For the best experience, open
https://m.samyuktakarnataka.in
on your mobile browser.

ಜಲ ಭದ್ರತೆಗೆ RDPR ಇಲಾಖೆ ಕಟಿಬದ್ಧ

12:59 PM Nov 06, 2024 IST | Samyukta Karnataka
ಜಲ ಭದ್ರತೆಗೆ rdpr ಇಲಾಖೆ ಕಟಿಬದ್ಧ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಿನ ಭದ್ರತೆ ಸುಸ್ಥಿರತೆ ಕಾಯ್ದುಕೊಳ್ಳಲು RDPR ಇಲಾಖೆ ಕಟಿಬದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು “ನಿಸರ್ಗೋ ರಕ್ಷತಿ ರಕ್ಷಿತಃ“ ಇದು ನಾವೆಲ್ಲರೂ ಅರಿಯಲೇಬೇಕಾದ ಅತ್ಯಗತ್ಯದ ಸಂಗತಿ.
ಸಕಲ ಜೀವಿಗಳಿಗೂ ನೀರು ಅತ್ಯಂತ ಅಗತ್ಯವಾಗಿದೆ, ಕರ್ನಾಟಕವು ನೆರೆ ಹಾಗೂ ಬರ ಪರಿಸ್ಥಿತಿಗಳನ್ನು ಎದುರಿಸಿದೆ, ನೀರಿನ ಮೂಲಗಳನ್ನು ಸುಸ್ಥಿರವಾಗಿಟ್ಟುಕೊಂಡರೆ ನಾವು ಬರ ಎದುರಿಸಲು ಅನುಕೂಲವಾಗುತ್ತದೆ,
ಭವಿಷ್ಯದ ಹಿತದೃಷ್ಠಿಯಿಂದ ರಾಜ್ಯದ ಜಲಮೂಲಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.

ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಬಗೆಯ ಜಲಮೂಲಗಳ ಅತಿಕ್ರಮಣವನ್ನು ತೆರವುಗೊಳಿಸಿ ನೀರಿನ ಭದ್ರತೆಯನ್ನು, ಸುಸ್ಥಿರತೆಯನ್ನು ಕಾಯ್ದುಕೊಳ್ಳಲು RDPR ಇಲಾಖೆ ಕಟಿಬದ್ಧವಾಗಿದೆ.

ಈ ನಿಟ್ಟಿನಲ್ಲಿ ಕೆಲವು ಕಾರ್ಯಸೂಚಿಗಳನ್ನು ರೂಪಿಸಿ RDPR ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳು ಜಲಮೂಲ ಸಂರಕ್ಷಣೆಯಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡಬೇಕು.

  • ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಜಲಮೂಲಗಳ ಸಮೀಕ್ಷೆಯನ್ನು ನಡೆಸಿ ಅತಿಕ್ರಮಣಗಳನ್ನು ಗುರುತಿಸಿ ವರದಿ ಸಲ್ಲಿಸಬೇಕು.
  • ಅತಿಕ್ರಮಣಗಳನ್ನು ಗುರುತಿಸಿದ ಕೂಡಲೇ ತೆರವೊಗೊಳಿಸಲು ಕ್ರಮ ಕೈಗೊಳ್ಳಬೇಕು, ಈ ಕಾರ್ಯಚರಣೆಗಾಗಿ ಸಂಬಂಧಿಸಿದ ಎಲ್ಲಾ ಸ್ಥಳೀಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ತೆರವು ಕಾರ್ಯಚರಣೆಯನ್ನು ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು.
  • ಗುರುತಿಸಿದ ಅತಿಕ್ರಮಣಗಳ ತೆರವು ಕಾರ್ಯವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಿ ಅನುಪಾಲನಾ ವರದಿಯನ್ನು ಪಡೆದುಕೊಳ್ಳಬೇಕು.
  • ಅತಿಕ್ರಮಣಗಳ ತೆರವು ಪ್ರಕ್ರಿಯೆಯ ಪ್ರಗತಿಯನ್ನು ತಿಂಗಳಿಗೊಮ್ಮೆ ಮೇಲ್ವಿಚಾರಣೆ ನಡೆಸಿ ತೆರವು ಕಾರ್ಯಚರಣೆ ಕೈಗೊಳ್ಳುವಲ್ಲಿ ಏನಾದರೂ ಸವಾಲುಗಳು ಇದ್ದಲ್ಲಿ, ಅವುಗಳನ್ನು ಸಕ್ಷಮ ಪ್ರಾಧಿಕಾರದ ಗಮನಕ್ಕೆ ತಂದು ಮುಂದಿನ ಕ್ರಮವಹಿಸಬೇಕು.

ಪರಿಣಾಮಕಾರಿಯಾಗಿ, ಪ್ರಾಮಾಣಿಕವಾಗಿ ಈ ಅಂಶಗಳನ್ನು ಪಾಲನೆ ಮಾಡಿದಲ್ಲಿ ಜೀವಜಲಕ್ಕೆ ಭದ್ರತೆ ಒದಗಿಸಬಹುದು. ನಮ್ಮ ಭವಿಷ್ಯವನ್ನು ಕಾಪಾಡಿಕೊಳ್ಳಬಹುದು ಎಂದಿದ್ದಾರೆ.

Tags :