ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಜಾತ್ರೋತ್ಸವ ಸಂತೆ: ಸ್ಥಳೀಯ ವ್ಯಾಪಾರಿಗಳಿಗೆ ನೀಡಲು ಆಗ್ರಹ

07:13 PM Sep 28, 2024 IST | Samyukta Karnataka

ಮಂಗಳೂರು: ಮುಜರಾಯಿ ಇಲಾಖೆ ಸೇರಿದಂತೆ ಎಲ್ಲ ದೇವಸ್ಥಾನಗಳು ಜಾತ್ರೋತ್ಸವಗಳ ಸಂದರ್ಭ ಸಂತೆ ಏಲ್ಲವನ್ನು ಮಧ್ಯವರ್ತಿಗಳಿಗೆ ನೀಡುವ ಮೂಲಕ ಆದಾಯ ದೇವಸ್ಥಾನಗಳಿಗೂ ಸಂದಾಯವಾಗದೆ, ಸರ್ಕಾರಕ್ಕೂ ಸಲ್ಲಿಕೆಯಾಗದೆ ಲಕ್ಷಾಂತರ ರು. ಮೊತ್ತವನ್ನು ವಂಚಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾತ್ರೆ ಸಂತೆಗಳನ್ನು ಮಧ್ಯವರ್ತಿಗಳಿಗೆ ವಹಿಸದೆ ಸ್ಥಳೀಯ ವ್ಯಾಪಾರಸ್ಥರಿಗೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಹಿಂದು ಜಾತ್ರಾ ವ್ಯಾಪಾರಸ್ಥರ ಸಂಘ ಆಗ್ರಹಿಸಿದೆ.
ಸಂಘದ ರಾಜ್ಯಾಧ್ಯಕ್ಷ ಮಹೇಶ್‌ದಾಸ್ ಶನಿವಾರ ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಮಾಹಿತಿಹಕ್ಕಿನ ಮೂಲಕ ಮುಜರಾಯಿ ದೇವಸ್ಥಾನಗಳ ಜಾತ್ರಾ ಏಲಂ ಬಗ್ಗೆ ಮಾಹಿತಿ ಕೇಳಲಾಗಿದೆ. ಆದರೆ ಪುತ್ತೂರು ಸೇರಿದಂತೆ ‘ಎ’ ವರ್ಗದ ದೇವಸ್ಥಾನಗಳ ಜಾತ್ರಾ ಏಲಂಗಳ ಬಗ್ಗೆ ಲೆಕ್ಕಪರಿಶೋಧನೆಯೇ ನಡೆದಿಲ್ಲ. ಮಾಹಿತಿ ಹಕ್ಕಿನಲ್ಲಿ ಪ್ರಶ್ನಿಸಿದರೆ, ಸರಿಯಾದ ಉತ್ತರ ನೀಡುತ್ತಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹಾಗೂ ದೇವಸ್ಥಾನದ ಆದಾಯಕ್ಕೆ ವಿಪರೀತ ನಷ್ಟವುಂಟಾಗುತ್ತಿದೆ ಎಂದರು.
ಜಾತ್ರೋತ್ಸವಗಳಲ್ಲಿ ಮಧ್ಯವರ್ತಿಗಳಿಗೆ ಸಂತೆ ಏಲಂ ನಡೆಸಿ ಲಕ್ಷಾಂತರ ರು. ಮೊತ್ತ ಆದಾಯ ಖೋತಾ ಆಗುತ್ತಿರುವುದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ಜಾತ್ರಾ
ಸಂತೆ ಏಲಂನ್ನು ಮಧ್ಯವರ್ತಿಗಳಿಗೆ ನೀಡದೆ, ಸ್ಥಳೀಯರಿಗೆ ವ್ಯಕ್ತಗತವಾಗಿ ನೀಡುವಂತೆ ಸೂಚಿಸಿದೆ. ಈ ವಿಚಾರವನ್ನು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಂಬಂಧಿತ ಎಲ್ಲ ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ ತಿಳಿಸಲಾಗಿದೆ. ಇದರ ಹೊರತೂ ಮಧ್ಯವರ್ತಿಗಳಿಗೆ ಏಲಂ ಮೂಲಕ ಜಾತ್ರೆ ಸಂತೆ ನೀಡಿದರೆ, ಹೈಕೋರ್ಟ್ ಆದೇಶ ಉಲ್ಲಂಘನೆ ಬಗ್ಗೆ ಮೊಕದ್ದಮೆ ಹೂಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಮಂಗಳೂರಿನ ಮಂಗಳಾದೇವಿ ಹಾಗೂ ಕುದ್ರೋಳಿ ಜಾತ್ರೋತ್ಸವ ಸಲುವಾಗಿ ಸೆ.೩೦ರಂದು ಮಹಾನಗರ ಪಾಲಿಕೆಯಲ್ಲಿ ಸಂತೆ ಏಲಂ ನಡೆಯಲಿದೆ. ಈ ವೇಳೆ ಸ್ಥಳೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಈಗಾಗಲೇ ಮನವರಿಕೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ಕಡಿಮೆ ಮೊತ್ತಕ್ಕೆ ಟೆಂಡರ್ ನೀಡಿ, ಅವರು ಇತರರಿಗೆ ದುಬಾರಿ ಮೊತ್ತಕ್ಕೆ ಉಪ ಟೆಂಡರ್ ನೀಡಲು ಅವಕಾಶ ಕೊಡಬಾರದು ಎಂದು ಪಾಲಿಕೆ ಅಧಿಕಾರಿಗಳನ್ನೂ ವಿನಂತಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಟೆಂಡರ್ ನಡೆಸಿದರೆ, ಮತ್ತೆ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದರು. ಅಭಿನವ ಭಾರತ ಸಂಘಟನೆ ರಾಜ್ಯಾಧ್ಯಕ್ಷ ಧರ್ಮೇಂದ್ರ, ಹಿಂದೂ ಜನಜಾಗೃತಿ ಸಮಿತಿ ಮುಖಂಡ ವಿಜಯ ಕುಮಾರ್, ಸಂಘದ ಪದಾಧಿಕಾರಿಗಳಾದ ನಿರ್ಮಲಾ, ಪ್ರಮೀಳಾ, ವಿಘ್ನೇಶ್, ಹರೀಶ್‌ದಾಸ್ ಉಪಸ್ಥಿತರಿದ್ದರು.

Tags :
#ಮಂಗಳೂರು
Next Article