For the best experience, open
https://m.samyuktakarnataka.in
on your mobile browser.

ಚೊಂಬು, ಚಿಪ್ಪಿನ ನಡುವೆ `ನೇಹಾ' ಬಾಳು ಡೇಂಜರ್?

11:35 AM Apr 25, 2024 IST | Samyukta Karnataka
ಚೊಂಬು  ಚಿಪ್ಪಿನ ನಡುವೆ  ನೇಹಾ  ಬಾಳು ಡೇಂಜರ್

ಋಣಾತ್ಮಕ ವಿಷಯ ತಕ್ಷಣ ಗಮನ ಸೆಳೆಯುವಷ್ಟು ಸಕಾರಾತ್ಮಕ ಸಂಗತಿ, ಅಷ್ಟು ಬೇಗ ಚಿತ್ತೈಸದು. ಇದು ದೇಶ, ಕಾಲ, ವಯಸ್ಸು ಮೀರಿದ ಮಾನಸಿಕ ಸ್ಥಿತಿ. ಕೆಟ್ಟದ್ದಕ್ಕೆ ಬಹುಬೇಗ ಈಡಾಗುವುದು ಮನುಷ್ಯ ಸಹಜ ಮನೋಧರ್ಮವಾಗಿ ಬಿಟ್ಟಿದೆ. ಈಗ ಇದೇ ಮನೋಸ್ಥಿತಿ ಆಧರಿಸಿಯೇ ಲೋಕ ಸಮರದ ತಂತ್ರಗಾರಿಕೆ ನಡೆದಿದೆ.
ಹಾಗಾಗಿಯೇ ಚೊಂಬು, ಚಿಪ್ಪು, ಪಿಕ್‌ಪಾಕೆಟ್, ಕೊಲೆ, ಜಾತಿ-ಧರ್ಮಗಳ ಮೂಲಕ ವಿಜೃಂಭಿಸಿ ಮತ ಆಕರ್ಷಿಸುವ ತಂತ್ರಗಾರಿಕೆ ಕಾಣಬಹುದು.
ಪಕ್ಷಾಧಾರಿತ ಮತ್ತು ವ್ಯಕ್ತಿ ವ್ಯಕ್ತಿತ್ವದ ಸಾಣೆ ಹಿಡಿಯುವ ಚುನಾವಣೆ ಹಾಗೂ ಮತ ಅಪೇಕ್ಷಿಸುವ ಕಾಲ ಮುಗಿದು ದಶಕಗಳೇ ಸಂದವು. ತಾವು ಅಧಿಕಾರಕ್ಕೆ ಬಂದಲ್ಲಿ ಅಥವಾ ತಾವು ಆಯ್ಕೆಯಾದಲ್ಲಿ ಮಾಡುವ ಕಾರ್ಯ, ತಮ್ಮ ಪಕ್ಷದ ಸಿದ್ಧಾಂತ, ಜನಕಲ್ಯಾಣ, ರಾಷ್ಟ್ರ ರಕ್ಷಣೆ ಮತ್ತು ಸಂವಿಧಾನ ಬದ್ಧತೆ ಇತ್ಯಾದಿಗಳನ್ನು ಮುಂದಿಟ್ಟು ಮತ ಭಿಕ್ಷೆ ಯಾಚಿಸುವ ಕಾಲವಿತ್ತು.
ವ್ಯಕ್ತಿಗತ ಟೀಕೆ ಟಿಪ್ಪಣಿಗಳಿರಲಿ, ಸೈದ್ಧಾಂತಿಕವಾಗಿಯೂ ಸಂಘರ್ಷಕ್ಕೆ ಇಳಿಯದ, ತೆಗಳಿಕೆ ಇಲ್ಲದ ರಾಜಕೀಯ ಮತ್ತು ಚುನಾವಣೆ ನಡೆದ ಈ ದೇಶದಲ್ಲಿ ಈಗ ವಿಜೃಂಭಿಸುತ್ತಿರುವುದು ವೈಯಕ್ತಿಕ ತೆಗಳಿಕೆ, ಧರ್ಮ, ವಸ್ತು, ವ್ಯಕ್ತಿತ್ವದ ಅವಹೇಳನ, ಜಾತಿ, ಮತೀಯ ಅಂಶಗಳ ಕೆರಳಿಸುವಿಕೆ! ಹಾಗಾಗಿಯೇ ಮುತ್ಸದ್ದಿಗಳು ಮಾಯವಾಗಿ ಈಗ ಕೆಸರು ಎರಚಾಡುವರ ಮತ್ತು ಘರ್ಷಣೆಗಿಳಿಯುವವರ ಮೇಲುಗೈ. ಅದಕ್ಕಾಗಿಯೇ ಈಗ ಚೊಂಬು, ಚಿಪ್ಪು ಇತ್ಯಾದಿ ಅಂಶಗಳ ಜೊತೆ ಹೆಣ್ಣು ಮಗಳ ಕೊಲೆ ಪ್ರಕರಣ, ಧರ್ಮ ಸಮುದಾಯಗಳಿಗೆ ತಳಕು ಹಾಕುವ ಕಾರ್ಯ ನಡೆದಿದೆ.
