ಚೈನ್ ದೋಚಿಂಗ್ ಕಂಪೆನಿ
ಬೆಳಕು ಹರಿಯುತ್ತಿದ್ದಂತೆಯೇ ಎದುರು ಮನೆಯ ಮೀನಾಕ್ಷಿ ಮನೆ ಮುಂದೆ ನೀರು ಚಿಮುಕಿಸಿ ರಂಗೋಲಿ ಇಡುತ್ತಿದ್ದಳು. ಆಗಸ್ಟೇ ಸೂರ್ಯ ಬಂದಿದ್ದ. ಇಬ್ಬರು ಹೆಲ್ಮೆಟ್ ಧಾರಿಗಳು ಮೋಟಾರ್ ಬೈಕ್‌ನಲ್ಲಿ ಬಂದು ಒಂದು ಚೀಟಿ ಹಿಡಿದು ಮೀನಾಕ್ಷಿಯನ್ನು ಕೇಳಿದರು.
“ಈ ಮನೆ ಎಲ್ಲಿ ಬರುತ್ತೆ ಮೇಡಂ”
ಮೀನಾಕ್ಷಿ ಹತ್ತಿರ ಬರುತ್ತಿದ್ದಂತೆಯೇ ಅವಳ ಕುತ್ತಿಗೆಗೆ ಕೈ ಹಾಕಿ ಚೈನ್‌ನ್ನು ದೋಚಿ ಬೈಕ್‌ನಲ್ಲಿ ಪರಾರಿ ಆದರು. ಮೀನಾಕ್ಷಿ ಲಬಲಬೋ ಎಂದು ಜೋರಾಗಿ ಬಾಯಿ ಬಡಿದುಕೊಂಡಾಗ ಜನ ಸೇರಿದರು, ಎದುರು ಮನೆಯ ವಿಶ್ವ ವಿಶಾಲು ಸಹ ಓಡಿ ಬಂದರು.
ಚೈನ್ ಹೋಯ್ತು ಎಂಬ ವಿಷಯ ಹೇಳುತ್ತ ಮೀನಾಕ್ಷಿ ಬಿಕ್ಕಿ ಬಿಕ್ಕಿ ಅತ್ತಳು.
“ಚೈನ್ ಮಾತ್ರ ಹೋಯ್ತು, ಮಾಂಗಲ್ಯ ಸರ ಉಳಿದಿದೆಯಲ್ಲ, ಸಂತೋಷ ಪಡಿ” ಎಂದು ವಿಶಾಲು ಸಮಾಧಾನ ಮಾಡಿದಳು.
ಪೋಲೀಸ್ ಕಂಪ್ಲೆಂಟ್ ಕೊಡಬೇಕೋ ಬೇಡ್ವೋ ಎಂದು ಮೀನಾಕ್ಷಿ ಮನೆಯಲ್ಲಿ ಚರ್ಚೆ ಆಯ್ತು,
“ಕಂಪ್ಲೆಂಟ್ ಕೊಟ್ರೆ ನಮಗೇ ಅವಮಾನ, ಕೊಟ್ರೂ ಕಳ್ಳ ಸಿಗೊಲ್ಲ” ಎಂದು ಮೀನಾಕ್ಷಿ ಗಂಡ ಮಡದಿಗೆ ಬೈದ.
ಮರುದಿನ ಮಧ್ಯಾಹ್ನ ರಸ್ತೆ ಖಾಲಿ ಇರುವಾಗ ಒಬ್ಬ ವ್ಯಕ್ತಿ ಮೋಟಾರ್ ಬೈಕ್‌ನಲ್ಲಿ ಬಂದು ಮೀನಾಕ್ಷಿ ಮನೆಯ ಬಾಗಿಲನ್ನು ಬಡಿದ, ವಿಶ್ವ ಮತ್ತು ವಿಶಾಲು ತಮ್ಮ ಮನೆ ಮುಂದೆ ನಿಂತು ಏನ್ ನಡೆಯುತ್ತಿದೆ ಅಲ್ಲಿ ಎಂದು ನೋಡುತ್ತಿದ್ದರು.
“ತಗೊಳಮ್ಮ ನಿಮ್ಮ ಚೈನು” ಎಂದು ಕೊಟ್ಟ.
“ನಂದೇ ಚೈನು, ಯಾರ್ ವಾಪಸ್ ಕೊಟ್ಟಿದ್ದು?
“ಯಾರ್ ಕೊಟ್ಟಿದ್ದೋ ಏನೋ, ತಗೋ ನಿಮ್ಮ ಯಜಮಾನ್ರಿಗೆ ಕೊಡು” ಎಂದ ಆತ.
