For the best experience, open
https://m.samyuktakarnataka.in
on your mobile browser.

ಜನತಾ ದರ್ಶನ ಮತ್ತೆ ತಬರನಾಗಿಸದಿರಿ...

12:03 AM Oct 12, 2023 IST | Samyukta Karnataka
ಜನತಾ ದರ್ಶನ ಮತ್ತೆ ತಬರನಾಗಿಸದಿರಿ

ಆಕೆ ಹಣ್ಣು ಹಣ್ಣು ಮುದುಕಿ. ವಾರಸುದಾರರು ಇಲ್ಲ. ಆಕೆ ಬಂದದ್ದು ವೃದ್ಧಾಪ್ಯ ವೇತನಕ್ಕಾಗಿ. ಆತ ಕೃಷಿಕ. ಆತನ ಅಪ್ಪ ಸತ್ತು ನಾಲ್ಕು ವರ್ಷವಾದರೂ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಇದ್ದ ಏಕೈಕ ಬಂದೂಕು ಪರವಾನಗಿ ನವೀಕರಣಗೊಂಡು ಆತನ ಕೈ ಸೇರಿಲ್ಲ. ಅಪ್ಪನ ಬಂದೂಕು ಪೊಲೀಸ್ ಠಾಣೆಯಲ್ಲಿ ತುಕ್ಕು ಹಿಡಿಯುತ್ತಿದೆ. ಅವರಿಬ್ಬರೂ ಅಕ್ಕಪಕ್ಕದ ಮನೆಯವರು. ಅವರ ಹೊಲ ಅಕ್ಕಪಕ್ಕದಲ್ಲೇ ಇದೆ. ಒಂದು ಪೋಡಿ ಮಾಡಿಸಿಕೊಡಿ ಎಂದು ಅರ್ಜಿ ಸಲ್ಲಿಸಿ ಸುಸ್ತಾಗಿದ್ದಾರೆ.

ಈಗ ರಾಜ್ಯದ ಜನತೆಗೆ ಅಹವಾಲು ಸಲ್ಲಿಸುವ ಕಾಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ರಾಜ್ಯಾದ್ಯಂತ ಜನತಾ ದರ್ಶನ ಆರಂಭಿಸಿದ್ದಾರೆ. ಬೆಂಗಳೂರಿನ ತಮ್ಮ ಮನೆಯಲ್ಲಿ ನಡೆಸುತ್ತಿದ್ದ ಜನತಾ ದರ್ಶನವನ್ನು ಈಗ ಸರ್ಕಾರಿ ಆದೇಶವಾಗಿಸಿ, ಅದನ್ನು ಜಿಲ್ಲಾ ಮಂತ್ರಿಗಳು, ಜಿಲ್ಲಾಧಿಕಾರಿಗಳು, ತಹಶೀಲ್ದಾರರೂ ನಡೆಸುವಂತೆ ನಿರ್ದೇಶಿಸಿದ್ದಾರೆ. ಉದ್ದೇಶ ಇಷ್ಟೇ. ಜನರ ಸಮಸ್ಯೆಗಳು, ಅಹವಾಲುಗಳು ಸ್ಥಳದಲ್ಲೇ ಬಗೆಹರಿದು ಅವರು ಅಲೆದಾಡುವುದನ್ನು ತಪ್ಪಿಸಬೇಕೆಂಬುದು.

ಚಿಕ್ಕಪುಟ್ಟ ಗ್ರಾಮದ ಸಮಸ್ಯೆಯನ್ನು ಹೊತ್ತುಕೊಂಡು ಮುಖ್ಯಮಂತ್ರಿಯವರೆಗೆ ತರುವ ಅಥವಾ ಜಿಲ್ಲಾ ಮಂತ್ರಿಯವರೆಗೆ ಅಲೆದಾಡುವ ಜನತೆ ಇತ್ತೀಚಿನ ವರ್ಷಗಳಲ್ಲಿ ಹೇಳುತ್ತಿರುವ ಮಾತು, ಯಾವುದೇ ಸರ್ಕಾರ ಬರಲಿ. ಕೆಲಸವಾಗುವುದಿಲ್ಲ. ಅರ್ಜಿಯನ್ನೇನೋ ಪಡೆಯುತ್ತಾರೆ. ಮುಂದೆ ಕಸದ ಬುಟ್ಟಿಗೆ ಅದು ಹೋಗುವುದೇನೋ ಗೊತ್ತಿಲ್ಲ ಇತ್ಯಾದಿ...

