ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಜಾತಿ ಗಣತಿ ವರದಿ ಮಂಡನೆಗೆ ಸಿಎಂ ಸಿದ್ಧತೆ

02:57 AM Jan 15, 2025 IST | Samyukta Karnataka

ಬೆಂಗಳೂರು: ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿರುವ, ಒಕ್ಕಲಿಗರು, ಲಿಂಗಾಯತ ಸಮುದಾಯದ ವಿರೋಧದ ನಡುವೆಯೂ ಜಾತಿ ಗಣತಿ (ಕರ್ನಾಟಕ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಬೇಕಾದ ಟಿಪ್ಪಣಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಿಗಿ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ಕೊಟ್ಟಿದ್ದಾರೆ. ಮುಂದಿನ ಸಚಿವ ಸಂಪುಟದಲ್ಲಿ ವರದಿ ಮಂಡನೆಯಾಗಲಿದೆ. ಪ್ರತಿಯೊಂದು ಸಂಪುಟವು ವಿವಿಧ ಜಾತಿಗಳ ಗುಂಪಿನ ಡೇಟಾವನ್ನು ಹೊಂದಿದೆ. ವರದಿಯು ವಿಧಾನಸಭಾ ಕ್ಷೇತ್ರಗಳ ಆಧಾರದ ಮೇಲೆ ಜಾತಿ ಅಂಕಿ ಅಂಶಗಳನ್ನು ಒಳಗೊಂಡಿದೆ. ಜೊತೆಗೆ ಹಿಂದಿನ ವರದಿಗಳಲ್ಲಿ ಸೇರಿಸದ ಸಣ್ಣ ಜನಸಂಖ್ಯೆಯನ್ನು ಹೊಂದಿರುವ ಜಾತಿಗಳ ವಿವರಗಳನ್ನು ಒಳಗೊಂಡಿದೆ. ಒಟ್ಟು ೧,೩೫೧ ವಿವಿಧ ಜಾತಿಗಳ ಮೇಲೆ ಸಮೀಕ್ಷೆ ನಡೆಸಲಾಗಿದೆ.

೧೩೫೧ ಜಾತಿಗಳ ಸಮೀಕ್ಷೆ
ರಾಜ್ಯದ ೬ ಕೋಟಿ ಕನ್ನಡಿಗರಲ್ಲಿ ೫.೯೮ ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಲಾಗಿದೆ. ಅಂಕಿ ಅಂಶಗಳ ಪ್ರಕಾರ ಒಟ್ಟು ೧,೩೫೧ ವಿವಿಧ ಜಾತಿಗಳ ಮೇಲೆ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ೮೧೬ ಇತರ ಹಿಂದುಳಿದ ಜಾತಿಗಳನ್ನು ಗುರುತಿಸಲಾಗಿದೆ. ಹೊಸದಾಗಿ ೧೯೨ ಜಾತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಸುಮಾರು ೩೦ ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶೇ. ೬೦ರಷ್ಟು ಅಹಿಂದ ವರ್ಗ
ಈ ವರದಿಯ ಅನ್ವಯ ಕರ್ನಾಟಕದಲ್ಲಿ ದಲಿತ ಹಾಗೂ ಹಿಂದುಳಿದ ವರ್ಗ (ಅಹಿಂದ)ವು ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.೬೦ರಷ್ಟು ಇದೆ. ಅಂದರೆ ೧.೦೮ ಕೋಟಿ. ಎರಡನೇ ಸ್ಥಾನದಲ್ಲಿ ಮುಸ್ಲಿಂ ಸಮುದಾಯ ಇದೆ. ಅಂದರೆ ಮುಸ್ಲಿಮರು ೭೦ ಲಕ್ಷ ಜನರಿದ್ದಾರೆ. ಇನ್ನು ಲಿಂಗಾಯತರು ೬೫ ಲಕ್ಷ ಮತ್ತು ಒಕ್ಕಲಿಗ ಸಮುದಾಯ ೬೦ ಲಕ್ಷವಿದ್ದು, ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಹೀಗಾಗಿ ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ಹೋಲಿಸಿದರೆ ಅಲ್ಪಸಂಖ್ಯಾತ ಸಮುದಾಯವೇ ಬಹುಸಂಖ್ಯಾತರಾಗಿದ್ದಾರೆ. ಸಮೀಕ್ಷೆ ಪ್ರಕಾರ ೩.೯೮ ಕೋಟಿಗೂ ಹೆಚ್ಚು ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಗುಂಪಿನವರು, ೧.೮೭ ಕೋಟಿ ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು ಮತ್ತು ಇತರ ಜಾತಿಗಳು ಇದರಲ್ಲಿ ಇವೆ. ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಕೋಟಾವನ್ನು ಹೆಚ್ಚಿಸಲು ಸಮಿತಿಯು ಶಿಫಾರಸು ಮಾಡಿದೆ.

ಕಾಂಗ್ರೆಸ್‌ನಲ್ಲೇ ವಿರೋಧ
ರಾಜ್ಯದಾದ್ಯಂತ ೧ ಲಕ್ಷ ೬೦ ಸಾವಿರ ಸರ್ಕಾರಿ ನೌಕರರು ೧ ಕೋಟಿ ೩೦ ಲಕ್ಷ ಕುಟುಂಬಗಳನ್ನ ಭೇಟಿ ಮಾಡಿ, ದತ್ತಾಂಶವನ್ನು ಸಂಗ್ರಹಿಸಿದ್ದಾರೆ. ಇದಕ್ಕೆ ಸುಮಾರು ೧೬೯ ಕೋಟಿ ಖರ್ಚಾಗಿದೆ. ಆದರೆ, ಇದು ಮನೆಯಲ್ಲೇ ಕೂತು ಮಾಡಿದ ವರದಿ ಎಂದು ಹಿಂದೆ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು.

ಉಪ ಸಮಿತಿ ಸಾಧ್ಯತೆ
ಸದ್ಯಕ್ಕೆ ವರದಿಯನ್ನು ಅಂಗೀಕರಿಸುವ ಸವಾಲನ್ನು ಮೈಮೇಲೆ ಎಳೆದುಕೊಳ್ಳಲು ಸರಕಾರ ಸಿದ್ಧವಿಲ್ಲ. ವರದಿಯನ್ನು ಪರಾಮರ್ಶಿಸಿ ವರದಿ ನೀಡಲು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡುವ ಸಾಧ್ಯತೆಗಳು ಹೆಚ್ಚು ಎಂದು ಮೂಲಗಳು ಹೇಳಿವೆ.

Next Article