ಜನಕಲ್ಯಾಣಕ್ಕೆ ಸಂಹಿತೆ ಬಿಸಿ
ನ್ಯಾಯಯುತ ಹಾಗೂ ನಿಷ್ಪಕ್ಷಪಾತ ಚುನಾವಣೆಗೆ ಕಟ್ಟೆಚ್ಚರದ ಕಣ್ಗಾವಲು ಅತ್ಯಗತ್ಯ. ಏಕೆಂದರೆ, ಆಡಳಿತದ ಕ್ರಮಗಳಿಗೆ ಸಮಾನಾಂತರವಾಗಿ ಅಕ್ರಮಗಳ ದಾರಿಯಲ್ಲಿ ಸಾಗಿ ಚುನಾವಣೆಯ ಗೊತ್ತುಗುರಿಯ ಲೆಕ್ಕಾಚಾರವನ್ನು ತಲೆಕೆಳಗು ಮಾಡುವ ಅನುಭವವೇದ್ಯ ಘಟನಾವಳಿಗಳ ಹಿನ್ನೆಲೆಯಲ್ಲಿ ಸುಸೂತ್ರ ಚುನಾವಣೆಗೆ ಕಣ್ಗಾವಲು ಇರಲೇಬೇಕು. ಇಂತಹ ಕಟ್ಟೆಚ್ಚರದ ಕಣ್ಗಾವಲಿನಂತೆ ಕಾರ್ಯ ನಿರ್ವಹಿಸುವುದು ಚುನಾವಣಾ ಆಯೋಗದ ನೀತಿ ಸಂಹಿತೆ. ಹಾಗೆ ನೋಡಿದರೆ ನೀತಿ ಸಂಹಿತೆ ಜಾರಿಯ ನಂತರ ಚುನಾವಣಾ ಅಕ್ರಮಗಳನ್ನು ಪತ್ತೆ ಹಚ್ಚಿ ದಂಡನೆಗೆ ಗುರಿಪಡಿಸಿರುವ ನಿದರ್ಶನಗಳು ಸಾಕಷ್ಟು. ಆದರೆ, ನೀತಿ ಸಂಹಿತೆ ಜಾರಿಯ ಅವಧಿಗೂ ಕಾಲಮಿತಿ ಎಂಬುದು ಇರಬೇಕು. ಪ್ರಸ್ತುತ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಏಳು ಹಂತಗಳ ಮತದಾನದಿಂದ ಹಿಡಿದು ಒಟ್ಟಾರೆ ಮತ ಎಣಿಕೆಯವರೆಗೆ ಜಾರಿಯಲ್ಲಿರುವ ನೀತಿ ಸಂಹಿತೆಯ ಅವಧಿ ಸುಮಾರು ೯೦ ದಿನ. ಇಡೀ ಭಾರತ ದೇಶದಲ್ಲಿ ಆಡಳಿತಕ್ಕೆ ೯೦ ದಿನಗಳ ಕಾಲ ಲಗಾಮು ಹಾಕುವುದು ಎಂದರೆ ಜನಕಲ್ಯಾಣದ ಯೋಜನೆಗಳ ಗತಿ ಏನಾಗಬಹುದು ಎಂಬುದು ಸಾರ್ವಜನಿಕರ ವಿವೇಚನೆಗೆ ಬಿಟ್ಟ ವಿಚಾರ. ಇದರ ಪರಿಣಾಮವಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿರುವ ನಿದರ್ಶನಗಳು ಉಂಟು. ಪ್ರಾಕೃತಿಕ ವಿಕೋಪಗಳಂತಹ ಸಂದರ್ಭದಲ್ಲಿ ಸರ್ಕಾರ ಸ್ವಯಂಪ್ರೇರಣೆಯಿಂದ ಮುಂದಾಗಿ ಪರಿಹಾರ ಒದಗಿಸದೇ ಅಸಹಾಯಕ ಪರಿಸ್ಥಿತಿಯಲ್ಲಿ ಇರಬೇಕಾದ ಸ್ಥಿತಿಯನ್ನು ಕಾಣಬಹುದು. ಒಟ್ಟಾರೆ ಇದರಿಂದ ಚುನಾವಣೆ ನಿಷ್ಪಕ್ಷಪಾತ ನಡವಳಿಕೆಗೆ ಲಾಭವಾಗಬಹುದಾದರೂ ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಗೆ ತಗುಲುವುದು ಮಾತ್ರ ನಷ್ಟ. ಹಾಗೆಂದಾಕ್ಷಣ ನೀತಿ ಸಂಹಿತೆ ಕೂಡದು ಎಂದಲ್ಲ. ಇದಕ್ಕೊಂದು ಕಾಲಮಿತಿ ಇರಬೇಕು.
