ಚುನಾವಣೆ ಸುಧಾರಣೆಗೆ ಕತ್ತಲು
ಭಾರತ ದೇಶಕ್ಕೆ ದೊಡ್ಡ ಗಂಡಾಂತರದಂತೆ ಕಾಡುತ್ತಿರುವುದು ಚುನಾವಣಾ ಪದ್ಧತಿ. ನಿಷ್ಪಕ್ಷಪಾತ ಹಾಗೂ ಮುಕ್ತ ಚುನಾವಣೆ ನಡೆಸುವ ಮಾತು ಕಾಗದದ ಹೂವಾಗಿಯೇ ಇರುವುದು ಇದಕ್ಕೆ ಮುಖ್ಯ ಕಾರಣ. ಸ್ವಾತಂತ್ರ್ಯಾ ನಂತರದ ಬಹುತೇಕ ಎಲ್ಲ ಚುನಾವಣೆಗಳಲ್ಲಿ ಒಂದಲ್ಲಾ ಒಂದು ರೀತಿಯ ಅಕ್ರಮಗಳು ಜರುಗಿರುವ ಹಿನ್ನೆಲೆಯಲ್ಲಿ ಈ ಪಿಡುಗಿನ ನಿವಾರಣೆಗೆ ಬ್ರಹ್ಮಾಸ್ತ್ರ ಬೀಸಬೇಕೆಂಬ ಒಕ್ಕೊರಲ ಕೂಗು ಎಲ್ಲೆಡೆ ಮಾರ್ದನಿಗೊಳ್ಳುತ್ತಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವುದು ಹೇಗೆ ಎಂಬುದೇ ದೊಡ್ಡ ಕಗ್ಗಂಟು. ಇಂತಹ ಕಗ್ಗಂಟಿನ ನಿವಾರಣೆಯ ಒಂದು ಹೆಜ್ಜೆಯಾಗಿ ೨೦೧೭ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಪೀಠ ರದ್ದುಪಡಿಸಿರುವುದು ಮೇಲ್ನೋಟಕ್ಕೇನೋ ಸ್ವಾಗತಾರ್ಹ ಎನಿಸಿದರೂ ವಸ್ತುಸ್ಥಿತಿಯ ಒಳಹೊಕ್ಕು ನೋಡಿದಾಗ ಮುಂದೇನು ಎಂಬ ಧಾವಂತ ಕಾಡುವುದು ಸಹಜ. ಏಕೆಂದರೆ, ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಪಡಿಸಿದ ನಂತರ ರಾಜಕೀಯ ಪಕ್ಷಗಳು ಚುನಾವಣಾ ವೆಚ್ಚಕ್ಕೆ ಹಣ ಸಂಗ್ರಹಿಸುವ ಮಾರ್ಗ ಯಾವುದು ಎಂಬ ಬಗ್ಗೆ ಯಾವುದೇ ಖಚಿತ ಸುಳಿವು ಇಲ್ಲದಿರುವುದು. ಇದರಿಂದ ತಕ್ಕ ಮಟ್ಟಿಗೆ ಒಪ್ಪಬಹುದಾಗಿದ್ದ ವ್ಯವಸ್ಥೆ ಈಗ ಅವ್ಯವಸ್ಥೆಯ ಜಾಡಿಗೆ ತಿರುಗುತ್ತಿರುವುದು ಇದಕ್ಕೆ ಮುಖ್ಯ ಕಾರಣ.
ವಾದದ ಮಟ್ಟಿಗೆ ಹೇಳುವುದಾದರೆ ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳು ಚುನಾವಣಾ ವೆಚ್ಚಕ್ಕಾಗಿ ಸಂಗ್ರಹಿಸುವ ಹಣದ ವಿಧಾನ ಸರಿಯಲ್ಲ. ಆದರೆ, ಇದಕ್ಕೆ ಮೊದಲು ರಾಜಕೀಯ ಪಕ್ಷಗಳ ಹಣ ಸಂಗ್ರಹಣೆಗೆ ಯಾವುದೇ ಒಂದು ನಿಶ್ಚಿತ ಮಾರ್ಗವಿರಲಿಲ್ಲ. ನಿಗೂಢ ರೀತಿಯಲ್ಲಿ ಅಥವಾ ಬಲವಂತದ ವಸೂಲಿ ಮಾರ್ಗದಿಂದ ರಾಜಕೀಯ ಪಕ್ಷಗಳು ಈ ಹಣವನ್ನು ಸಂಗ್ರಹಿಸುತ್ತಿದ್ದವು ಎಂಬುದು ಒಂದು ಟೀಕೆಯಾದರೆ ಈ ಹಣ ಯಾವ ಮೂಲದಿಂದ ಹಾಗೂ ಯಾವ ಉದ್ದೇಶಕ್ಕಾಗಿ ಎಂಬುದೂ ಕೂಡಾ ಖಚಿತವಾಗುತ್ತಿರಲಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಸಂಗ್ರಹವಾಗುವ ಹಣ ರಾಮನ ಲೆಕ್ಕ - ಕೃಷ್ಣನ ಲೆಕ್ಕ ಎಂಬ ರೀತಿಯಲ್ಲಿ ವಿಂಗಡಣೆಯಾಗುತ್ತಿದ್ದ ಪರಿಪಾಠವನ್ನು ಮರೆಯುವಂತಿಲ್ಲ.
