For the best experience, open
https://m.samyuktakarnataka.in
on your mobile browser.

ಜೀವಕೋಶಗಳಿಗೂ ಮನಸ್ಸಿದೆ; ಭಾವನೆಗಳಿವೆ

03:30 AM Sep 10, 2024 IST | Samyukta Karnataka
ಜೀವಕೋಶಗಳಿಗೂ ಮನಸ್ಸಿದೆ  ಭಾವನೆಗಳಿವೆ

ಮಾನವ ದೇಹದಲ್ಲಿ ಜೀವಕೋಶವು ಕಾಣದ ಭಾಗವೇ ಇಲ್ಲ. ಪ್ರತಿಯೊಂದು ಜೀವಕೋಶವೂ ಹುಟ್ಟುತ್ತದೆ, ಸ್ವತಃ ಪುನರುತ್ಪಾದನೆಗೊಳ್ಳುತ್ತದೆ, ಸಾಯುತ್ತದೆ ಮತ್ತು ವಿಸರ್ಜಿಸಲ್ಪಡುತ್ತದೆ. ಮಾನವನ ಜೀವನ ಮತ್ತು ಆರೋಗ್ಯ ನಿರ್ವಹಣೆಯು ಜೀವಕೋಶಗಳ ನಿರಂತರ ಪುನರುತ್ಪಾದನೆಯ ಮೇಲೆಯೇ ಅವಲಂಬಿತವಾಗಿದೆ. ಜೀವಕೋಶದ ಹುಟ್ಟು ಮತ್ತು ಸಾವನ್ನು ಮನುಷ್ಯ ನಿಯಂತ್ರಿಸಿದಾಗ ಆತ ಸ್ವತಃ ಸೃಷ್ಟಿಕರ್ತನಾಗುತ್ತಾನೆ. ರೋಗವು ದೇಹದೊಳಗೆ ಸಂಯೋಜಿಸಲ್ಪಟ್ಟ ಜೀವಕೋಶಗಳ ಕಾಯಿಲೆ ಹಾಗೂ ಎಲ್ಲಾ ಗುಣಪಡಿಸುವಿಕೆಯು ಜೀವಕೋಶಗಳನ್ನು ಗುಣಪಡಿಸುವುದೇ ಆಗಿದೆ ಎಂಬುದನ್ನು ಆಧುನಿಕ ವೈದ್ಯವಿಜ್ಞಾನ ಪ್ರತಿಪಾದಿಸುತ್ತದೆ. ಜೀವಕೋಶಗಳ ಗುಣಪಡಿಸುವಿಕೆ ಎಂದರೆ ಜೀವಕೋಶಗಳನ್ನು ಮತ್ತೆ ಸಾಮಾನ್ಯ ಚಟುವಟಿಕೆಯಲ್ಲಿ ಮರುಸ್ಥಾಪಿಸುವುದೇ ಆಗಿರುತ್ತದೆ. ಜೀವಕೋಶಗಳು ನಿರಂತರವಾಗಿ ಕಾರ್ಯನಿರತವಾಗಿರುತ್ತವೆ. ಪ್ರತಿಯೊಂದು ಜೀವಕೋಶವೂ ತನ್ನದೇ ಆದ ನಿರ್ದಿಷ್ಟ ಕಾರ್ಯಭಾರವನ್ನು ಏಕಕಾಲದಲ್ಲಿ ಏಕಾಂಗಿಯಾಗಿಯೂ, ಸಮೂಹವಾಗಿಯೂ ನಿರ್ವಹಿಸುತ್ತದೆ. ಜೀವಕೋಶಗಳಲ್ಲಿ ಅನೇಕ ತಂಡಗಳಿದ್ದು