For the best experience, open
https://m.samyuktakarnataka.in
on your mobile browser.

ಜನವರಿ 24ಕ್ಕೆ ರಿಷಿ ‘ಗರುಡ ಪುರಾಣ’

05:29 PM Dec 09, 2024 IST | Samyukta Karnataka
ಜನವರಿ 24ಕ್ಕೆ ರಿಷಿ ‘ಗರುಡ ಪುರಾಣ’

ಕವಲುದಾರಿ, ಆಪರೇಷನ್ ಅಲಮೇಲಮ್ಮ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ನಟ ರಿಷಿ, ಇದೀಗ ರುದ್ರ ಗರುಡ ಪುರಾಣ ಸಿನಿಮಾ ಮೂಲಕ ಮತ್ತೆ ಮರಳಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್ 27ರಂದು ‘ಗರುಡ ಪುರಾಣ’ ದರ್ಶನವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಹೊಸ ವರ್ಷಕ್ಕೆ ಮುಂದೂಡಿರುವ ಚಿತ್ರತಂಡ, ಜನವರಿ 24 ರಂದು ತೆರೆಕಾಣಿಸಲು ಸಜ್ಜಾಗಿದೆ.

ಈಗಾಗಲೇ ಫಸ್ಟ್‌ಲುಕ್, ಟೀಸರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿರುವ ಚಿತ್ರತಂಡ, ಇದೀಗ ಬಿಡುಗಡೆಯ ಖುಷಿಯಲ್ಲಿದೆ. ಈ ಸಿನಿಮಾವನ್ನು ನಂದೀಶ್ ನಿರ್ದೇಶನ ಮಾಡಿದ್ದಾರೆ. ಅಶ್ವಿನಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಲೋಹಿತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಅನ್ನೋದು ಚಿತ್ರತಂಡದ ಅನಿಸಿಕೆ.

‘ಕವಲು ದಾರಿ ಸಿನಿಮಾವಾದ ಮೇಲೆ ನಾನು ಮತ್ತೆ ಖಾಕಿಧಾರಿಯಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಯಾವುದೇ ಹರಿಬಿರಿಯಿಲ್ಲದೆ ಅಚ್ಚುಕಟ್ಟಾಗಿ ಈ ಚಿತ್ರವನ್ನು ಕಟ್ಟಿದ್ದೇವೆ. ಪ್ರೇಕ್ಷಕರಿಗೆ ನಮ್ಮ ಸಿನಿಮಾ ಇಷ್ಟವಾಗುವ ಭರವಸೆ ಇದೆ’ ಎನ್ನುತ್ತಾರೆ ರಿಷಿ. ಇವರಿಗೆ ಜೋಡಿಯಾಗಿ ಪ್ರಿಯಾಂಕಾ ಕುಮಾರ್ ಇದ್ದಾರೆ. ಅಶ್ವಿನಿ ಗೌಡ, ಶಿವರಾಜ್ ಕೆ.ಆರ್ ಪೇಟೆ, ರಾಮ್ ಪವನ್ ಮುಂತಾದವರು ಚಿತ್ರದ ಇತರೆ ತಾರಾಬಳಗ.

ಕೃಷ್ಣಪ್ರಸಾದ್ ರುದ್ರ ಗರುಡಪುರಾಣ ಸಿನಿಮಾಕ್ಕೆ ಸಂಗೀತ ಸಂಯೋಜಿಸಿದ್ದು, ಈ ಮೊದಲು ಇವರು ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಬಳಿ ಕೆಲಸ ಮಾಡುತ್ತಿದ್ದರಂತೆ. ತಮ್ಮ ಶಿಷ್ಯನ ಸಿನಿಮಾದ ಹಾಡುಗಳು ಎಲ್ಲರ ಬಾಯಲ್ಲೂ ಗುನುಗುವಂತಾಗಲಿ ಎಂದು ದೇವಿಶ್ರೀ ಪ್ರಸಾದ್ ಕೂಡಾ ಹಾರೈಸಿರುವುದು ವಿಶೇಷ.

