ಜನಧನ-ಆರ್ಥಿಕ ಶಕ್ತಿಗೆ ಹೊಸ ಚೈತನ್ಯ
೨೦೧೪ರಲ್ಲಿ ಅಭೂತಪೂರ್ವ ಚುನಾವಣಾ ವಿಜಯದ ನಂತರ ಅಧಿಕಾರ ಸ್ವೀಕರಿಸಿದ ದೇಶದ ಪ್ರಧಾನಿ ಘೋಷಿಸಿದ ಪ್ರಧಾನಮಂತ್ರಿ ಜನಧನ ಯೋಜನೆ, ದೇಶದ ಆರ್ಥಿಕ ಪ್ರಗತಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತದೆ ಎಂಬುದು ಊಹೆಗೂ ಮೀರಿದ್ದು.
ಆಗಸ್ಟ್ ೨೮, ೨೦೧೪ರಲ್ಲಿ ಜಾರಿಗೆ ಬಂದ ಈ ಬ್ಯಾಂಕಿಂಗ್ ಕ್ಷೇತ್ರದ ಯೋಜನೆಗೆ ಈಗ ೧೦ ವರ್ಷಗಳು ಸಂದಿವೆ. ಕಳೆದ ಹತ್ತು ವರ್ಷಗಳಲ್ಲಿ ಭಾರತ ದೇಶ ಜಾಗತಿಕ ಐದನೇ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಈ ಕ್ರಾಂತಿಕಾರಿ ಬೆಳವಣಿಗೆಗೆ ಪ್ರಧಾನಿ ಮೋದಿ ಜಾರಿಗೆ ತಂದ ಹಲವಾರು ಅರ್ಥಪೂರ್ಣ ಯೋಜನೆಗಳಲ್ಲಿ ಬಹುಶಃ ಜನರನ್ನು ದೇಶವ್ಯಾಪಿ ಬೆಸೆಯುವ ಹಾಗೂ ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿ ಯೋಜನೆಗಳಲ್ಲಿ ಈ ಜನಧನ ಯೋಜನೆ ಎದ್ದು ಕಾಣುವ ಆರ್ಥಿಕ ಪರಿವರ್ತನೆಗೆ ಆಧಾರಸ್ತಂಭ ಯೋಜನೆ. ದೇಶದ ಬೃಹತ್ ಜನಸಂಖ್ಯೆಯನ್ನು ದೇಶದ ಸಾರ್ವಜನಿಕ ಸಾಂಸ್ಥಿಕ ಬ್ಯಾಂಕಿಂಗ್ ಜಾಲದ ತೆಕ್ಕೆಗೆ ತಂದು ಒಳಗೊಳ್ಳುವ ಆರ್ಥಿಕ ಪ್ರಗತಿಯ ವಾರಸುದಾರರನ್ನಾಗಿಸುವುದೇ ಈ ಜನಧನ ಯೋಜನೆಯ ಪ್ರಧಾನಿ ಮೋದಿಯವರ ಮೂಲ ಕಲ್ಪನೆ ಹಾಗೂ ಕನಸಾಗಿತ್ತು. ಅಂತೆಯೇ ಬ್ಯಾಂಕಿಂಗ್ ಸೇವೆಗೆ ಒಳಪಡದ ಬಡಜನರನ್ನು ಒಳಪಡಿಸಿ ಹಣಕಾಸಿನ ಅಭದ್ರತೆಯಲ್ಲಿರುವವರಿಗೆ ಭದ್ರತೆ ಒದಗಿಸುವುದೇ ಉದ್ದೇಶವಾಗಿತ್ತು. ಪ್ರಧಾನಿ ಮೋದಿಯವರು ಹೇಳುವಂತೆ ಸರ್ಕಾರದಿಂದ ಆರ್ಥಿಕ ಪ್ರಗತಿಗೆ ನಾಂದಿಯಾಗಬಲ್ಲ ಯಾವುದೇ ಯೋಜನೆಯು ಸಂಪೂರ್ಣ ಯಶಸ್ವಿಯಾಗಿ ಅದರ ಲಾಭ ತಳಮಟ್ಟದ ಜನರಿಗೆ ತಲುಪಬೇಕೆಂದರೆ ಅದೊಂದು ಸಾರ್ವತ್ರಿಕ ಚಳವಳಿ ರೂಪ ಪಡೆದಾಗ ಮಾತ್ರವೆಂಬುದು ಜನಧನ್ ಯೋಜನೆಯ ಅನುಷ್ಠಾನದಲ್ಲಿ ಅಕ್ಷರಶಃ ಇದು ಆಗಿರುವುದು. ಆದ್ದರಿಂದಲೇ ಈ ಯೋಜನೆ ಜಗತ್ತಿನಲ್ಲಿಯೇ ಒಂದು ಬೃಹತ್ ಹಣಕಾಸಿನ ಒಳಗೊಳ್ಳುವಿಕೆ ಸಾಧಿಸಿದ ಯೋಜನೆಯಾಗಿ ಹೊರಹೊಮ್ಮಿದೆ.
