For the best experience, open
https://m.samyuktakarnataka.in
on your mobile browser.

ಜೀವಕೋಶಗಳ ಮಹೋನ್ನತ ವ್ಯಕ್ತಿತ್ವ

03:31 AM Sep 24, 2024 IST | Samyukta Karnataka
ಜೀವಕೋಶಗಳ ಮಹೋನ್ನತ ವ್ಯಕ್ತಿತ್ವ

ಜೀವಕೋಶಗಳ ಮಟ್ಟದಲ್ಲಿ ದಿನನಿತ್ಯವೂ ಸಂಭವಿಸುವ ಅದ್ಭುತ ಸತ್ಯಘಟನೆಗಳನ್ನು ಒಮ್ಮೆ ಅವಲೋಕಿಸಿದರೆ ಅವುಗಳ ಮಹೋನ್ನತ ಉದ್ದೇಶ, ವ್ಯಕ್ತಿತ್ವ ಹಾಗೂ ಕಾರ್ಯಶೈಲಿಯ ಪರಿಚಯವಾಗುತ್ತದೆ. ದೇಹದ ಪ್ರತಿಯೊಂದು ಜೀವಕೋಶವೂ ನಮ್ಮ ಇಡೀ ಯೋಗಕ್ಷೇಮಕ್ಕಾಗಿ ದುಡಿಯುವ ಉನ್ನತ ಉದ್ದೇಶವನ್ನು ಹೊಂದಿದೆ. ಅಗತ್ಯವಿದ್ದರೆ ದೇಹವನ್ನು ರಕ್ಷಿಸಲು ತನ್ನನ್ನು ತಾನೇ ಅರ್ಪಿಸಿಕೊಳ್ಳುತ್ತದೆ. ಜೀವಕೋಶದ ಜೀವಿತಾವಧಿಯು ನಮ್ಮ ಆಯುಷ್ಯದ ಒಂದು ಅತಿಸಣ್ಣ ಭಾಗ. ಸಾಮಾನ್ಯವಾಗಿ ಪ್ರತಿ ಗಂಟೆಗೆ ಚರ್ಮದ ಜೀವಕೋಶಗಳು ಆಕ್ರಮಣಕಾರಿ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತಲೇ ಸಾವಿರಾರು ಸಂಖ್ಯೆಯಲ್ಲಿ ಸಾಯುತ್ತಿರುತ್ತವೆ. ಇಲ್ಲಿ ಜೀವಕೋಶಗಳಿಗೆ ಸ್ವಾರ್ಥವು ಒಂದು ಆಯ್ಕೆಯಾಗಿರುವುದಿಲ್ಲ. ಪಾಲ್ಗೊಳ್ಳುವಿಕೆಯ ವಿಚಾರ ಬಂದಾಗ ಪ್ರತಿಯೊಂದು ಜೀವಕೋಶವೂ ಇತರ ಜೀವಕೋಶಗಳೊಂದಿಗೆ ಪರಸ್ಪರ ಸಂಪರ್ಕದಲ್ಲಿರುತ್ತದೆ. ಸಂದೇಶವಾಹಕ ಜೀವಕೋಶಗಳು ದೇಹಾದ್ಯಂತ ಅವಿರತವಾಗಿ ಸಂಚರಿಸುತ್ತಾ ಸಂಬಂಧಪಟ್ಟ ಅಂಗಗಳಿಗೆ ಸಕಾಲದಲ್ಲಿ ಸಂದೇಶವನ್ನು ತಲುಪಿಸುವಲ್ಲಿ ನಿರತವಾಗಿರುತ್ತವೆ. ಸಂವಹನವನ್ನು ನಿರಾಕರಿಸುವುದಾಗಲೀ, ತಟಸ್ಥವಾಗಿರುವುದಾಗಲೀ ಇವುಗಳ ಆದ್ಯತೆಯಲ್ಲ. ಜೀವಕೋಶಗಳು ಎಷ್ಟರಮಟ್ಟಿಗೆ ಜಾಗೃತವಾಗಿರುತ್ತವೆಂದರೆೆ; ಕ್ಷಣಕ್ಷಣದ ಪರಿಸ್ಥಿತಿಗೆ ಕೂಡಲೇ ಹೊಂದಿಕೊಂಡು ಸಹಾಯ ಅಥವಾ ಯುದ್ಧದ ಮೂಲಕ ತಕ್ಷಣವೇ ಪ್ರತಿಕ್ರಿಯಿಸುತ್ತವೆ. ತಮ್ಮ ವೈಯಕ್ತಿಕ ಅಭ್ಯಾಸಗಳಲ್ಲಿ ಕಳೆದುಹೋಗುವುದು ಇವುಗಳ ಜಾಯಮಾನವಲ್ಲ.
