ಜಲ ವಿದ್ಯುತ್ ಉತ್ಪಾದನೆ ಕರ್ನಾಟಕವೇ ಮೊದಲು
ಕರ್ನಾಟಕ ಎಲ್ಲ ರಾಜ್ಯಗಳಂತೆ ಅರ್ಥಿಕವಾಗಿ ಹಿಂದುಳಿದಿಲ್ಲ. ಆರ್ಥಿಕ ಬೆಳವಣಿಗೆಯಲ್ಲಿ ದೇಶದ ಸರಾಸರಿಗಿಂತ ಹೆಚ್ಚಿನ ಪ್ರಮಾಣ ಸಾಧಿಸಿದೆ. ಅದರಲ್ಲೂ ವಿದ್ಯುತ್ ಉತ್ಪಾದನೆಯಲ್ಲಿ ನಮ್ಮ ರಾಜ್ಯಕ್ಕೆ ದೊಡ್ಡ ಇತಿಹಾಸವಿದೆ. ಏಷ್ಯಾದ ಮೊದಲ ಜಲ ವಿದ್ಯುತ್ ಆರಂಭಿಸಿದ್ದೇ ನಾವು. ಮೈಸೂರು ಅರಸರ ಕಾಲದಲ್ಲಿ ಕೆ. ಶೇಷಾದ್ರಿ ಅಯ್ಯರ್ ದಿವಾನರಾಗಿ ಕಾವೇರಿ ನದಿಯನ್ನು ಬಳಸಿಕೊಂಡು ಜಲ ವಿದ್ಯುತ್ ಯೋಜನೆ ಕೈಗೊಳ್ಳಲು ತೀರ್ಮಾನಿಸಿದರು. ೧೮೯೦ರಲ್ಲಿ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಜಲ ವಿದ್ಯುತ್ ಆರಂಭವಾಗಿತ್ತು. ಅದನ್ನು ತಿಳಿದುಕೊಂಡಿದ್ದ ಮೈಸೂರು ಅರಸರು ೧೮೯೯ರಲ್ಲಿ ಲಾಬನೀರ್ ಎಂಬ ಎಂಜಿನಿಯರ್ ಅವರನ್ನು ನಯಾಗರ ಹಾಗೂ ಇತರ ಜಲ ವಿದ್ಯುತ್ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಿ ಬರಲು ವಿದೇಶಗಳಿಗೆ ಕಳುಹಿಸಿ ಕೊಟ್ಟರು. ಅದರ ಫಲವಾಗಿ ೧೯೦೦ರಲ್ಲಿ ಗಗನಚುಕ್ಕಿ ಜಲಪಾತದ ಬಳಿ ಶಿವನಸಮುದ್ರ ಜಲ ವಿದ್ಯುತ್ ಯೋಜನೆ ಕೈಗೊಳ್ಳಲು ಗುದ್ದಲಿಪೂಜೆ ನಡೆಯಿತು. ಅಮೆರಿಕ ಜಿ.ಇ, ಕಂಪನಿ ಜನರೇಟರ್‌ಗಳನ್ನು ಕಳುಹಿಸಿಕೊಟ್ಟಿತು. ಗೋವಾವರೆಗೆ ಹಡಗಿನಲ್ಲಿ ಬಂದ ಯಂತ್ರ ಅಲ್ಲಿಂದ ರೈಲಿನಲ್ಲಿ ಮದ್ದೂರಿಗೆ ಬಂದಿತು. ಅಲ್ಲಿಂದ ಎತ್ತಿನಗಾಡಿ, ಕುದುರೆಗಳನ್ನು ಬಳಸಿ ಪ್ರಯಾಸದಿಂದ ಯಂತ್ರಗಳನ್ನು ರಸ್ತೆಗಳ ಮೂಲಕ ರವಾನಿಸಲಾಯಿತು. ಈ ರೀತಿ ನಿರ್ಮಿಸಿದ ಜಲ ವಿದ್ಯುತ್ ಕೇಂದ್ರ ಈಗಲೂ ಕಾರ್ಯ ನಿರ್ವಹಿಸುತ್ತಿದೆ. ಕಲ್ಲಿದ್ದಲು, ನೀರು, ಗಾಳಿ, ಸೂರ್ಯ, ಅಣು ವಿದ್ಯುತ್‌ಗಳಲ್ಲಿ ಜಲ ವಿದ್ಯುತ್ ಎಲ್ಲ ವಿಧಾನಗಳಿಗಿಂತ ಉತ್ತಮ. ಇದರಲ್ಲಿ ಹೆಚ್ಚು ವಿದ್ಯುತ್ ಪಡೆಯಬಹುದು. ಅದರೊಂದಿಗೆ ಪರಿಸರ ರಕ್ಷಣೆಗೂ ಆದ್ಯತೆ ನೀಡುವುದು