ದಾಖಲೆಯ ಬ್ಯಾಂಕ್ ಖಾತೆಗಳು
೨೦೨೪ರ ಆಗಸ್ಟ್ವರೆಗೆ ಒಟ್ಟು ೫೩ ಕೋಟಿ ಜನಧನ ಬ್ಯಾಂಕ್ ಖಾತೆಗಳ ನೋಂದಣಿಯಾಗಿರುವುದು ಈ ಯೋಜನೆ ವಿರಾಟ ಸ್ವರೂಪದ ದರ್ಶನವಾಗುವುದು. ಇದು ಒಟ್ಟಾರೆ ಯುರೋಪಿಯನ್ ಯೂನಿಯನ್‌ನ ಒಟ್ಟು ಜನಸಂಖ್ಯೆಗಿಂತಲೂ ಮಿಗಿಲಾಗಿರುವುದು. ಈ ಖಾತೆಗಳ ಒಟ್ಟಾರೆ ಠೇವಣಿ ರೂ ೨.೩೧ ಲಕ್ಷ ಕೋಟಿಗಳಿಗೂ ಮೀರಿದೆ. ಈ ಯೋಜನೆಯ ಒಟ್ಟು ಫಲಾನುಭವಿಗಳಲ್ಲಿ ೫೭% ರಷ್ಟು ಮಹಿಳೆಯರು ಅಂದರೆ ೩೦ ಕೋಟಿ ಮಹಿಳೆಯರು ಈ ಖಾತೆಗಳನ್ನು ಹೊಂದಿರುವುದು. ಅಲ್ಲದೆ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚಿನ ಫಲಾನುಭವಿಗಳು ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳಲ್ಲಿ ನೆಲೆಸಿದವರು. ಈ ಯೋಜನೆ ಜಾರಿಗೆ ಬಂದ ಮೊದಲ ಒಂದು ವರ್ಷದ ಅವಧಿಯೊಂದರಲ್ಲೇ ೧೭.೯ ಕೋಟಿ ಹೊಸ ಖಾತೆಗಳನ್ನು ತೆರೆಯಲಾಗಿದ್ದು ಇಲ್ಲಿಯವರೆಗೂ ಒಟ್ಟು ೫೩.೩೧ ಕೋಟಿ ಹೊಸ ಜನಧನ ಖಾತೆಗಳಿವೆ.