ಒಂದೊಂದು ತಂಡವೂ ಒಂದೊಂದು ಅಂಗಕ್ಕೆ ಸಂಯೋಜಿತವಾಗಿರುತ್ತದೆ. ಕೆಲವೊಂದು ಜೀವಕೋಶಗಳು ದೈನಂದಿನ ಕಾರ್ಯಭಾರದಲ್ಲಿ ಸಕ್ರಿಯವಾಗಿದ್ದರೆ; ಇನ್ನು ಕೆಲವು ಅಂಗಾಂಗಗಳು, ಸ್ನಾಯುಗಳು, ಮೂಳೆಗಳ ನಿರ್ಮಾಣದಲ್ಲಿ ತೊಡಗಿರುತ್ತವೆ. ಅಗತ್ಯವಿರುವ ರಸಗಳು, ದ್ರವಗಳು, ರಾಸಾಯನಿಕ ಸಂಯುಕ್ತಗಳ ತಯಾರಿ ಮತ್ತು ಸ್ರವಿಸುವಿಕೆಯಲ್ಲಿ ಒಂದಷ್ಟು ನಿರತವಾಗಿದ್ದರೆ, ಕೆಲವೊಂದಷ್ಟು ಮೀಸಲು ಸೇವೆಗೆ ನಿಗದಿಯಾಗಿರುತ್ತವೆ. ಒಂದು ವರ್ಗವು ಸ್ಥಳದಿಂದ ಸ್ಥಳಕ್ಕೆ ನಿರಂತರ ಚಲನೆಯಲ್ಲಿದ್ದರೆ; ಇನ್ನು ಕೆಲವು ನಿರಂತರವಾಗಿ ಸಾಗಾಣಿಕೆಯಲ್ಲಿ ವ್ಯಸ್ತವಾಗಿರುತ್ತವೆ. ದೈನಂದಿನ ಸ್ವಚ್ಛತೆ, ಸಾಗಾಣಿಕೆ, ಬಾಹ್ಯಶತ್ರುಗಳಿಂದ ರಕ್ಷಣೆ-ಹೀಗೆ ಒಂದು ನಿರಂತರವಾದ ಪಾಲನಾವ್ಯವಸ್ಥೆಯಲ್ಲಿ ತೊಡಗಿಕೊಂಡಿರುತ್ತವೆ. ಮಿದುಳಿನ ಜೀವಕೋಶಗಳು ಅತ್ಯಂತ ಹೆಚ್ಚು ಸಂಘಟಿತವಾಗಿದ್ದು, ಕಾರ್ಯವೈಖರಿಯಲ್ಲಿ ಇತರರಿಂದ ವಿಭಿನ್ನವಾಗಿವೆ. ನರಕೋಶಗಳು ಜೀವಂತ ಸಂವಹನ ವ್ಯವಸ್ಥೆಯಾಗಿ ದೇಹದ ಎಲ್ಲಾ ಭಾಗಗಳಿಗೆ ಸಂದೇಶವನ್ನೊಯ್ಯುವ ತಮ್ಮ ಹೊಣೆಗಾರಿಕೆ ನಿಭಾಯಿಸುತ್ತವೆ. ಇಷ್ಟೆಲ್ಲಾ ಕರ್ತವ್ಯನಿರ್ವಹಣೆಯ ಮಧ್ಯೆಯೂ ಪ್ರತಿಯೊಂದು ಜೀವಕೋಶವೂ ತನ್ನ ಅಕ್ಕಪಕ್ಕದ ಜೀವಕೋಶಗಳೊಂದಿಗೆ ನಿರಂತರ ಸಂಪರ್ಕ ಮತ್ತು ಸಂವಹನದಲ್ಲಿರುತ್ತವೆ. ದೇಹದ ಯಾವುದೇ ಭಾಗದ ಜೀವಕೋಶಗಳ ಕಾರ್ಯನಿರ್ವಹಣೆಯಲ್ಲಿನ ವ್ಯತ್ಯಾಸ ರೋಗಮೂಲವಾಗಿ ಬದಲಾಗುತ್ತದೆ.
