ಜನರಿಲ್ಲದೇ ನಡೆದ ಜನಸಂಪರ್ಕ ಸಭೆ..
ಬಾಗಲಕೋಟೆ(ಬಾದಾಮಿ): ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಜನ ಸಮಪರ್ಕ ಸಭೆಯು ಇಂದು ನಗರದ ತಾಪಂ ಸಭಾಭವನದಲ್ಲಿ ನಡೆದಿದ್ದು, ಸಭೆಯಲ್ಲಿ ಅಹವಾಲು ಸಲ್ಲಿಸಲು ಜನರಿಲ್ಲದೆ ನೀರಸವಾಗಿ ನಡೆದಿದ್ದು ಹತ್ತು ಹಲವಾರು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ.
ಪ್ರತಿ ತಿಂಗಳ ಮೊದಲ ಶನಿವಾರ ನಗರ ಪ್ರದೇಶದಲ್ಲಿ ಜನ ಸಂಪರ್ಕ ಸಭೆ ನಡೆಸಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೆ ಈ ಆದೇಶ ಬಾದಾಮಿ ಪಟ್ಟಣದಲ್ಲಿ ಸಮರ್ಪಕವಾಗಿ ಅನುಷ್ಟಾನ ಆಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ.
ಇಂದು ನಡೆದಿರುವುದು ಎರಡನೇ ಸಭೆ, ಮೊದಲ ಸಭೆಯಲ್ಲಿ ಜನರು ಅಹವಾಲುಗಳನ್ನು ಸಲ್ಲಿಸಲು ತೋರಿದ್ದ ಉತ್ಸಾಹ ಎರಡನೇ ಸಭೆಯಲ್ಲಿ ಕಂಡು ಬರಲಿಲ್ಲ ಎಂದು ಹೇಳಬಹುದು. ಮೊದಲ ಸಭೆಯಲ್ಲಿ ೧೨ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇಂದಿನ ಸಭೆಯಲ್ಲಿ ಒಂದೂ ಅರ್ಜಿ ಸಲ್ಲಿಕೆಯಾಗಲಿಲ್ಲ ಎಂಬುದೇ ಗಮನಾರ್ಹ ಸಂಗತಿ.
ತಹಶೀಲದಾರ ಅಧ್ಯಕ್ಷತೆಯಲ್ಲಿ ನಡೆಲಿರುವ ಈ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದು, ಆಗಮಿಸುವ ಅಹವಾಲುಗಳಿಗೆ ಉತ್ತರ ನೀಡುವುದರ ಜೊತೆಗೆ ಅರ್ಜಿಗಳ ವಿಲೇವಾರಿಗೆ ಅಣಿ ಆಗಬೇಕು. ಆದರೆ ಸಭೆಯಲ್ಲಿ ಕೇವಲ ಬೆರಳೆಣಿಕೆ ಅಧಿಕಾರಿಗಳು ಮಾತ್ರ ಕಂಡು ಬಂದರು.
ತಹಶೀಲ್ದಾರರು ಕಂದಾಯ ಸಚಿವರ ವಿಸಿ ಇರುವುದರಿಂದ ಬಾಗಲಕೋಟ ಸಭೆಗೆ ತೆರಳಿದ್ದರು, ಇವರ ಅನುಪಸ್ಥಿತಿಯಲ್ಲಿ ಉಪ ತಹಶೀಲದಾರ ಎಫ್.ಎಸ್. ಬೊಮ್ಮನ್ನವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಬಂದೇನವಾಜ ಡಾಂಗೆ ಸಭೆ ನಡೆಸಿಕೊಟ್ಟರು. ಸಭೆಯಲ್ಲಿ ತಾಪಂ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ತಿರಕನ್ನವರ, ಲೋಕೋಪಯೋಗಿ, ಕೃಷಿ ಉತ್ಪನ್ನ ಮಾರುಕಟ್ಟೆ, ನೀರಾವರಿ ಇಲಾಖೆ ಸೇರಿದಂತೆ ಇತರ ಇಲಾಖಾಧಿಕಾರಿಗಳು ಹಾಜರಿದ್ದರು.
೧೦ ಗಂಟೆಗೆ ಆರಂಭವಾಗಬೇಕಿದ್ದ ಸಭೆ ಮಧ್ಯಾಹ್ನ ೧೨ಗಂಟೆಗೆ ಆರಂಭವಾಯಿತು. ನಂತರ ೧ರವರೆಗೆ ಅಧಿಕಾರಿಗಳು ಹಾಜರಿದ್ದು, ತಮ್ಮ ಸಮಯ ಮುಗಿದ ನಂತರ ಮರಳಿ ತಮ್ಮ ಇಲಾಖೆಯತ್ತ ಮುಖ ಮಾಡಿ ಹೊರಟು ಹೋದರು.