ಅಂತರ್ಜಾಲ ಆಧಾರಿತ ಹಣಕಾಸು ವ್ಯವಹಾರಗಳಲ್ಲಿ ಜನಧನ ಪಾತ್ರ
೨೦೧೪ರಲ್ಲಿ ೨೫.೫೯ ಕೋಟಿ ಇದ್ದ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ೯೫.೪೦ ಕೋಟಿಗೆ ಏರಿಕೆಯಾಗಿದ್ದು ಇದು ಒಟ್ಟು ವಾರ್ಷಿಕ ಬೆಳವಣಿಗೆಯ ೧೪.೨೬ ದಾಖಲಾಗಿದೆ. ಸುಮಾರು ೩೦ ಕೋಟಿಯಷ್ಟು ಜನಧನ ಮಹಿಳೆ ಖಾತೆದಾರರು(ಇದು ರಷ್ಯಾ ಜನಸಂಖ್ಯೆ ಎರಡು ಪಟ್ಟು) ಇಂದು ಸ್ವತಃ ತಾವೇ ನಿರ್ವಹಿಸುವ ವ್ಯವಹಾರಗಳು ೨೦೧೮ರಲ್ಲಿ ೫೩% ರಿಂದ ೨೦೧೯-೨೦ ರಲ್ಲಿ ಇದು ೭೯%ಗೆ ಏರುವುದು ಅವರಿಗೆ ದೊರೆತ ಸಬಲೀಕರಣದ ಮಹತ್ವದ ಭಾಗವಾಗಿದೆ. ಇದರಿಂದಾಗಿಯೂ ಕೋವಿಡ್ ೧೯ರ ಸಮಯದಲ್ಲಿನ ಲಾಕ್‌ಡೌನ್ ಘೋಷಿಸಿದ ಹತ್ತು ದಿನಗಳ ಅವಧಿಯಲ್ಲಿಯೇ ೨೦ ಕೋಟಿ ಮಹಿಳಾ ಖಾತೆದಾರರಿಗೆ ಪ್ರತಿ ತಿಂಗಳು ರೂ. ೫೦೦ ಹಣ ಸಂದಾಯವಾಗಿದೆ. ಒಟ್ಟು ನೀಡಲಾದ ೪೪.೪ ಕೋಟಿ ಮುದ್ರಾ ಸಾಲಗಳಲ್ಲಿ ೩೦.೬ ಕೋಟಿ ಸಾಲಗಳ ಭಾಗ ಮಹಿಳೆಯರದೇ ಆಗಿದ್ದು ಇದು ಒಟ್ಟು ಮಂಜೂರಾದ ಸಾಲಗಳ ೬೯% ರಷ್ಟಾಗಿರುವುದು ಜನಧನ ಯೋಜನೆಯ ಧನಾತ್ಮಕ ಪರಿಣಾಮ. ಜನಧನ ಯೋಜನೆಯ ವಿತ್ತೀಯ ಒಳಗೊಳ್ಳುವಿಕೆಯ ಚಲನಶೀಲತೆ ಸುಮಾರು ೨೫ ಕೋಟಿ ಬಡ ಹಾಗೂ ದುರ್ಬಲ ವರ್ಗದ ಜನರನ್ನು ೨೦೧೪ರಿಂದ ೨೦೨೩ರ ಅವಧಿಯಲ್ಲಿ ಬಹುಮುಖಗಳ ಬಡತನದಿಂದ ಮೇಲಕ್ಕೆತ್ತಿವೆ.