ಜನತಾ ದರ್ಶನ ನಿಜಕ್ಕೂ ಆಡಳಿತವನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸುವ ಮತ್ತು ಜನಸಾಮಾನ್ಯನ ತುರ್ತು ಅಗತ್ಯತೆ ಮತ್ತು ಪರಿಹರಿಸಬಹುದಾದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಒಳ್ಳೆಯ ಕಾರ್ಯಕ್ರಮ. ಎಲ್ಲ ಭಾಗ್ಯಗಳಿಗಿಂತ ಜನತಾ ದರ್ಶನವನ್ನು ನಿರಂತರವಾಗಿ ನಡೆಸಿ ಅಹವಾಲನ್ನು ಸ್ಥಳದಲ್ಲೇ ಪರಿಹರಿಸಿದರೆ ಬಹುಶಃ ಸರ್ಕಾರದ ಘನತೆ ಗೌರವ ಖಂಡಿತವಾಗಿಯೂ ಹೆಚ್ಚಾಗುತ್ತದೆ.

ಕಳೆದ ಹತ್ತು ದಿನಗಳಿಂದ ಈಚೆಗೆ ಸರ್ಕಾರ ನಡೆಸಿದ ಜನತಾ ದರ್ಶನ ಹತ್ತು ಹಲವು ಆಡಳಿತಾತ್ಮಕ ದೋಷ, ಅಧಿಕಾರಿಗಳ ಮುಖವಾಡ, ರಾಜಕಾರಣಿಗಳ ಪೊಳ್ಳು ಆಶ್ವಾಸನೆ, ಜೊತೆಗೆ ಸರ್ಕಾರದ ಯೋಜನೆಗಳ ವೈಫಲ್ಯವನ್ನು ಬಿಚ್ಚಿಟ್ಟಿದೆ. ಯಾವ ಸರ್ಕಾರ ಬಂದರೂ ಇಷ್ಟೇ. ಕೆಲಸ ಆಗುವುದಿಲ್ಲ. ಲಂಚ ರುಷುವತ್ತು ನಿಲ್ಲಿಸಲು ಸಾಧ್ಯವೇ ಆಗುವುದಿಲ್ಲ. ಚಿಕ್ಕಪುಟ್ಟ ಬೇಡಿಕೆಗಳಿಗೂ ನಾವು ಶಾಸಕರನ್ನು, ಮುಖ್ಯಮಂತ್ರಿಗಳನ್ನು ಕಾಯಬೇಕೇ ಎನ್ನುವ ಸಾಮಾನ್ಯ ಆರೋಪಕ್ಕೆ, ಜನತಾ ದರ್ಶನ ನಿಜವಾದ ಅರ್ಥದಲ್ಲಿ ಅನುಷ್ಠಾನಗೊಂಡರೆ ಇದು ಒಂದು ಪರಿಹಾರದ ಪ್ರಕ್ರಿಯೆ, ಜನಪರ ನಿಲವು ಆದೀತು.

