ಚುನಾವಣೆ ಮೇಲೆ ಪರಿಣಾಮ ಬೀರುವ ಸಮರಕ್ಕೆ ಬೇಸಿಗೆ ಅಧಿವೇಶನ ಸಾಕ್ಷಿ
ಬಿ. ಅರವಿಂದ
ಶಕ್ತಿ ಕೇಂದ್ರ ಆವರಣದಲ್ಲಿ ಕೇಳಿ ಬಂತ್ತೆನ್ನಲಾದ ಪಾಕ್ ಪರ ಘೋಷಣೆ… ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ತೊಡೆ ತಟ್ಟಿದ್ದು… ಇವೆರಡೂ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಒಳಗೆ ಇನ್ನಿಲ್ಲದಂತೆ ಸದ್ದು ಮಾಡಿದೆ; ಹಾಗೂ ಇವೇ ಎರಡು ಕಾರಣಗಳಿಗಾಗಿ ಗದ್ದಲದೊಂದಿಗೆ ಕೊನೆಗೊಂಡ ಬಜೆಟ್ ಅಧಿವೇಶನ ಈ ಬಾರಿಯದ್ದು.
ಪಾಕ್ ಪರ ಘೋಷಣೆ ಕೂಗಿದವರನ್ನು ಬಂಧಿಸಬೇಕು ಹಾಗೂ ಕೇಂದ್ರ ವಿರುದ್ಧದ ನಿರ್ಣಯವನ್ನು ಹಿಂಪಡೆಯಬೇಕು ಎಂದು ಬಿಜೆಪಿ-ಜೆಡಿಎಸ್ ಪಟ್ಟು ಹಿಡಿದ ಕಾರಣದಿಂದ ಗಂಭೀರ ವಿಷಯಗಳು ಕೊನೇ ಐದು ದಿನಗಳ ಕಾಲ ಸದ್ದು ಮಾಡಲಿಲ್ಲ.
ಮೋದಿ ಸರ್ಕಾರದ ವಿರುದ್ಧ ಆಡಳಿತ ಪಕ್ಷ ಮಾಡಿದ ಖಂಡನಾ ನಿರ್ಣಯ ಕೇಂದ್ರ- ರಾಜ್ಯ ಸಂಘರ್ಷದ ಬಿಸಿ ಹೆಚ್ಚಿಸಿ; ಇದಕ್ಕೊಂದು ರಾಜಕೀಯ ಆಯಾಮವನ್ನು ನೀಡಿದ್ದು ಕಲಾಪದಲ್ಲಿ ಎದ್ದು ಕಂಡ ಅಂಶ. ವಿಧಾನಸಭೆ ಕೇಂದ್ರಿತ ಈ ಎರಡು ಘಟನೆಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮವನ್ನು ಬೀರಲಿವೆ… ಕೆಲವರಿಗೆ ಧನಾತ್ಮಕ… ಇನ್ನು ಕೆಲವರಿಗೆ ನಕಾರಾತ್ಮಕ… ಅಧಿವೇಶನ ಮುಗಿದ ದಿನ ರಾಜಕೀಯ ಮೊಗಸಾಲೆಯಲ್ಲಿ ಬಲವಾಗಿ ಕೇಳಿ ಬಂದ ವಿಶ್ಲೇಷಣೆ ಇದು !!
ಉಳಿದಂತೆ ಗ್ಯಾರಂಟಿ ಆರ್ಥಿಕತೆ ಕಾಲಘಟ್ಟದ ಬಜೆಟ್ ಜನ ನಿರೀಕ್ಷೆಗೆ ಪೂರಕವಾಗಿತ್ತು. ಭರ್ತಿ ೫೨ ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಅನುಷ್ಠಾನಕ್ಕೆ ಸಿಎಂ ಸಿದ್ದರಾಮಯ್ಯ ಕೊಟ್ಟಿರುವುದು ವಿತ್ತೀಯ ಕಲಾಪದ ವಿಶೇಷತೆ. ಹಾಗೆಯೇ ಇದೇ ಮೊದಲ ಬಾರಿಗೆ ಹತ್ತಿರ ಹತ್ತಿರ ನಾಲ್ಕು ಲಕ್ಷ ಕೋಟಿ ರೂಪಾಯಿಗಳ (೩.೭೧) ಬಜೆಟ್ ಗಾತ್ರವನ್ನು ಕರ್ನಾಟಕ ನೋಡುವಂತಾದದ್ದು ಬರಗಾಲದ ಅನಿರೀಕ್ಷಿತ ವಿದ್ಯಮಾನ.
