For the best experience, open
https://m.samyuktakarnataka.in
on your mobile browser.

ಜನತಾದರ್ಶನಕ್ಕೆ ಜನಸ್ತೋಮ: ಸಂತಸ ಪಡುವ ಸಂಗತಿಯಲ್ಲ

10:42 AM Nov 29, 2023 IST | Samyukta Karnataka
ಜನತಾದರ್ಶನಕ್ಕೆ ಜನಸ್ತೋಮ  ಸಂತಸ ಪಡುವ ಸಂಗತಿಯಲ್ಲ

ಹಳ್ಳಿಯ ಜನ ತಮ್ಮ ಕೆಲಸಕ್ಕೆ ದೂರದ ಬೆಂಗಳೂರಿಗೆ ಹೋಗಿ ಸಿಎಂ ಜನತಾದರ್ಶನದಲ್ಲಿ ದೂರು ಸಲ್ಲಿಸಬೇಕು. ಆ ದೂರು ಮತ್ತೆ ತಾಲೂಕು ಕಚೇರಿಗೆ ಬರಬೇಕು. ಅದುವರೆಗೂ ಆ ದೂರಿಗೆ ಕಿವಿಗೊಡದ ಅಧಿಕಾರಿಯೇ ಅದನ್ನು ಬಗೆಹರಿಸಬೇಕು.ಇದು ಆಡಳಿತ ವೈಖರಿ.

ರಾಜ್ಯದ ಮುಖ್ಯಮಂತ್ರಿ ಇಡೀ ದಿನ ಜನತಾದರ್ಶನ ಕಾರ್ಯಕ್ರಮ ನಡೆಸಿದರು. ಬೆಳಗಾವಿಯಿಂದ ಹಿಡಿದು ಮೈಸೂರಿನವರೆಗೆ ಎಲ್ಲ ಜಿಲ್ಲೆಗಳಿಂದ ಜನರು ಬಂದು ತಮ್ಮ ಕುಂದುಕೊರತೆಗಳನ್ನು ಹೇಳಿಕೊಂಡರು ಎಂದರೆ ಮುಖ್ಯಮಂತ್ರಿಯವರ ಜನಪ್ರಿಯತೆಯನ್ನು ಬಿಂಬಿಸಬಹುದೇ ಹೊರತು ಆಡಳಿತದಲ್ಲಿರುವ ದಕ್ಷತೆಯನ್ನಲ್ಲ. ಕಂದಾಯ ಇಲಾಖೆಯ ತಹಸೀಲ್ದಾರ್ ನೀಡಬೇಕಾದ ಪಹಣಿಗೂ ಸಿಎಂ ಬಳಿ ದೂರಲು ಜನ ಬಂದಿದ್ದಾರೆ ಎಂದ ಮೇಲೆ ಆಡಳಿತ ಹೇಗಿದೆ ಎಂಬುದನ್ನು ಬೇರೆ ಹೇಳುವ ಅಗತ್ಯ ಇಲ್ಲ. ಇದು ಸಿದ್ದರಾಮಯ್ಯನವರಿಗೂ ಅರ್ಥವಾಗಿದೆ ಎಂಬುದೇ ಸಂತಸದ ಸಂಗತಿ. ಮುಂದಿನ ಜನತಾ ದರ್ಶನದಲ್ಲಿ ದೂರುಗಳ ಸಂಖ್ಯೆ ಇಳಿಮುಖಗೊಳ್ಳಬೇಕು ಎಂದು ಎಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಅತಿ ಹೆಚ್ಚು ದೂರು ಬಂದಿರುವುದು ಕಂದಾಯ, ಪೋಲಿಸ್, ಗೃಹಲಕ್ಷಿö್ಮ, ಪಿಂಚಣಿಗೆ ಸಂಬಂಧಿಸಿದ್ದು. ಆಯಾ ಖಾತೆಯ ಸಚಿವರು ಹೆಚ್ಚಿನ ಮುತುವರ್ಜಿವಹಿಸಿದರೆ ದೂರುಗಳನ್ನು ಕಡಿಮೆ ಮಾಡಬಹುದು. ಸಿಎಂ ಹೇಳಿದಂತೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಆಸಕ್ತಿವಹಿಸಿ ಪ್ರತಿ ತಿಂಗಳೂ ತಮ್ಮ ಜಿಲ್ಲೆ ಮತ್ತು ಕ್ಷೇತ್ರಗಳಲ್ಲಿ ಇಡೀ ದಿನ ಜನತಾದರ್ಶನ ನಡೆಸಿದರೆ ನಿಜವಾಗಿಯೂ ಸರ್ಕಾರ ಜನರ ಮನೆ ಬಾಗಿಲಿಗೆ ಹೋದಂತೆ ಆಗುತ್ತದೆ. ಈಗ ಜನರೇ ಸರ್ಕಾರವನ್ನು ಹುಡುಕಿಕೊಂಡು ಬರಬೇಕಾಗಿ ಬಂದಿದೆ. ನಮ್ಮ ಜನಪ್ರತಿನಿಧಿಗಳು ಚುನಾವಣೆ ಕಾಲದಲ್ಲಿ ಮನೆಮನೆಗೆ ಹೋಗಿ ಮತಭಿಕ್ಷೆ ಬೇಡುತ್ತಾರೆ.
ಗೆದ್ದ ಮೇಲೆ ಮತದಾರರು ಇವರ ಮನೆಮುಂದೆ ನ್ಯಾಯಭಿಕ್ಷೆ ಬೇಡಬೇಕಾಗಿ ಬಂದಿದೆ. ಜನಪ್ರತಿನಿಧಿಗಳಲ್ಲಿ ಕೆಲವರು ಮಾತ್ರ ಯಾವಾಗಲೂ ಜನತೆ ಮಧ್ಯೆ ಇರಲು ಬಯಸುತ್ತಾರೆ. ಅವರ ಕ್ಷೇತ್ರಗಳಿಂದ ಮುಖ್ಯಮಂತ್ರಿಗೆ ಬರುವ ದೂರುಗಳ ಸಂಖ್ಯೆ ಕಡಿಮೆ. ಮುಖ್ಯಮಂತ್ರಿಯವರೆಗೆ ದೂರು ಬರುತ್ತದೆ ಎಂದರೆ ಅದು ಸರ್ಕಾರದ ನೀತಿಗೆ ಸಂಬಂಧಿಸಿರಬೇಕು. ಆಗ ದೂರಿಗೂ ಅರ್ಥ ಬರುತ್ತದೆ. ಈಗ ತಹಸೀಲ್ದಾರ್ ಮಾಡಬೇಕಾದ ಕೆಲಸಕ್ಕೆ ಮುಖ್ಯಮಂತ್ರಿಗೆ ದೂರು ಸಲ್ಲಿಸಬೇಕು. ಆ ದೂರು ಮತ್ತೆ ತಾಲೂಕು ಕಚೇರಿಗೆ ಬರಬೇಕು. ದೂರು ಕೊಟ್ಟವರು ಮತ್ತೆ ಅದೇ ತಹಸೀಲ್ದಾರ್ ಮುಂದೆ ಕೈಕಟ್ಟಿ ನಿಲ್ಲಬೇಕು. ಆಗ ಅವರು ಬೆಂಗಳೂರಿಗೆ ಹೋಗಿ ದೂರು ಕೊಟ್ಟೆಯಲ್ಲಾ ಏನಾಯಿತು ಎಂದು ಹೀಯಾಳಿಸಿದರೆ ಮೌನಕ್ಕೆ ಶರಣಾಗಬೇಕು. ಇದು ಈಗ ಮತದಾರನಿಗೆ ಸಿಗುತ್ತಿರುವ ಮರ್ಯಾದೆ.