ಅಗತ್ಯ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಗಾಲಾಮ್ಲದ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದರೆ ನವೀಕರಣ ಇಂಧನ ಬಳಸಬೇಕು. ಇದರಿಂದ ವಿದ್ಯುತ್ ಉತ್ಪಾದನೆ ದರ ಅಧಿಕಗೊಳ್ಳುವುದು ಸಹಜ. ಆದರೆ ಪರಿಸರ ಮೇಲಾಗುವ ಪರಿಣಾಮವನ್ನು ತಪ್ಪಿಸಬಹುದು. ನಮಗೆ ವಿದ್ಯುತ್ ಬೇಕು. ಅದರೊಂದಿಗೆ ನಮ್ಮ ಪರಿಸರದ ಮೇಲೆ ಯಾವುದೇ ರೀತಿಯಲ್ಲೂ ಧಕ್ಕೆ ಒದಗಬಾರದು. ಈಗ ಇದನ್ನು ಸಾಧಿಸಲು ಹಸಿರು ಜಲಜನಕ ಲಭಿಸಿದೆ. ಈಗ ಪ್ರತಿವರ್ಷ ಜಗತ್ತಿನಲ್ಲಿ ೭೦ ಮಿಲಿಯನ್ ಮೆಟ್ರಿಕ್ ಟನ್ ಜಲಜನಕ ಬಳಕೆಯಾಗುತ್ತಿದೆ. ಇದನ್ನು ಪ್ರಮುಖವಾಗಿ ತೈಲ ಸಂಸ್ಕರಣ, ಅಮೋನಿಯಾ ತಯಾರಿಕೆ, ಉಕ್ಕು ಉತ್ಪಾದನೆ, ರಸಗೊಬ್ಬರ ಮತ್ತು ಆಹಾರ ಸಂಸ್ಕರಣ, ಖನಿಜ ಉತ್ಪಾದನೆಗೆ ವಿದ್ಯುತ್ ಮೂಲವಾಗಿ ಬಳಸಬಹುದು. ಪ್ರತಿ ಅಣುವಿನಲ್ಲೂ ಶೇಕಡ ೯೦ರಷ್ಟು ಜಲಜನಕ ಇದ್ದೇ ಇರುತ್ತದೆ. ನೀರನ್ನು ವಿಭಜಿಸಿ ಜಲ ಜನಕ ಪಡೆಯುವುದು ಈಗ ಅನುಸರಿಸುತ್ತಿರುವ ಪದ್ಧತಿ. ಹಬೆ-ಮಿಥೇನ್ ಸಂಸ್ಕರಣದಿಂದ ವಿದ್ಯುತ್ ಪಡೆಯಬಹುದು. ಜಲಜನಕದೊಂದಿಗೆ ಕಾರ್ಬನ್ ಮಾನಾಕ್ಸೆಡ್, ಇಂಗಲಾಮ್ಲವೂ ಲಭಿಸುತ್ತದೆ. ಜಲಜನಕವನ್ನು ಇವುಗಳಿಂದ ಬೇರ್ಪಡಿಸಿದರೆ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ. ಕಲ್ಲಿದ್ದಲು ಬಳಸಿ ಜಲಜನಕ ಉತ್ಪಾದಿಸಬಹುದು. ಆದರೆ ಇದು ಶುದ್ಧ ರೂಪವಾಗಿರುವುದಿಲ್ಲ. ಪ್ರತಿವರ್ಷ ೮೩೦ ಮಿಲಿಯ ಟನ್ ಇಂಗಾಲಾಮ್ಲ ಹೊರ ಬರುತ್ತದೆ. ಇದರಿಂದ ಪರಿಸರ ಮಾಲಿನ್ಯ ಅಧಿಕಗೊಳ್ಳುತ್ತದೆ. ೪೦ ಮೆಗಾವ್ಯಾಟ್ ವಿದ್ಯುತ್ ಬಳಸಿ ೯.೧ ಟನ್ ನೀರನ್ನು ವಿಭಜಿಸಿದರೆ ೮ ಟನ್ ಆಮ್ಲಜನಕ ಮತ್ತು ೧.೧ ಟನ್ ಜಲಜನಕ ಬರುತ್ತದೆ. ಕಲ್ಲಿದ್ದಲಿಗಿಂತ ಜಲಜನಕ ೩ ಪಟ್ಟು ಹೆಚ್ಚು ವಿದ್ಯುತ್ ನೀಡುತ್ತದೆ. ಜಲಜನಕ ವಾಹನಗಳೂ ಬಂದಿದೆ. ಅಲ್ಲದೆ ಈಗ ಬಂದಿರುವ ಬ್ಯಾಟರಿ ಆಧರಿತ ವಾಹನಗಳನ್ನು ಜಲಜನಕದ ಬಳಸಿ ವಿದ್ಯುತ್ ಪಡೆದು ರಿಚಾರ್ಜ್ ಮಾಡಬಹುದು.