ಕಾಂಗ್ರೆಸ್ ಪಕ್ಷ ಈ ಸಾರೆ ತನ್ನ ಗ್ಯಾರಂಟಿಗಳ ವಿಸ್ತಾರದೊಂದಿಗೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಬಿಂಬಿಸಲು ದೊಡ್ಡ ಚೊಂಬಿನ ಫೋಟೊದೊಂದಿಗೆ ಎಲ್ಲ ಮಾಧ್ಯಮಗಳಲ್ಲಿ ಜಾಹೀರಾತು ನೀಡಿತು.
ಈ ಚೊಂಬಿನ ಕೆಳಗೆ ಕೇಂದ್ರ ಬಿಜೆಪಿ ಸರ್ಕಾರದಿಂದ ಬರ ಪರಿಹಾರ, ಅನುದಾನ, ಒಕ್ಕೂಟ ವ್ಯವಸ್ಥೆಯಡಿ ನೀಡದ ತೆರಿಗೆ ಗ್ರ್ಯಾಂಟ್ ಮತ್ತು ಕೊಟ್ಟ ಭರವಸೆ ಈಡೇರಿಸದೇ ನೀಡಿದ್ದು ಬರೀ ಚೊಂಬು ಎನ್ನುವುದನ್ನು ಬಿಂಬಿಸಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ತಂತ್ರ ಅನುಸರಿಸಿ ಯಶಸ್ವಿಯಾಗಿದ್ದು ಈಗ ಬಹುಶಃ ಚೊಂಬಿಗೆ ಪ್ರೇರಣೆಯಾಗಿರಬಹುದು.
ಅಲ್ಲದೇ ದೆಹಲಿಯವರೆಗೆ ಹೋಗಿ ಇಡೀ ಸರ್ಕಾರವೇ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ನಡೆಸಿದ ಅಭಿಯಾನ ಈ ಲೋಕ ಸಮರಕ್ಕೆ ಮುನ್ನುಡಿ ಎಂಬಂತಿತ್ತು. ಆದರೆ ಈ ಸಾರೆ ಬಿಜೆಪಿಯೇನೋ ತಿರುಗೇಟು ನೀಡಿದೆ. ೨೦೧೩ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚೊಂಬು ಹಿಡಿದುಕೊಂಡು ಬಯಲು ಶೌಚಕ್ಕೆ ಹೋಗುತ್ತಿರುವುದು ಮತ್ತು ೨೦೨೩ರಲ್ಲಿ ಚೊಂಬು ಹಿಡಿದು ಸುಲಭ ಶೌಚಾಲಯಕ್ಕೆ ಹೋಗುತ್ತಿರುವ ಎಡಿಟೆಡ್ ಚಿತ್ರವನ್ನು ಟ್ವೀಟ್ ಮಾಡಿ `ಇಷ್ಟೇ ವ್ಯತ್ಯಾಸ' ಎಂದಿತು.
ಅಲ್ಲದೇ ಕಾಂಗ್ರೆಸ್ ತುಷ್ಟೀಕರಣದ ಕಥೆಯನ್ನು ಲವ್ ಜಿಹಾದ್, ಕುಕ್ಕರ್ ಬಾಂಬ್ ಸ್ಫೋಟ, ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಇಂತಹ ಹಲವು ವಿಚಾರಗಳನ್ನು ಉಲ್ಲೇಖಿಸಿ ಕನ್ನಡಿಗರ ಕೈಗೆ ಚಿಪ್ಪು ನೀಡಿದ ಕಾಂಗ್ರೆಸ್ ಎಂದು ಮರು ಜಾಹೀರಾತು ನೀಡಿತು.
