ಜಗತ್ತನ್ನು ಅರ್ಥಮಾಡಿಕೊಂಡಂತೆ ನಟಿಸಬಾರದು
ಪ್ರತಿದಿನ ಪ್ರಪಂಚದಾದ್ಯಂತ ಸಾಕಷ್ಟು ಮಂದಿಯ 'ಸಾವಿನ ಸಮೀಪದ ಅನುಭವ'ಗಳು ಮತ್ತು ಸಂಬಂಧಿತ ವಿದ್ಯಮಾನಗಳು ಬೆಳಕಿಗೆ ಬರುತ್ತಿವೆ. ಪ್ರಾಚೀನಕಾಲದಿಂದಲೂ ಸಾವಿನ ಸಮೀಪದ ಅನುಭವಗಳು ವರದಿಯಾಗಿದ್ದರೂ ಕಳೆದ ಕೆಲವು ದಶಕಗಳಲ್ಲಿ ಈ ಬಗ್ಗೆ ವ್ಯವಸ್ಥಿತ ಅಧ್ಯಯನ ಮತ್ತು ಸಂಶೋಧನೆಗಳು ನಡೆಯುತ್ತಿವೆ. ಸಾವಿನ ಸಮೀಪದ ಅನುಭವಗಳ ಕುರಿತಾದ ಪ್ರಾಚೀನ ಮತ್ತು ಆಧುನಿಕ ಎರಡೂ ಮೂಲಗಳಿಂದ ಹೊರಹೊಮ್ಮುವ ಮಾಹಿತಿಗಳು ಅತ್ಯಂತ ಗಹನವಾಗಿವೆ, ಸ್ಥಿರವಾಗಿವೆ, ಬೋಧಪ್ರದವಾಗಿವೆ ಹಾಗೂ ಸ್ಫೂರ್ತಿದಾಯಕವಾಗಿವೆ.
ಮಾನವಜನಾಂಗವನ್ನು ದೀರ್ಘಕಾಲದಿಂದ ನಿರಂತರವಾಗಿ ಭಾಧಿಸುತ್ತಿರುವ ಪ್ರಶ್ನೆ: “ಸತ್ತನಂತರ ನಮಗೆ ಏನಾಗುತ್ತದೆ?”. ಈ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ಡಾ. ಮೆಲ್ವಿನ್ ಮೋರ್ಸ್ ಒಳಗೊಂಡ ಸಂಶೋಧನಾ ತಂಡದ ಕೆಲವೊಂದು ಅದ್ಭುತ ಆವಿಷ್ಕಾರಗಳನ್ನು “ಕ್ಲೋಸರ್ ಟು ದಿ ಲೈಟ್” ಕೃತಿಯಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ. ಈ ತಂಡದ ಸಂಶೋಧನಾಕಾರ್ಯದ ಒಟ್ಟು ಸಾರಾಂಶವೇನೆಂದರೆ; ಒಬ್ಬ ವ್ಯಕ್ತಿ 'ಸಾವಿನ ಸಮೀಪದ ಅನುಭವ'ವನ್ನು ಹೊಂದಬೇಕಾದರೆ ಆತ ಸಾವಿನಂಚಿನಲ್ಲಿರಬೇಕು ಎಂಬುದು! ಇವರ ಸಂಶೋಧನಾ ಫಲಿತಾಂಶಗಳು ಇಂತಹ ಘಟನೆಗಳು ಕೇವಲ ಭ್ರಮೆಗಳು ಎಂದೇ ವಾದಿಸುತಿದ್ದ ಅನೇಕ ಸಂದೇಹವಾದಿಗಳನ್ನು ಮೌನಗೊಳಿಸಿದ್ದಂತೂ ಸತ್ಯ. ತೀವ್ರವಾಗಿ ಅಸ್ವಸ್ಥರಾದ ರೋಗಿಗಳ ಅನುಭವಗಳನ್ನು ಸಾವಿನಂಚಿನಲ್ಲಿದ್ದ ರೋಗಿಗಳ ಅನುಭವಗಳೊಂದಿಗೆ ವೈಜ್ಞಾನಿಕವಾಗಿ ಹೋಲಿಸಿ ನೋಡಿದಾಗ ಸಾವಿನ ಸಮೀಪದ ಅನುಭವವನ್ನು ಪಡೆಯುವ ವ್ಯಕ್ತಿ ಸಾವಿನ ಇನ್ನೊಂದು ಬದಿಯನ್ನು ತಲುಪಿರಬೇಕು ಎಂಬುದನ್ನು ನಿರ್ಧರಿಸಲು ಈ ಸಂಶೋಧನಾ ತಂಡಕ್ಕೆ ಸಾಧ್ಯವಾಯಿತು.
