ಜನ್ಮ ಇರೋವರೆಗೂ ಕಾಂಗ್ರೆಸ್‌ಗೆ ಹೋಗಲ್ಲ
ಶಿವಮೊಗ್ಗ: ಬಿಜೆಪಿಯಿಂದ ನನ್ನ ಉಚ್ಚಾಟನೆ ಬಳಿಕ ನನ್ನ ಸ್ಪರ್ಧೆ ಬಗ್ಗೆ ಎಲ್ಲರಿಗೂ ಸ್ಪಷ್ಟನೆ ಸಿಕ್ಕಿದೆ. ಇದಕ್ಕಾಗಿ ವಿಜಯೇಂದ್ರ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಉಚ್ಚಾಟನೆ ತಾತ್ಕಾಲಿಕ. ನನ್ನ ಗೆಲುವು ನಿಶ್ಚಿತ. ಗೆದ್ದ ಮೇಲೆ ಬಿಜೆಪಿ ಸೇರುವುದು ಅಷ್ಟೇ ಸತ್ಯ ಎಂದರು.
ಇದೇ ವಿಜಯೇಂದ್ರ, ರಾಘವೇಂದ್ರ ಅವರು ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯುತ್ತಾರೆ ಎಂದು ಪದೇ ಪದೇ ಹೇಳುತ್ತಾ, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದರು. ಈಗ ಪಕ್ಷದಿಂದ ಉಚ್ಚಾಟನೆ ಆಗಿದೆ. ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ ಎಂಬುದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ ಎಂದರು.
ಜನ್ಮ ಇರೋವರೆಗೂ ಕಾಂಗ್ರೆಸ್‌ಗೆ ಹೋಗಲ್ಲ: ಬಿಜೆಪಿ ನನಗೆ ತಾಯಿ ಇದ್ದಂತೆ. ಯಡಿಯೂರಪ್ಪ ಅವರು ಪಕ್ಷ ಬಿಟ್ಟು ಕೆಜೆಪಿ ಕಟ್ಟಿದರು. ನಾನು ಯಾವತ್ತೂ ಪಕ್ಷ ಬಿಟ್ಟು ಹೋಗುವ ಬಗ್ಗೆ ಕಿಂಚಿತ್ತೂ ಯೋಚಿಸಿಲ್ಲ. ಈಗ ಅಪ್ಪ-ಮಕ್ಕಳ ಷಡ್ಯಂತ್ರದಿಂದ ತಾತ್ಕಾಲಿಕವಾಗಿ ಪಕ್ಷದಿಂದ ಹೊರಗಿದ್ದೇನೆ. ಚುನಾವಣೆ ಬಳಿಕ ಅವರಪ್ಪನೇ ಬಂದು ಕರೀತಾರೆ. ಪಕ್ಷ ಕಟ್ಟಿ ಬೆಳೆಸಿದ ನನ್ನನ್ನು ಬಿಜೆಪಿಯಿಂದ ದೂರ ಮಾಡಲು ಆಗಲ್ಲ. ನನ್ನನ್ನು ಪಕ್ಷದಿಂದ ಹೊರಹಾಕಬೇಕು ಎಂದು ಅಪ್ಪ-ಮಕ್ಕಳು ಬಹಳ ಪ್ರಯತ್ನ ಮಾಡಿದ್ದರು. ಈಗ ಅವರಿಗೆ ಸಮಾಧಾನವಾಗಿದೆ. ಆದರೆ, ನನ್ನ ಜನ್ಮ ಇರೋವರೆಗೂ ಕಾಂಗ್ರೆಸ್‌ಗೆ ಹೋಗಲ್ಲ ಎಂದರು.