ಜನತೆ ಅವಸ್ಥೆ ಪಡುತ್ತಿದ್ದರೆ, ನಿಮಗೆ ಪ್ರಚಾರವೇ ಹೆಚ್ಚಾಗಿ ಹೋಯಿತೇ?
ಬೆಂಗಳೂರು: ರಾಜ್ಯದ ಜನತೆ ಇಲ್ಲಿ ಅವಸ್ಥೆ ಪಡುತ್ತಿದ್ದರೆ ನಿಮಗೆ ಚುನಾವಣಾ ಪ್ರಚಾರವೇ ಹೆಚ್ಚಾಗಿ ಹೋಯಿತೇ? ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ರಾಜ್ಯದಲ್ಲಿ ಜಲಕ್ಷಾಮದ ಸೂತಕ, ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರೆಂಟಿ ಉತ್ಸವ, ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಇನ್ನೇನೋ ಚಿಂತೆ ಎಂಬಂತೆ ಇಲ್ಲಿ ಜನ ಜಲಕ್ಷಾಮದಿಂದ ಹನಿ ನೀರಿಗೂ ಹಾಹಾಕಾರ ಪಡುತ್ತಿದ್ದರೆ, ಅತ್ತ ಸಿಎಂ ಸಿದ್ದರಾಮಯ್ಯನವರು ಗ್ಯಾರೆಂಟಿ ಸಮಾವೇಶದ ಹೆಸರಿನಲ್ಲಿ ಜನರ ದುಡ್ಡಿನಲ್ಲಿ ಜಾತ್ರೆ ಮಾಡುತ್ತಿದ್ದಾರೆ.
ರಾಜ್ಯದಲ್ಲಿ 900 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಲಕ್ಷಾಂತರ ಕೃಷಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ಊರು ಬಿಟ್ಟು ಗುಳೇ ಹೋಗಿದ್ದಾರೆ, 40ಕ್ಕೂ ಹೆಚ್ಚು ನೇಕಾರರು ದಿಕ್ಕು ಕಾಣದೆ ಜೀವ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಜನ ತೊಟ್ಟು ನೀರಿಗೂ ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ ಇಂತಹ ಸೂತಕದ ವಾತಾವರಣ ಇರುವಾಗ ಗ್ಯಾರೆಂಟಿ ಸಮಾವೇಶದ ಹೆಸರಿನಲ್ಲಿ ಪ್ರತಿ ತಾಲೂಕಿಗೆ 50 ಲಕ್ಷ, ಪ್ರತಿ ಜಿಲ್ಲೆಗೆ ಒಂದು ಕೋಟಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭಾಗವಹಿಸುವ ಕಾರ್ಯಕ್ರಮಗಳಿಗೆ ಎರಡು ಕೋಟಿ ಖರ್ಚು ಮಾಡಿ ಉತ್ಸವ ಮಾಡುತ್ತಿದೀರಲ್ಲ ಸಿಎಂ ಸಿದ್ದರಾಮಯ್ಯ ನವರೇ, ನಿಮಗೆ ಕಿಂಚಿತ್ತಾದರೂ ಮಾನವೀಯತೆ, ಕರ್ತವ್ಯ ಪ್ರಜ್ಞೆ ಇದೆಯೇ?
ಗ್ಯಾರೆಂಟಿ ಸಮಾವೇಶಕ್ಕಾಗಿ ನೂರಾರು ಕೋಟಿ ಪೋಲು ಮಾಡುವ ಬದಲು ಜನರಿಗೆ ನೀರಿನ ವ್ಯವಸ್ಥೆ ಮಾಡಬಹುದಿತ್ತಲ್ಲ? ಅದೇ ದುಡ್ಡಿನಲ್ಲಿ ರೈತರಿಗೆ ಬರ ಪರಿಹಾರ ಕೂಡಬಹುದಿತ್ತಲ್ಲವೆ? ರಾಜ್ಯದ ಜನತೆ ಇಲ್ಲಿ ಅವಸ್ಥೆ ಪಡುತ್ತಿದ್ದರೆ ನಿಮಗೆ ಚುನಾವಣಾ ಪ್ರಚಾರವೇ ಹೆಚ್ಚಾಗಿ ಹೋಯಿತೇ? ಎಂದಿದ್ದಾರೆ.