ಸಾವಿನ ಸಮೀಪದ ಅನುಭವಗಳನ್ನು ದಾಖಲಿಸುವ ನಿರ್ದಿಷ್ಟ ಪ್ರದೇಶ ಮಿದುಳಿನ ಬಲಭಾಗದ ಟೆಂಪೊರಲ್ ಲೋಬ್‌ಗೆ ಹತ್ತಿರದಲ್ಲಿದೆ ಎಂಬುದನ್ನು ಗುರುತಿಸುವಲ್ಲಿ ಈ ತಂಡ ಯಶಸ್ವಿಯಾಯಿತು. ಡಾ. ಮೋರ್ಸ್ ಮತ್ತು ತಂಡದ ಅಭಿಪ್ರಾಯದಂತೆ ಮಿದುಳಿನ ಈ ಪ್ರದೇಶ “ಆತ್ಮದ ಆಸನ”ವಾಗಿದೆ. ಈ ಆಸನವೇ ನಾವೀಗ ಏನಾಗಿದ್ದೇವೆಯೋ ಅದರ ಸಾರಸತ್ವವನ್ನು ಹೊಂದಿರುವ ಭಾಗವೆಂಬುದು ಇವರ ಅಭಿಮತ. ಭೌತಿಕದೇಹದ ಅವಸಾನದ ಹೊರತಾಗಿಯೂ ನಮ್ಮನ್ನು ಜೀವಂತವಿರಿಸುವುದೇ ಈ ಆತ್ಮ ಎಂಬ ವಿಶ್ವದ ಮಹಾನ್ ಜ್ಞಾನಿಗಳು ಹಾಗೂ ವಿಜ್ಞಾನಿಗಳ ಅಭಿಪ್ರಾಯವನ್ನು ಡಾ. ಮೋರ್ಸ್ ತಂಡವೂ ಅನುಮೋದಿಸುತ್ತದೆ. “ಕ್ಲೋಸರ್ ಟು ದಿ ಲೈಟ್” ಕೃತಿಯನ್ನು ಗಂಭೀರವಾಗಿ ಅಧ್ಯಯನಮಾಡುತ್ತಾ ಹೋದಂತೆ ಮಾನವ ಆತ್ಮದ ಮೇಲೆ ಸ್ಫಟಿಕರೂಪದ ಬೆಳಕನ್ನು ಹರಿಸುತ್ತಾ ಹೋಗುತ್ತದೆ. ಉದಾಹರಣೆಗೆ; ಅನೇಕ ವಿಶ್ವಪ್ರಸಿದ್ಧ ನರರೋಗತಜ್ಞರು ಈ ರೀತಿಯ ಮರಣಪೂರ್ವದರ್ಶನಗಳು ಕೇವಲ ಜ್ವರದ ತೀವ್ರತೆಯಿಂದ ಉಂಟಾಗುವ ಸ್ಥಿತಿಯ ಪರಿಣಾಮಗಳು ಎಂದು ತಿರಸ್ಕರಿಸಿದರೆ; ಡಾ. ಮೋರ್ಸ್ ಈ ಸ್ಥಿತಿಯು ಸಾಯುತ್ತಿರುವ ರೋಗಿಗಳಿಗೆ ಸಾವಿನ ಸಮೀಪದ ಅನುಭವವನ್ನು ಹೊಂದಲು