ಜಾನುವಾರು ಕಟ್ಟಲು ಹೋದ ರೈತ ನೀರು ಪಾಲು
ಚಿಕ್ಕಮಗಳೂರು: ಜಾನುವಾರು ಕಟ್ಟಲು ಹೋದ ರೈತರೊಬ್ಬರು ಆಕಸ್ಮಿಕವಾಗಿ ಹೊಳೆಗೆ ಜಾರಿಬಿದ್ದಿರುವ ಘಟನೆ ನಡೆದಿದೆ. ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯ ಬೈದುವಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಬೈದುವಳ್ಳಿ ಗ್ರಾಮದ ಕೃಷಿಕ ಬಿ.ಎಲ್. ಗೋಪಾಲಗೌಡ(೬೩) ಜಾನುವಾರು ಕಟ್ಟಲು ಹೋದಾಗ ತುಂಬಿಹರಿಯುತ್ತಿದ್ದ ಹೇಮಾವತಿ ಉಪನದಿಗೆ ಜಾರಿ ಬಿದ್ದಿದ್ದಾರೆ .
ನೀರು ರಭಸವಾಗಿ ಹರಿಯುತ್ತಿದ್ದರಿಂದ ಗೋಪಾಲ್ ಮೇಲೇಳಲಾಗದೇ ಹೊಳೆಯ ಹರಿವಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅವಿವಾಹಿತರಾಗಿದ್ದ ಗೋಪಾಲ್ ಗೌಡ ಕೃಷಿಕರು.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಗೋಣಿಬೀಡು ಪೊಲೀಸರು, ಅಗ್ನಿಶಾಮಕ ದಳ, ಮುಳುಗು ತಜ್ಞರು ಆಗಮಿಸಿ ಶವಕ್ಕಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.
ಸ್ಥಳಕ್ಕೆ ಮೂಡಿಗೆರೆ ತಹಸೀಲ್ದಾರ್ ರಾಜಶೇಖರ್ ಮೂರ್ತಿ ,ಗೋಣಿಬೀಡು ಎಸ್.ಐ. ಹರ್ಷಗೌಡ ಸಿಬ್ಬಂದಿಯೊಂದಿಗೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಬೈದವಳ್ಳಿ ಸೇತುವೆ ಬಳಿ ಬೆಳಿಗ್ಗೆಯಿಂದ ಸುತ್ತಮುತ್ತಲ ನೂರಾರು ಜನರು ಜಮಾವಣೆಯಾಗಿ ಕಾರ್ಯಾಚರಣೆ ವೀಕ್ಷಿಸಿದರು.