ಇಂಥ ಪರಿಸ್ಥಿತಿ ಬರಬಾರದು ಎಂದರೆ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಅಲ್ಲೇ ಬಗೆಹರಿಸಿದರೆ ಅಧಿಕಾರಿಗಳು ಮತ್ತು ಜನರ ನಡುವೆ ಕಹಿ ಭಾವನೆ ಮೂಡುವುದಿಲ್ಲ. ನ್ಯಾಯಾಲಯದಲ್ಲಿರುವ ಪ್ರಕರಣ ಹೊರತುಪಡಿಸಿ ಉಳಿದ ಎಲ್ಲ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಬಹುದು. ಇಷ್ಟಾದರೂ ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಹಣ ಕೊಟ್ಟಾದರೂ ಕೆಲಸ ಬೇಗ ಕೆಲಸ ಮಾಡಿಸಿಕೊಳ್ಳಬೇಕು ಎಂಬ ಧಾವಂತ ಜನರಲ್ಲಿರುತ್ತದೆ. ಜನತಾದರ್ಶನ ಇಷ್ಟು ಸಹಾಯ ಮಾಡಿದರೆ ಅದೇ ದೊಡ್ಡ ಕೆಲಸ. ವಯೋವೃದ್ಧರು ಪಿಂಚಣಿಗಾಗಿ ಅಲೆಯುವುದು ಇನ್ನೂ ತಪ್ಪಿಲ್ಲ. ಪ್ರತಿ ತಿಂಗಳು ತಾಲೂಕು ಮಟ್ಟದಲ್ಲಿ ಶಾಸಕರು ಜನತಾ ದರ್ಶನ ನಡೆಸಬೇಕು. ಎಲ್ಲ ಇಲಾಖೆ ಅಧಿಕಾರಿಗಳು ಹಾಜರಿರಬೇಕು. ಜನರ ದೂರುಗಳಿಗೆ ಅಲ್ಲೇ ಪರಿಹಾರ ಸಿಗಬೇಕು. ಆಯಾ ತಿಂಗಳಲ್ಲಿ ಬಗೆಹರಿಸಿದ ಪ್ರಕರಣಗಳು ಮುಂದಿನ ತಿಂಗಳ ಜನತಾದರ್ಶನದಲ್ಲಿ ದಾಖಲಾಗಬೇಕು. ಉಳಿದ ಪ್ರಕರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿ ವಿವರಣೆ ನೀಡಬೇಕು. ಜಿಲ್ಲಾ ಮಟ್ಟದಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳನ್ನು ಶಾಸಕರೇ ಕಳುಹಿಸಿಕೊಡಬೇಕು.
ಅಲ್ಲಿ ಬಗೆಹರಿಯದ ಸಮಸ್ಯೆಗಳು ಮಾತ್ರ ರಾಜ್ಯ ಮಟ್ಟದ ಜನತಾದರ್ಶನಕ್ಕೆ ರವಾನೆ ಆಗಬೇಕು. ಆಗ ಆಡಳಿತ ತಂತಾನೇ ಉತ್ತಮಗೊಳ್ಳುತ್ತದೆ. ಈಗ ಎಲ್ಲವೂ ಉಲ್ಟಾ ಪಲ್ಟ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕೊಟ್ಟ ಅರ್ಜಿ ತಾಲೂಕು ಕಚೇರಿಗೆ ಬರಬೇಕಿದೆ. ಅಧಿಕಾರ ವಿಕೇಂದ್ರೀಕರಣ ಇನ್ನೂ ಕಡತಗಳಲ್ಲೇ ಉಳಿದುಕೊಂಡಿದೆ. ಆಡಳಿತಶಾಹಿ ಹಾಗೇ ಉಳಿದುಕೊಂಡಿದೆ. ಆಡಳಿತ ಉತ್ತಮಗೊಂಡಿಲ್ಲ.