ಹಿತವಾದ ವಾತಾವರಣವನ್ನು ಸೃಷ್ಟಿಸಲು ಸಹಕರಿಸುವ ಸ್ಥಿತಿ ಎಂದು ಬಣ್ಣಿಸುತ್ತಾನೆ. ಡಾ. ಮೋರ್ಸ್ನ ಸಂಶೋಧನಾ ಅವಧಿಯಲ್ಲಿ ಮರಣಶಯ್ಯೆಯಲ್ಲಿದ್ದ ಎಷ್ಟೋ ಮಕ್ಕಳು ತಮ್ಮ ಸಂಬಂಧಿಗಳನ್ನು ತಮ್ಮ ಬಳಿಗೆ ಕರೆಸಿಕೊಂಡು 'ಸಾವಿನ ಸಮೀಪದ ಅನುಭವ'ಗಳ ಸಂದರ್ಭದಲ್ಲಿ ಸತ್ತುಹೋಗಿದ್ದ ತಮ್ಮ ಸ್ನೇಹಿತರನ್ನು ಭೇಟಿಮಾಡಿ ಮಾತನಾಡಿದ ಅನುಭವಗಳನ್ನು ಹಂಚಿಕೊಂಡದ್ದನ್ನು ತನ್ನ ಕೃತಿಯಲ್ಲಿ ದಾಖಲಿಸಿದ್ದಾನೆ. ಸಾವಿನ ಸಮೀಪದ ಅನುಭವಗಳ ಸಂದರ್ಭಗಳಲ್ಲಿ ಬಹುತೇಕ ರೋಗಿಗಳಿಗೆ 'ಪ್ರಖರವಾದ ಬಿಳಿಬೆಳಕಿನ ದರ್ಶನ'ವಾಗಿದ್ದನ್ನು ಮತ್ತು ಆ ಬೆಳಕು ತೋರಿಸಿದ ಅತ್ಯಂತ ಆತ್ಮೀಯವಾದ ಪ್ರೀತಿ ಹಾಗೂ ಕರುಣೆಯಿಂದ ತುಂಬಿದ ಅತೀಂದ್ರಿಯ ಅನುಭವಗಳನ್ನೂ ದಾಖಲಿಸಿದ್ದಾನೆ. ೧೯೮೨ರಲ್ಲಿ ಜಾರ್ಜ್ ಗ್ಯಾಲಪ್ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಅಂದಾಜು ೮೦ ಲಕ್ಷ ರೋಗಿಗಳು ತಮ್ಮ ಸಾವಿನ ಸಮೀಪದ ಅನುಭವಗಳನ್ನು ಹಂಚಿಕೊಂಡಿದ್ದರು. ಸಾವಿನ ಸಮೀಪದ ಅನುಭವಗಳು ವ್ಯಕ್ತಿಯ ವರ್ತನೆಗಳನ್ನು ಬಹುವಾಗಿ ಬದಲಾಯಿಸುತ್ತವೆಯಾದ್ದರಿಂದ ಇಂತಹ ಅನುಭವಗಳು “ಪರಿವರ್ತಕ ಅನುಭವ”ಗಳೆಂದು ಕರೆಯಲ್ಪಡುತ್ತವೆ.