ನೇರ ಹಣ ವರ್ಗಾವಣೆಯ ಯಂತ್ರವಾಗಿ ಪರಿಣಮಿಸಿದ ಜನಧನ
೨೦೧೪ರಲ್ಲಿ ಮೋದಿಯವರು ಜನಧನ ಯೋಜನೆ ಘೋಷಿಸಿದಾಗ ಕೇವಲ ಬ್ಯಾಂಕ್ ಖಾತೆ ತೆರೆಯುವುದರಿಂದ ಏನು ಲಾಭ ಎಂದು ಮೂಗು ಮುರಿದವರೇ ಹೆಚ್ಚು. ಅಲ್ಲದೇ ಇಷ್ಟೊಂದು ಸಂಖ್ಯೆಯ ಶೂನ್ಯ ಬ್ಯಾಲೆನ್ಸ್ ಅಕೌಂಟ್‌ಗಳ ನಿರ್ವಹಣಾ ವೆಚ್ಚ ಕೊಡುವವರಾರು ಮುಂತಾಗಿ ವಿರೋಧಿಗಳು ಅಪಹಾಸ್ಯ ಮಾಡಿದ್ದರು. ಆಗಲೇ ಸರ್ಕಾರ ಕೂಡಾ ನಿರ್ವಹಣಾ ವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳಲಿದೆಯೆಂಬ ಸ್ಪಷ್ಟತೆ ಕೂಡಾ ನೀಡಿತ್ತು. ಆದರೆ ಇಂದು ಈ ಬ್ಯಾಂಕ್ ಖಾತೆಗಳ ಒಟ್ಟು ಠೇವಣಿಯೇ ಸುಮಾರು ೨.೩೧ ಲಕ್ಷ ಕೋಟಿಗೆ ಮೀರಿದ್ದು ಈಗ ಈ ಸಮಸ್ಯೆಯ ಪ್ರಶ್ನೆಯೇ ಇಲ್ಲ. ಮೋದಿ ಪ್ರಣಿತ ಭಾರತದ ಡಿಜಿಟಲ್ ಪರಿವರ್ತನೆ ಕೇವಲ ಸಮಯಾನುಸಾರದ ಸ್ವೀಕೃತಿ ಲಭ್ಯತೆಗಷ್ಟೇ ಸೀಮಿತವಾಗಿರದೆ ಈ ವ್ಯವಸ್ಥೆಯಿಂದ ಹೇಗೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಧ್ಯವರ್ತಿಗಳ ಶೋಷಣೆಗೂ ಅಂತ್ಯ ಹಾಡಿದೆ ಎಂಬುದು. ಈ ಡಿಜಿಟಲ್ ಪರಿವರ್ತನೆ ಭಾರತದ ೧೦ ವರ್ಷಗಳ ಅಭೂತಪೂರ್ವ ಆರ್ಥಿಕ ಬೆಳವಣಿಗೆಯ ಹೃದಯವೇ ಆಗಿದೆ ಎಂದು `ಆಧಾರ' ವ್ಯವಸ್ಥೆಯ ಪ್ರಥಮ ಅಧ್ಯಕ್ಷರಾಗಿದ್ದ ನಂದನ ನೀಲಕಣಿಯವರು ಉದ್ಧರಿಸಿದ್ದರಲ್ಲಿ ಉಪೇಕ್ಷೆ ಇಲ್ಲವೆಂದು ಹೇಳಬೇಕು.
ಇದಲ್ಲದೆ ಜನಧನ ಯೋಜನೆಯ ಇನ್ನೊಂದು ವಿಶೇಷತೆ ಇದು ಜನರ ಹಾಗೂ ಸರ್ಕಾರದ ನಡುವಿನ ಕಂದಕವನ್ನು ಕನಿಷ್ಠಗೊಳಿಸಿದ್ದು ಹಾಗೂ ಸಾಮಾನ್ಯ ಜನಕೇಂದ್ರಿತ ಆರ್ಥಿಕ ಮುನ್ನಡೆಗೆ ಆಧಾರಶಿಲೆಯಾಗಿ ಪರಿಣಮಿಸಿದ್ದು ಸರ್ಕಾರದ ಯಾವುದೇ ಯೋಜನೆಯ ಅನುಷ್ಠಾನವಿರಲಿ ಪ್ರಧಾನಿ ಕಿಸಾನ್ ಸಮ್ಮಾನ್, ನರೇಗಾದ ಏರಿಕೆಯಾದ ಸಂಭಾವನೆ, ಜೀವವಿಮೆ ಹಾಗೂ ಆರೋಗ್ಯ ವಿಮಾ ಹೀಗೆ ಹತ್ತು ಹಲವಾರು ಸಾಮಾಜಿಕ ಕಲ್ಯಾಣ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಲಭ್ಯತೆಯನ್ನು ತಳಸ್ಪರ್ಶಿಯಾಗಿ ಜನರಿಗೆ ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ತಲುಪಿಸುವಲ್ಲಿ ಜನಧನ ಪಾತ್ರ ಅಗಾಧವಾದುದು.
