ಜಾತಿ ನಿಂದನೆ: ಮುನಿರತ್ನಗೆ ಜಾಮೀನು
ಬೆಂಗಳೂರು: ಆರ್.ಆರ್.ನಗರ ಶಾಸಕ ಮುನಿರತ್ನ ಅವರಿಗೆ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ದಾಖಲಿಸಿದ್ದ ಜಾತಿ ನಿಂದನೆ ಪ್ರಕರಣದಲ್ಲಿ ನಗರದ ಎಸಿಎಂಎಂ ೮೨ನೇ ನ್ಯಾಯಾಲಯ ಗುರುವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಮುನಿರತ್ನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಳ್ಳಲಿದ್ದಾರೆ. ಆದರೆ ರಾಮನಗರದಲ್ಲಿ ಯುವತಿ ಯೊಬ್ಬರ ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ಕ್ಷಣದಲ್ಲಿ ಮತ್ತೆ ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಮುನಿರತ್ನ ಅವರಿಗೆ ೨ ಲಕ್ಷ ರೂ. ಬಾಂಡ್, ಇಬ್ಬರು ಶ್ಯೂರಿಟಿ ಸಹಿತ ಯಾವುದೇ ಸಾಕ್ಷ್ಯ ನಾಶ ಅಥವಾ ಬೆದರಿಕೆ ಹಾಕದೇ ಇರುವ ಷರತ್ತಿನ ಅನ್ವಯ ಜಾಮೀನು ನೀಡಿ ಆದೇಶ ಪ್ರಕಟಿಸಿದರು.
ಜಾತಿ ನಿಂದನೆ, ಕಿರುಕುಳ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಾಸಕ ಮುನಿರತ್ನ ಅವರ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯ ಬುಧವಾರ ಕಾಯ್ದಿರಿಸಿತ್ತು.
ಮುನಿರತ್ನ ಪರ ಹೈಕೋರ್ಟ್ನ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿ, ೨೦೧೫ರಿಂದ ೨೦೨೪ರವರೆಗೆ ಪ್ರಕರಣ ನಡೆದಿದೆ ಎಂದು ದೂರುದಾರರು ಹೇಳಿದ್ದಾರೆ. ಈ ಬಗ್ಗೆ ಎಫ್‌ಐಆರ್‌ನಲ್ಲಿ ಮಾಹಿತಿ ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಇದು ಹಳೆಯ ಪ್ರಕರಣ ಎಂಬುದು ಗೊತ್ತಾಗುತ್ತದೆ. ದೂರಿನಲ್ಲಿ ಜನಾಂಗೀಯ ಪ್ರಚೋದನೆ ಎಂದು ಉಲ್ಲೇಖ ಮಾಡಿದ್ದಾರೆ. ಚೆಲುವರಾಜು ಉಪಸ್ಥಿತಿಯಲ್ಲಿ ಘಟನೆ ನಡೆದಿದ್ದು, ಅವರೇ ಇದನ್ನು ಪ್ರಚಾರ ಮಾಡಿದ್ದಾರೆ ಎಂದು ವಾದ ಮಂಡಿಸಿದ್ದರು. ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಎಸ್‌ಪಿಪಿ ಸಿ. ಎಸ್.ಪ್ರದೀಪ್‌ಕುಮಾರ್, “ಮುನಿರತ್ನ ಒಬ್ಬ್ಬ ಪ್ರಭಾವಿ ರಾಜಕಾರಣಿ. ಅವರು ಸಾಕ್ಷಿ ನಾಶ ಮಾಡಬಹುದು. ಗುತ್ತಿಗೆದಾರ ಚೆಲುವರಾಜುಗೆ ಮತ್ತೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದು ಪ್ರತಿಪಾದಿಸಿದ್ದರು. ಇತ್ತ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ದೊರೆಯುತ್ತಿದ್ದಂತೆಯೇ ಅತ್ತ ಪರಪ್ಪನ ಅಗ್ರಹಾರದಲ್ಲಿ ಮುನಿರತ್ನ ಬಿಡುಗಡೆಗೆ ಸಿದ್ಧತೆ ನಡೆದಿತ್ತು. ಜೈಲಿನ ಹೊರಗೆ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲು ರಾಮನಗರ ಪೊಲೀಸರು ಕಾದು ನಿಂತಿದ್ದರು.