ಕರ್ನಾಟಕದ ಉದಾಹರಣೆಯನ್ನೇ ಆಧರಿಸಿ ಹೇಳುವುದಾದರೆ ಎರಡೂ ಹಂತಗಳ ಮತದಾನ ಮುಕ್ತಾಯಗೊಂಡಿದೆ. ಜೂನ್ ೪ರಂದು ಮತ ಎಣಿಕೆ ಹಾಗೂ ಸರ್ಕಾರ ರಚನೆಯವರೆಗೆ ನೀತಿ ಸಂಹಿತೆಯ ಕಟ್ಟುಪಾಡುಗಳಿಗೆ ಒಳಪಟ್ಟೇ ಸರ್ಕಾರ ಆಡಳಿತ ನಡೆಸಬೇಕು. ಇನ್ನೂ ಒಂದು ತಿಂಗಳ ಕಾಲ ಇದೇ ನನೆಗುದಿಯ ಸರ್ಕಾರದ ಆಡಳಿತ ಮುಂದುವರಿದರೆ ಅಮಾಯಕ ಜನರ ಪಾಡು ಏನಾಗಿರಬಹುದು ಎಂಬುದರ ಕಲ್ಪನೆ ಪರಿಸ್ಥಿತಿಯ ಗಾಂಭೀರ್ಯವನ್ನು ಅರಿಯಲು ಸಹಾಯಕ್ಕೆ ಬರಬಹುದು. ಇದು ಬೇಸಿಗೆಯ ಕಾಲ ಮಾತ್ರವಲ್ಲ ಉರಿಬಿಸಿಲಿನ ಕೆಂಡದ ಮಳೆ ಬೀಳುತ್ತಿರುವ ಕಾಲ. ಮಳೆ ಇಲ್ಲದೆ ರೈತಾಪಿ ಜನರು ಪರಿತಪಿಸುತ್ತಿರುವ ಕಾಲ. ಕುಡಿಯುವ ನೀರಿಗಾಗಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನರು ಹಾಹಾಕಾರದ ಸ್ಥಿತಿ ಎದುರಿಸುತ್ತಿರುವ ಕಾಲ. ಇದು ಕೇವಲ ಒಂದು ವರ್ಗದ ಜನರಿಗೆ ಮಾತ್ರ ಕಾಡುವ ಕಾಲವಲ್ಲ. ಎಲ್ಲಾ ವರ್ಗದ ಜನರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಕಾಡುತ್ತಿರುವ ಕಾಲ. ಇಂತಹ ಗತಿಗೆಟ್ಟ ಕಾಲದಲ್ಲಿ ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿರುವ ಸರ್ಕಾರವು ಜನರ ಕನಿಷ್ಠ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಿರಲಿ, ಮಾತನಾಡಲೂ ಸಹ ಆಗದೇ ಇರುವಂತಹ ಸ್ಥಿತಿ ತಲೆದೋರಿರುವುದು ಯಾವ ಪುರುಷಾರ್ಥ ಸಾಧನೆಗೋ ತಿಳಿಯುತ್ತಿಲ್ಲ. ಜನರ ಕಷ್ಟಗಳ ನಿವಾರಣೆಗೆ ನೀತಿ ಸಂಹಿತೆಯ ನಿರ್ಬಂಧ ಅನ್ವಯವಾಗಬಾರದು ಎಂಬ ನಿಯಮ ಇದ್ದಿದ್ದರೆ ಬಹುಶಃ ಇಂತಹ ಸನ್ನಿವೇಶ ಉದ್ಭವವಾಗುತ್ತಿರಲಿಲ್ಲವೇನೋ.