ಆದರೆ ಕೇವಲ ಮನವಿ ಸ್ವೀಕರಿಸುವುದು, ಅಹವಾಲು ಆಲಿಸುವುದು, ಮುಂದೆ ಯಾವುದೇ ಪರಿಹಾರ ದೊರೆಯದಂತಾದರೆ ಮತ್ತೆ ಅದೇ ಹಣೆಪಟ್ಟಿ. ಜನರು ತಬರನ ಹಾಗೆ ತಮ್ಮ ಗೋಳು ತೋಡಿಕೊಂಡು ತಿರುಗುವುದು ತಪ್ಪುವುದಿಲ್ಲ. ಅಧಿಕಾರಿಗಳು ತಮ್ಮ ಕೆಂಪು ಪಟ್ಟಿಯನ್ನು ಇನ್ನಷ್ಟು ಬಿಗಿಗೊಳಿಸುತ್ತಾರೆ. ಲಂಚ ರುಷುವತ್ತು ಪಡೆಯುವವರಿಗೂ ಇನ್ನಷ್ಟು ಅಹವಾಲು, ಕಡತಗಳು ದೊರೆಯುತ್ತವೆ ಅಷ್ಟೇ.

ಜನತಾ ದರ್ಶನವನ್ನು ಕರ್ನಾಟಕದ ಮಟ್ಟಿಗೆ ಆರಂಭಿಸಿದ್ದು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ. ಅವರು ಯಾವ ಜಿಲ್ಲೆಗೆ ಹೋಗುತ್ತಾರೋ, ಅಲ್ಲೆಲ್ಲ ಜನತಾ ದರ್ಶನ ನಡೆಸಿ ಅಹವಾಲು ಸ್ವೀಕರಿಸಿ, ಅದಕ್ಕೊಂದು ಪ್ರತ್ಯೇಕ ವಿಭಾಗವನ್ನೇ ಸೃಷ್ಟಿಸಿದರು. ಎಷ್ಟು ಕೆಲಸವಾಯಿತು ಎನ್ನುವುದಕ್ಕಿಂತ ಜನತೆಗೆ ಮಾರುತ್ತರ ದೊರೆಯಿತು. ಕಡತ, ಕಡತದ ನಂಬರ್, ಅದು ಎಲ್ಲಿದೆ, ಯಾರಿಗಿದೆ, ಎಲ್ಲಿ ಕಳಿಸಲಾಗಿದೆ ಎನ್ನುವ ಉತ್ತರ ದೊರಕಿಸಿ ಕೊಡುವುದರ ಮಟ್ಟಿಗೆ ಸರ್ಕಾರದ ವ್ಯವಸ್ಥೆಯನ್ನು ರೂಪಿಸಿದರು.

ಈಗಿನ ಹಾಗೆ ಕಂಪ್ಯೂಟರ್ ನೆಟ್‌ವರ್ಕ್, ಮೊಬೈಲ್ ಯುಗವಲ್ಲವಲ್ಲ. ಕೇವಲ ಕಾರ್ಡುಗಳು, ಹಸಿರು, ಕೆಂಪು, ನೀಲಿ ಕಾರ್ಡ್‌ಗಳ ಮೂಲಕ ಕಡತದ ಫಲಶ್ರುತಿ ಬಗ್ಗೆ ಗಮನಿಸಲಾಗುತ್ತಿತ್ತು. ಸಾರ್ವಜನಿಕ ಅಹವಾಲು ಪರಿಹಾರಕ್ಕಾಗಿಯೇ ಅಂದಿನ ಸಚಿವ ಸೋಮಶೇಖರ ಅವರಿಗೆ ಈ ವಿಭಾಗದ ಉಸ್ತುವಾರಿ ನೀಡಲಾಗಿತ್ತು.

ಹೆಗಡೆ ಸರ್ಕಾರದ ನಂತರ ಎಸ್.ಆರ್. ಬೊಮ್ಮಾಯಿ, ವೀರೇಂದ್ರ ಪಾಟೀಲ, ವೀರಪ್ಪ ಮೊಯಿಲಿ, ಬಂಗಾರಪ್ಪ, ನಂತರದ ದೇವೇಗೌಡ ಮತ್ತು ಜೆ.ಎಚ್. ಪಟೇಲರು ಕೂಡ ಜನರ ಅಹವಾಲು ಸ್ವೀಕರಿಸುವ, ಕೇಳುವ ಮನಸ್ಥಿತಿಯನ್ನು ತೋರಲಿಲ್ಲ.