ಇಷ್ಟಕ್ಕೇ ನಿಲ್ಲದ ಜಾಹೀರಾತು ಸಮರ ಈಗ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಎಂಬ ವಿದ್ಯಾರ್ಥಿನಿಯ ಹತ್ಯೆ ಪ್ರಕರಣ; ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟ; ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಕೋರರ ರಕ್ಷಣೆ; ನಕ್ಸಲಿಸಂ ಪರ ಧೋರಣೆ ಇತ್ಯಾದಿಗಳವರೆಗೆ ಎಳೆದು ಬಂದಿದೆ.
ಸಕಾರಾತ್ಮಕ, ಧನಾತ್ಮಕ ಅಂಶ ಈಗ ಮೂಲೆಗೆ ತಳ್ಳಲ್ಪಟ್ಟು, ನಕಾರಾತ್ಮಕ ಟೀಕೆ, ಪ್ರತ್ಯಾರೋಪಗಳ ಅಂಶಗಳನ್ನು ಮುಂದಿಟ್ಟುಕೊಂಡೇ ಮತಬೇಟೆ ಶುರುವಾಗಿದೆ. ಗುಜರಾತ್, ಉತ್ತರ ಪ್ರದೇಶಗಳ ಚುನಾವಣೆಗಳಲ್ಲಿ ದಶಕಗಳ ಹಿಂದೆ ಮತ್ತು ಇತ್ತೀಚಿನ ಚುನಾವಣೆಗಳಲ್ಲಿ ಇಂಥ ಜಾಹೀರಾತುಗಳೇ ವಿಜೃಂಭಿಸಿದ್ದವು.
ಈಗ ಅವೇ ಅಂಶಗಳು ಕರ್ನಾಟಕಕ್ಕೆ ಕಾಲಿಟ್ಟಿವೆ. ತೊಂಬತ್ತರ ದಶಕದಲ್ಲಿ ಜಾಹೀರಾತು ಮತ್ತು ಪತ್ರಿಕೆಗಳನ್ನು ಅಸ್ತ್ರವಾಗಿಸಿಕೊಂಡ ನಿರ್ಭಯ ಚುನಾವಣೆ ಇತ್ತು.
ಬೋಫೋರ್ಸ್ ಪ್ರಕರಣ, ಮಂಡಲ್, ಮಸೀದಿ, ಮಂದಿರ್ ಘಟನಾವಳಿಗಳಲ್ಲಿ ಜಾಹೀರಾತು ಮತ್ತು ಅಭಿಯಾನ ತಾತ್ವಿಕ-ತರ್ಕಬದ್ಧತೆ ಹಿನ್ನೆಲೆಯಲ್ಲಿ ನಡೆಯಿತು. ದೇಶದ ಬಹುತೇಕ ಮತದಾರರು ಇಂದಿಗೂ ರಾಮ್ ಜೇಠ್ಮಲಾನಿ ಅವರ ದಿನಕ್ಕೆ ಹತ್ತು ಪ್ರಶ್ನೆ ಸರಣಿಯನ್ನು ನೆನಪಿಸಿಕೊಳ್ಳುತ್ತಾರೆ. ಬೋಫೋರ್ಸ್ ಹಗರಣದ ಜಾಡು ಹಿಡಿದು ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಮಾಧ್ಯಮವನ್ನು ಗುರಾಣಿಯಾಗಿ ಇರಿಸಿಕೊಂಡು ರಾಜೀವ್ ಗಾಂಧಿಗೆ ಪ್ರಶ್ನೆಗಳ ಸರಮಾಲೆಯನ್ನೇ ಎಸೆದಿದ್ದರು.
ಅದಕ್ಕೆ ಪ್ರತಿಯಾಗಿ ಬೊಗಳೋ ನಾಯಿ ಪದ ಬಳಕೆ ದೇಶಾದ್ಯಂತ ಚರ್ಚೆಯಾಗಿತ್ತು. ಅದಕ್ಕೂ ಕೂಡ ಈ ನಾಯಿ ಕಚ್ಚುತ್ತಿದೆ, ಕಳ್ಳರನ್ನು ಮಾತ್ರ ಎಂದು ಜೇಠ್ಮಲಾನಿ ಪ್ರತ್ಯುತ್ತರ ನೀಡಿದ್ದರು. ಅಷ್ಟರ ಮಟ್ಟಿಗೆ ವೈಯಕ್ತಿಕ ಮತ್ತು ಚಾರಿತ್ರಿಕ ಟೀಕೆ-ಪ್ರಹಾರಗಳ ತೆಳು ಗೆರೆ ಮಾಧ್ಯಮ ಬಳಕೆಯಲ್ಲಿ ಇತ್ತು.
