ಜಗದೀಶ್ ಶೆಟ್ಟರ್ ಏನು ದಡ್ಡರಾ?
ಮಂಗಳೂರು: ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಪುನಃ ಕರೆತರಲು ತೆರೆಮರೆಯ ಕಸರತ್ತು ನಡೆಯುತ್ತಿರುವ ವಿಚಾರವನ್ನು ತಳ್ಳಿಹಾಕಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಆಗೋದು ಸುಳ್ಳು ಎಂದಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯಲ್ಲೇ ಶೇಕ್ ಆಗ್ತಿದೆ. ಅವರಲ್ಲೇ ಆಂತರಿಕ ಸಮಸ್ಯೆಗಳು ಬಹಳಷ್ಟಿವೆ. ಶೆಟ್ಟರ್ ಅವರನ್ನು ಸುಮ್ಮನೆ ಕರೆಯುತ್ತಿದ್ದಾರೆ. ಕೆಲವರು ಹೋಗಿ ಕರೆಯೋದು ಮಾಡುತ್ತಿದ್ದಾರೆ. ಆದರೆ ಜಗದೀಶ್ ಶೆಟ್ಟರ್ ಏನು ದಡ್ಡರಾ ಎಂದು ಪ್ರಶ್ನಿಸಿದರು.
ಶೆಟ್ಟರ್ ಅವರಿಗೆ ಆಗಿದ್ದ ಅವಮಾನ, ನೋವು ಎಲ್ಲ ಯೋಚನೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಬಂದು ನಮಗೆ ದೊಡ್ಡ ಸಹಾಯ ಕೂಡ ಮಾಡಿದ್ದಾರೆ. ಚುನಾವಣೆಯಲ್ಲಿ ಶೆಟ್ಟರ್ ಸೋತಿರಬಹುದು, ತಕ್ಷಣ ಕಾಂಗ್ರೆಸ್ ಪಕ್ಷ ಗುರುತಿಸಿ ವಿಧಾನ ಪರಿಷತ್‌ಗೆ ಅವಕಾಶ ಮಾಡಿ ಕೊಟ್ಟಿದೆ ಎಂದರು.
ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಮೇಲೆ ಅನುಮಾನ ಬರಬೇಕು ಎಂಬ ದೊಡ್ಡ ಸಂಚನ್ನು ಬಿಜೆಪಿಯವರು ಮಾಡಿದ್ದಾರೆ. ಆದರೆ ಬಿಜೆಪಿಯ ಸಂಚು ಫಲಿಸೋದಿಲ್ಲ ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಉಪವಾಸದ ಬಗ್ಗೆ ವೀರಪ್ಪ ಮೊಯಿಲಿ ಅನುಮಾನ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಗೊತ್ತಿಲ್ಲ, ಅವರು ಹಿರಿಯರಿದ್ದಾರೆ. ಅವರ ಹತ್ತಿರಾನೆ ಮಾತನಾಡಬೇಕು ಎಂದರು.
ತರಗತಿಯಲ್ಲಿ ಹಿಜಾಬ್ ನಿಷೇಧ ವಾಪಸ್ ಬಗ್ಗೆ ಮುಸ್ಲಿಂ ಮುಖಂಡರ ಹಕ್ಕೊತ್ತಾಯ ವಿಚಾರ ನ್ಯಾಯಲಯದಲ್ಲಿದೆ, ಅದರ ಬಗ್ಗೆ ಮಾತನಾಡಲ್ಲ. ಒಟ್ಟಾರೆ ನಾವು ಸಂವಿಧಾನ ಬದ್ಧವಾಗಿ ಎಲ್ಲ ಧರ್ಮಗಳನ್ನು ರಕ್ಷಣೆ ಮಾಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಎಲ್ಲ ಧರ್ಮವನ್ನೂ ರಕ್ಷಣೆ ಮಾಡುತ್ತೇವೆ ಎಂದು ಹೇಳಿದರು.
ಮುಂದಿನ ತಿಂಗಳು ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶ ಮಂಗಳೂರಿನಲ್ಲಿ ಆಯೋಜಿಸಲಾಗುವುದು. ಈ ಕುರಿತು ಪೂರ್ವಭಾವಿ ಸಭೆ ಮತ್ತು ತಯಾರಿಗಾಗಿ ಮಂಗಳೂರಿಗೆ ಬಂದಿದ್ದೇನೆ. ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದಾರೆ. ದೆಹಲಿಯ ನಾಯಕರೂ ಆಗಮಿಸಲಿದ್ದಾರೆ. ದಕ್ಷಿಣ ಕನ್ನಡ ಉಡುಪಿಯ ಕಾಂಗ್ರೆಸ್ ಸಮಿತಿಯವರು ನಾವೇ ಕಾರ್ಯಕ್ರಮ ಮಾಡುತ್ತೇವೆ ಎಂದು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾಳೆ ಸಮಾವೇಶದ ದಿನಾಂಕ ನಿಗದಿಪಡಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.