ಆದರೆ ಅತ್ಯಂತ ಪರಿಣಾಮಕಾರಿಯಾಗಿ ಇದನ್ನು ಯಶಸ್ವಿಗೊಳಿಸಿದವರು ಎಚ್.ಡಿ. ಕುಮಾರಸ್ವಾಮಿ. ತಮ್ಮ ಮೊದಲ ಅವಧಿಯಲ್ಲಿ ಪ್ರತಿದಿನ ಹಾಗೂ ಬೆಂಗಳೂರ ಆಚೆ ಎಲ್ಲಿಯೇ ಹೋದರೂ ಜನತಾ ದರ್ಶನ ನಡೆಸಿ, ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಯತ್ನಿಸಿದರು. ರಾಜಕೀಯ, ಆರ್ಥಿಕ ಸಮಸ್ಯೆಗಳಿದ್ದರೆ ವೈಯಕ್ತಿಕ ಹಂತದಲ್ಲಿ ನಿವಾರಣೆ ಮಾಡಿದ್ದಲ್ಲದೇ ಗ್ರಾಮ ವಾಸ್ತವ್ಯವನ್ನು ಕೈಗೊಂಡು ಆಯಾ ಗ್ರಾಮದ ಅಹವಾಲು, ಆ ಜಿಲ್ಲೆಯ ಸಮಸ್ಯೆ, ಜನರ ಸಮಸ್ಯೆಗಳೆಲ್ಲವನ್ನೂ ಕೇಳಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದರು. ಅವರ ಸರ್ಕಾರದ ನಂತರವೂ ಜನ ಅಂದಿನ ಗ್ರಾಮ ವಾಸ್ತವ್ಯವನ್ನು ನೆನಪಿಸಿಕೊಳ್ಳುತ್ತಾರೆ.

ಆ ನಂತರ ಬಂದ `ದೊರೆ'ಗಳು ಮತ್ತೆ ಜನರ ಅಹವಾಲು ಕೇಳುವ ಮನಸ್ಥಿತಿಯನ್ನು ತೋರಲಿಲ್ಲ. ಸಿದ್ದರಾಮಯ್ಯ ಮೊದಲ ಅವಧಿ ಮುಖ್ಯಮಂತ್ರಿಯಾದಾಗಲೂ ಜನತಾ ದರ್ಶನ ನಡೆಸಲಿಲ್ಲ. ಅದೇ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾದಾಗ ಜನತಾ ದರ್ಶನಕ್ಕೆ ಹೆಚ್ಚು ಒಲವು ತೋರಿದರು. ಯಡಿಯೂರಪ್ಪ ಎಲ್ಲಿ ತಾವಿರುತ್ತಾರೋ ಅಲ್ಲಿ, ಯಾರೇ ಬಂದು ಮುಕ್ತವಾಗಿ ಅಹವಾಲು ಸಲ್ಲಿಸಿ ಹೋಗಬಹುದು ಎಂಬುದನ್ನು ಜಾರಿಗೆ ತಂದಿದ್ದರು. ಆದರೆ ಇದಕ್ಕೊಂದು ವ್ಯವಸ್ಥಿತ ಕ್ರಮ ಇದ್ದಿರಲಿಲ್ಲ. ಹೀಗಾಗಿ ಪರಿಹಾರವೂ ದೊರೆಯುತ್ತಿರಲಿಲ್ಲ.