ಜೀವಕೋಶಗಳ ಸಮುದಾಯದಲ್ಲಿ ರಕ್ತಕಣಗಳು ಅತ್ಯಂತ ಪ್ರಮುಖ ಸದಸ್ಯರಾಗಿದ್ದು ಸಂಖ್ಯೆಯಲ್ಲಿ ಸುಮಾರು ೭೫೦೦,೦೦,೦೦,೦೦೦ (ಏಳು ಸಾವಿರದೈನೂರು ಕೋಟಿ) ರಷ್ಟಿದ್ದು, ಮನುಷ್ಯನ ಅಸ್ತಿತ್ವದಲ್ಲಿ ಇವುಗಳ ಪಾತ್ರ ಅತ್ಯಂತ ಮಹತ್ವದ್ದು! ಸಮುದ್ರದಲ್ಲಿ ಸರಕು ಸಾಗಿಸುವ ಹಡಗುಗಳಂತೆ ಇವುಗಳ ಪಾತ್ರವಿರುತ್ತದೆ. ಆ ಪೈಕಿ ದುರಸ್ತಿ ಕಾರ್ಯಕ್ಕಾಗಿಯೇ ಹೊತ್ತುಪಡಿಸಿದ ಜೀವಕೋಶಗಳಿರುತ್ತವೆ! ಸಾಮಾನ್ಯ ಸಂದರ್ಭಗಳಲ್ಲಿ ಶಾಂತಿಸುವ್ಯವಸ್ಥೆಯ ಅಥವಾ ಸಂದರ್ಭ ಒದಗಿದಾಗ ಅಂದರೆ; ಮನುಷ್ಯ ತೀವ್ರವಾಗಿ ರೋಗಿಷ್ಠನಾದಾಗ ಸೂಕ್ಷ್ಮಜೀವಿಗಳು, ವೈರಸ್‌ಗಳು, ಬ್ಯಾಕ್ಟೀರಿಯಾಗಳೊಂದಿಗೆ ಒಂದು ಪೂರ್ಣಪ್ರಮಾಣದ ಯುದ್ಧವನ್ನೂ ಮಾಡಬೇಕಾಗುವ ಹೊಣೆಗಾರಿಕೆಯೂ ಇವುಗಳ ಮೇಲಿದೆ. ಕೆಲವೊಮ್ಮೆ ಬಾಹ್ಯ ಅತಿಕ್ರಮಣಕಾರರು ಹೆಚ್ಚು ಸಂಖ್ಯೆಯಲ್ಲಿದ್ದಾಗ ಮೊಡವೆಗಳು, ಹುಣ್ಣುಗಳು ಮುಂತಾದ ರೂಪದಲ್ಲಿ ಹೊರಹಾಕುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ; ಸಂಪೂರ್ಣ ಭೌತಿಕ ಪ್ರಕ್ರಿಯೆಯು ಈ ಸಣ್ಣ ಕೋಶಗಳಿಂದ ಅವಿಶ್ರಾಂತವಾಗಿ ನಡೆಯುತ್ತಲೇ ಇರುತ್ತದೆ. ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಿದ ನಂತರದಲ್ಲಿ ಸಾಯುತ್ತವೆ ಮತ್ತು ತ್ಯಾಜ್ಯದ ರೂಪದಲ್ಲಿ ದೇಹದಿಂದ ಹೊರಹಾಕಲ್ಪಡುತ್ತವೆ.
ಪ್ರತಿಯೊಂದು ಜೀವಕೋಶವೂ ತನ್ನ ಆಹಾರದ ಆಯ್ಕೆ ಅಥವಾ ಇನ್ನಿತರ ಯಾವುದೇ ಉದ್ದೇಶಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುವ ಬುದ್ಧಿವಂತಿಕೆಯನ್ನು ಹೊಂದಿದೆ. ಆನಂದ, ಆಶ್ಚರ್ಯ, ಭಯವನ್ನು ಅನುಭವಿಸುವ; ವಿಭಿನ್ನಮಟ್ಟದ ಭಾವನೆಗಳನ್ನು ಅನುಭವಿಸುವ ಮತ್ತು ಪ್ರಚೋದನೆಗಳಿಗೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವ ಸೂಕ್ಷö್ಮ ಸಂವೇದನಾಶೀಲತೆಯೂ ಜೀವಕೋಶಗಳಿಗಿದೆ ಎಂಬುದನ್ನು ಪ್ರಯೋಗಗಳು ದೃಢಪಡಿಸಿವೆ. ಮಾನವನ ಕಲ್ಯಾಣಕ್ಕಾಗಿಯೇ ತಮ್ಮ ಜೀವಮಾನವನ್ನು ಮೀಸಲಿರಿಸಿ ತಮ್ಮ ಕರ್ತವ್ಯಪರಾಯಣತೆಯನ್ನು ಅತ್ಯುಚ್ಛಮಟ್ಟದಲ್ಲಿ ಕಾಯ್ದುಕೊಳ್ಳುವ ಜೀವಕೋಶಗಳ ಪ್ರಾಮಾಣಿಕ ಕಾರ್ಯತತ್ಪರತೆಗೆ ಮಾನವ ಎಷ್ಟು ಚಿರಋಣಿಯಾಗಿದ್ದರೂ ಕಡಿಮೆಯೇ! ನಮ್ಮಂತೆಯೇ ಜೀವಕೋಶಕ್ಕೂ ಮನಸ್ಸಿದೆ; ಭಾವನೆಗಳಿವೆ; ಪ್ರತಿಸ್ಪಂದನೆಗಳಿವೆ. ಜೀವಕೋಶಗಳ ಈ ಭಾವನೆ, ಪ್ರತಿಸ್ಪಂದನೆಗಳೇ ವ್ಯಕ್ತಿಯ ಒಟ್ಟಾರೆ ಮನಃಸ್ಥಿತಿಯ ನಿರ್ಮಾತೃಗಳು.