ಮೀನಾಕ್ಷಿಯ ಚೈನ್ ವಾಪಸ್ ತಂದುಕೊಟ್ಟು ಹೋಗುತ್ತಿದ್ದ ವ್ಯಕ್ತಿಯನ್ನು ನೋಡಿದ ವಿಶಾಲುಗೆ ಖುಷಿ ಆಯಿತು.
“ಎಷ್ಟು ಒಳ್ಳೆವನು ಕಣ್ರಿ ಆ ಮನುಷ್ಯ, ಕಳ್ಳರು ಕಿತೊಕಂಡ್ ಹೋಗಿದ್ದನ್ನ ಇವ್ನು ಜಪ್ತಿ ಮಾಡ್ಕೊಂಡ್ ಬಂದಿದ್ದಾನಲ್ಲ, ಕರೀರಿ ಅವ್ನನ್ನ ಮಾತಾಡ್ಸೋಣ” ಎಂದಳು ವಿಶಾಲು.
ವಿಶ್ವ ಆ ವ್ಯಕ್ತಿಯನ್ನು ಕರೆ ತಂದ.
“ಬನ್ನಿ ಒಳಗೆ ಕಾಫಿ ತಗೊಳ್ಳಿ” ಎಂದಳು ವಿಶಾಲು. ಆತ ಮಾಮೂಲಾಗಿ ಬಂದು ಕುಳಿತು ಕಾಫಿಯನ್ನು ಸೇವಿಸಿದ.
“ಯಾರೋ ಕದ್ಕೊಂಡ್ ಹೋದ ಚೈನ್ನ ಪತ್ತೆ ಹಚ್ಚಿ ವಾಪಸ್ ತಂದ್ಕೊಟ್ಟಿದ್ದೀರಲ್ಲ, ನಿಮ್ಮಂತ ಒಳ್ಳೆಯವರು ಈ ಜಗತ್ತಲ್ಲಿ ಅಪರೂಪ” ಎಂದು ವಿಶಾಲು ಹೊಗಳಿದಳು.
“ಕದ್ಕೊಂಡ್ ಹೋಗಿದ್ದು ನಾನೇ” ಎಂದ ಆ ವ್ಯಕ್ತಿ.
“ಹೌದಾ? ಯಾಕ್ ವಾಪಸ್ ತಂದ್ಕೊಟ್ರಿ?” ಎಂದು ವಿಶ್ವ ಕೇಳಿದ.
“ಬೇಡ ಬಿಡಿ ಆ ಕತೆ ಯಾಕೆ? ಅವರ ಸಂಸಾರದಲ್ಲಿ ಬೆಂಕಿ ಹಚ್ಚೋದಕ್ಕೆ ನನಗೆ ಇಷ್ಟ ಇಲ್ಲ” ಎಂದ.
“ಹೇಳಿ ಪರವಾಗಿಲ್ಲ, ನಾನು ಯಾರಿಗೂ ಹೇಳಲ್ಲ” ಎಂದ ವಿಶ್ವ.
“ಅದು ಹಿತ್ತಾಳೆ ಚೈನು, ಆಕೆ ಬಾಯಿ ಬಡ್ಕೊಂಡಿದ್ದು ನೋಡಿ ಬಂಗಾರದ್ದೇ ಅಂತ ನಾನು ಅಂದ್ಕೊಂಡೆ, ಗಂಡ ತನ್ನ ಸ್ವಂತ ಹೆಂಡತಿಗೂ ಹೀಗೆ ಮೋಸ ಮಾಡೋದಾ, ಈಗ ಹೇಳಿ, ಯಾರು ಕಳ್ಳ?” ಎಂದು ಸವಾಲು ಎಸೆದ. ವಿಶಾಲುಗೆ ಶಾಖ್ ಆಯ್ತು.
“ಮಾಂಗಲ್ಯದ ಸರ ಮುಟ್ಟಲಿಲ್ವಾ?” ಎಂದಳು ವಿಶಾಲು.
“ಇಲ್ಲ ತಾಯಿ, ನಾವು ಮಾಂಗಲ್ಯ ಮುಟ್ಟೋದಿಲ್ಲ” ಎಂದ.
“ನಿಮ್ಮ ಕಸುಬು ಇದೇನಾ?”
