ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಚೆಕ್ ಬೌನ್ಸ್: ಕೇವಲ ಚೆಕ್ ಪಡೆದರಾಗದು

04:12 AM Sep 07, 2024 IST | Samyukta Karnataka

ಖಾದಿ ಶುಭ್ರ ಬಿಳಿ ಹಾಫ್ ಶರ್ಟ್, ಅದೇ ಬಟ್ಟೆಯ ಪ್ಯಾಂಟ್, ಮುಂಗೈಯಲ್ಲಿ ಬಂಗಾರಲೇಪಿತ ಬ್ರೇಸ್ಲೆಟ್, ಎರಡು ಕೈ ಬೆರಳಲ್ಲಿ ಬಂಗಾರದ ಉಂಗುರಗಳು, ಕೊರಳಲ್ಲಿ ನಾಯಿಗೆ ಹಾಕುವ ಕಬ್ಬಿಣದ ಸರಪಳಿ ಯಂತ್ರ, ಬಂಗಾರದ ಚೈನ್ ಹೇರಿಕೊಂಡ ಕುಳ್ಳ ಶರೀರದ ವ್ಯಕ್ತಿ ಕೋರ್ಟ್ ರೂಮ್ ಎಂಟ್ರಿಕೊಟ್ಟನು. ಬಪ್ಪಿಲಹರಿ ಅವತಾರದ, ಅವನ ಪ್ರವೇಶವನ್ನು ಯಾರು ಗಮನಿಸದೆ ಇರಲಾಗಲಿಲ್ಲ. ನೇರವಾಗಿ ಸಾಕ್ಷಿ ಕಟಕಟೆ ಏರಿ ನಿಂತನು. ಚೆಕ್ ಬೌನ್ಸ್ ಕೇಸನ್ನು ನನ್ನ ಕಕ್ಷಿದಾರ ಆರೋಪಿಯ ಮೇಲೆ ದಾಖಲಿಸಿದ್ದನು.
ದೇವರ ಮೇಲೆ ಪ್ರಮಾಣ ಮಾಡಿ ಸತ್ಯವನ್ನೇ ಹೇಳುತ್ತೇನೆ, ಸತ್ಯವಲ್ಲದೆ ಬೇರೆ ಏನು ಹೇಳುವುದಿಲ್ಲ ಎಂದು ಪ್ರಮಾಣ ಮಾಡಿ, ತನ್ನ ಮುಖ್ಯ ವಿಚಾರಣೆ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದನು. ಪ್ರಮಾಣ ಪತ್ರದಲ್ಲಿ ನಾನು ಈ ಕೇಸಿನಲ್ಲಿ ಫಿರ್ಯಾದಿದಾರನು ಇರುತ್ತೇನೆ. ನನಗೆ ಆರೋಪಿಯ ಪರಿಚಯ ಬಹಳ ವರ್ಷಗಳಿಂದ ಇರುತ್ತದೆ. ಅವನ ಮೇಲೆ ನಂಬಿಕೆ, ವಿಶ್ವಾಸ ಇದೆ. ಆರೋಪಿಯು ತನ್ನ ಉದ್ಯೋಗದ ಅಭಿವೃದ್ಧಿ ಸಲುವಾಗಿ ೬ ಲಕ್ಷ ಹಣ ಬೇಕೆಂದು ಕೇಳಿದಾಗ ದಿನಾಂಕ ೧/೧೧/೨೦೧೨ರಂದು ಇಬ್ಬರು ಸಾಕ್ಷಿದಾರರ ಸಮಕ್ಷಮ, ಎರಡು ವಾರದಲ್ಲಿ ಮರಳಿ ಕೊಡುವ ಷರತ್ತಿನೊಂದಿಗೆ ನಗದು ಹಣ ನೀಡಿರುವೆ. ಎರಡು ವಾರದ ನಂತರ ಕೇಳಿದಾಗ ದಿ.೨೩/೧೨/೨೦೧೨ ರಂದು ಚೆಕ್ ನೀಡಿದನು. ಚೆಕ್ ನಗದೀಕರಿಸಲು ತನ್ನ ಉಳಿತಾಯ ಖಾತೆ ಇರುವ ಬ್ಯಾಂಕ್‌ಗೆ ಹಾಜರುಪಡಿಸಿದೆ. ಆರೋಪಿಯ ಖಾತೆಯಲ್ಲಿ ಸಾಕಷ್ಟು ಹಣವಿಲ್ಲ ಎನ್ನುವ ಕಾರಣ ನೀಡಿ, ಮೆಮೊ ಜೊತೆ ಚೆಕ್ ಮರಳಿಕೊಟ್ಟರು. ಚೆಕ್ ಬೌನ್ಸ್ ಆಯಿತು. ನಮ್ಮ ವಕೀಲರ ಮುಖಾಂತರ ನೋಟಿಸ್ ನೀಡಿದೆ. ಸುಳ್ಳು ಕಾರಣ ನೀಡಿ ಪ್ರತ್ಯುತ್ತರ ಕೊಟ್ಟನು. ಆರೋಪಿಯು ನೆಗೋಶಿಬಲ್ ಇನ್‌ಸ್ಟ್ರುಮೆಂಟ್ ಆಕ್ಟ್ ಅಡಿಯಲ್ಲಿ ಅಪರಾಧ ಮಾಡಿದ್ದು ಶಿಕ್ಷೆ ವಿಧಿಸಲು ಕೇಳಿಕೊಂಡನು.
ಎನ್.ಆಯ್. ಆಕ್ಟ್ ಕಲಂ ೧೧೮, ೧೧೯ ಅಡಿಯಲ್ಲಿ ಚೆಕ್ ಕೊಟ್ಟಿದ್ದಾರೆ, ಎಂದರೆ ಮೊದಲು ಪಡೆದ ಹಣ ಸಂಬಂಧ ಕೊಟ್ಟಿದ್ದಾರೆಂದು ಪೂರ್ವ ಭಾವಿಸಬೇಕು ಎಂದಿದ್ದರೂ ಅದನ್ನು ಖಂಡಿಸಿ ಸಾಕ್ಷಿ ಪುರಾವೆ ಸಲ್ಲಿಸಿ ಅಲ್ಲಗಳೆಯಬಹುದು. ಈ ಜವಾಬ್ದಾರಿ ಆರೋಪಿಯ ಮೇಲೆ ಇರುತ್ತದೆ. ಅಪರಾಧ ಪ್ರಕರಣದಲ್ಲಿ, ಸಿವಿಲ್ ಪ್ರಕರಣಗಳಂತೆ ಲಿಖಿತ ತಕರಾರು ಸಲ್ಲಿಸಿ ತಮ್ಮ ನಿಲುವು, ಪ್ರತಿರೋಧ ಏನು ಎಂದು ಹೇಳಲಾಗದು, ಅದನ್ನು ಕ್ರಾಸ್ ಎಕ್ಸಾಮಿನೇಷನ್‌ನಲ್ಲಿಯೇ ರಚನೆ ಮಾಡಬೇಕಾಗುತ್ತದೆ. ಪಾಟಿ ಸವಾಲನ್ನು ಜಾಗ್ರತೆಯಿಂದ ಮಾಡಿ ನಮಗೆ ಬೇಕಾಗುವ ಹೇಳಿಕೆಯನ್ನು ಸಾಕ್ಷಿದಾರನಿಂದ ಪಡೆಯುವದು, ವೃತ್ತಿ ನೈಪುಣ್ಯತೆ ಒರೆಗೆ ಹಚ್ಚುವ ಪರೀಕ್ಷೆ ಆಗಿರುತ್ತದೆ.
ಫಿರ್ಯಾದಿದಾರನನ್ನು ಪಾಟಿ ಸವಾಲು ಮಾಡಲು ಗಂಭೀರವಾಗಿ ಎದ್ದು ಸಾಕ್ಷಿ ಕಟಕಟೆಯತ್ತ ನಡೆದನು. ಫಿರ್ಯಾದಿ ಪರಿಚಯದ ನಗೆಸೂಸಿದ. ಮುಗುಳುನಗೆ ನಕ್ಕು ನನ್ನ ಕರ್ತವ್ಯ ಪ್ರಾರಂಭಿಸಿದೆ. ಆರೋಪಿ ನಿನಗೆ ಹೇಗೆ ಪರಿಚಯ? ನಿಮಗೆ ೬ ಲಕ್ಷ ಹಣ ಜುಜುಬಿ ಹಣವೇ? ಹಣ ಎಲ್ಲಿಂದ ತಂದಿರುವೆ? ನೀನು ಆಗರ್ಭ ಶ್ರೀಮಂತನೆ? ನಿನ್ನ ಉದ್ಯೋಗ ಏನು? ನಿನಗೆ ಆದಾಯದ ಮೂಲ ಏನು? ಆರೋಪಿಯ ಹೋಟೆಲನ್ನು ದುಷ್ಕರ್ಮಿಗಳು ದಿ. ೬/೫/೨೦೧೧ರಂದು ಧ್ವಂಸ ಮಾಡಿದ್ದು ಆವಾಗ ನೀನು ಅಲ್ಲಿಯೆ ಇದ್ದೆ, ಆ ಸಂದರ್ಭದಲ್ಲಿ ಆರೋಪಿ ಸಾಲ ಪಡೆಯಲು ಬ್ಯಾಂಕ್ ಅಧಿಕಾರಿಗಳು ಸಹಿ ಮಾಡಿದ ಖಾಲಿ ಚೆಕ್ ಕೊಡಲು ಹೇಳಿದ್ದರಿಂದ ಆರೋಪಿ ಸಹಿ ಮಾಡಿದ ಚೆಕ್ ಗಲ್ಲಾ ಪೆಟ್ಟಿಗೆಯಲ್ಲಿ ಇಟ್ಟಿದ್ದನು, ಅವುಗಳನ್ನು ನೀನು ಎಗರಿಸಿಕೊಂಡು ಹೋಗಿ ನೀನು ನಿನ್ನ ಹೆಸರಿಗೆ ಬರೆದುಕೊಂಡು ಬ್ಯಾಂಕಿಗೆ ಸಲ್ಲಿಸಿರುವೆ. ಆರೋಪಿ ನಿನ್ನಿಂದ ಹಣ ಪಡೆದಿಲ್ಲ, ಚೆಕ್ಕೂ ಕೊಟ್ಟಿಲ್ಲ, ಚೆಕ್ ಕಳವು ಮಾಡಿಕೊಂಡು, ದುರುಪಯೋಗಪಡಿಸಿಕೊಂಡು ಈ ಪ್ರಕರಣ ದಾಖಲಿಸಿರುವೆ ಹೀಗೆ ಒಂದರ ಮೇಲೊಂದು ಪ್ರಶ್ನೆಗಳ ಸುರಿಮಳೆ ಮಾಡಿ, ಮುರಿದುಕೊಂಡು ಬಿದ್ದಾಗ ಫಿರ್ಯಾದಿ ತತ್ತರಿಸಿಹೋದನು.
ಪಾಟಿ ಸವಾಲಿನಲ್ಲಿ ಉತ್ತರಿಸುತ್ತ, ತಾನು ಆರೋಪಿಯ ಹೋಟೆಲ್‌ಗೆ ನಾನ್ ವೆಜ್ ಊಟಕ್ಕೆ ಹೋಗುವುದರಿಂದ, ಅಲ್ಲಿಯೆ ಸರ್ಕಲ್ ಇದ್ದು, ತಾನು ಹೆಚ್ಚಾಗಿ ಅಲ್ಲಿ ನಿಲ್ಲುತ್ತಿದ್ದರಿಂದ ಪರಿಚಯ. ತಾನು ಪ್ರತಿಷ್ಠಿತ ಬ್ಯಾಂಕ್ ಅಧ್ಯಕ್ಷನಿದ್ದು, ಹಲವಾರು ಸಾಮಾಜಿಕ ಕೆಲಸ ಮಾಡುತ್ತಿದ್ದು ಅದರಿಂದ ಯಾವುದೇ ಆದಾಯ ಇಲ್ಲವೆಂದು ಹೇಳಿದನು. ೬ ಲಕ್ಷ ಹಣ ತನಗೆ ದೊಡ್ಡ ಮೊತ್ತವೆಂದು, ಹಣ ಕೊಟ್ಟ ಬಗ್ಗೆ ಆರೋಪಿಯಿಂದ ಯಾವುದೇ ದಾಖಲಾತಿ ಪಡೆದಿರುವುದಿಲ್ಲವೆಂದು ಒಪ್ಪಿಕೊಂಡನು. ಹಣ ಕೊಡುವಾಗ ಯಾರು ಇದ್ದರು ಎನ್ನುವುದು ನೆನಪಿಲ್ಲವೆಂದು ಹೇಳಿ ನುಣುಚಿಕೊಂಡನು. ಎಲ್ಲಿ ಹಣ ಕೊಟ್ಟನು, ಹಣದ ಬಂಡಲ್‌ನಲ್ಲಿ ಎಷ್ಟು ಮುಖಬೆಲೆಯ ಎಷ್ಟು ನೋಟುಗಳು ಇದ್ದವು, ಎಷ್ಟು ಗಂಟೆಗೆ ಹಣ ನೀಡಿದೆ ಎನ್ನುವುದನ್ನು ಸಮಂಜಸವಾಗಿ ಹೇಳಲಾಗದೆ ಒದ್ದಾಡಿದ. ತನ್ನದು ಹೊಲ ಇದೆ, ಅದರಲ್ಲಿ ಕಬ್ಬು ಬೆಳೆಯುತ್ತಿದ್ದು ಅದನ್ನು ಸಕ್ಕರೆ ಕಾರ್ಖಾನೆಗೆ ಕಳುಹಿಸಿದ ಹಣ ಬ್ಯಾಂಕ್ ಖಾತೆಯಿಂದ ತೆಗೆದುಕೊಟ್ಟಿರುವುದಾಗಿ ಹೇಳಿದ. ಇದಕ್ಕೆ ದಾಖಲೆ ಹಾಜರುಪಡಿಸಿರುವುದಿಲ್ಲವೆಂದು ಒಪ್ಪಿಕೊಂಡನು. ಪ್ರಮಾಣ ಪತ್ರದಲ್ಲಿ ಉದ್ಯೋಗ ಬ್ಯುಜಿನೆಸ್ ಎಂದು ನಮೂದಿಸಿದ್ದು, ಯಾವುದು ಎಂದು ಹೇಳದೆ ಸುಮ್ಮನೆ ನಿಂತನು. ೬ ಲಕ್ಷ ಹಣದ ಬಗ್ಗೆ, ತನ್ನ ಆದಾಯದ ಮೂಲವನ್ನು ಹೇಳಲಾಗದೆ ತಡವರಿಸಿದ. ಆರೋಪಿ ಚೆಕ್ ಎಲ್ಲಿ, ಯಾವ ಸಮಯದಲ್ಲಿ, ಯಾರ ಸಮಕ್ಷಮ ನೀಡಿದ ಹೇಳಲು ಸೋತನು. ಆರೋಪಿಯ ಹೋಟೆಲನ್ನು ದುಷ್ಕರ್ಮಿಗಳು ಧ್ವಂಸ ಮಾಡಿದಾಗ ತಾನು ಅಲ್ಲಿಯೆ ಇರುವುದನ್ನು, ಹೋಟೆಲ್ ಧ್ವಂಸ ಮಾಡಿದ ನಂತರ ತಾನು ಹೋಟೆಲ್ ಒಳಗೆ ಹೋಗಿದ್ದನ್ನು ಒಪ್ಪಿಕೊಂಡನು. ಆರೋಪಿ ಹೋಟೆಲ್ ಎರಡು ತಿಂಗಳಲ್ಲಿ ಪ್ರಾರಂಭಿಸಿದ್ದನ್ನು ಹೇಳಿದನು. ತಾನು ಆರೋಪಿಗೆ ಹೋಟೆಲ್ ರಿಪೇರಿ ಮಾಡಿ ಪ್ರಾರಂಭಿಸಲು ಸಹಾಯ ಮಾಡಲು ನೀಡಿದ್ದೇನೆ ಎಂದು ನುಡಿದನು. ನೀನು ಹಣ ನೀಡಿದ್ದೇನೆ ಅನ್ನುವ ದಿನಾಂಕದ ಎರಡು ವರ್ಷ ಮೊದಲೆ ಆರೋಪಿ ಹೋಟೆಲ್ ಪ್ರಾರಂಭಿಸಿದ್ದನಲ್ಲ? ಅನ್ನುವ ಪ್ರಶ್ನೆಗೆ ಗರಬಡಿದವರ ಹಾಗೆ ನಿಂತನು. ಪಾಟಿ ಸವಾಲು ಮುಗಿಸುವಷ್ಟರಲ್ಲಿ ಬೆವತು ಬಳಲಿ ಹೋಗಿದ್ದನು. ಫಿರ್ಯಾದಿ ತನ್ನ ಪರವಾಗಿ ಯಾರನ್ನೂ ಸಾಕ್ಷಿ ಮಾಡಿಸಲಿಲ್ಲ. ಆರೋಪಿಯು ರಕ್ಷಣಾತ್ಮಕವಾಗಿ, ತನ್ನ ಪರ ಸಾಕ್ಷಿಯೆಂದು ಮುಖ್ಯ ವಿಚಾರಣೆ ಪ್ರಮಾಣ ಪತ್ರ ಸಲ್ಲಿಸಿದನು. ತನ್ನ ಹೋಟೆಲನ್ನು ಗೂಂಡಾಗಳು ಧ್ವಂಸಗೊಳಿಸಿದ ಬಗ್ಗೆ, ತನ್ನ ಕಾಗದ ಪತ್ರ ಕಳವು ಬಗ್ಗೆ ಎಫ್‌ಐಆರ್ ಹಾಜರುಪಡಿಸಿದನು.