ಮಾನಸಿಕ ಸ್ಥಿತಿಗಳ ಶಕ್ತಿಯಿಂದ ದೈಹಿಕ ಕಾಯಿಲೆಗಳನ್ನು ಗುಣಪಡಿಸುವ ವಿದ್ಯಮಾನಗಳ ವೈಜ್ಞಾನಿಕ ಅಧ್ಯಯನದ ನಂತರ ಮತ್ತು ವಿವಿಧ ರೂಪಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಾಮಾನ್ಯ ತತ್ವವಿದೆ ಎಂಬ ಅಂಶವನ್ನು ಗುರುತಿಸಿದ ನಂತರ ಚಿಕಿತ್ಸಾ ಕ್ಷೇತ್ರದಲ್ಲಿ “ನಂಬಿಕೆ ಚಿಕಿತ್ಸೆ” ಎಂಬ ಪದವು ಹೊರಹೊಮ್ಮಿತು. ಈ ಪದವನ್ನು ಮಾನಸಿಕ ಚಿಕಿತ್ಸೆಯ ಸಾಮಾನ್ಯ ವರ್ಗೀಕರಣದ ಅಡಿಯಲ್ಲಿ ಬರುವ ಎಲ್ಲಾ ನಿದರ್ಶನಗಳು ಮತ್ತು ಚಿಕಿತ್ಸೆಗಳ ರೂಪಗಳನ್ನು ಗೊತ್ತುಪಡಿಸಲು ಬಳಸಲಾಗುತ್ತದೆ. ಇದರ ಪೂರ್ವದಲ್ಲಿ ಇದು ಪ್ರಾರ್ಥನೆ ಚಿಕಿತ್ಸೆ';ದೈವಿಕ ಚಿಕಿತ್ಸೆ'ಯಂಥ ಧಾರ್ಮಿಕ ಆಯಾಮದಲ್ಲಿನ ಬಳಕೆಗೆ ಸೀಮಿತವಾಗಿತ್ತು. ಆದರೆ ಈಗ ವಿಶಾಲಾರ್ಥದಲ್ಲಿ ಬಳಸಲ್ಪಡುತ್ತಿದೆ ಮತ್ತು ಮನೋವಿಜ್ಞಾನ' ಮತ್ತುಸಂಮ್ಮೋಹನ ಚಿಕಿತ್ಸೆ'ಗಳನ್ನೂ ಒಳಗೊಂಡಿದೆ. ಪ್ರಾರ್ಥನೆ ಚಿಕಿತ್ಸೆ, ದೈವಿಕ ಚಿಕಿತ್ಸೆ, ಮನೋಚಿಕಿತ್ಸೆಯಂತಹ ವಿಧಾನಗಳೊಂದಿಗೆ ಆಕರ್ಷಕ ಜಾಹೀರಾತುಗಳು, ಹೇಳಿಕೆಗಳು ಅಥವಾ ಕುಟುಂಬದ ಸಾಂಪ್ರದಾಯಿಕ ಹಿನ್ನೆಲೆ ಅನಾರೋಗ್ಯಪೀಡಿತ ವ್ಯಕ್ತಿಯ ನಂಬಿಕೆಯನ್ನು ಬಲಗೊಳಿಸುತ್ತದೆ ಮತ್ತು ಶೀಘ್ರವಾಗಿ ಗುಣವಾಗಲು ಸಹಕರಿಸುತ್ತದೆ.