“ಹೌದು, ನಮ್ಮದು ಒಂದು ಗುಂಪು ಇದೆ, ‘ಚೈನ್ ದೋಚಿಂಗ್ ಕಂಪೆನಿ’ ಅಂತ ಹೆಸರು, ನಮ್ಮ ಕಂಪೆನಿಯಲ್ಲಿ ಸುಮಾರು ೩೦ ಕಳ್ಳರು ಕೆಲಸ ಮಾಡ್ತಿದ್ದಾರೆ, ಬೆಂಗಳೂರಿನಲ್ಲಿ ಬೇರೆ ಬೇರೆ ಬಡಾವಣೆಯಲ್ಲಿ ಮಹಿಳೆಯರು ಬೆಳಿಗ್ಗೆ ವಾಕಿಂಗ್ ಅಂತ ಓಡಾಡ್ತಾರೆ, ತಿಂಗಳಿಗೆ ಒಬ್ಬ ಒಂದಾದ್ರೂ ಚೈನ್ ಕದಿಬೇಕು, ಇಲ್ಲಾಂದ್ರೆ ಮೆಂಬರ್‌ಶಿಪ್ ಕಳ್ಕೊಳ್ತಾನ” ಎಂದ. ವಿಶಾಲುಗೆ ಆಶ್ಚರ್ಯ ಎನ್ನಿಸಿತು.
“ಅಲ್ಲ, ಕಳ್ತನಕ್ಕೆ ಅಂತಾನೇ ಒಂದು ಸಂಘ ಕಟ್ಕೊಂಡ್ ಇದ್ದೀರಲ್ಲ” ಎಂದು ಕೇಳಿದಳು ವಿಶಾಲು.
“ಹೌದು ತಾಯಿ ನನ್ನ ಹೆಸರು ಕೃಷ್ಣ ಅಂತ, ಸಂಘಕ್ಕೆ ನಾನು ವೈಸ್ ಪ್ರೆಸಿಡೆಂಟು, ಕದಿಯೋಕೂ ನಾವು ನಿಯಮಗಳು ರೂಪಿಸಿದ್ದೀವಿ” ಎಂದ.
“ಏನು ಹೇಳಿ?” ಎಂದ ವಿಶ್ವ
“ಬಂಗಾರ ಕದಿಯುವಾಗ ಹೆಣ್ಣು ಮಕ್ಕಳಿಗೆ ತೊಂದರೆ ಆಗಬಾರದು, ಅವರು ಆಯ ತಪ್ಪಿ ಕೆಳಗಡೆ ಬೀಳಬಾರದು, ಮಾಂಗಲ್ಯ ಸರ ಯಾವತ್ತೂ ಕದಿಯೋಕೆ ಹೋಗಬಾರದು, ಕಿವೀನಲ್ಲಿ ಇರೋ ವೋಲೇನ ಕಿತ್ತು ಹಿಂಸೆ ಮಾಡಬರ‍್ದು, ನಮಗೆ ಬೇಕಾಗಿರೋದು ಬಂಗಾರ” ಎಂದ.
“ಕಳ್ಳರಿಗೂ ಇಂಥ ಒಳ್ಳೆ ಬುದ್ಧಿ ಇದೆ ಅಂದ್ರೆ ನಂಬೋಕೇ ಆಗಲ್ಲ” ಎಂದ ವಿಶ್ವ.
“ಯಾಕ್ ಸ್ವಾಮಿ ಇರೋದಿಲ್ಲ, ಇದೂ ಒಂದು ವಿದ್ಯೆ ಅಲ್ವಾ? ವಡ್ಡಾರಾಧನೆ ಅಂಬೋ ಪ್ರಾಚೀನ ಕನ್ನಡ ಗ್ರಂಥ ಗೊತ್ತಾ? ೧೦ನೇ ಶತಮಾನದ ಕೃತಿ” ಅಂತ ಕಳ್ಳ ಕೇಳಿದಾಗ. ವಿಶಾಲೂಗೆ ಆಶ್ಚರ್ಯ.
“ಏನ್ರೀ ಇದು ಕನ್ನಡ ಸಾಹಿತ್ಯದ ಬಗ್ಗೆ ಮಾತಾಡ್ತಾ ಇದ್ದಾನೆ” ಎಂದಳು.
“ವಡ್ಡಾರಾಧನೆಯಲ್ಲಿ ೬೪ ವಿದ್ಯೆಗಳು ಪ್ರಸ್ತಾಪ ಬರುತ್ತೆ, ಅದರಲ್ಲಿ ಚೋರ ವಿದ್ಯೆ ಕೂಡ ಒಂದು, ಅದನ್ನ ಕಷ್ಟಪಟ್ಟು ಕಲ್ತಿದ್ದೀವಿ, ಹೊಟ್ಟೆ ಪಾಡಿಗೆ ಮಾಡ್ತಾ ಇದ್ದೀವಿ” ಎಂದ.