ಸೋಲಾರ್, ಪವನ ವಿದ್ಯುತ್ ಇದ್ದಂತೆ ಜಲ ವಿದ್ಯುತ್ ಕೂಡ ಪರಿಸರ ಸ್ನೇಹಿ ಎಂಬುದನ್ನು ವಿಜ್ಞಾನಿಗಳು ಹೇಳುತ್ತಿದ್ದಾರೆ. ಹಿಂದೆ ಜಲ ವಿದ್ಯುತ್ ಯೋಜನೆ ಕೈಗೊಂಡಲ್ಲಿ ಮುಳುಗಡೆ ಪ್ರದೇಶ ಅಧಿಕವಾಗಿರುತ್ತಿತ್ತು. ಕೆಲವು ಬಾರಿ ಗ್ರಾಮಗಳನ್ನೇ ಸ್ಥಳಾಂತರಿಸಬೇಕಿತ್ತು. ಈಗ ತಂತ್ರಜ್ಞಾನ ಬದಲಾಗಿದೆ. ನದಿ ಹರಿಯುವ ಸ್ಥಳದಲ್ಲೇ ಸಣ್ಣ ಬ್ಯಾರೇಜ್ ನಿರ್ಮಿಸಿ ಪ್ರವಾಹದ ಕಾಲದಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಮಾಡುವ ಮಿನಿ ಜಲ ವಿದ್ಯುತ್ ಯೋಜನೆಗಳು ತಲೆಎತ್ತುತ್ತಿವೆ. ಚೀನಾ ಕೂಡ ಇದಕ್ಕೆ ಮಹತ್ವ ನೀಡಿದೆ.ಕೆನಡ, ಉರುಗ್ವೆ, ಇಂಡೋನೇಷ್ಯಾ, ನೇಪಾಳ ಜಲ ವಿದ್ಯುತ್ ಕೇಂದ್ರಗಳನ್ನು ಹೊಂದಿವೆ. ನಾರ್ವೆಯಂತೂ ಅತಿ ಹೆಚ್ಚು ಜಲ ವಿದ್ಯುತ್ ಹೊಂದಿರುವ ದೇಶವಾಗಿದೆ. ಜಗತ್ತಿನ ಶೇಕಡ ೧೪ ರಷ್ಟು ಜನರಿಗೆ ಇನ್ನೂ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿಲ್ಲ. ೨೦೩೦ಕ್ಕೆ ಸುಸ್ಥಿರ ವಿದ್ಯುತ್ ವ್ಯವಸ್ಥೆ ಹೊಂದಲು ತೀರ್ಮಾನಿಸಲಾಗಿದೆ. ೨ ಸಾವಿರ ವರ್ಷಗಳ ಹಿಂದೆ ಗ್ರೀಸ್‌ನಲ್ಲಿ ನೀರಿನಿಂದ ಚಕ್ರ ತಿರುಗುವಂತೆ ಮಾಡಿ ಆಹಾರ ಧಾನ್ಯಗಳ ಹಿಟ್ಟು ತಯಾರಿಸುವ ಪದ್ಧತಿ ಇತ್ತು. ಜಲ ವಿದ್ಯುತ್ ತಂತ್ರಜ್ಞಾನ ಅತ್ಯಂತ ಹಳೆಯದು. ಅದರಲ್ಲಿ ಹೆಚ್ಚು ಬದಲಾವಣೆ ಏನೂ ಆಗಿಲ್ಲ. ಜಲ ವಿದ್ಯುತ್ ಯೋಜನೆಗೆ ವಿಶೇಷ ಎಂದರೆ ಯಾವಾಗ ಬೇಕಾದರೂ ವಿದ್ಯುತ್ ಉತ್ಪಾದಿಸಬಹುದು. ಜಲಾಶಯದಲ್ಲಿ ನೀರಿನ ಸಂಗ್ರಹ ಇರಬೇಕು. ಇಡೀ ವರ್ಷ ವಿದ್ಯುತ್ ಸಿಗುವಂತೆ ಜಲ ವಿದ್ಯುತ್ ನಿರ್ವಹಣೆ ಮಾಡಬಹುದು.
