ಜೀನಿಯಸ್ ಮುತ್ತನ ಸಾಹಸಗಾಥೆ
ಭಲೇ ಹುಡುಗ' ಎಂದು ಬೆನ್ನು ತಟ್ಟಿ ಹುರಿದುಂಬಿಸಬೇಕು ಎನ್ನುವಷ್ಟರ ಮಟ್ಟಿಗೆ ಮುತ್ತನ ಸಾಹಸಗಾಥೆ ಕಣ್ಣಿಗೆ ಕಟ್ಟುವಂತೆ, ಎಲ್ಲರೂ ಮೆಚ್ಚುವಂತೆ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ
ಜಿ.ಆರ್.ಬಿ
ಚಿತ್ರ: ಜೀನಿಯಸ್ ಮುತ್ತ
ನಿರ್ದೇಶನ: ನಾಗಿಣಿಭರಣ, ನಿರ್ಮಾಣ: ಲತಾ ಜೈಪ್ರಕಾಶ್
ತಾರಾಗಣ: ಶ್ರೇಯಸ್, ವಿಜಯ ರಾಘವೇಂದ್ರ, ಟಿ.ಎಸ್.ನಾಗಾಭರಣ, ಪದ್ಮಾ ವಾಸಂತಿ, ಗಿರಿಜಾ ಲೋಕೇಶ್, ಸುಂದರ್ ರಾಜ್, ಪನ್ನಗಾಭರಣ ಮತ್ತಿತರರು.
ರೇಟಿಂಗ್ಸ್: ***
ಚಿಕ್ಕ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿ ಹೊತ್ತು, ಹೆತ್ತ ತಾಯಿಯನ್ನು ನೋಡಿಕೊಳ್ಳುವ ಹೈದನಾಗಿ ಕಾಣಿಸಿಕೊಳ್ಳುವ, ಬುದ್ಧಿವಂತ ಬಾಲಕನ ಕಥೆಯೇ ಜೀನಿಯಸ್ ಮುತ್ತ'. ಜೀವನದಲ್ಲಿ ಕಷ್ಟ ಕಾಮನ್. ಅದನ್ನು ಮೆಟ್ಟಿ ನಿಲ್ಲುವ ಛಲವಿರಬೇಕು. ಜಾಣ್ಮೆಯಿಂದಲೇ ಎಲ್ಲ ಸಂಕಷ್ಟಗಳನ್ನು ಎದುರಿಸಬೇಕು... ಸಾಧಿಸಲು ವಯಸ್ಸಿನ ಹಂಗಿಲ್ಲ ಎಂದು ಸಾರುತ್ತಲೇ ಮನಸ್ಸಿನಾಳಕ್ಕೆ ಇಳಿಯುವ ಮುತ್ತ, ಸಿನಿಮಾ ಮುಗಿಯುವ ಹೊತ್ತಿಗೆ
ಭಲೇ ಹುಡುಗ' ಎಂದು ಬೆನ್ನು ತಟ್ಟಿ ಹುರಿದುಂಬಿಸಬೇಕು ಎನ್ನುವಷ್ಟರ ಮಟ್ಟಿಗೆ ಮುತ್ತನ ಸಾಹಸಗಾಥೆ ಕಣ್ಣಿಗೆ ಕಟ್ಟುವಂತೆ, ಎಲ್ಲರೂ ಮೆಚ್ಚುವಂತೆ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕಿ ನಾಗಿಣಿಭರಣ. ಬಾಲ್ಯದಿಂದಲೂ ಆಸ್ಪತ್ರೆಯ ವಾತಾವರಣದಲ್ಲೇ ಬೆಳೆದ ಮುತ್ತ (ಶ್ರೇಯಸ್)ನಿಗೆ ವೈದ್ಯಕೀಯ ರಂಗದಲ್ಲಿ ವಿಪರೀತ ಆಸಕ್ತಿ. ಹಳ್ಳಿಯಲ್ಲಿದ್ದುಕೊಂಡು ಹಲವಾರು ಕನಸು ಕಾಣುವ ಮುತ್ತನ ತಾಯಿ ಕಾಯಿಲೆಗೆ ತುತ್ತಾಗುತ್ತಾಳೆ. ಆಕೆಗೆ ಚಿಕಿತ್ಸೆ ಕೊಡಿಸಲು ಬೆಂಗಳೂರಿಗೆ ಕರೆತರಬೇಕಾಗುತ್ತದೆ. ಏನೂ ಅರಿಯದ ಊರಿನಲ್ಲಿ, ಬಿಡುಗಾಸಿಲ್ಲದ ಮುತ್ತನಿಗೆ ಸಾಕಷ್ಟು ಸಂಕಷ್ಟಗಳು ಎದುರಾಗುತ್ತವೆ. ಎಲ್ಲವನ್ನೂ ತನ್ನ ಜಾಣ್ಮೆಯಿಂದಲೇ ಹೇಗೆ ನಿಭಾಯಿಸುತ್ತಾನೆ ಎಂಬುದು ಚಿತ್ರದ ಹೈಲೈಟ್‌ಗಳಲ್ಲೊಂದು. ಇಷ್ಟೆಲ್ಲಾ ಮಾಡಿದರೂ ತಾಯಿಗೆ ಚಿಕಿತ್ಸೆ ಕೊಡಿಸುವಲ್ಲಿ ಸಫಲನಾಗುತ್ತಾನಾ… ವಿಫಲನಾಗುತ್ತಾನಾ ಎಂಬುದೇ ಚಿತ್ರದ ಸ್ವಾರಸ್ಯಕರ ಅಂಶ. ಹೆಸರಿಗೆ ತಕ್ಕಂತೆ ಜೀನಿಯಸ್' ಪ್ರತಿಭೆಯಿಂದ ಗಮನ ಸೆಳೆಯುವ ಮುತ್ತ, ಕೆಲವು ಸನ್ನಿವೇಶಗಳಲ್ಲಿ ಭಾವತೀವ್ರತೆಯಿಂದಲೂ ಮನಸ್ಸಿನ ಕದ ತಟ್ಟುತ್ತಾನೆ. ತನ್ನ ತಾಳ್ಮೆ, ಜಾಣ್ಮೆ, ಮುಗ್ಧತೆಯಿಂದಲೇ ಆವರಿಸಿಕೊಳ್ಳುವ ಮುತ್ತ, ಸುತ್ತಲೂ ಲವಲವಿಕೆಯ ವಾತಾವರಣ ಸೃಷ್ಟಿಸಿರುತ್ತಾನೆ. ಇದೇ ಆತನ ಪ್ಲಸ್ ಪಾಯಿಂಟ್. ನಟನೆಯ ವಿಷಯಕ್ಕೆ ಬರುವುದಾದರೆ, ಚಿತ್ರದುದ್ದಕ್ಕೂ ಲವಲವಿಕೆ+ಮುಗ್ಧತೆಯನ್ನು ಶ್ರೇಯಸ್ ನಟನೆಯಲ್ಲಿ ಕಾಣಬಹುದು. ಪ್ರಮುಖ ಪಾತ್ರಧಾರಿಯಾಗಿ ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿರುವುದು ಆತನ ಹೆಚ್ಚುಗಾರಿಕೆ. ಹಳೆಯ
ಚಿನ್ನಾರಿಮುತ್ತ' ವಿಜಯ ರಾಘವೇಂದ್ರ ಸಹ ಜೀನಿಯಸ್ ಮುತ್ತ'ನಿಗೆ ಕ್ಲಿಷ್ಟಕರ ಸನ್ನಿವೇಶದಲ್ಲಿ ಸಾಥ್ ನೀಡುತ್ತಾರೆ. ಉಳಿದಂತೆ ಟಿ.ಎಸ್.ನಾಗಾಭರಣ, ಪದ್ಮಾ ವಾಸಂತಿ, ಗಿರಿಜಾ ಲೋಕೇಶ್, ಸುಂದರ್ ರಾಜ್, ಪನ್ನಗಾಭರಣ ಇನ್ನಿತರರು ಆಯಾ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾರೆ. ತಾಂತ್ರಿಕವಾಗಿಯೂ
ಮುತ್ತ' ಶ್ರೀಮಂತ ಎಂಬುದಕ್ಕೆ ಸಂಗೀತ, ಛಾಯಾಗ್ರಹಣ ಕಾರ್ಯ ವೈಖರಿಯೇ ಸಾಕ್ಷೀಕರಿಸುತ್ತದೆ.