ಚುನಾವಣಾ ಸುಧಾರಣೆ ಆಗಲೇಬೇಕೆಂಬ ಸಾರ್ವತ್ರಿಕ ಕೂಗಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಚುನಾವಣಾ ಬಾಂಡ್ ಯೋಜನೆಯಲ್ಲಿ ಪರಿಪಕ್ವವಾದ ಅಂಶಗಳು ಹಾಗೂ ಕಾನೂನು ಸಮ್ಮತ ಮಾರ್ಗಗಳು ಇಲ್ಲದಿರಬಹುದು. ಆದರೆ, ಖಚಿತ ಹಾಗೂ ಶಾಶ್ವತ ಪರಿಹಾರದ ಯೋಜನೆ ರೂಪುಗೊಳ್ಳುವವರೆಗೆ ಇಂತಹ ಯೋಜನೆಯನ್ನು ಮುಂದುವರಿಸಿದ್ದರೆ ಸೂಕ್ತವಾಗಿರುತ್ತಿತ್ತು ಎಂಬ ಮಾತನ್ನು ಹೇಳುವುದು ಈಗ ಸಮಯೋಚಿತ.
ಚುನಾವಣಾ ವೆಚ್ಚಕ್ಕೆ ಮಿತಿ ಹಾಕದೇ ಹೋದರೆ ಇಡೀ ವ್ಯವಸ್ಥೆಯೇ ಏರುಪೇರಾಗುವ ಅಪಾಯಗಳನ್ನು ಹಲವಾರು ಮಂದಿ ತಜ್ಞರು ಎಚ್ಚರಿಕೆಯ ಮೂಲಕ ಸುಧಾರಣಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದ್ದರು. ಇದರ ಅಂಗವಾಗಿ ಹಲವಾರು ಸಂಪುಟ ಉಪ ಸಮಿತಿಗಳು ರಚನೆಗೊಂಡು ಶಿಫಾರಸುಗಳು ಹೊರಬಿದ್ದವು. ಆದರೆ, ಈ ಶಿಫಾರಸುಗಳ ಸಾರಾಂಶ ಇದ್ದದ್ದು ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂಬ ಅಂಶದ ಮೇಲೆ. ಭಾರತದಂತಹ ಬೃಹತ್ ಹಾಗೂ ಬಹುಸಂಖ್ಯೆಯ ರಾಜಕೀಯ ಪಕ್ಷಗಳಿರುವ ದೇಶದಲ್ಲಿ ಚುನಾವಣಾ ವೆಚ್ಚವನ್ನು ಸರ್ಕಾರಗಳೇ ಭರಿಸುವ ಪದ್ಧತಿಯನ್ನು ಜಾರಿಗೆ ತರುವುದು ಕಿವಿಗೆ ಸಂಗೀತದಂತೆ ಕೇಳಿಸಿದರೂ ವಾಸ್ತವವಾಗಿ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟ. ಅಧಿಕೃತ ಪಕ್ಷಗಳ ಜೊತೆಗೆ ಲೆಕ್ಕವಿಲ್ಲದಷ್ಟು ಪಕ್ಷೇತರ ಅಭ್ಯರ್ಥಿಗಳೂ ಕಣದಲ್ಲಿ ಇಳಿಯುವ ಪರಿಣಾಮವಾಗಿ ಎಲ್ಲರನ್ನೂ ಸಮಾನವಾಗಿ ಕಾಣುವುದು ಅನಿವಾರ್ಯ.
ಇಂತಹ ಸಂದರ್ಭಗಳಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚ ಸರ್ಕಾರ ನಿರ್ವಹಿಸುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಇದುವರೆಗೆ ಉತ್ತರ ಸಿಕ್ಕಿಲ್ಲ. ೨೦೧೭ರಲ್ಲಿ ಸಿಕ್ಕಿದ್ದ ಅರೆಬರೆ ಸ್ವರೂಪದ ಉತ್ತರವೇ ಚುನಾವಣಾ ಬಾಂಡ್ ಯೋಜನೆ. ಈಗ ಅದಕ್ಕೂ ಕತ್ತರಿ.
ಸುಪ್ರೀಂಕೋರ್ಟ್ ತೀರ್ಪಿನಿಂದ ಇದುವರೆಗೆ ರಾಜಕೀಯ ಪಕ್ಷಗಳು ಸಂಗ್ರಹಿಸಿರುವ ಹಾಗೂ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ಹಣದ ಪರಿಣಾಮ ಏನಾಗುತ್ತದೆ ಎಂಬುದು ಒಂದು ಪ್ರಶ್ನೆ. ಚುನಾವಣಾ ವೆಚ್ಚಕ್ಕಾಗಿ ಪಕ್ಷಗಳು ಮುಂದೆ ಯಾವ ಮಾರ್ಗ ಅನುಸರಿಸಬೇಕು ಎಂಬುದು ಇನ್ನೊಂದು ಪ್ರಶ್ನೆ. ಹೀಗಾಗಿ ಚುನಾವಣಾ ಬಾಂಡ್ ಯೋಜನೆ ರದ್ಧತಿಯಿಂದ ಬಿಕ್ಕಟ್ಟಿಗೆ ಪರಿಹಾರ ದೊರಕುವ ಬದಲು ದೊರಕಿರುವ ಪರಿಹಾರ ಹೊಸ ಬಿಕ್ಕಟ್ಟಿನ ಸೃಷ್ಟಿಗೆ ಕಾರಣವಾಗಿದೆ ಎಂದು ಹೇಳುವುದು ಸರಿಯಾದ ಮಾರ್ಗ.