ಜಿಲ್ಲೆ ಬೇಡಿಕೆ, ಅಥಣಿ ಸಂಪೂರ್ಣ ಸ್ತಬ್ಧ
ಅಥಣಿ: ಅಥಣಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಸೋಮವಾರ ಅಥಣಿ ಜಿಲ್ಲಾ ಹೋರಾಟ ಸಮಿತಿ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಕರೆ ಕೊಟ್ಟಿದ್ದ ಅಥಣಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಬೆಳಿಗ್ಗೆಯಿಂದ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರ ವಹಿವಾಟು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರು ಪಟ್ಟಣದ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ರ‍್ಯಾಲಿ ಆರಂಭಿಸಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಹಾದು ಬಸವೇಶ್ಬರ ವೃತ್ತದಲ್ಲಿ ಸಮಾವೇಶಗೊಂಡಿತು.
ಸಮಾವೇಶದಲ್ಲಿ ಹತ್ತಕ್ಕೂ ಅಧಿಕ ಸಂಖ್ಯೆಯ ಮಠಾಧೀಶರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಮುಖಂಡರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ಸಭೆಯನ್ನುದ್ದೇಶಿಸಿ ಗಜಾನನ ಮಂಗಸೂಳಿ, ವಿನಾಯಕ ಬಾಗಡಿ, ಎ.ಎಂ. ಖೊಬ್ರಿ, ಅರುಣ ಯಲಗುದ್ರಿ, ಎಸ್.ಎ. ಸಂಕ, ಶೇಖರ ನೇಮಗೌಡ ಸೇರಿದಂತೆ ಅನೇಕ ಗಣ್ಯರು ಮಾತನಾಡಿ, ಅಥಣಿ ಜಿಲ್ಲೆಗೆ ಪಕ್ಷಾತೀತ, ಜಾತ್ಯಾತೀತ ಬೆಂಬಲವಿದೆ ಎಂದರು. ಮಠಾಧೀಶರಾದ ಮರುಳಸಿದ್ದ ಸ್ವಾಮಿಗಳು, ಗಚ್ಚಿನ ಮಠದ ಶಿವಬಸವ ಸ್ವಾಮಿಗಳು, ಪ್ರಭುಚನ್ನಬಸವ ಸ್ವಾಮಿಗಳು, ಸಿದ್ದಲಿಂಗ ಸ್ವಾಮಿಗಳು, ಅಮರೇಶ್ವರ ಸ್ವಾಮಿಗಳು, ಶಶಿಕಾಂತ ಪಡಸಲಗಿ ಅವರು ಹೋರಾಟಕ್ಕೆ ಬೆಂಬಲ ಸೂಚಿಸಿದರು.