ದೇವತಾಶಾಸ್ತ್ರಜ್ಞರ (ಥಿಯೋಲಾಜಿಯನ್ಸ್) ಪ್ರಕಾರ; ಪಾಶ್ಚಾತ್ಯ ಪ್ರಪಂಚದಲ್ಲಿ ಅಧ್ಯಾತ್ಮಿಕತೆಯು ನ್ಯೂಟನ್, ಜಾನ್ ಲಾಕ್, ಜಾನ್ ರೇ ಮುಂತಾದ ವಿಜ್ಞಾನಿ-ತತ್ವಜ್ಞಾನಿಗಳ ದೆಸೆಯಿಂದ ೧೭-೧೮ನೇ ಶತಮಾನದಲ್ಲಿ ಪ್ರಾರಂಭವಾಯಿತು ಎಂದು ಭಾವಿಸಲಾಗಿದೆ. ಈ ಮೂವರು ಇಂಗ್ಲಿಷ್ ಪ್ರೊಟೆಸ್ಟೆಂಟ್‌ಗಳು ಬ್ರಹ್ಮಾಂಡದ ವಿನ್ಯಾಸದಲ್ಲಿ ದೈವಿಕಶಕ್ತಿಯ ಇರುವಿಕೆಯನ್ನು ಕಂಡುಹಿಡಿಯಲು ಪ್ರಯತ್ನಿಸುವ ಮೂಲಕ ಆಧುನಿಕ ವಿಜ್ಞಾನದ ಅಡಿಪಾಯವನ್ನು ಹಾಕಿದ್ದರಿಂದ ಇಂದು 'ವಿಜ್ಞಾನವು ಹೊಸಧರ್ಮ'ವೆಂಬಂತಾಗಿದೆ. ಸೇಬು ನ್ಯೂಟನ್ನನ ತಲೆಯ ಮೇಲೆ ಬಿದ್ದ ಸನ್ನಿವೇಶ ಗುರುತ್ವಾಕರ್ಷಣೆಯ ಸಿದ್ಧಾಂತಕ್ಕೆ ಕಾರಣವಾಗಿ, ಇದು ಭೂಮಿಯ ಮೇಲಿನ ಎಲ್ಲವನ್ನೂ ಒಂದಕ್ಕೊಂದರ ಆಕರ್ಷಣೆಯಲ್ಲಿ ಹಿಡಿದಿರಿಸುವ ದೇವರ ಕೆಲಸದ ರೀತಿ ಎಂಬ ನಂಬಿಕೆಯನ್ನು ಹುಟ್ಟುಹಾಕಿತು. ವೈಜ್ಞಾನಿಕಕ್ರಾಂತಿಗೆ ಕಾರಣವಾದ ಈ ವಿಜ್ಞಾನಿಗಳ ಕೆಲಸ ಪ್ರಕೃತಿಯಲ್ಲಿ ಅಡಗಿರುವ ದೈವೀಕಶಕ್ತಿಯನ್ನು ಹುಡುಕುವ ಪ್ರಯತ್ನವಾಗಿತ್ತು. ಬ್ರಹ್ಮಾಂಡವನ್ನು ನಿಯಂತ್ರಿಸುವ ನೈಸರ್ಗಿಕ ನಿಯಮಗಳನ್ನು ಬಹಿರಂಗಪಡಿಸುವ ಮೂಲಕ ಈ ಮೂರು ವೈಜ್ಞಾನಿಕ ಪ್ರತಿಭೆಗಳು 'ನಾವು ದೇವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು' ಎಂದು ನಂಬಿದ್ದರು ಮಾತ್ರವಲ್ಲದೆ ಈ ವಿಜ್ಞಾನಿಗಳು ಆಳವಾದ ಅಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡಿದ್ದರು. ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಎಂಬ ಗೆಲಿಲಿಯೋನ ಸಿದ್ಧಾಂತವನ್ನು ನಿಗ್ರಹಿಸುವ ಮನಃಸ್ಥಿತಿಯಿಂದ ಎಂದಿಗೂ ಚೇತರಿಸಿಕೊಳ್ಳದ ಕ್ಯಾಥೊಲಿಕ್ ಚರ್ಚ್ ನ್ಯೂಟನ್ ಕಾಲಮಾನದ ವೈಜ್ಞಾನಿಕ ಚಿಂತನೆಯ ಬೆಳವಣಿಗೆಯನ್ನು ತಡೆಯಲು ಶಕ್ತಿಹೀನವಾಗಿತ್ತು. ಧರ್ಮಕ್ಕೆ ಸ್ವೀಕಾರಾರ್ಹ ಅನುಬಂಧವಾಗಿ ಸ್ವಾಗತಿಸುವ ಬದಲು ಚರ್ಚ್ ಅದರ ವಿರುದ್ಧ ಹೋರಾಡಿತು. ಆ ಸಮಯದಿಂದ ಧರ್ಮವು ವಿಜ್ಞಾನಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ.