ಆದರೀಗ ಈ ನೆಲದಲ್ಲಿ ನಡೆದ ಹಿಂಸಾಕೃತ್ಯಗಳು, ಅತ್ಯಾಚಾರಗಳು, ಧರ್ಮ ಸಂಘರ್ಷಗಳ ಜೊತೆಗೆ ಹಿಂದೂ-ಮುಸ್ಲಿಂ, ಮಾಂಗಲ್ಯ, ಧರ್ಮ-ಜಾತಿಗಳ ಸಂಘರ್ಷದ ಮಾತುಗಳು ಪ್ರಧಾನಿ, ಪ್ರತಿಪಕ್ಷದ ನಾಯಕರಿಂದಲೇ ಬರುತ್ತಿವೆ.
ಚುನಾವಣೆ ಮುಗಿಯುವ ಹಂತದವರೆಗೆ ಇನ್ನೆಷ್ಟು ಫೂತ್ಕಾರಗಳನ್ನು ಮತದಾರ ಕೇಳಬೇಕಾದೀತೋ? ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಎನ್ನುವವಳ ಭೀಕರ ಮತ್ತು ಕ್ರೂರ ಹತ್ಯೆ ಘಟನೆಯನ್ನೇ ನೋಡಿ.
ಫಯಾಜ್ ಎನ್ನುವಾತ ಅವಳದೇ ಸಹಪಾಠಿ, ಸ್ನೇಹಿತ, ಆಕೆಯನ್ನು ಕಾಲೇಜು ಕ್ಯಾಂಪಸ್‌ನಲ್ಲೇ ಅಮಾನುಷವಾಗಿ ಇರಿದು ಕೊಲೆಗೈದ. ಇಂತಹ ಕ್ರರ‍್ಯವನ್ನು ಯಾರೂ ಸಮರ್ಥನೆ ಮಾಡಲಾರರು. ನೇಹಾಳ ತಂದೆ ಕಾಂಗ್ರೆಸ್ಸಿನ ಕಾರ್ಪೋರೇಟರ್. ತಂದೆ, ತಾಯಿ ಎಲ್ಲರ ಕಣ್ಮಣಿ, ಪ್ರತಿಭಾವಂತೆಯ ಹತ್ಯೆ ಇಡೀ ಸಮಾಜ ತಲೆ ತಗ್ಗಿಸುವಂತೆ ಮತ್ತು ಬೆಚ್ಚಿ ಬೀಳುವಂತೆ ಮಾಡಿದೆ.
ಎಲ್ಲರೂ ಈ ಅಮಾನುಷ ಕೃತ್ಯವನ್ನು ಖಂಡಿಸಿದವರೇ. ಫಯಾಜ್‌ಗೆ ಈ ನೆಲದ ಕಾನೂನಿನ ಪ್ರಕಾರ ಶಿಕ್ಷೆ ಕೊಡಿ ಎಂದು ಸ್ವತಃ ಆತನ ತಾಯಿ ಮತ್ತು ಸಮುದಾಯಗಳೇ ಬೇಡಿಕೆ ಇಟ್ಟಿವೆ. ಆಗ್ರಹಿಸಿವೆ. ಆದರೆ ಈ ಘಟನೆ ಧರ್ಮ-ಜಾತಿಯ ತಿರುವು ಪಡೆದುಕೊಂಡಿತು.
ಎಲ್ಲವನ್ನೂ ಮೀರಿ ಚುನಾವಣೆಯ, ಮತ ಬೇಟೆಯ ಸಂಗತಿಯಾಯಿತು. ರಾಷ್ಟ್ರೀಯ ಪಕ್ಷದ ಅಧ್ಯಕ್ಷರೇ ತಮ್ಮ ಪ್ರತಿಪಕ್ಷದ ಕಾರ್ಪೋರೇಟರ್ ಮನೆಗೆ ಧಾವಿಸಿ ಸಾಂತ್ವನ ಹೇಳಿದರು. ಹಾಗೇ ಪೈಪೋಟಿಗೆ ಬಿದ್ದವರಂತೆ ಎರಡೂ ಕಡೆಯವರು, ಎಲ್ಲ ಧರ್ಮೀಯ ಮುಖಂಡರು, ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿದರು.