ತನ್ನ ಫಿರ್ಯಾದಿ ನಡುವೆ ಹಣಕಾಸಿನ ವ್ಯವಹಾರವಿಲ್ಲ, ಅವನು ಕೇವಲ ಗಿರಾಕಿ ಅಷ್ಟೆ, ಚೆಕ್ ನೀಡಿಲ್ಲ, ಅಂಗಡಿ ಧ್ವಂಸ ಆದಾಗ ಆರೋಪಿ ಚೆಕ್ ಕಳವು ಮಾಡಿಕೊಂಡು ದುರುಪಯೋಗಪಡಿಸಿಕೊಂಡಿದ್ದಾನೆಂದು ನುಡಿದನು. ಫಿರ್ಯಾದಿ ಪರ ವಕೀಲರು ಪಾಟಿ ಸವಾಲಿನಲ್ಲಿ ಅನುಕೂಲವಾದ ಅಂಶ ಪಡೆಯಲು ವಿಫಲವಾದರು. ನ್ಯಾಯಾಲಯವು, ಫಿರ್ಯಾದಿ, ಆರೋಪಿ ಪರ ವಾದ ಆಲಿಸಿ, ಪ್ರಕರಣ ತೀರ್ಪಿಗಾಗಿ ಮುಂದೂಡಿದರು.
ಅಂತಿಮ ತೀರ್ಪಿನ ನಿರ್ಣಾಯಕ ಸಮಯ. ನ್ಯಾಯಾಧೀಶರು ಆರೋಪಿತ ಮೇಲೆ ಫಿರ್ಯಾದಿದಾರ, ಎನ್‌ಐ ಆಕ್ಟ್ ಕಲಂ ೧೨೮ ಅಡಿಯಲ್ಲಿ ಅಪರಾಧವನ್ನು ರುಜುವಾತು ಪಡಿಸಲು ವಿಫಲವಾಗಿದ್ದಾನೆ ಎಂದು ಅಭಿಪ್ರಾಯಪಟ್ಟು, ಆರೋಪಿಯನ್ನು ಆರೋಪ ಮುಕ್ತಗೊಳಿಸಿ ಬಿಡುಗಡೆ ಮಾಡಿ ತೀರ್ಪು ನೀಡಿತು. ತೀರ್ಪಿನಲ್ಲಿ, ಕೇವಲ ಚೆಕ್ ನೀಡಿದ್ದಾನೆ ಅಂದರೆ ಆಗದು, ಮೊದಲು ಕಾನೂನು ಕ್ರಮ ಮೂಲಕ ವಸೂಲು ಮಾಡಬಹುದಾದ ಸಾಲ ಇದೆ ಮತ್ತು ಸಾಲ ಕೊಡುವವನಿಗೆ ಅಷ್ಟು ಸಾಲ ಕೊಡುವಷ್ಟು ಯೋಗ್ಯತೆ ಇದೆ ಎನ್ನುವುದನ್ನು ಪುರಾವೆ ಸಹಿತ ರುಜುವಾತುಪಡಿಸಬೇಕು. ಈ ಪ್ರಕರಣದಲ್ಲಿ ಫಿರ್ಯಾದಿ ಈ ಅಂಶಗಳನ್ನು ರುಜುವಾತುಪಡಿಸಲು ವಿಫಲವಾಗಿದ್ದಾನೆ ಎಂದು ಅಭಿಪ್ರಾಯಪಟ್ಟಿತು.
ಚೆಕ್ ಬೌನ್ಸ್ ಪ್ರಕರಣ ಆರ್ಥಿಕ ಅಪರಾಧವಾಗಿದ್ದು, ಫಿರ್ಯಾದಿದಾರ ಆರೋಪಿಗೆ ಹಣ ಕೊಡುವಷ್ಟು ಯೋಗ್ಯನು, ಹಣ ಮರಳಿಕೊಡುವ ಜವಾಬ್ದಾರಿಗಾಗಿ ಆರೋಪಿ ಚೆಕ್ ನೀಡಿದ್ದು ನಿರೂಪಿಸಬೇಕು. ಚೆಕ್ ವಿವಾದಗಳಲ್ಲಿ, ಹಲವಾರು ನ್ಯಾಯಾಲಯಗಳು ಪ್ರಕರಣಗಳ ತೀರ್ಪು ನೀಡಿದ್ದು ಹೊಸ ವ್ಯಾಖ್ಯಾನ ನಿರ್ಮಾಣವಾಗಿವೆ.

Next Article