ಜಾಮೀನಿನ ನಂತರ ಮುಂದೇನು…
ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳ ಆರೋಪಿಗೆ ಜಾಮೀನು ಎಂಬುದು ಒಂದು ಹಕ್ಕು; ಆದರೆ, ಅದಕ್ಕೆ ಷರತ್ತುಗಳು ಉಂಟು. ಜಾಮೀನು ಎಂದಾಕ್ಷಣ ಅದು ಪರಿಪೂರ್ಣ ಸ್ವಾತಂತ್ರ್ಯವೂ ಅಲ್ಲ. ನ್ಯಾಯಾಲಯದ ನಿರ್ದೇಶನ ಹಾಗೂ ಕಟ್ಟುಪಾಡುಗಳಿಗೆ ಒಳಪಟ್ಟು ಆರೋಪಿಯಾದವರು ವರ್ತಿಸಿದರಷ್ಟೆ ಜಾಮೀನಿಗೆ ಮಾನ್ಯತೆ. ಇದು ಭಾರತದಲ್ಲಿ ಸಂವಿಧಾನಬದ್ಧವಾಗಿ ಜಾರಿಯಲ್ಲಿರುವ ಕಾನೂನಿನ ನಿಯಮಾವಳಿ. ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸುದೀರ್ಘ ವಿಚಾರಣೆಯ ನಂತರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವ ಪರಿಣಾಮ ರಾಜಕೀಯ ವಲಯದಲ್ಲಿ ಕೊಂಚ ಪಲ್ಲಟದ ವಾತಾವರಣ ತಲೆದೋರಬಹುದು. ಆದರೆ, ಸಾರ್ವಜನಿಕರಲ್ಲಿ ಈ ಬಗ್ಗೆ ಯಾವುದೇ ರೀತಿಯ ಅಭಿಪ್ರಾಯ ಹೊರಬೀಳದೆ ಇರುವ ಸ್ಥಿತಿಗೆ ನ್ಯಾಯಾಲಯದ ಮುಂದೆ ದಾಖಲಾದ ಆರೋಪವೇ ಕಾರಣ. ದೇಶ ವಿದೇಶಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿರುವ ಈ ಪ್ರಕರಣಕ್ಕೆ ಇಷ್ಟೊಂದು ಮಹತ್ವ ಬರಲು ರಾಜಕೀಯ ಪಕ್ಷಗಳ ನಡುವಣ ಜಿದ್ದಾಜಿದ್ದಿ ಪರಿಸ್ಥಿತಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಕೋಪಕ್ಕೆ ತಿರುಗಿದ್ದು ಕಾರಣ. ಕರ್ನಾಟಕದ ಮಟ್ಟಿಗೆ ಲೋಕಸಭಾ ಚುನಾವಣೆಯ ಮತದಾನ ಮುಗಿದಿದ್ದರೂ ದೇಶದಲ್ಲಿ ಇನ್ನೂ ಮೂರು ಹಂತದ ಮತದಾನ ಬಾಕಿ ಇರುವ ಹಿನ್ನೆಲೆಯಲ್ಲಿ ಈ ಪ್ರಕರಣ ಹೊಸ ಹೊಸ ರೀತಿಯಲ್ಲಿ ಜೀವಂತವಾಗಿರುವುದಂತೂ ದಿಟ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಈ ಲೈಂಗಿಕ ದೌರ್ಜನ್ಯದ ಪ್ರಕರಣ ಮಾನಕ್ಕೆ ಅಂಜುವ ಕನ್ನಡಿಗರು ತಲೆತಗ್ಗಿಸುವಂತಹ ಸ್ಥಿತಿ. ಈ ಪ್ರಕರಣದ ಸತ್ಯ ಅಸತ್ಯಗಳು ಇದುವರೆಗೆ ಖಚಿತವಾಗಿಲ್ಲ. ಕೆಲವು ವಿವರಗಳನ್ನು ಗಮನಿಸಿದಾಗ ತಥಾಕಥಿತ ರೂಪದಲ್ಲಿ ಇದ್ದರೂ ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಇದರಲ್ಲಿ ನಿಜವಿದ್ದರೂ ಇರಬಹುದು ಎಂದು ನಂಬುವವರು ಇರುವಂತೆ ನಂಬದವರೂ ಇದ್ದಾರೆ. ಅದೇನೇ ಆದರೂ ಮಹಿಳೆಯರ ಸ್ಥಿತಿ ಇಷ್ಟೊಂದು ಚಿಂತಾಜನಕವಾಗಬಾರದಿತ್ತು ಎಂಬ ಮಾತನ್ನು ಹೇಳಬಹುದು. ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಆರೋಪಗಳು ಇನ್ನೂ ಗಂಭೀರ. ಆದರೆ, ಆರೋಪಗಳನ್ನು ನಿರಾಕರಿಸುವ ಇಲ್ಲವೇ ಸ್ಥಿರೀಕರಿಸುವ ಸ್ಥಾನದಲ್ಲಿ ಯಾರೊಬ್ಬರೂ ಇಲ್ಲ. ಏಕೆಂದರೆ, ತಂತ್ರಜ್ಞಾನದ ಈ ಯುಗದಲ್ಲಿ ಸಿ.ಡಿ. ಮತ್ತು ವಿಡಿಯೋಗಳನ್ನು ಸೃಷ್ಟಿ ಮಾಡುವುದು ಬ್ರಹ್ಮವಿದ್ಯೆಯಾಗಿ ಉಳಿದಿಲ್ಲ. ಈ ಪ್ರಕರಣದ ಸತ್ಯಾಸತ್ಯತೆಯನ್ನು ಖಚಿತಪಡಿಸುವ ಸ್ಥಾನದಲ್ಲಿರುವ ಆರೋಪಿ ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಯ ಮತದಾನದ ದಿನವೇ ವಿದೇಶ ಪ್ರಯಾಣ ಕೈಗೊಂಡಿರುವುದು ಪರಿಸ್ಥಿತಿ ಇನ್ನಷ್ಟು ಜಟಿಲವಾಗಲು ಕಾರಣ. ಕಲ್ಪನೆ ಎಂಬುದು ಯಾವಾಗಲೂ ನಿಜದ ತಲೆಯ ಮೇಲೆ ಹೊಡೆದಂತೆ ಫಳಫಳ ಕಾಣುವ ಅರೆಸತ್ಯ. ಅಥವಾ ಅರೆ ಸುಳ್ಳು. ಈಗ ಚಲಾವಣೆಯಲ್ಲಿರುವುದು ಇಂತಹ ಅರೆಸತ್ಯಗಳೇ. ಸತ್ಯಾನ್ವೇಷಣೆಯ ಜೊತೆಗೆ ತಪ್ಪಿತಸ್ಥರನ್ನು ಗುರುತಿಸಿ ತಕ್ಕ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವ ಕಾಯಕದಲ್ಲಿ ತೊಡಗಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ, ಆರೋಪಿ ಕೈಗೆ ಸಿಗದೇ ಇದ್ದಾಗ ಎಂತಹ ಪರಮಸತ್ಯ ಎಂದು ನಂಬುವ ಸತ್ಯಗಳೂ ಕೂಡಾ ಅರೆ ಸತ್ಯಗಳಾಗಿಯೇ ಉಳಿಯುವ ಅಪಾಯಗಳಿವೆ. ಈ ನಿಟ್ಟಿನಲ್ಲಿ ಮೊದಲು ಪ್ರಜ್ವಲ್ ರೇವಣ್ಣ ಸ್ವದೇಶಕ್ಕೆ ಹಿಂತಿರುಗಿ ಎಸ್ಐಟಿ ವಿಚಾರಣೆ ಎದುರಿಸಿದರೆ ಮಾತ್ರ ನಿಜಸ್ಥಿತಿ ಹೊರಬೀಳಬಹುದು.