ನೀತಿ ಸಂಹಿತೆ ಜಾರಿಯಾದ ನಂತರ ಸರ್ಕಾರ ಯಾವುದೇ ರೀತಿಯ ನೀತಿ ನಿಲುವುಗಳನ್ನು ಕೈಗೊಳ್ಳುವಂತಿಲ್ಲ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಆರಂಭಿಸುವಂತಿಲ್ಲ. ಅಷ್ಟೇ ಏಕೆ ಸಂಪುಟ ಸಭೆಗಳು ಸೇರುವಂತಿಲ್ಲ. ಸರ್ಕಾರಿ ಸಭೆ ಸಮಾರಂಭಗಳನ್ನು ಸಂಘಟಿಸುವಂತಿಲ್ಲ. ಇದರಿಂದಾಗಿ ಅಮಾಯಕ ಜನರು ಒಂದು ರೀತಿಯಲ್ಲಿ ಅಸಂಘಟಿತ ಸ್ಥಿತಿಗೆ ಸಿಕ್ಕಿಬಿದ್ದು ಅಗಣಿತ ಕಷ್ಟಕೋಟಲೆಗೆ ಗುರಿಯಾಗುತ್ತಿರುವುದು ಸ್ವಾಭಾವಿಕವೇ. ಇದೇ ಸಂದರ್ಭದಲ್ಲಿ ಅಪವಾದದ ರೀತಿಯಲ್ಲಿ ಸರ್ಕಾರಗಳು ರಾಜಕೀಯಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ನಿರ್ಧಾರಗಳು ಹಾಗೂ ಅವುಗಳ ಜಾರಿ ಪ್ರಕ್ರಿಯೆ ಶರವೇಗದಲ್ಲಿ ಜರುಗಲು ಶುರುವಾಗುವುದು ಮಾತ್ರ ಅಚ್ಚರಿಯ ಸಂಗತಿ. ಮಾಜಿ ಸಚಿವ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ವಿಶೇಷ ತನಿಖಾ ದಳವನ್ನು ರಚಿಸಲು ನೀತಿ ಸಂಹಿತೆ ಒಪ್ಪಿಗೆ ದೊರೆತದ್ದು ನಿಜಕ್ಕೂ ಒಂದು ಸೋಜಿಗದ ಮೊಟ್ಟೆ. ಸರ್ಕಾರದ ನಿರ್ಧಾರ ಒಂದು ಕಡೆಯಾದರೆ ಅದನ್ನು ಚಾಚೂ ತಪ್ಪದೆ ಜಾರಿಗೆ ತಂದಿರುವ ಅಧಿಕಾರಶಾಹಿಯ ಕ್ರಮ ಇನ್ನೊಂದು ಕಡೆ. ರಾಜಕೀಯ ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರಗಳಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಇರಬಹುದಾದರೆ ಜನರ ಸಂಕಟ ನಿವಾರಣೆಗೆ ಇದೇ ರೀತಿಯ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರ ಇರಬಾರದೇಕೆ ಎಂಬುದು ನೀತಿ ಸಂಹಿತೆಯ ಅಂಗಳದಲ್ಲಿ ಸಾರ್ವಜನಿಕರು ಮುಂದಿಟ್ಟಿರುವ ಪ್ರಶ್ನೆಗೆ ಉತ್ತರ ಕೊಡಬೇಕಾದದ್ದು ಚುನಾವಣಾ ಆಯೋಗವಾದರೂ ವಾಸ್ತವವಾಗಿ ಚುನಾವಣಾ ಆಯೋಗಕ್ಕೆ ಅಂತಹ ಪರಮಾಧಿಕಾರವನ್ನು ಒದಗಿಸಿಕೊಡುವ ಅಧಿಕಾರ ಇರುವುದು ಸಂಸತ್ತಿಗೆ ಎಂಬುದನ್ನು ಅರಿಯುವುದು ಈ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅರ್ಥಗರ್ಭಿತವಾಗಬಹುದು.