“ಒಂದು ವೇಳೆ ಪೋಲೀಸ್‌ನವರ ಕೈಗೆ ಸಿಕ್ಕಾಕ್ಕೊಂಡ್ರೆ?” ವಿಶ್ವ ಕೇಳಿದ.
“ನಾವು ಲಾಯರ್ ಇಟ್ಕೊಂಡಿದ್ದೀವಿ, ಲಾಯರ್ ನೋಡ್ಕೊಳ್ತಾರೆ ಎಲ್ಲ” ಎಂದ.
“ಕೆಲವು ಸಲ ಪೋಲೀಸ್‌ನವರು ಸುಮ್ ಸುಮ್ನೆ ಎಳ್ಕೊಂಡ್ ಹೋಗಿ ಹೊಡೀತಾರಲ್ಲ ಅದ್ಕೇನ್ ಮಾಡ್ತೀರಾ? ಎಂದು ಕೇಳಿದಳು ವಿಶಾಲು.
“ಅದಕ್ಕೆ ಪ್ರೊಟೆಸ್ಟ್ ಮಾಡ್ತೀವಿ, ಧಿಕ್ಕಾರ ಕೂಗ್ತೀವಿ, ಇದೇ ವಿಷಯದ ಬಗ್ಗೆ ಸರ್ಕಲ್ ಹತ್ತಿರ ಸಂಘದ ಸದಸ್ಯರ ಮೀಟಿಂಗ್ ನಡೀತಿದೆ. ಇದೇ ರಸ್ತೇಲಿ ಮೆರವಣಿಗೆ ಬರುತ್ತೆ, ನಾವು ನ್ಯಾಯ ಕೇಳೋಕೆ ಪ್ರತಿಭಟಿಸ್ತಾ ಇದ್ದೀವಿ” ಎಂದ.
“ಏನು ಅಂತ ನ್ಯಾಯ ಕೇಳ್ತೀರ?”
“ನಾವು ಕಳ್ತನ ಮಾಡಿದ್ದೀವಿ ನಿಜ. ಆದ್ರೆ ನಮಗ್ಯಾಕೆ ಪೋಲೀಸರು ಹಿಂಸೆ ಮಾಡಬೇಕು? ರಾಜಕಾರಣಿಗಳು ಕದ್ರೆ ಅವರಿಗೆ ಇದೇ ರೀತಿ ಚಿತ್ರ ಹಿಂಸೆ ಕೊಡ್ತೀರಾ? ನಾವು ಕದ್ದಿರೋದ್ರಲ್ಲಿ ಒಂದು ಭಾಗಾನ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಡ್ತೀವಿ, ದೇವಸ್ಥಾನಕ್ಕೆ ಸ್ವಲ್ಪ ಕೊಡ್ತೀವಿ, ನಾವು ಕದಿದೇ ಇರೋವಾಗ ನಮ್ಮನ್ನ ಹಿಡಿಯೋ ಹಾಗಿಲ್ಲ ಅಂತ ಸ್ಟ್ರೈಕ್ ಮಾಡ್ತಾ ಇದ್ದೀವಿ” ಎಂದ. ಆ ವೇಳೆಗೆ ಪ್ರೊಸೆಷನ್ ಮನೆ ಮುಂದೆ ಬಂತು.
“ಧಿಕಾರ ಧಿಕ್ಕಾರ, ಪೋಲಿಸರಿಗೆ ಧಿಕ್ಕಾರ! ನ್ಯಾಯ ಬೇಕು, ನ್ಯಾಯ ಬೇಕು” ಎಂದು ಕಳ್ಳರು ಕೂಗ್ತಾ ಹೋದ್ರು.
“ಬರ‍್ಲಾ ನಾನು ಜೊತೆಗೆ ಹೋಗಬೇಕು, ವೈಸ್ ಪ್ರೆಸಿಡೆಂಟ್ ಅಲ್ವಾ?” ಎಂದು ಹೊರಟ
“ಮತ್ಯಾವಾಗ ಬರ‍್ತೀರ?” ಎಂದು ಕೇಳಿದಳು ವಿಶಾಲು.
“ನಿಮ್ ಪೈಕಿ ಯಾರದ್ದಾದ್ರೂ ಸರ ಕಳ್ತನವಾದ್ರೆ ಹೇಳಿ ತಾಯಿ, ನಾನು ನಿಮಗೆ ಸಹಾಯ ಮಾಡ್ತೀನಿ” ಎಂದು ತನ್ನ ನಂಬರ್ ಕೊಟ್ಟು ಹೋದ.