ಬಸವರಾಜ ಬೊಮ್ಮಾಯಿ ತಮ್ಮ ಮನೆಯ ಮುಂದೆ ನಿತ್ಯ ಜನತಾ ದರ್ಶನ ನಡೆಸಿದರೂ ಕೂಡ ಸಮಸ್ಯೆ ಪರಿಹರಿಸಿರುವ ಅಂಕಿ ಸಂಖ್ಯೆಗಳು ವಿರಳ. ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಥವಾ ತಮ್ಮ ವೈಯಕ್ತಿಕ ಪ್ರಭಾವ ಬಳಸಿ ಪರಿಹಾರ ನೀಡಿರುವುದನ್ನು ಬಿಟ್ಟರೆ, ಸಮಸ್ಯೆಗಳ ಅರ್ಜಿ ಅವರ ಗನ್‌ಮ್ಯಾನ್, ಪಿಎಗಳಿಗಷ್ಟೇ ತಲುಪಿದವು. ಮುಖ್ಯಮಂತ್ರಿಗಳಿಗೆ ಕೊಟ್ಟ ಅರ್ಜಿಯ ಬಗ್ಗೆ ಯಾವೊಂದು ಇಲಾಖೆಯಿಂದಲೂ ಮರು ಪತ್ರ ಬಂದಿಲ್ಲ.

ಈಗ ಸಿದ್ದರಾಮಯ್ಯ ಜನರೆದುರು ನಿಂತಿದ್ದಾರೆ. ಎಲ್ಲ ಸಚಿವರು, ಜಿಲ್ಲಾಧಿಕಾರಿಗಳಿಗೆ ಇಡೀ ರಾಜ್ಯದಲ್ಲಿ ಒಂದೇ ದಿನ ಜನತಾ ದರ್ಶನ ನಡೆಸುವುದನ್ನು ಕಡ್ಡಾಯಗೊಳಿಸಿದ್ದಾರೆ. ಆ ಮಟ್ಟಿಗೆ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇದರ ಪರಿಣಾಮ ಏನು ಎನ್ನುವುದು ಇನ್ನಷ್ಟೇ ಅರ್ಥವಾಗಬೇಕಾಗಿದೆ.

ಏಕೆಂದರೆ ಜನರ ಅಹವಾಲು ಕೇಳುವವರಿಲ್ಲದೇ ಅಥವಾ ಪರಿಹಾರ ದೊರೆಯದೇ ನೂರಾರು ಕುಟುಂಬಗಳ ಮನೆಯ ಯಜಮಾನ ಸಾವನ್ನಪ್ಪಿದ ಘಟನೆಗಳು ಈ ನೆಲದಲ್ಲಿವೆ. ಎಷ್ಟೋ ಜನ ಅನಾಥ ಶವವಾಗಿದ್ದಾರೆ. ಅದೂ ಇತ್ತೀಚಿನ ದಿನಗಳಲ್ಲಿ ಗ್ರಾಮ ಮಟ್ಟದಿಂದ ರಾಜಧಾನಿಯವರೆಗೆ ಹೃದಯವಂತಿಕೆ, ಮಾನವೀಯ ಕಾಳಜಿ ಕಳಕಳಿ ಕಡಿಮೆಯಾಗಿರುವಾಗ ವೈಯಕ್ತಿಕ ಸಮಸ್ಯೆಗೆ ಪರಿಹಾರ ದೊರೆಯದೇ ಹತಾಶರಾಗುವ ಜನ ಹೆಚ್ಚಾಗುತ್ತಿದ್ದಾರೆ.

ಹೌದು. ಆಕೆ ಹಣ್ಣು ಹಣ್ಣು ಮುದುಕಿ ಎಂದು ಗೊತ್ತಿದ್ದರೂ ವೃದ್ಧಾಪ್ಯ ವೇತನವನ್ನು ಏಕೆ ಕೊಟ್ಟಿಲ್ಲ? ನಿರಾಶ್ರಿತ ವಸತಿ ರಹಿತರ ಪಟ್ಟಿ ಪಂಚಾಯ್ತಿಯಲ್ಲಿದ್ದರೂ, ಹತ್ತಾರು ಸಮೀಕ್ಷೆಗಳು ನಡೆದರೂ ಏಕೆ ಆತನಿಗೆ ಮನೆ ದೊರೆಯಲಿಲ್ಲ? ಆತ ನಡೆದಾಡಲೂ ಆಗದ ಅಂಗವಿಕಲ. ಅದು ಗೊತ್ತಿದ್ದರೂ ಹತ್ತಾರು ಬಾರಿ ಜಿಲ್ಲಾ ತಾಲ್ಲೂಕು ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ಏಕೆ?

