ಜಿಪಿಎಸ್‌ನಂತೆ ಕಾರ್ಯನಿರ್ವಹಿಸುವ ಎತ್ತುಯಾತ್ರಿಗಳಿಗೆ ದಾರಿ ತೋರುವ ಕಂಟ್ಲಿ ಬಸವಣ್ಣ
ಆಂಧ್ರದ ಸುಕ್ಷೇತ್ರ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆಯಲು ಉತ್ತರ ಕರ್ನಾಟಕದ ನಾನಾ ನಗರ ಹಾಗು ಗ್ರಾಮೀಣ ಪ್ರದೇಶಗಳಿಂದ ಪ್ರತಿ ವರ್ಷ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಾರೆ.
ಅನಾದಿ ಕಾಲದಲ್ಲಿ ಕ್ಷೇತ್ರಕ್ಕೆ ನಡೆದು ಹೋಗಲು ದಾರಿಯು ದುರ್ಗಮವಾಗಿತ್ತು.
ಆಗ ಪಾದಯಾತ್ರೆಯಿಂದ ತೆರಳುತ್ತಿದ್ದ ಭಕ್ತರಲ್ಲಿ ಹಲವಾರು ಜನ ದಾರಿ ತಪ್ಪಿಸಿಕೊಂಡು ಕಷ್ಟ ಅನುಭವಿಸಬೇಕಾಗುತ್ತಿತ್ತು.
ಯಾತ್ರಿಗಳಿಗೆ ದಾರಿ ತೋರಿಸಲೆಂದೇ ಒಂದು ಬಸವಣ್ಣನನ್ನು ರಬಕವಿ-ಬನಹಟ್ಟಿ ಸಮೀಪದ ಶೇಗುಣಶಿ ಗೌಡರ ಮನೆತನದಿಂದ ಸುಮಾರು 5-6 ಶತಮಾನಗಳ ಹಿಂದಿನಿಂದಲೂ ಯಾವ ಊರಿನಲ್ಲಿ ವಸತಿ ಮಾಡುವದಿದೆಯೋ ಅಲ್ಲಿ ಹೋಗಿ ನಿಂತು ಬಿಡುತ್ತಿರುವ ಬಸವಣ್ಣನಿಗೆ ಇತಿಹಾಸವೂ ಇದೆ.ಶೇಗುಣಶಿ-ಮಹಾಲಿಂಗಪೂರ-ರಬಕವಿ-ಬನಹಟ್ಟಿ-ಕೊಣ್ಣೂರ ಹಾಗು ಬೀಳಗಿಯಿಂದ ಈ ಕಂಟ್ಲಿ ಬಸವಣ್ಣನೇ ದಾರಿದೀಪ. ನಂತರ ಸುಕ್ಷೇತ್ರದವರೆಗೆ ಬರುವ ಎಲ್ಲ ಪಟ್ಟಣ ಗ್ರಾಮಗಳೂ ಈ ಎತ್ತಿನ ಹಿಂದಿನಿಂದಲೇ ಸಾಗುವ ರೂಢಿ ಇಂದಿಗೂ ಇದೆ.ಸುಮಾರು ಆರೇಳು ತಲೆಮಾರುಗಳಿಂದ ಶ್ರೀಶೈಲಕ್ಕೆ ತೆರಳುವ ಭಕ್ತರಿಗೆ ಕಂಟ್ಲಿ ಬಸವಣ್ಣನ ಸೇವೆ ನಡೆಯುತ್ತಿದೆ ಎನ್ನುತ್ತಾರೆ ಶೇಗುಣಶಿ ಗೌಡರ ಮನೆತನದ ಅಣ್ಣಾಸಾಹೇಬ ಪಾಟೀಲ.
ಸುಮಾರು 550 ಕಿ.ಮೀ. ದೂರದ ಸುಕ್ಷೇತ್ರಕ್ಕೆ ಹೋಗಿ ಮತ್ತೆ ಅದೇ ದಾರಿಯಿಂದ ವಾಪಸ್ ನಡದೇ ಬರುತ್ತದೆ.
ಸುಮಾರು ಒಂದು ತಿಂಗಳ ಕಾಲ ಪಾದಯಾತ್ರಿಗಳನ್ನು ಸುಗಮ ದಾರಿಯಲ್ಲಿ ಕರೆದುಕೊಂಡು ಹೋಗುವ ಜವಾಬ್ದಾರಿ ಕಂಟ್ಲಿ ಬಸವಣ್ಣನ ಜವಾಬ್ದಾರಿ.