ವೈದ್ಯಕೀಯಕ್ಷೇತ್ರದಲ್ಲಿ ವೈಜ್ಞಾನಿಕಜ್ಞಾನದ ಸ್ಫೋಟದೊಂದಿಗೆ ದೇವರು ಮತ್ತು ಧರ್ಮವನ್ನಾಧರಿಸಿದ ಸಾಂಪ್ರದಾಯಿಕ ಕಲ್ಪನೆಗಳು ಮತ್ತು ಭಾವನೆಗಳಲ್ಲಿ ಪಲ್ಲಟವುಂಟಾಗಿದೆ. ೧೦೦-೧೫೦ ವರ್ಷಗಳ ಹಿಂದೆ ಬಹುಮಂದಿ ತಮ್ಮ ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಸಮ್ಮುಖದಲ್ಲಿ ಸಾವಧಾನಚಿತ್ತದಿಂದ ನಿರಾಯಾಸವಾಗಿ ಮನೆಯಲ್ಲೇ ಸಾವನ್ನು ಕಾಣುತ್ತಿದ್ದರೆ; ಎಲ್ಲಾಬಗೆಯ ವಿಶೇಷ ತಜ್ಞರ ಸಂಘಟಿತ ಪ್ರಯತ್ನಗಳ ಹೊರತಾಗಿಯೂ ಇಂದು ಬಹುಸಂಖ್ಯೆಯಲ್ಲಿ ಜನರು ಏಕಾಂಗಿಯಾಗಿಯಷ್ಟೇ ಅಲ್ಲ; ಅತ್ಯಂತ ಯಾತನಾಮಯವಾಗಿ ಆಸ್ಪತ್ರೆಗಳಲ್ಲೇ ಸಾವನ್ನಪ್ಪುತ್ತಿದ್ದಾರೆ! ಈ ವೈರುಧ್ಯಗಳನ್ನು ಯಾವ ಹಿನ್ನೆಲೆಯಲ್ಲಿ ಸ್ವೀಕರಿಸ ಬೇಕೆಂಬುದಾಗಲೀ, ವಿಮರ್ಶಿಸ ಬೇಕೆಂಬುದಾಗಲೀ ಇಂದಿನ ಆಧುನಿಕಯುಗದ ದ್ವಂದ್ವವಾಗಿ ಉಳಿದಿದೆ.
ವೈದ್ಯಕೀಯ ವಿಜ್ಞಾನದ ಬೆಳವಣಿಗೆ ಮತ್ತು ಗುಣಪಡಿಸುವ ಅಥವಾ ಸಾಯುವ ಪ್ರಕ್ರಿಯೆಗಳಲ್ಲಿ ಧಾರ್ಮಿಕ ನಂಬಿಕೆಗಳ ಒಳಗೊಳ್ಳುವಿಕೆಯ ಕೊರತೆ ನಮ್ಮ ಮನೋಭಾವವನ್ನು ಬಹಳವಾಗಿ ಬದಲಾಯಿಸಿದೆ.