ಕಂದಾಯ ಇಲಾಖೆಯ ದೂರುಗಳಂತೂ ಹೇಳತೀರದು. ನೋಡಿ. ಪೋಡಿ, ಸರ್ವೇ, ವಾರಸಾ, ಜನನ ಮರಣ ದಾಖಲೆಗಳ ಬಗ್ಗೆಯೂ ಜನ ಪರದಾಡಬೇಕಾಗಿದೆ. ಹಿಂದೆ ಸಕಾಲ ಯೋಜನೆ ಬಂತು. ಇಂತಹ ಅರ್ಜಿ ಇತ್ಯರ್ಥಕ್ಕೆ ಇಷ್ಟು ಅವಧಿ ಎಂದು. ಈ ಅವಧಿಯಲ್ಲಿ ಕೆಲಸವಾಗದಿದ್ದರೆ, ಏಕೆಂಬ ಟಿಪ್ಪಣಿ ಬರೆಯಬೇಕಾಗಿತ್ತು. ಐಎಎಸ್ ಹಿರಿಯ ಅಧಿಕಾರಿಯೊಬ್ಬರನ್ನು ಸಕಾಲ ಪರಿಶೀಲನಾ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಇಷ್ಟಾದರೂ ಕೂಡ ಕೇವಲ ಟಿಪ್ಪಣಿಗಳು ಚಲಾವಣೆಗೊಂಡವೇ ಹೊರತು, ಸಕಾಲದಲ್ಲಿ ಸಕಾಲಿಕ ಪರಿಹಾರ `ಸಕಾಲ' ಯೋಜನೆಯಿಂದ ದೊರೆಯಲೇ ಇಲ್ಲ. ನಿಮ್ಮ ಅರ್ಜಿ ಪರಿಶೀಲನೆಯಲ್ಲಿದೆ. ನಿಮ್ಮ ಅರ್ಜಿಗೆ ನಿಗದಿತ ಸ್ಟಾಂಪ್ ಇಲ್ಲ. ನಿಮ್ಮ ಅರ್ಜಿಗೆ ಮರು ಉತ್ತರ ಕೊಡಲು ಮೇಲಧಿಕಾರಿಗೆ ತಿಳಿಸಿದ್ದೇವೆ. ಈ ಥರದ ಉತ್ತರಗಳೇ ಟಿಪ್ಪಣಿಯಲ್ಲಿ ದಾಖಲಾದವು. ಪ್ರತಿ ಇಲಾಖೆಯಲ್ಲೂ ಸಕಾಲದ ಅರ್ಜಿಗಳು ಸರಿಯಾಗಿ ಇತ್ಯರ್ಥವಾಗಿದ್ದರೆ ರಾಜ್ಯದ ಜನರ ಶೇಕಡಾ ೯೦ರಷ್ಟು ಸಮಸ್ಯೆ ಪರಿಹಾರವಾಗುತ್ತಿತ್ತು.

ಕರ್ನಾಟಕದಲ್ಲಿ ಮಾತ್ರ ಜನತಾ ದರ್ಶನ ನಡೆಯುತ್ತಿಲ್ಲ. ದೇಶದ ಹಲವು ಮುಖ್ಯಮಂತ್ರಿಗಳು ಇದನ್ನು ಮಾಡುತ್ತಿದ್ದಾರೆ. ಅರವಿಂದ ಕೇಜ್ರಿವಾಲ್, ಯೋಗಿ ಆದಿತ್ಯನಾಥ, ನಿತೀಶಕುಮಾರ, ಕೆಸಿಆರ್ ಮೊದಲಾದವರು. ಯೋಗಿ ಹಾಗೂ ಕೇಜ್ರಿವಾಲ್ ತಾವು ಜನತಾ ದರ್ಶನ ನಡೆಸಿದ ಪರಿಣಾಮ ಶೇಕಡಾ ೫೦ರಷ್ಟು ಸಮಸ್ಯೆಗಳು ಬಗೆಹರಿದಿವೆ ಎಂದು ಹೇಳಿಕೊಳ್ಳುತ್ತಾರೆ.