ರಾತ್ರಿ ಪ್ರಯಾಣ
ಕಂಬಿ ಹೊತ್ತು ಸಂಚರಿಸುವ ಮಲ್ಲಯ್ಯನ ಲಕ್ಷಾಂತರ ಭಕ್ತರಿಗೆ ಮೊದಲ ದಾರಿದೀಪವಾಗಿರುವದೇ ಈ ನಂದಿ’. ರಾತ್ರಿ ಹೊತ್ತು ಹೆಚ್ಚಾಗಿ ಪಾದಯಾತ್ರೆ ಬೆಳೆಸುವ ಭಕ್ತರಿಗೆ ಇಂದಿಗೂ ಮಾರ್ಗಸೂಚಿಯಾಗಿದೆ. ಅಲ್ಲದೆ ಪ್ರಮುಖವಾಗಿ ಆಂಧ್ರದ ನಾಗಲೋಟಿ ವೀರಭದ್ರಸ್ವಾಮಿ ದೇವಸ್ಥಾನದಿಂದ ಭೀಮನಕೊಳ್ಳ ಹತ್ತುವಲ್ಲಿ ಮನುಷ್ಯನ ಎದೆಯಳತೆಯ ಮೆಟ್ಟಿಲುಗಳಿದ್ದು, ಮೊದಲು ಈ
ನಂದಿ’ಯೇ ಪ್ರವೇಶ ಮಾಡುತ್ತದೆ.
ನಂತರ ಜನ ಅದನ್ನು ಹತ್ತುವದು ರೂಢಿ ಎನ್ನುತ್ತಾರೆ `ನಂದಿ’ಯೊಂದಿಗೆ ಕಂಬಿ ಹೊತ್ತು ತೆರಳುವ ಚನ್ನಬಸಯ್ಯ ಮಠಪತಿ(ಕಂಬಿ).
ಎಲ್ಲೆಂದರಲ್ಲಿ ಕಾಯುತ್ತಾರೆ
ಯುಗಾದಿ ಪ್ರಯುಕ್ತ ಸುಕ್ಷೇತ್ರ ಶ್ರೀಶೈಲಕ್ಕೆ ತೆರಳುವ ಭಕ್ತರಲ್ಲಿ ಶೇಗುಣಶಿ ಗ್ರಾಮದ ಈ `ನಂದಿ’ ಹಾಗು ಕಂಬಿ ಬಲು ಮಹತ್ವ ಪಡೆದಿದೆ.
ನೂರಾರು ಗ್ರಾಮ ಹಾಗು ಪಟ್ಟಣಗಳಲ್ಲಿ ಈ `ನಂದಿ’ಯ ವೈಶಿಷ್ಟ್ಯ ವಿಚಿತ್ರ ಹಾಗು ಅಪರೂಪ.
ಕಂಟ್ಲಿ ಬಸವಣ್ಣನ ವ್ಯವಸ್ಥೆ
ಶೇಗುಣಸಿ ಗ್ರಾಮದ ಗೌಡರ ಮನೆತನವಾದ ಅಣ್ಣಾಸಾಹೇಬ ಪಾಟೀಲ ಕುಟುಂಬವು ಕಳೆದ ಮೂರು ಶತಮಾನಗಳ ಹಿಂದೆ ಈ ಕಂಟ್ಲಿ ಬಸವಣ್ಣನ ಆರೈಕೆದಾರ ಮಲ್ಲಯ್ಯನ ಕಂಬಿ ಸ್ವಾಮಿಗಳ ಕುಟುಂಬಕ್ಕೆ 8 ಎಕರೆ ಭೂಮಿಯನ್ನು ಉಣ್ಣಲು ನೀಡಿದ್ದಲ್ಲದೆ ಒಂದು ಎಕರೆ ಪ್ರದೇಶದಲ್ಲಿ ಈ ಕಂಟ್ಲಿ ಬಸವಣ್ಣನ ವ್ಯವಸ್ಥೆಗೆ ಕಲ್ಪಿಸಲಾಗಿದೆ. ಈ `ನಂದಿ’ಯು 11 ತಿಂಗಳ ಕಾಲ ಇದೇ ಭೂಮಿಯಲ್ಲಿದ್ದು ವರ್ಷದ ಒಂದು ತಿಂಗಳು ಮಾತ್ರ ಅದೂ ಸುಕ್ಷೇತ್ರ ಶ್ರೀಶೈಲ ಪರ್ವತಕ್ಕೆ ತೆರಳುವ ಕಾಯಕ ಮಾತ್ರವಾಗಿದೆ.