ಇಸ್ರೋ ಸಾಧನೆ
ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಭಾರತ ಮತ್ತು ಕರ್ನಾಟಕದ ಹೆಮ್ಮೆಯ ಆಧುನಿಕ ದೇವಾಲಯ. ವಿಕ್ರಂ ಸಾರಾಬಾಯ್ ಆರಂಭಿಸಿದ ಈ ಸಂಸ್ಥೆಯನ್ನು ಪ್ರೊ. ಯು.ಆರ್. ರಾವ್, ಸತೀಶ್ ಧವನ್, ಅಬ್ದುಲ್ ಕಲಾಂ, ರಾಧಾಕೃಷ್ಣ, ಕಸ್ತೂರಿರಂಗನ್, ಮಾಧವನ್ ನಾಯರ್ ಸೇರಿದಂತೆ ಹಲವು ವಿಜ್ಞಾನಿಗಳು ಭದ್ರ ಬುನಾದಿ ಹಾಕಿ ಹೋಗಿದ್ದಾರೆ. ಅದರಿಂದ ಸಂಸ್ಥೆ ಎಂದೂ ಹಿನ್ನಡೆ ಸಾಧಿಸುವುದಿಲ್ಲ. ಸಾಮಾನ್ಯವಾಗಿ ಎಲ್ಲ ಇಲಾಖೆಗಳ ಪ್ರಧಾನ ಕಚೇರಿ ದೆಹಲಿಯಲ್ಲಿರುತ್ತದೆ. ಇಸ್ರೋ ಕೇಂದ್ರ ಸರ್ಕಾರಕ್ಕೆ ಸೇರಿದ್ದರೂ ಅದರ ಪ್ರಧಾನ ಕಚೇರಿ ಬೆಂಗಳೂರು ಆಗಿರುವುದು ವಿಶೇಷ. ದಕ್ಷಿಣ ಭಾರತದಲ್ಲೇ ಈ ಸಂಸ್ಥೆಯ ಚಟುವಟಿಕೆ ಕೇಂದ್ರೀಕೃತಗೊಂಡಿದೆ. ಚಂದ್ರಯಾನ, ಮಂಗಳಯಾನ ಕೈಗೊಂಡ ಸಂಸ್ಥೆಗೆ ಚಿಕ್ಕ ಉಪಗ್ರಹ ಉಡಾವಣೆ ಕಷ್ಟದ ಕೆಲಸವೇನಲ್ಲ. ದೇಶದಲ್ಲಿ ದೂರ ಸಂಪರ್ಕ, ಶಿಕ್ಷಣ, ಕೃಷಿ, ವೈದ್ಯಕೀಯ,ಜೀವ ವೈವಿಧ್ಯ ಅಧ್ಯಯನಕ್ಕೆ ಉಪಗ್ರಹಗಳನ್ನು ನೀಡಲಾಗಿದೆ. ಗಡಿ ಭಾಗದಲ್ಲಿ ನಡೆಯುವ ಚಲನವಲನದ ಕಣ್ಣಿಡಲು ಈಗ ಮಿಲಿಟರಿಗೆ ಉಪಗ್ರಹದ ನೆರವು ಇದೆ. ಗಡಿ ಭಾಗದಲ್ಲಿ ಒಂದು ಸಣ್ಣ ಹುಲುಕಡ್ಡಿ ಅಲುಗಾಡಿದರೂ ಗುರುತಿಸುವಷ್ಟು ಅತಿ ಸೂಕ್ಷ್ಮ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ನಮ್ಮ ವಿಜ್ಞಾನಿಗಳು ಸಾಧಿಸಿರುವ ಪ್ರಗತಿ ಬೇರೆ ಯಾವ ದೇಶದಲ್ಲೂ ಇಲ್ಲ ಎಂಬುದು ಹೆಮ್ಮೆಯ ಸಂಗತಿ. ನಮ್ಮ ಆರ್ಥಿಕ ಸ್ಥಿತಿ ನೋಡಿಕೊಂಡು ಸಂಶೋಧನೆಗಳನ್ನು ನಡೆಸಬೇಕು. ಆದರೆ ನಮ್ಮ ವಿಜ್ಞಾನಿಗಳ ಬುದ್ಧಿಮತ್ತೆ ಬೇರೆ ಯಾವ ದೇಶದ ವಿಜ್ಞಾನಿಯ ಪ್ರತಿಭೆಗೆ ಕಡಿಮೆ ಇಲ್ಲ. ಅಮೆರಿಕ. ರಷ್ಯಾ, ಕೆನಡಾ ಮತ್ತು ಚೀನಾಗಿಂತ ಕಡಿಮೆ ದರದಲ್ಲಿ ನಾವು ಉಪಗ್ರಹ ಉಡಾವಣೆ ಮಾಡುವುದರಿಂದ ಎಲ್ಲ ಚಿಕ್ಕ ಚಿಕ್ಕ ದೇಶಗಳೂ ತಮ್ಮದೇ ಉಪಗ್ರಹ ಉಡಾವಣೆಗೆ ನಮ್ಮ ಬಳಿ ಬರುವುದು ಸಹಜ.
ಉಪಗ್ರಹವನ್ನು ಶಾಂತಿಗೆ ಬಳಸುವ ಹಾಗೆ ಗಡಿ ರಕ್ಷಣೆಗೂ ಬಳಸಬಹುದು. ಸೈಬರ್ ದಾಳಿ ಈಗ ಅಧಿಕಗೊಂಡಿದೆ. ಅದನ್ನೂ ನಿಯಂತ್ರಿಸುವ ತಂತ್ರಜ್ಞಾನವನ್ನು ನಮ್ಮ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಮುಂಬರುವ ದಿನಗಳಲ್ಲಿ ಜ್ಞಾನಾಧರಿತ ತಂತ್ರಜ್ಞಾನಕ್ಕೆ ಮಹತ್ವ ಬರಲಿದೆ. ಆಗ ಇಸ್ರೋ, ಭಾರತೀಯ ವಿಜ್ಞಾನ ಮಂದಿರಗಳು ದೇಶದ ದೊಡ್ಡ ಆಸ್ತಿಯಾಗಲಿದೆ. ಮುಂದಿನ ಪೀಳಿಗೆ ಇದರಲ್ಲಿ ಸಂಪೂರ್ಣ ಏಕಸ್ವಾಮ್ಯತೆ ಸಾಧಿಸಿಲು ಬೇಕಾದ ವಾತಾವರಣ ರೂಪಿಸುವುದು ಅಗತ್ಯ. ಬಾಹ್ಯಾಕಾಶ ಸಂಶೋಧನೆ ಸಾಗರದ ಅಂತರಾಳದಲ್ಲಿರುವ ಸಂಪತ್ತನ್ನೂ ಕಂಡು ಹಿಡಿಯಬಲ್ಲ ತಂತ್ರಜ್ಞಾನವನ್ನು ಹೊಂದಿದೆ ಎಂಬುದು ಆಶ್ಚರ್ಯಕರವಾಗಿ ಕಂಡರೂ ನಿಜ. ಪರಿಸರದಲ್ಲಾಗುತ್ತಿರುವ ಎಲ್ಲ ಬದಲಾವಣೆಗಳನ್ನು ಉಪಗ್ರಹ ಸೂಕ್ಷ್ಮವಾಗಿ ಗಮನಿಸಿ ಎಚ್ಚರಿಸುವ ಕೆಲಸ ಮಾಡಲಿದೆ.
ಕರ್ನಾಟಕ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಹತ್ವಪೂರ್ಣ ಕಾರ್ಯಕ್ರಮ ಕೈಗೊಳ್ಳಲಿದೆ. ಅದಕ್ಕಾಗಿ ಯುವ ಪೀಳಿಗೆಯನ್ನು ಸಿದ್ಧಪಡಿಸಲು ಸೂಕ್ತ ಶಿಕ್ಷಣ ಸಂಸ್ಥೆಗಳನ್ನು ರೂಪಿಸಲಾಗುತ್ತಿದೆ. ಇದರಲ್ಲಿ ಖಾಸಗಿ ಕ್ಷೇತ್ರದ ಕೊಡುಗೆ ಅಪಾರ. ಸಮಾಜ ಎಲ್ಲ ರಂಗದಲ್ಲಿ ಮುನ್ನಡೆಯಬೇಕು ಎಂದರೆ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಕೈಜೋಡಿಸಬೇಕು. ಕರ್ನಾಟಕ ಮತ್ತು ಭಾರತ ಮಾತೆ ಎಂದೂ ಬಂಜೆಯಲ್ಲ.