For the best experience, open
https://m.samyuktakarnataka.in
on your mobile browser.

ಜಯಲಲಿತಾ ಆಭರಣ ಹಸ್ತಾಂತರ

07:00 AM Feb 20, 2024 IST | Samyukta Karnataka
ಜಯಲಲಿತಾ ಆಭರಣ ಹಸ್ತಾಂತರ

ಬೆಂಗಳೂರು: ನಗರದ ವಿಶೇಷ ನ್ಯಾಯಾಲಯದ ಸುಪರ್ದಿಯಲ್ಲಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರಿಗೆ ಸೇರಿದ್ದ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ನಗರದ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಲಯ ದಿನಾಂಕ ನಿಗದಿಪಡಿಸಿದೆ.
ಆರ್‌ಟಿಐ ಕಾರ್ಯಕರ್ತ ಟಿ. ನರಸಿಂಹಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ೩೬ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು, ೨೦೨೪ರ ಮಾರ್ಚ್ ೬ ಮತ್ತು ೭ರ ದಿನಾಂಕ ನಿಗದಿಪಡಿಸಿದ್ದು, ಆ ಎರಡು ದಿನಗಳಂದು ಇತರ ಪ್ರಕರಣಗಳ ವಿಚಾರಣೆ ನಡೆಸದಿರಲು ನಿರ್ಧರಿಸಿದ್ದಾರೆ.
ಅಲ್ಲದೆ, ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲು ಅಧಿಕೃತ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿದ್ದಾರೆ. ತಮಿಳುನಾಡು ಸರಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ತಮಿಳುನಾಡು ಐಜಿಪಿ ಅವರೊಂದಿಗೆ ಬರಬೇಕು. ಈ ವೇಳೆ ಛಾಯಾಗ್ರಾಹಕರು, ವಿಡಿಯೋಗ್ರಾಫರ್ ಮತ್ತು ಆರು ದೊಡ್ಡ ಪೆಟ್ಟಿಗೆ (ಟ್ರಂಕ್) ಜತೆಗೆ ಸೂಕ್ತ ಭದ್ರತೆಯೊಂದಿಗೆ ಬಂದು ಚಿನ್ನಾಭರಣಗಳನ್ನು ಪಡೆದುಕೊಳ್ಳಬೇಕು. ಈ ಅಂಶವನ್ನು ತಮಿಳುನಾಡು ಡಿವೈಎಸ್‌ಪಿ ಅವರು ತಮಿಳುನಾಡು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತರಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಎರಡು ದಿನಗಳ ಕಾಲ ಅಗತ್ಯವಿರುವ ಭದ್ರತೆಯನ್ನು ಸ್ಥಳೀಯ ಪೊಲೀಸರಿಂದ ಕಲ್ಪಿಸಲು ನ್ಯಾಯಾಲಯದ ರಿಜಿಸ್ಟಾರ್ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ೨೦೨೪ರ ಮಾರ್ಚ್ ೬ಕ್ಕೆ ಮುಂದೂಡಲಾಗಿದೆ.

ಏನೆಲ್ಲಾ ವಸ್ತುಗಳಿವೆ?
೭,೦೪೦ ಗ್ರಾಂ ತೂಕದ ೪೬೮ ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, ೭೦೦ ಕೆ.ಜಿ. ತೂಕದ ಬೆಳ್ಳಿ ಆಭರಣಗಳು, ೭೪೦ ದುಬಾರಿ ಚಪ್ಪಲಿಗಳು, ೧೧,೩೪೪ ರೇಷ್ಮೆ ಸೀರೆಗಳು, ೨೫೦ ಶಾಲು, ೧೨ ರೆಫ್ರಿಜಿರೇಟರ್, ೧೦ ಟಿ.ವಿ. ಸೆಟ್, ೮ ವಿಸಿಆರ್, ೧ ವಿಡಿಯೋ ಕ್ಯಾಮರಾ, ೪ ಸಿಡಿ ಪ್ಲೇಯರ್, ೨ ಆಡಿಯೋ ಡೆಕ್, ೨೪ ಟೂ-ಇನ್ ಒನ್ ಟೇಪ್ ರೆಕಾರ್ಡರ್, ೧೦೪೦ ವಿಡಿಯೋ ಕ್ಯಾಸೆಟ, ೩ ಐರನ್ ಲಾಕರ್, ೧,೯೩,೨೦೨ ರೂ. ನಗದು ಹಾಗೂ ವಸ್ತುಗಳನ್ನು ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿತ್ತು.
ಪ್ರಕರಣದ ಹಿನ್ನೆಲೆ: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರಿನ ವಿಶೇಷ ನ್ಯಾಯಾಲಯವು ಜಯಲಲಿತಾಗೆ ನಾಲ್ಕು ವರ್ಷ ಜೈಲು ಮತ್ತು ೧೦೦ ಕೋಟಿ ರು. ದಂಡ ವಿಧಿಸಿ ೨೦೧೪ರ ಸೆ.೨೭ರಂದು ಆದೇಶಿಸಿತ್ತು. ಜತೆಗೆ, ಜಪ್ತಿ ಮಾಡಲಾದ ಜಯಲಲಿತಾ ಅವರ ಬೆಲೆಬಾಳುವ ವಸ್ತುಗಳನ್ನು ಆರ್‌ಬಿಐ, ಎಸ್‌ಬಿಐಗೆ ಅಥವಾ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಬೇಕು. ಅದರಿಂದ ಬಂದ ಹಣವನ್ನು ದಂಡದ ಮೊತ್ತಕ್ಕೆ ಹೊಂದಾಣಿಕೆ ಮಾಡಬೇಕು ಎಂದು ನಿರ್ದೇಶಿಸಿತ್ತು. ಈ ನಡುವೆ ಜೆ. ಜಯಲಿತಾ ಅವರು ಮೃತಪಟ್ಟಿದ್ದರು.