಗೂ ಕಾರ್ಯಕರ್ತರ ಜತೆಗಿನ ಸಂಬಂಧ ಮನಗಂಡು ಅಧ್ಯಕ್ಷರಾಗಿದ್ದಾರೆ. ಇನ್ನು ೫ ವರ್ಷದ ಬಳಿಕ ವಿಜಯೇಂದ್ರ ಏನಾಗುತ್ತಾರೆ ಎಂಬುದನ್ನು ನೀವೇ ನೋಡಿ.
 ರಾಜ್ಯದಲ್ಲಿ ೧೪ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿದ್ದೀರಿ, ಆಡಳಿತ ವಿರೋಧಿ ಅಲೆ ಇದೆಯೇ?
ರಾಧಾಮೋಹನ್: ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಪ್ರಕ್ರಿಯೆ ನಿರಂತರ ನಡೆಯುತ್ತಿದೆ. ನಾನು ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಶಾಸಕನಾಗಿದ್ದೆ. ಪಕ್ಷದ ವರಿಷ್ಠರು ಯೋಗಿ ಆದಿತ್ಯನಾಥಗೆ ಕ್ಷೇತ್ರ ಬಿಟ್ಟು ಕೊಡಲು ಹೇಳಿದರು. ನಾನೇ ನಿಂತು ಅವರು ಗೆಲ್ಲುವಂತೆ ಕೆಲಸ ಮಾಡಿದೆ. ನಂತರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಕೊಟ್ಟರು. ನನಗೆ ಯಾವುದೇ ಬೇಸರವಿಲ್ಲ. ಪಕ್ಷದ ನಿಲುವನ್ನು ಸುಮಲತಾ, ಪ್ರತಾಪಸಿಂಹ, ಸದಾನಂದಗೌಡ, ಮುನಿಸ್ವಾಮಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ಈಶ್ವರಪ್ಪ ಒಪ್ಪಿಕೊಂಡಿಲ್ಲ. ಅವರೂ ಒಪ್ಪುತ್ತಾರೆ. ೧೪ ಮಂದಿ ಹೊಸಬರಿಗೆ ಅವಕಾಶ ಕೊಟ್ಟಿಲ್ಲವೇ?
 ಪಕ್ಷ ಹಾಗೂ ಹಿಂದುತ್ವ ಮೀರಿ ಮೋದಿ ಬ್ರಾö್ಯಂಡ್ ಬೆಳೆಯುತ್ತಿದೆ. ವೈಭವೀಕರಣದ ಬಗ್ಗೆ ಆರ್‌ಎಸ್‌ಎಸ್‌ಗೂ ಸಮಾಧಾನ ಇದ್ದಂತಿಲ್ಲ?
ರಾಧಾಮೋಹನ್: ಆರ್‌ಎಸ್‌ಎಸ್ ವ್ಯಕ್ತಿವಾದ ಸಿದ್ಧಾಂತ ನಂಬಿಲ್ಲ. ಬಿಜೆಪಿ ಕೂಡ ವ್ಯಕ್ತಿವಾದ ಒಪ್ಪುವುದಿಲ್ಲ. ಮೋದಿ ಪ್ರಧಾನಿ ಆಗಿದ್ದಾರೆ, ಅವರ ಬ್ರಾಂಡಿಂಗ್ ನಡೆಯುತ್ತಿದೆ. ನಾಳೆ ಮತ್ತೊಬ್ಬರು ಪ್ರಧಾನಿ ಆದಾಗ ಅವರ ಬ್ರಾಂಡಿಂಗ್ ನಡೆಯುತ್ತದೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವರನ ಹೆಸರೇ ಹಾಕಬೇಕು ವಿನಃ ಬೇರೆಯವರ ಹೆಸರನ್ನಲ್ಲ. ಮೋದಿ ಇವತ್ತು ನಮ್ಮ ವರ, ಹಾಗಾಗಿ ಎಲ್ಲೆಡೆಯೂ ಮೋದಿ ಹೆಸರೇ ಇರುತ್ತದೆ.
 ಮಹಾರಾಷ್ಟçದಲ್ಲಿ ಶಿವಸೇನೆ ವಿಭಜನೆ ಮಾಡಿದಂತೆ ಕರ್ನಾಟಕದಲ್ಲಿ ಜೆಡಿಎಸ್ ನಾಶ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ?
ರಾಧಾಮೋಹನ್: ಅಮಿತ್ ಶಾ ಚುನಾವಣೆಗೂ ಮೊದಲೇ ಶಿವಸೇನೆ ಜತೆ ಮಾತುಕತೆ ಮಾಡಿದ್ದರು. ಹೆಚ್ಚು ಸ್ಥಾನ ಗೆಲ್ಲುವ ಪಕ್ಷಕ್ಕೆ ಸಿಎಂ ಹುದ್ದೆ ಎಂಬ ಒಪ್ಪಂದ ಆಗಿತ್ತು. ಬಿಜೆಪಿ ಹೆಚ್ಚು ಸ್ಥಾನ ಪಡೆದರೂ ಶಿವಸೇನೆ ಸಿಎಂ ಹುದ್ದೆ ಬೇಕೆಂದು ಹಠ ಹಿಡಿಯಿತು. ಬಿಹಾರದಲ್ಲಿ ನಿತೀಶ್‌ಕುಮಾರ್ ಅವರನ್ನು ನಾವೇ ಸಿಎಂ ಮಾಡಿದ್ದೆವು. ಪಂಜಾಬ್‌ನಲ್ಲಿ ಅಕಾಲಿದಳ ಖಲಿಸ್ತಾನ ಉಗ್ರರ ಬಿಡುಗಡೆಯ ಬೇಡಿಕೆ ಮುಂದಿಟ್ಟಿತ್ತು. ಮೋದಿ ಮತ್ತು ಶಾ ದೇಶದ ಸುರಕ್ಷತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಅಕಾಲಿದಳ ಹಿಂದೆ ಸರಿಯಿತು. ಬಿಜೆಪಿ ಮೈತ್ರಿಧರ್ಮ ಪಾಲನೆಯಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಜೆಡಿಎಸ್ ಜತೆ ಚುನಾವಣಾ ಪೂರ್ವ ಮೈತ್ರಿ ಆಗಿದೆ. ನಾವು ಮೋಸ ಮಾಡುವುದಿಲ್ಲ.