ಈಗ ಕರ್ನಾಟಕದಾದ್ಯಂತ ಮೊನ್ನೆ ನಡೆದ ಜನತಾ ದರ್ಶನದ ಫಲಶ್ರುತಿ ಶೇಕಡಾ ೫೦ರಷ್ಟು ಎಂದು ಸರ್ಕಾರ ಘೋಷಿಸಿಕೊಂಡಿದೆ. ಹೀಗಾಗಿದ್ದರೆ ಭೇಷ್.

ಆದರೆ ವಾಸ್ತವ ಹಾಗಿರುವುದಿಲ್ಲ. ಅಹವಾಲು ಸ್ವೀಕರಿಸಿದ ಮಂತ್ರಿ ಆಯ್ತು, ಮಾಡುತ್ತೇವೆ ಎನ್ನುತ್ತಾರೆ. ಅರ್ಜಿಯನ್ನು ಅಧಿಕಾರಿಗೆ ರವಾನಿಸಿ ಟಿಪ್ಪಣಿ ಬರೆಯುತ್ತಾರೆ. ನಂತರ ಬರುವ ಉತ್ತರ, ನಿಮ್ಮ ಮನವಿಯನ್ನು ಇಂತಹ ಅಧಿಕಾರಿಗೆ ನೀಡಲಾಗಿದೆ ಎನ್ನುವ ಅಥವಾ ಪರಿಶೀಲಿಸುತ್ತಿದ್ದೇನೆ, ಸೂಕ್ತ ದಾಖಲೆ ಇಲ್ಲ ಇತ್ಯಾದಿ ಸಬೂಬುಗಳು. ಹೀಗಾಗಬಾರದು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ, ಆ ಮಂತ್ರಿಯ ಬದ್ಧತೆ ಮುಖ್ಯ.

ಇಂದು ಜನಸಾಮಾನ್ಯನಿಗಿರುವ ದೂರು ಅಥವಾ ಕೋರಿಕೆ ಅಂದಿನ ಮಟ್ಟಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಕಾಲಕಾಲಕ್ಕೆ ಹತ್ತಾರು ಸ್ವರೂಪದ ಅಹವಾಲುಗಳು ಎದುರಾಗುತ್ತಿರುತ್ತವೆ. ಅವರ ಒಂದು ಗ್ರಾಮ, ಪಂಚಾಯ್ತಿ ಅಥವಾ ಹೋಬಳಿ ಮಟ್ಟದ ಸಮಸ್ಯೆಗಳೇ ಬೇರೆ. ನಗರ ಪ್ರದೇಶದವುಗಳೇ ಬೇರೆ. ಸಾಮಾಜಿಕ-ಆಡಳಿತಾತ್ಮಕ ವಿಷಯಗಳೇ ಬೇರೆ.

ನೋಡಿ. ಮೊನ್ನೆಯ ಜನತಾ ದರ್ಶನದಲ್ಲಿ ಒಂದೆಡೆ ತನಗೆ ಮದುವೆ ಮಾಡಿಸಿ ಎನ್ನುವ ಅಹವಾಲೂ ಬಂತು. ಹೆಣ್ಣು ಸಿಗುತ್ತಿಲ್ಲ ಎನ್ನುವ ಅಹವಾಲನ್ನು ಕೂಡ ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ ಭಾಗಗಳಲ್ಲಿ ಸಲ್ಲಿಸಿದರು ಕೃಷಿಕರು. ವೃದ್ಧಾಶ್ರಮಗಳು ಬೇಕಾಗಿವೆ. ಸ್ಥಾಪಿಸಿ. ವಸತಿ ಶಾಲೆ ಆರಂಭಿಸಿ ಎನ್ನುವುದರಿಂದ ನನಗೇಕೆ ಪದ್ಮಶ್ರೀ ಪ್ರಶಸ್ತಿ ಕೊಡುವುದಿಲ್ಲ, ಶಿಫಾರಸು ಮಾಡಿ ಎನ್ನುವ ಅರ್ಜಿಗಳೂ ಬಂದವು.

ಏನೇ ಇರಲಿ. ಪ್ರತಿ ಅರ್ಜಿಗೂ ಒಂದು ಸ್ವರೂಪ ಹಾಗೂ ಒಳಸುಳಿ ಇದ್ದೇ ಇರುತ್ತದೆ. ಸರ್ಕಾರ ನಡೆಸುವವರ ಮನಸ್ಥಿತಿ ಹಾಗೂ ದೋಷ ಅಲ್ಲಿ ಬಿಂಬಿತವಾಗಿರುತ್ತದೆ. ಹೊಸ ಹೊಸ ಸಮಸ್ಯೆಗಳೂ ಸೃಷ್ಟಿಯಾದಾವು. ಮೊದಮೊದಲು ಕುಡಿಯುವ ನೀರು, ಮನೆ ಇತ್ಯಾದಿಗಳ ಜೊತೆ ಈಗೀಗ ಗ್ರಾಮ ಸಂಪರ್ಕ ಕೇಂದ್ರ, ಬೀಜ ಇತ್ಯಾದಿಗಳನ್ನೂ ಜನ ಕೇಳುತ್ತಿದ್ದಾರೆ.

ಜನತಾ ದರ್ಶನ ಇವೆಲ್ಲ ಅಹವಾಲುಗಳಿಗೆ ಸ್ಪಂದಿಸುವಂತಾಗಬೇಕು. ಇದು ಸರ್ಕಾರದ ಪ್ರಥಮ ಮುದ್ದೆಯಾಗಬೇಕು. ಸಮಸ್ಯೆಗಳಿಗೆ ಆದ್ಯತೆ ಕೊಡಬೇಕು. ಹಾಗಾದಾಗ ಎಲ್ಲ ಸರ್ಕಾರವೂ ಅಷ್ಟೇ, ಎಷ್ಟೇ ಅರ್ಜಿ ಸಲ್ಲಿಸಿದರೂ ಅಷ್ಟೇ ಎನ್ನುವ ಜನರ ಅಳಲು ನಿಂತೀತು. ಸರ್ಕಾರದ ವ್ಯವಸ್ಥೆಯೂ ಕೂಡ ಮಾನವೀಯತೆ ಮತ್ತು ವಾಸ್ತವದ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಿದರೆ ಬಹುಶಃ ಜನತಾ ದರ್ಶನಕ್ಕೆ ಮತ್ತು ಸರ್ಕಾರಕ್ಕೆ ಒಂದು ಹೆಮ್ಮೆ, ಪ್ರಜಾಪ್ರಭುತ್ವದ ಧೋರಣೆಗೆ ಒಂದು ಹೆಗ್ಗುರುತು.

ಜನರ ಬಳಿಗೆ ಬಾರದ, ಜನರ ಅಹವಾಲೂ ಕೇಳದ, ತಮ್ಮ ಆಡಳಿತವೇ ಸರಿ ಎನ್ನುವ, ಬರೀ ಟೀಕೆ, ಸೇಡು ಮತ್ತು ರಾಜಕೀಯ ಆಟವೇ ಪ್ರಧಾನವಾದಾಗ ವ್ಯವಸ್ಥೆ ಸರ್ವಾಧಿಕಾರದತ್ತ ಹೊರಳುತ್ತದೆ. ಜನ ಹತಾಶಗೊಳ್ಳುತ್ತಾರೆ. ಅಲ್ಲವೇ?