ಗಮನವು ಜೀವನ ಮತ್ತು ಅವರು ಅನುಭವಿಸುವ ನಷ್ಟಗಳ ಮೇಲೆ ಕೇಂದ್ರಿತವಾಗಿದೆ. ಸಾವಿನ ಸಮೀಪದಲ್ಲಿರುವವರ ತಿಳುವಳಿಕೆ ನಮ್ಮ ಸಾಮಾನ್ಯಗ್ರಹಿಕೆಯ ಮಿತಿಯನ್ನು ಮೀರಿದೆ ಎಂಬುದನ್ನು ಔಷಧೀಯ ವಿಜ್ಞಾನ ಕ್ಞೇತ್ರದಲ್ಲಿ ಇಂದು ವ್ಯಾಪಕವಾಗಿ ಊಹಿಸಲಾಗುತ್ತಿದೆ. ಮನಸ್ಸು ದೇಹದ ಮೇಲೆ ಬೀರಬಹುದಾದ ಪರಿಣಾಮದ ಕಡೆಗೆ ವರ್ತನೆಗಳು ಬದಲಾಗುತ್ತಿವೆ. “ಮನಸ್ಸನ್ನು ಒಳಗೊಂಡ ಇಡೀ ದೇಹಕ್ಕೆ ಚಿಕಿತ್ಸೆ ನೀಡಿ; ಕೇವಲ ರೋಗಕ್ಕಲ್ಲ” ಎಂಬುದು ಇಂದು ವೈದ್ಯಕೀಯ ವಿಜ್ಞಾನದ ಪಾಠದ ಭಾಗವಾಗುತ್ತಿದೆ.
ಸಾವಿನ ನಂತರದ ಜೀವನದ ಬಗ್ಗೆ ಇತ್ತೀಚೆಗೆ ಹಲವಾರು ಸಂಶೋಧನೆಗಳನ್ನು ಆಧರಿಸಿದ ಕೃತಿಗಳು ಪ್ರಕಟವಾಗಿವೆ. ಅವುಗಳಲ್ಲಿ ಮುಖ್ಯವಾಗಿ; ಎಬೆನ್ ಅಲೆಕ್ಸಾಂಡರನ “ಪ್ರೂಫ್ ಆಫ್ ಹೆವನ್ : ಎ ನ್ಯೂರೋಸರ್ಜನ್ಸ್ ಜರ್ನಿ ಇಂಟು ದಿ ಆಫ್ಟರ್ ಲೈಫ್” ಮತ್ತು “ಹೌ ಸೈನ್ಸ್, ರಿಲಿಜಿಯನ್ ಅಂಡ್ ಆರ್ಡಿನರಿ ಪೀಪಲ್ ಆರ್ ಪ್ರೂವಿಂಗ್ ಆಫ್ಟರ್ ಲೈಫ್”; ಟಾಡ್‌ಬರ್ಪೋನ “ಹೆವನ್ ಈಸ್ ರಿಯಲ್” ಈ ಕೃತಿಗಳು ಮರಣಾನಂತರದ ಜೀವನದ ನಕ್ಷೆ ಹಾಗೂ ಸಾವಿನಸಮೀಪದ ಅನುಭವಗಳ ಮೇಲೆ ಬೆಳಕು ಚೆಲ್ಲುತ್ತವೆ. ವ್ಯಾಪಕವಾಗಿ ಜನರನ್ನು ತಲುಪಿದ ಇನ್ನೆರಡು ಕೃತಿಗಳು: ಜೆಫ್ರಿಲಾಂಗ್‌ನ “ಎವಿಡೆನ್ಸ್ ಆಫ್ ದಿ ಆಫ್ಟರ್ ಲೈಫ್: ದಿ ಸೈನ್ಸ್ ಆಫ್ ನಿಯರ್‌ಡೆತ್ ಎಕ್ಸ್ಪೀರಿಯೆನ್ಸ್” ಮತ್ತು ಪಿಮ್ ವ್ಯಾನ್ ಲೊಮ್ಮೆನ್‌ನ “ಕಾನ್ಷಿಯಷ್ ಬಿಯಾಂಡ್ ಲೈಫ್ : ದಿ ಸೈನ್ಸ್ ಆಫ್ ನಿಯರ್ ಡೆತ್ ಎಕ್ಸ್ಪೀರಿಯೆನ್ಸ್”.