ಮನಸ್ಸಿನ ಸ್ಥಿತಿಗಳು ರೋಗವನ್ನು ಉಂಟುಮಾಡಬಹುದೇ ಅಥವಾ ಗುಣಪಡಿಸಬಹುದೇ ಎಂಬೀ ಪ್ರಶ್ನೆಗೆ ದಿನನಿತ್ಯ ಸಂಭವಿಸುತ್ತಿರುವ ಸಾಕಷ್ಟು ಘಟನೆಗಳು ಸಮರ್ಥ ಉತ್ತರ ನೀಡಬಲ್ಲವು. ಗ್ರಂಥಿಗಳು ಮತ್ತು ಅವುಗಳ ಸ್ರವಿಸುವಿಕೆಯು ಭಾವನೆಗಳಿಂದ ಗಮನಾರ್ಹವಾಗಿ ಪ್ರಭಾವಿತವಾಗಿರುತ್ತವೆ. ಭಯದ ಭಾವನೆ ಉಂಟಾದಾಗ ಲಾಲಾರಸದ ಹರಿಯುವಿಕೆ ಸ್ಥಗಿತಗೊಳ್ಳುತ್ತದೆ ಮತ್ತು ಬೆವರುವಿಕೆ ಆರಂಭವಾಗುತ್ತದೆ. ದುಃಖವು ಲ್ಯಾಕ್ರಿಮಲ್ ಗ್ರಂಥಿಗಳು ಕಣ್ಣೀರನ್ನು ಸುರಿಸಲು ಕಾರಣವಾಗುತ್ತದೆ. ಸಂತೋಷವು ಜೀರ್ಣಕ್ರಿಯೆಯನ್ನು ಶೀಘ್ರಗೊಳಿಸಿದರೆ; ಅತೃಪ್ತಿ ಜೀರ್ಣಕ್ರಿಯೆಯನ್ನು ಸಂಕೀರ್ಣಗೊಳಿಸುತ್ತದೆ. ಮೂತ್ರಕೋಶವು ಭಾವನಾತ್ಮಕ ಸ್ಥಿತಿಗಳಿಗೆ ವಿಶೇಷವಾಗಿ ಸ್ಪಂದಿಸುತ್ತದೆ. ಸಾಮಾನ್ಯವಾಗಿ ಆಹ್ಲಾದಕರ ಭಾವನೆಗಳು ದೇಹದಲ್ಲಿ ಸಾಮಾನ್ಯ ಕಾರ್ಯಗಳನ್ನು ಪುನಃಸ್ಥಾಪಿಸಲು ಒಲವು ತೋರಿದರೆ; ಅಹಿತಕರ ಭಾವನೆಗಳು ಗ್ರಂಥಿಗಳ ಸಾಮರ್ಥ್ಯವನ್ನು ವಿರೂಪಗೊಳಿಸುತ್ತವೆ. ದೇಹದೊಳಗೆ ಅನೇಕ ಗ್ರಂಥಿಗಳಿದ್ದು, ಅವೆಲ್ಲವುಗಳ ಕ್ರಿಯೆಯನ್ನು ನಾವು ಗಮನಿಸಲು ಸಾಧ್ಯವಿಲ್ಲ; ಆದರೆ ಅವುಗಳು ನಮ್ಮ ಭಾವನಾತ್ಮಕ ಸ್ಥಿತಿಗಳಿಂದ ಪ್ರಭಾವಿತವಾಗುತ್ತವೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಉದಾಹರಣೆಗೆ; ನಿಂಬೆರಸದ ಊಹನೆಯು ಲಾಲಾರಸದ ಹರಿವನ್ನು ಉತ್ತೇಜಿಸುತ್ತದೆ ಎಂಬ ಹೇಳಿಕೆಯಲ್ಲಿ ನಂಬಿಕೆ ಇಲ್ಲದಿರಬಹುದು; ಆದರೆ ತನ್ನ ಬಾಯಿಗೆ ನಿಂಬೆಹಣ್ಣಿನ ರಸವನ್ನು ಹಿಂಡುತ್ತಿರುವುದನ್ನು ಒಂದು ಕ್ಷಣ ಊಹಿಸಿದರೆ ಆತನ ನಂಬಿಕೆಯನ್ನು ಲಕ್ಷಿಸದೆಯೇ ಲಾಲಾರಸವು ತಕ್ಷಣವೇ ಮುಕ್ತವಾಗಿ ಹರಿಯಲು ಪ್ರಾರಂಭಿಸುತ್ತದೆ. ನಾವು ರೂಢಿಸಿಕೊಳ್ಳುವ ನಂಬಿಕೆಗಳ ಆಧಾರದಲ್ಲಿ ದೇಹದ ಇತರ ಗ್ರಂಥಿಗಳೂ ಇದೇ ರೀತಿಯ ಪ್ರತಿಸ್ಪಂದನೆಯನ್ನು ವ್ಯಕ್ತಪಡಿಸುತ್ತವೆ ಎಂಬುದು ವಿಶೇಷ.
ಅನೇಕ ಸಂದರ್ಭಗಳಲ್ಲಿ ಕ್ಯಾನ್ಸರಿನ ಮೂಲ ಆ ವ್ಯಕ್ತಿ ದೀರ್ಘಕಾಲದ ಆತಂಕದಲ್ಲಿ ಇದ್ದುದನ್ನು ಪ್ರಯೋಗಗಳು ದೃಢಪಡಿಸುತ್ತವೆ. ಯಕೃತ್ತಿನ ಪ್ರಾಥಮಿಕ ಕ್ಯಾನ್ಸರ್ ಹೊಂದಿರುವವರು ಇದರ ಕಾರಣವನ್ನು ದೀರ್ಘಕಾಲದ ದುಃಖ ಮತ್ತು ಆತಂಕದಿಂದ ಬದುಕಿರುವುದರಲ್ಲಿ ಕಂಡುಕೊಳ್ಳಬಹುದು. ಇಂತಹ ಪ್ರಕರಣಗಳನ್ನು ಕೇವಲ ಆಕಸ್ಮಿಕ ಎಂದು ತಳ್ಳಿಹಾಕುವಂತಿಲ್ಲ. ಗಂಭೀರ ಸ್ವರೂಪದ ಚರ್ಮದ ಕಿರಿಕಿರಿ, ಅಪಸ್ಮಾರ, ಉನ್ಮಾದಗಳಲ್ಲಿ ಆಗಾಗ್ಗೆ ಅತಿಯಾದ ಮಾನಸಿಕ ಒತ್ತಡವನ್ನು ಅನುಭವಿಸಿದ ಪರಿಣಾಮವಾಗಿರುತ್ತದೆ. ಸಿಡುಕಿನ, ದುರುದ್ದೇಶಪೂರಿತ ಮತ್ತು ಖಿನ್ನತೆಯ ಭಾವನೆಗಳು ಜೈವಿಕ ವ್ಯವಸ್ಥೆಯಲ್ಲಿ ಹಾನಿಕಾರಕ ವಿಷಯುಕ್ತ ಸಂಯುಕ್ತಗಳನ್ನು ಸೃಷ್ಟಿಸುತ್ತವೆ ಎಂಬುದು ವೈಜ್ಞಾನಿಕ ಸಂಶೋಧನೆಗಳ ಸಾರ. ಅದೇ ಸಂತೋಷದ ಭಾವನೆಗಳು ದೇಹದಲ್ಲಿ ಪೌಷ್ಠಿಕಾಂಶಯುಕ್ತ ರಾಸಾಯನಿಕ ಸಂಯುಕ್ತಗಳನ್ನು ಉತ್ಪಾದಿಸಲು ಸಹಕರಿಸುತ್ತದೆ ಮತ್ತು ಜೀವಕೋಶಗಳ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತವೆ.