ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ: ಆತಂಕ
ಹಾವೇರಿ: ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಆಕ್ಸಿಜನ್ ಸಿಲಿಂಡರ್ ಸೋರಿಕೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಬುಧವಾರ ನಡೆಯಿತು.
ಬೆಳಗ್ಗೆ ೧೧ಗಂಟೆ ಸುಮಾರಿಗೆ ಜಿಲ್ಲಾಸ್ಪತ್ರೆಯಲ್ಲಿ ಒಮ್ಮೆಲೆ ಸ್ಫೋಟದ ಸದ್ದು ಕೇಳಿಬಂದಿದೆ. ಜತೆಗೆ ಆಕ್ಸಿಜನ್ ಸೋರಿಕೆಯಾಗಿದೆ. ಇದರಿಂದ ಭಯಭೀತಗೊಂಡ ಜನರು ಚಿಕಿತ್ಸೆ ಪಡೆಯುವುದನ್ನು ಬಿಟ್ಟು ಹೊರಗೆ ಓಡಿ ಬಂದಿದ್ದಾರೆ. ಕೆಲ ಮಹಿಳೆಯರು ಹಸುಗೂಸುಗಳನ್ನು ಎತ್ತಿಕೊಂಡೇ ಏಳುತ್ತ ಬೀಳುತ್ತ ಆತಂಕದಲ್ಲೇ ಹೊರಕ್ಕೆ ಓಡಿದ್ದಾರೆ. ಬೆಡ್ ಮೇಲೆ ಮಲಗಿದ್ದ ಬಾಣಂತಿಯರನ್ನು ಕುಟುಂಬದವರು ಹೊರಗೆ ಕರೆತಂದಿದ್ದಾರೆ. ಆಸ್ಪತ್ರೆ ಹಾಸಿಗೆ ಮೇಲೆ ಮಲಗಿದ್ದ ಕೆಲವರು ಕೈಯಲ್ಲಿ ಸಲೈನ್ ಬಾಟಲಿ ಹಿಡಿದುಕೊಂಡೇ ಓಡಿದ್ದಾರೆ. ಇದರಿಂದ ಕೆಲ ಹೊತ್ತು ಜಿಲ್ಲಾಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಏನಾಗಿದೆ ಎಂಬುದೇ ಗೊತ್ತಿಲ್ಲದೇ ಕೆಲವರು ಓಡಿದ್ದಾರೆ. ಆಕ್ಸಿಜನ್ ಸೋರಿಕೆಯಿಂದ ಸದ್ದು ಕೇಳಿಬಂದಿದ್ದು, ಯಾವುದೇ ಅಪಾಯವಿಲ್ಲ ಎಂಬುದು ಅರಿತು ರೋಗಿಗಳಲ್ಲಿ ನಿರ್ಮಾಣವಾಗಿದ್ದ ಆತಂಕ ನಿವಾರಣೆಯಾಯಿತು. ಬಳಿಕ ಆಸ್ಪತ್ರೆ ಒಳಗೆ ತೆರಳಿದರು.