ನೀರಾವರಿ ಯೋಜನೆಗಳ ಬಗ್ಗೆ ತೋರಿರುವ ಬದ್ಧತೆಯಿಂದ ಅಧಿವೇಶನ ಗಮನ ಸೆಳೆದುಕೊಂಡಿತು. ಮುಖ್ಯವಾಗಿ ಎತ್ತಿನಹೊಳೆ ಇದೇ ವರ್ಷ ಬಹುತೇಕ ಪೂರ್ಣಗೊಳ್ಳುವ ಮಾತು ಕೇಳಿ ಬಂದದ್ದು; ತುಂಗಭದ್ರಾ ಸಮಾನಾಂತರ ಜಲಾಶಯಕ್ಕಾಗಿ (ನವಲಿ) ೧೫೦೦ ಕೋಟಿಯನ್ನು ತೆಗೆದಿಟ್ಟಿರುವುದು ಗಮನಾರ್ಹ. ಭದ್ರಾ ಮೇಲ್ದಂಡೆ ಮತ್ತು ಕೃಷ್ಣಾ ವಿಷಯದಲ್ಲಿ ಮಾತ್ರ ನಿರಾಸೆ ಮುಂದುವರಿಯಿತು.
ರಾಜ್ಯಕ್ಕೆ ಅನಿಷ್ಠವಾಗಿ ಪರಿಣಮಿಸಿರುವ ಹುಕ್ಕಾ ಬಾರ್ಗಳನ್ನು ಸಂಪೂರ್ಣ ನಿಷೇಧಿಸಿ ಶಾಸನ ರೂಪಿಸಿದ ಸಾರ್ಥಕತೆಯನ್ನು ಬೇಸಿಗೆ ಕಲಾಪ ಬರೆಯಿತು. ಶಹಬ್ಬಾಸ್ ಎಂದು ವಿಪಕ್ಷ ಬಿಜೆಪಿ ಕೂಡ ಸರ್ಕಾರಕ್ಕೆ ಈ ವಿಷಯವಾಗಿ ಬೆನ್ನು ತಟ್ಟಿದ್ದು ಇನ್ನೊಂದು ನೆನಪಿನಲ್ಲಿ ಉಳಿಯುವ ಅಂಶ. ಕನ್ನಡ ಪದಗಳೇ ನಾಮಫಲಕದಲ್ಲಿ ಪ್ರಧಾನ ಎಂಬ ಶಾಸನವನ್ನು ಎಲ್ಲರೂ ಸೇರಿ ಮಾಡಿದ್ದು ಬಜೆಟ್ ಕಲಾಪದ ಇನ್ನೊಂದು ಮರೆಯಲಾಗದ, ಕನ್ನಡಿಗರು ಮೆಚ್ಚುವ ಕೆಲಸ. ಕಾಫಿ ಬೆಳೆಗಾರರ ಒತ್ತುವರಿ ಸಮಸ್ಯೆಯ ಚರ್ಚೆ ಜೋರಾಗಿ ನಡೆದು ಪರಿಹಾರವೇನೂ ಬರಲಿಲ್ಲ ನಿಜ. ಆದರೆ ಪರಿಹಾರಕ್ಕೆ ಪೂರಕ ವಾತಾವರಣವನ್ನು ವಿಪಕ್ಷ ನಿರ್ಮಿಸಿತು. ಇದೇ ರೀತಿ ರಾಜ್ಯದ ಕುಡಿಯುವ ನೀರು ಮತ್ತು ಕಾನೂನು ಸುವ್ಯವಸ್ಥೆಗಳ ಬಗ್ಗೆ ಸಕಾರಾತ್ಮಕ ಮಾತುಗಳು ಹೊರಹೊಮ್ಮಿದ್ದು ಕಡೆಗಣಿಸಲಾಗದಂಥದ್ದು.
ನಾಡಗೀತೆಯ ವಿಷಯವಾಗಿ ಗೊಂದಲಕಾರಿ ನಿಲುವು ಎದ್ದು ಕಂಡಿದ್ದು, ಕೊನೆಗೆ ಸರ್ಕಾರ ಸರಿಪಡಿಸಿಕೊಂಡಿದ್ದು ನೆನಪಿನಲ್ಲಿ ಉಳಿಯಲಿದೆ. ಇದೇ ಮಾತು ಕೈ ಮುಗಿದು ಬಾ ಒಳಗೆ' ಎಂಬ ಶಾಲೆಗಳ ಮೇಲಿನ ಘೋಷ ವಾಕ್ಯದ ವಿಷಯಕ್ಕೂ ಅನ್ವಯ. ಇವೆರಡೂ ವಿಷಯಗಳಲ್ಲಿ ಪ್ರತಿಷ್ಠೆಗೆ ಬೀಳದೇ ಪ್ರತಿಪಕ್ಷದ ಮಾತಿಗೆ ಸರ್ಕಾರ ಮನ್ನಣೆ ನೀಡಿದ್ದು ಜನಸತ್ತಾತ್ಮಕ. ಆದರೆ ಸರ್ಕಾರದ ದಾರಿ ತಪ್ಪಿಸಿದ
ಕೆಂಪು ಪಟ್ಟಿ' ವಿರುದ್ಧ ಇನ್ನಷ್ಟು ಬಲವಾದ ಚಾಟಿ ಬೀಸಬಹುದಾಗಿತ್ತೇನೋ !? ಎಂಬ ಪ್ರಶ್ನೆ ಉಳಿದು ಹೋಯಿತು.