ನೇರ ಹಣ ವರ್ಗಾವಣೆ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನ
ಸರ್ಕಾರದ ನೇರ ಹಣ ವರ್ಗಾವಣೆ(ಡಿಬಿಟಿ) ಹಾಗೂ ಇತರ ಆಡಳಿತಾತ್ಮಕ ಸುಧಾರಣೆಗಳು ಸಾರ್ವಜನಿಕ ವಿತರಣಾ ಸೇವಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಪರಿವರ್ತನೆ ತಂದಿದೆ. ಖೊಟ್ಟಿ ಹಾಗೂ ಡೂಪ್ಲಿಕೇಟ್ ಫಲಾನುಭವಿಗಳ ನಿರ್ಮೂಲನೆಯಿಂದ ಸೋರಿಕೆಯನ್ನು ಗಣನೀಯವಾಗಿ ತಡೆಗಟ್ಟುವ ಮೂಲಕ ಡಿಬಿಟಿ ವ್ಯವಸ್ಥೆ ಅರ್ಹ ಹಾಗೂ ಯೋಗ್ಯ ಫಲಾನುಭವಿಗಳಿಗೆ ಸರ್ಕಾರದ ೫೩ ಇಲಾಖೆಗಳ ಸಂಬಂಧಿತ ಉಜ್ವಲ ಗ್ಯಾಸ್ ಯೋಜನೆ, ಬೆಳೆವಿಮಾ ಹಣ, ಕಿಸಾನ್ ಸಮ್ಮಾನ್ ಹಣ, ನರೇಗಾ, ವಿವಿಧ ಜೀವವಿಮಾ ಹಣ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹಾಗೂ ಇನ್ನಿತರ ಹಲವಾರು ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿ ಹಣ ಸೇರಿದಂತೆ ದೇಶವ್ಯಾಪಿ ೩೧೬ ಯೋಜನೆಗಳ ಲಾಭ ತಲುಪುವಂತೆ ಸರ್ಕಾರಕ್ಕೆ ಆಧಾರವಾಗಿ ನಿಂತು ಜನಧನ ಯೋಜನೆಯ ಕ್ರಾಂತಿಕಾರಿ ವ್ಯವಸ್ಥೆಯ ಪಾತ್ರ ಅಷ್ಟಿಷ್ಟಲ್ಲ.
ಹೀಗೆ ೨೦೧೪ರಲ್ಲಿ ಆರಂಭಗೊಂಡು ಹತ್ತು ವರ್ಷಗಳ ಅವಧಿಯಲ್ಲಿ ತನ್ನ ಸಂಕಲ್ಪಿತ ಮಿಷನ್ ಪರಿಣಾಮಕಾರಿಯಾಗಿ ಪೂರ್ಣಗೊಳಿಸುವಲ್ಲಿ ಮುನ್ನಡೆದ ಜನಧನ ಯೋಜನೆಯ ಪ್ರಯಾಣದಲ್ಲಿ ದೇಶದ ಆರ್ಥಿಕ ಪ್ರಗತಿಯತ್ತ ಹಾಕಿದ ದಾಪುಗಾಲಿನ ಎಲ್ಲಾ ಹೆಜ್ಜೆಗಳನ್ನು ಸ್ಪರ್ಶಿಸಿ ಮೋದಿ ಅವರ ಕಲ್ಪನೆಯ ಆತ್ಮನಿರ್ಭರ ಭಾರತ, ಒಂದೇ ಭಾರತ ಶ್ರೇಷ್ಠ ಸಾಧನೆಗೆ ತನ್ನದೇ ಅಭೂತಪೂರ್ವ ಕೊಡುಗೆ ನೀಡಿದ ಅಪರೂಪದ ಯೋಜನೆಯಾಗಿ ಜಾಗತಿಕ ಮನ್ನಣೆಯನ್ನು ಗಳಿಸಿದೆ ಎಂಬುದು ಎಲ್ಲರ ಹೆಮ್ಮೆ.