ಎಸ್ಐಟಿ ಕಾರ್ಯವ್ಯಾಪ್ತಿ ವ್ಯಾಪಕವಾಗಿದೆ ಎಂಬುದು ನಿಜವೇ. ಆದರೆ, ವಿದೇಶದಲ್ಲಿರುವ ಆರೋಪಿಯನ್ನು ಹಿಡಿದು ತರುವ ಅಧಿಕಾರ ಎಸ್ಐಟಿಗೆ ಇದೆಯೇ ಎಂಬ ಬಗ್ಗೆ ಕೊಂಚ ಗೊಂದಲವಿದೆ. ಗೃಹ ಮಂತ್ರಿ ಡಾ. ಪರಮೇಶ್ವರ್ ಹೇಳಿರುವಂತೆ ಪ್ರಜ್ವಲ್ ಬಂಧನಕ್ಕಾಗಿ ಎಸ್ಐಟಿ ಪೊಲೀಸರು ವಿದೇಶಕ್ಕೆ ಹೋಗುವುದಿಲ್ಲ ಎಂಬ ಮಾತಿನಲ್ಲಿ ಬಹುಶಃ ಅದರ ಕಾರ್ಯವ್ಯಾಪ್ತಿಯೂ ಅಡಗಿರಬಹುದು. ರೆಡ್ಕಾರ್ನರ್ ನೋಟಿಸ್ ಹೊರಡಿಸಿದ ನಂತರ ಸಿಬಿಐ ಮೂಲಕ ಪ್ರಜ್ವಲ್ ಹುಡುಕುವ ಕಾರ್ಯವನ್ನು ಎಸ್ಐಟಿ ಮಾಡಬಹುದು. ಆದರೆ, ಇದೊಂದು ರಾಜಕೀಯವಾಗಿ ಧರ್ಮಸೂಕ್ಷ್ಮದ ವಿಚಾರ. ಸಿಬಿಐ ಕೇಂದ್ರ ಸರ್ಕಾರದ ಅಧೀನಕ್ಕೆ ಬರುವ ತನಿಖಾ ಸಂಸ್ಥೆ. ರಾಜ್ಯ ಸರ್ಕಾರಗಳು ಸಿಬಿಐಗೆ ಸೂಚನೆ ಕೊಡಲು ಬರುವುದಿಲ್ಲ. ಕೇಂದ್ರದಲ್ಲಿರುವುದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದೆ. ಎರಡೂ ಸರ್ಕಾರಗಳಿಗೂ ರಾಜಕೀಯವಾಗಿ ವೈಷಮ್ಯದ ಪರಾಕಾಷ್ಟೆ. ವಸ್ತುಸ್ಥಿತಿ ಹೀಗಿರುವಾಗ ಸಿಬಿಐ ಪ್ರಜ್ವಲ್ ಹುಡುಕಾಟಕ್ಕಾಗಿ ಎಸ್ಐಟಿ ಮನವಿಯನ್ನು ಪರಿಗಣಿಸಲು ಕೇಂದ್ರ ಸರ್ಕಾರದ ಸಮ್ಮತಿ ಇಲ್ಲದೆ ಹೆಜ್ಜೆ ಇಡಲಾರದು. ಹೀಗಿರುವಾಗ ಪ್ರಜ್ವಲ್ ಸಿಕ್ಕದೆ ನಿಜಸ್ಥಿತಿ ತಿಳಿಯುವುದು ಹೇಗೆ ಎಂಬ ದೊಡ್ಡ ಸವಾಲು ತನಿಖಾ ಸಂಸ್ಥೆ ಮುಂದಿರುವುದು ಸ್ವಾಭಾವಿಕ. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಈ ಪ್ರಕರಣ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದುನೋಡಬೇಕು. ಏಕೆಂದರೆ, ಈ ಪ್ರಕರಣದ ಪಾತ್ರಧಾರರೂ ಹಾಗೂ ಸೂತ್ರಧಾರರೂ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯ ಆಟಗಾರರು ಎಂಬುದು ಗುರುತಿಸಬೇಕಾದ ಸಂಗತಿ.