ಜಾರ್ಖಂಡ್‌ನಲ್ಲೂ ನಿರ್ಮಾಣ ಹಂತದ ಸೇತುವೆ ಕುಸಿತ
ರಾಯಪುರ: ಬಿಹಾರ ನಂತರ ಜಾರ್ಖಂಡ್‌ನಲ್ಲಿಯೂ ನಿರ್ಮಾಣ ಹಂತದ ಸೇತುವೆ ಕುಸಿದುಬಿದ್ದಿದೆ. ಗಿರಿಧಿಯಲ್ಲಿ ಅರ್ಗಾ ನದಿಗೆ ೫.೫ ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಕುಸಿದುಬಿದ್ದಿದೆ. ವರದಿಗಳ ಪ್ರಕಾರ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯ ನಂತರ ಸೇತುವೆಯ ಪಿಲ್ಲರ್‌ಗಳು ಕೆಳಕ್ಕೆ ಉರುಳಿದವು. ಆನಂತರ ಗರ್ಡರ್ ಮುರಿದು ಸೇತುವೆ ಕುಸಿದುಬಿದ್ದಿದೆ. ಫತೇಪುರ್-ಬೆಲ್ವಘಾಟಿ ರಸ್ತೆಯ ಕರಿಪಹರಿ ಗ್ರಾಮದಲ್ಲಿ ಅರ್ಗಾನದಿಗೆ ಈ ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ ವರ್ಷದ ಮೊದಲ ಮಳೆಯ ನೀರನ್ನೂ ತಡೆಯುವ ಸಾಮರ್ಥ್ಯ ಈ ಸೇತುವೆ ಇಲ್ಲದಿರುವುದು ಇಲ್ಲಿ ಗಮನಾರ್ಹ. ಶನಿವಾರ ಸಂಜೆ ಎಡಬಿಡದೇ ಸುರಿದ ಮಳೆಯಿಂದ ಉಂಟಾದ ನೀರಿನ ಪ್ರವಾಹದಲ್ಲಿ ಸೇತುವೆಯ ಕಂಬಗಳು ಮುಳುಗಿದ ಕಾರಣ ಗರ್ಡರ್ ಮುರಿದುಬಿದ್ದಿದೆ. ಇದಲ್ಲದೆ, ಮತ್ತೊಂದು ಕಂಬವೂ ವಕ್ರವಾಗಿದೆ. ಇದಾದ ಬಳಿಕ ರಾತ್ರಿ ೮ರ ನಂತರ ಸೇತುವೆಯ ಗರ್ಡರ್ ಭಾರಿ ಸದ್ದಿನೊಂದಿಗೆ ಮುರಿದು ನದಿಗೆ ಬಿದ್ದಿದೆ. ಸೇತುವೆ ಮುರಿದುಬಿದ್ದ ಭಯಾನಕ ಸದ್ದಿಗೆ ಸುತ್ತಮುತ್ತಲ ಪ್ರದೇಶಗಳ ಜನರು ಗಾಬರಿಗೊಳ್ಳುವಂತಾಯಿತು. ಓಂ ನಮ: ಶಿವಾಯ ಎನ್ನುವ ಕಂಪನಿಯು ಸೇತುವೆ ನಿರ್ಮಾಣದ ಗುತ್ತಿಗೆ ಪಡೆದಿದೆ.