’ಈಗಾಗಲೇ ಹಾಡು, ಟೀಸರ್ ಮೂಲಕ ನಮ್ಮ ಸಿನಿಮಾದ ಪರಿಚಯವನ್ನು ಪ್ರೇಕ್ಷಕರ ಮುಂದೆ ಅನಾವರಣ ಮಾಡಿದ್ದೇವೆ. ಎಲ್ಲಾ ಕಡೆಯಿಂದ ರೆಸ್ಪಾನ್ಸ್ ಚೆನ್ನಾಗಿದೆ. ರುದ್ರ ಗರುಡ ಪುರಾಣ ಜನವರಿ ೨೪ಕ್ಕೆ ಬಿಡುಗಡೆಯಾಗಲಿದೆ ನೋಡಿ ಹರಸಿ’ ಎನ್ನುತ್ತಾರೆ ನಿರ್ದೇಶಕ ನಂದೀಶ್.

25 ವರ್ಷದ ಹಿಂದೆ ಬಸ್ಸೊಂದು ಅಪಘಾತವಾಗಿ ಅದರಲ್ಲಿದ್ದ ಎಲ್ಲರೂ ಸಾವನ್ನಪ್ಪಿರುತ್ತಾರೆ ಆದರೆ ಅದೇ ಬಸ್ಸು ಮತ್ತು ಅದರಲ್ಲಿದ್ದ ಜನಗಳು ಮತ್ತೆ ವಾಪಸ್ಸು ಬರುವ ರೋಚಕ ತಿರುವುಗಳನ್ನು ಅನ್ವೇಷಣೆ ಮಾಡುವ ಚಿತ್ರ "ರುದ್ರ ಗರುಡ ಪುರಾಣ". ಸಿನಿಮಾದ ಟೀಸರ್ ಬಿಡುಗಡೆಗೊಂಡಾಗ ಕೆಲವರು ಇದು ತಮಿಳಿನ ಡೈರಿ ಸಿನಿಮಾದ ರಿಮೇಕ್ ಎಂದು ಕೇಳಿದ್ದರು ನಾನು ಆ ಚಿತ್ರ ನೋಡಿರಲಿಲ್ಲ ಆದರೆ ಕುತೂಹಲದಿಂದ ಚೆನ್ನೈನಲ್ಲಿ ಕೆಲಸ ಮಾಡುತ್ತಿರುವ ನಮ್ಮ ಮ್ಯೂಸಿಕ್ ಡೈರೆಕ್ಟರ್ ಕೇಳಿದಾಗ ಅದಕ್ಕೂ ನಮ್ಮ ಸಿನಿಮಾ ಯಾವುದೇ ಸಾಮ್ಯತೆ ಇರುವುದಿಲ್ಲ ಟೀಸರ್ ನಲ್ಲಿ ನಲ್ಲಿ ಬಸ್ ಅಪಘಾತ ಇರುವುದರಿಂದ ಅದಕ್ಕೆ ಹೋಲಿಸಿಕೊಂಡಿದ್ದಾರೆ ಎಂದು ಹೇಳಿದರು ಆದರೂ ನಮಗೆ ಬರುವ ಯೋಚನೆ ಬೇರೆಯವರಿಗೆ ಬರಬಾರದು ಎಂಬುದು ಇಲ್ಲ ಆದ್ದರಿಂದ ಚಿತ್ರ ಹುಡುಕಿ ನೋಡಿದಾಗ ತಮಿಳು ಚಿತ್ರಕ್ಕೂ ನಮಗೂ ಯಾವುದೇ ಚಿಕ್ಕ ಸಂಬಂಧವೂ ಇಲ್ಲ.‌ ಇದೊಂದು ಪಕ್ಕಾ ಕನ್ನಡದ ಸ್ವಮೇಕ್ ಚಿತ್ರ ಎನ್ನುತ್ತಾರೆ ನಿರ್ದೇಶಕ ನಂದೀಶ್.

Tags :