ಒಬ್ಬ ವ್ಯಕ್ತಿಯ ಕೃತ್ಯಕ್ಕೆ ಸಮುದಾಯವನ್ನು ಗುರಿ ಮಾಡಬೇಡಿ ಎನ್ನುವ ಮಾತು ಉಡುಗಿ ಹೋಗುವಂತಾಯಿತು. ದುಃಖಿತರ ಮನೆ ಸಾಂತ್ವನ ಹೇಳುವವರ ಮತ್ತು ಸಂತ್ರಸ್ತೆಯ ಮಾನ ಮರ್ಯಾದೆ ಕಳೆದು ಬೀದಿಗೆ ತಳ್ಳುವ ಕೃತ್ಯ ನಡೆಯಿತು. ಎಲ್ಲರೂ ಕೂಡ ಊಹಿಸಿದಂತೆ ಚುನಾವಣೆಯ ವಿಷಯವೂ ಆಯಿತು. ಚೊಂಬು, ಚಿಪ್ಪು, ಡೇಂಜರ್ ಜಾಹೀರಾತಿನಲ್ಲಿ ನೇಹಾ ಸಾವು ಸಿಕ್ಕಿಕೊಂಡಿತು.
ಆಯಾ ಚುನಾವಣೆಗಳಲ್ಲಿ ಹಲವು ವಿದ್ಯಮಾನಗಳನ್ನು ಮತಬೇಟೆಗೆ ಬಳಸಿಕೊಳ್ಳುವುದು ಇರುವಂಥ ತಂತ್ರವೇ. ಆದರೆ ಸೂಕ್ಷ್ಮತೆಯ ಗೆರೆಯನ್ನು ಈ ಹಿಂದೆ ಜಾಹೀರಾತುಗಳು ದಾಟುತ್ತಿರಲಿಲ್ಲ. ಟಿ.ಎನ್.ಶೇಷನ್‌ರಂಥ ಮುಖ್ಯ ಚುನಾವಣಾ ಆಯುಕ್ತರು ಇದಕ್ಕೆಲ್ಲ ಗುರಾಣಿ ಹಿಡಿದು ನಿಂತಿದ್ದರು.
ಈಗ ಹಾಗಿಲ್ಲವಲ್ಲ? ಚುನಾವಣಾ ಆಯೋಗವೇ ಹಲ್ಲು ಕಿತ್ತ, ಅರ್ಧ ಜೀವ ತೆಗೆದ, ಭುಸುಗುಡಲೂ ಆಗದ ಹಾವಾಗಿದೆ! ಅಭಿವೃದ್ಧಿ, ಭರವಸೆ, ಯೋಜನೆ, ಜನಕಲ್ಯಾಣ, ಬದುಕು-ಬವಣೆಯ ಮೇಲೆ ನಡೆಯಬೇಕಾದ ಚುನಾವಣೆ ಈಗ ಚೊಂಬು, ಚಿಪ್ಪು, ಮಂಗಳಸೂತ್ರ, ಧರ್ಮ-ಜಾತಿಯ ವೈಷಮ್ಯಗಳೇ ಪ್ರಮುಖವಾಗಿ ಸಾಗುತ್ತಿದೆ. ನಾಡಿನಲ್ಲಿ ಕುಡಿಯಲು ನೀರಿಲ್ಲದ, ಕೈಗೆ ಕೆಲಸವಿಲ್ಲದ, ಬರದ ಬೆಂಗಾಡಿನಲ್ಲಿ ಜನ ಅಗಲಗಣ್ಣಿನಿಂದ ಬದುಕಿನ ಚಿಂತೆ ನಡೆಸುತ್ತಿರುವಾಗ ಚೊಂಬು, ಚಿಪ್ಪು, ಡೇಂಜರ್, ನೇಹಾ ವಿಷಯಗಳೇ ಪ್ರಮುಖವಾಗಬೇಕಾಗಿತ್ತೇ?
ಇನ್ನೊಂದು ತಿಂಗಳ ಕಾಲ ಈ ಸಂಘರ್ಷ, ಸಮರವನ್ನು ನೋಡಬೇಕೇನೋ? ಉನ್ಮಾದದ ಮಾತುಗಳನ್ನು ಸಹಿಸಿಕೊಳ್ಳಬೇಕೇನೋ?