ಕಳೆದ ಕೆಲ ವರ್ಷಗಳಿಂದ ವಿಧಾನಸಭೆಯ ಒಳಗೆ ಮೊಬೈಲ್ ತರುವುದನ್ನು ಸ್ಪೀಕರ್ ನಿಷೇಧಿಸಿದ್ದರು. ಈ ಬಾರಿ ನಿಷೇಧ ತೆರವಾದದ್ದು ಗಮನಾರ್ಹ. ಶಾಸಕರು ಮೊಬೈಲ್ಗಳನ್ನು ಮಾತ್ರವಲ್ಲ, ಲ್ಯಾಪ್ಟಾಪ್ಗಳನ್ನು (ಐಪ್ಯಾಡ್) ಕೂಡ ಒಳಗೆ ತರಬಹುದು. ಆದರೆ ವಿಷಯವನ್ನು ನೋಡಿಕೊಳ್ಳಲು ಅಥವಾ ಅಧ್ಯಯನ ದೃಷ್ಟಿಯಿಂದ ಮಾತ್ರ ಬಳಸಬೇಕು. ಉಳಿದಂತೆ ನೋಡುವಂತಿಲ್ಲ ಮತ್ತು ಸದನದ ಒಳಗೆ ಮಾತನಾಡುವಂತಿಲ್ಲ ಎನ್ನುವ ನಿಬಂಧನೆಗಳೊಂದಿಗೆ ಈ ಸಡಿಲಿಕೆಯನ್ನು ಪೀಠ ನೀಡಿತು. ಅಂತೆಯೇ ಗಂಡಭೇರುಂಡ ಲಾಂಛನದ ಬ್ಯಾಡ್ಜ್ಗಳನ್ನು ಎಲ್ಲ ಶಾಸಕರಿಗೆ ನೀಡಿ ನಿತ್ಯವೂ ಎದೆಯ ಮೇಲೆ ಧರಿಸಿ ಬರುವಂತೆ ನಿರ್ದೇಶನ ನೀಡಿದ್ದು ಅಧಿವೇಶನದ ವಿಶೇಷತೆಗಳು. ಚಿಂತಕರ ಚಾವಡಿ ಎನಿಸಿಕೊಳ್ಳುವ ಮೇಲ್ಮನೆ ವಿವಾದಿತ ಧಾರ್ಮಿಕ ಸಂಸ್ಥೆಗಳ ಮಸೂದೆಯನ್ನು ತಿರಸ್ಕರಿಸಿತ್ತು ನಿಜ. ಆದರೆ ನಿಯಮಾನುಸಾರ ಪುನಃ ಕೆಳಮನೆ ಅದನ್ನು ಅಂಗೀಕರಿಸುವ ಮೂಲಕ ದೇಗುಲಗಳ ಆದಾಯದಲ್ಲಿ ಸರ್ಕಾರಕ್ಕೆ ಪಾಲು ಬರಲು ದಾರಿ ಸುಗಮಗೊಂಡಿತು.
ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಪುಟ್ಟಣ್ಣ (ಕಾಂಗ್ರೆಸ್) ಕಲಾಪದ ನಡುವೆ ಪ್ರಮಾಣ ಸ್ವೀಕರಿಸಿದ್ದು; ಸಿಎಂ ಸಿದ್ದರಾಮಯ್ಯ ಆಡಿದ ಮಾತುಗಳು ಇನ್ನಿಲ್ಲದಂತೆ ಕಿಡಿ ಹೊತ್ತಿಸಿ ಪ್ರತಿಪಕ್ಷಗಳ ಭಾರೀ ಗದ್ದಲಕ್ಕೆ ಕಾರಣವಾಗಿದ್ದಕ್ಕೆ ವಿಧಾನ ಪರಿಷತ್ತು ಸಾಕ್ಷಿಯಾಯಿತು.