ಸ್ವೀಕಾರಾರ್ಹತೆಯ ವಿಚಾರದಲ್ಲಿ ಇವುಗಳದ್ದು ಅತ್ಯಂತ ಉದಾರ ಮನೋಭಾವ. ಪ್ರತಿಯೊಂದು ಜೀವಕೋಶವೂ ಇನ್ನೊಂದು ಜೀವಕೋಶವನ್ನು ಸಮಾನ ಹಾಗೂ ಪ್ರಾಮುಖ್ಯವೆಂದೇ ಸ್ವೀಕರಿಸುತ್ತದೆ. ದೇಹದಲ್ಲಿನ ಪ್ರತಿಯೊಂದು ಚಟುವಟಿಕೆಯೂ ಪರಸ್ಪರ ಅವಲಂಬಿತವಾಗಿದ್ದು, ಯಾವುದೇ ಜೀವಕೋಶವೂ ಏಕಾಂಗಿಯಾಗಿ ತಾನೇ ಮೇಲು' ಎಂಬ ಮನೋಭಾವವನ್ನು ಪ್ರಕಟಿಸುವುದಿಲ್ಲ. ಸೃಜನಶೀಲತೆಯಲ್ಲಿ ಜೀವಕೋಶಗಳದ್ದು ಅಸಾಧಾರಣ ಸಾಮರ್ಥ್ಯ. ಪ್ರತಿಯೊಂದು ಜೀವಕೋಶಕ್ಕೂ ತನ್ನದೇ ಆದ ವಿಶಿಷ್ಟ ಕಾರ್ಯಗಳ ಹೊಣೆಗಾರಿಕೆಯಿದ್ದರೂ (ಉದಾಹರಣೆಗೆ; ಯಕೃತ್ತಿನ ಜೀವಕೋಶಗಳು ೫೦ ಬಗೆಯ ಕಾರ್ಯಭಾರಗಳನ್ನು ನಿರ್ವಹಿಸುತ್ತವೆ) ಇತರ ಕೋಶಗಳೊಂದಿಗೆ ಸೃಜನಾತ್ಮಕವಾಗಿ ಪಾಲ್ಗೊಳ್ಳುತ್ತವೆ. ಎಲ್ಲಿವರೆಗೆಂದರೆ; ಒಬ್ಬ ವ್ಯಕ್ತಿಯು ಹಿಂದೆಂದೂ ತಿಂದಿರದ ಆಹಾರವನ್ನು ಜೀರ್ಣಿಸುವುದಾಗಲೀ, ಹಿಂದೆಂದೂ ಯೋಚಿಸದ ಆಲೋಚನೆಗಳನ್ನು ಯೋಚಿಸುವುದಾಗಲೀ, ಹಿಂದೆಂದೂ ನೋಡಿರದ ಘಟನೆಗಳನ್ನು ಅರಗಿಸಿಕೊಳ್ಳುವುದಾಗಲೀ ಸಂಭವಿಸಿದಾಗ ತಕ್ಷಣವೇ ಹೊಸ ಸನ್ನಿವೇಶಗಳಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತವೆ. ಹಳೆಯ ನಡವಳಿಕೆಗೆ ಅಂಟಿಕೊಳ್ಳುವುದು ಇವುಗಳ ಜಾಯಮಾನವಲ್ಲ.ಈ ಕ್ಷಣದ ಬದುಕುವಿಕೆ'ಯಲ್ಲಿ ಜೀವಕೋಶಗಳು ವಿಶ್ರಾಂತಿ ಹಾಗೂ ಚಟುವಟಿಕೆಯ ನೈಸರ್ಗಿಕಚಕ್ರವನ್ನು ಪಾಲಿಸುತ್ತವೆ. ಹಾರ್ಮೋನು ಸ್ರವಿಸುವಿಕೆಯಲ್ಲಿನ ಏರಿಳಿತಗಳು, ರಕ್ತದೊತ್ತಡ, ಜೀರ್ಣಕ್ರಿಯೆಯಲ್ಲಿನ ವ್ಯತ್ಯಾಸದಂತಹ ಹಲವಾರು ಸಮಸ್ಯೆಗಳ ಮೂಲಕ ಪ್ರಕಟಪಡಿಸುತ್ತದೆಯಾದರೂ ನಿದ್ರಾಸಮಯದಲ್ಲಿ ಇವೆಲ್ಲವನ್ನೂ ಸರಿಪಡಿಸುವ ಮತ್ತು ಸಮತೋಲನಗೊಳಿಸುವ ಪ್ರಕ್ರಿಯೆಯನ್ನು ನಿರ್ವಹಿಸುತ್ತವೆ. ಮನುಷ್ಯನಿಗೆ ನಿದ್ದೇ ಏಕೆ ಮುಖ್ಯ' ಎಂಬುದು ಇಂದಿಗೂ ವೈದ್ಯಕೀಯ ರಹಸ್ಯವಾಗಿಯೇ ಉಳಿದಿದೆ. ನಿದ್ರಾಸಮಯದ ನಿಷ್ಕಿçೃಯತೆಯ ಮೌನದಲ್ಲಿ ಜೀವಕೋಶಗಳು ದೇಹದ ಭವಿಷ್ಯವನ್ನು ರೂಪಿಸುತ್ತಾ ಇರುತ್ತವೆ. ಇನ್ನು ದಕ್ಷತೆಯ ವಿಚಾರದಲ್ಲಿ ಜೀವಕೋಶಗಳಿಗೆ ಸರಿಸಾಟಿಯಿಲ್ಲ. ತಮ್ಮೆಲ್ಲಾ ಕಾರ್ಯಭಾರಗಳನ್ನು ನಿರ್ವಹಿಸುವಲ್ಲಿ ಜೀವಕೋಶಗಳು ದೇಹದ ಶಕ್ತಿಭಾಗದ ಅತ್ಯಂತ ಕನಿಷ್ಠ ಪ್ರಮಾಣವನ್ನಷ್ಟೇ ಬಳಸಿಕೊಳ್ಳುತ್ತವೆ. ವಿಶಿಷ್ಟತೆಯೇನೆಂದರೆ; ಜೀವಕೋಶವು ತನ್ನ ಕೋಶದ ಗೋಡೆಯೊಳಗೆ ಕೇವಲ ಮೂರು ಸೆಕೆಂಡುಗಳಿಗೆ ಅಗತ್ಯವಿರುವಷ್ಟು ಮಾತ್ರವೇ ಆಹಾರ ಮತ್ತು ಆಮ್ಲಜನಕವನ್ನು ತನಗಾಗಿ ಸಂಗ್ರಹಿಸಿಡುತ್ತದೆ. ಅತಿಯಾದ ಸೇವನೆ ಅಥವಾ ಸಂಗ್ರಹಣೆ ಇದರ ಆದ್ಯತೆಯಲ್ಲ. ಜೀವಕೋಶಗಳದ್ದುಅಮರತ್ವ'ದ ಪ್ರತಿಪಾದನೆ. ದೇಹಾಂತ್ಯದ ಸಂದರ್ಭದಲ್ಲಿ ಜೀವಕೋಶಗಳು ತಮ್ಮ ಜ್ಞಾನ, ಅನುಭವ ಮತ್ತು ಪ್ರತಿಭೆಯನ್ನು ಮುಂದಿನ ಜನ್ಮಕ್ಕೆ ವರ್ಗಾಯಿಸುವ ಸಲುವಾಗಿ ತಮ್ಮನ್ನು ತಾವು ಪುನರುತ್ಪತ್ತಿ ಮಾಡಿಕೊಳ್ಳುವ ಮೂಲಕ ಯಾವುದನ್ನೂ ತಮಗಾಗಿ ಹಿಡಿದಿಟ್ಟುಕೊಳ್ಳುವುದಿಲ್ಲ. ಭೌತಿಕಸ್ತರದಲ್ಲಿ ದೇಹಾಂತ್ಯವಾದರೂ ಆತ್ಮದ ಸ್ತರದಲ್ಲಿ ತಮ್ಮ ಜೀವನಾನುಭವವನ್ನು ಮುಂದುವರಿಸಿ ಅಮರತ್ವವನ್ನು ನಿರಂತರವಾಗಿಸುವ ಮೂಲಕ ಪೀಳಿಗೆಯ ಆಯ್ಕೆ ತಮ್ಮ ಆದ್ಯತೆಯಲ್ಲ ಎಂಬುದನ್ನು ಶ್ರುತಪಡಿಸುತ್ತವೆ. ೨೫೦ಕ್ಕೂ ಹೆಚ್ಚು ವಿಧದ ಜೀವಕೋಶಗಳು ನಮ್ಮ ದೇಹದಲ್ಲಿ ತಮ್ಮ ದೈನಂದಿನ ವ್ಯವಹಾರವನ್ನು ನಡೆಸುತ್ತವೆ. ಪಿತ್ತಜನಕಾಂಗದ ಕೋಶಗಳು ತಮ್ಮ ಪಾಲಿನ ೫೦ಕ್ಕೂ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಸ್ನಾಯು, ಮೂತ್ರಪಿಂಡ, ಹೃದಯ ಅಥವಾ ಮಿದುಳಿನ ಕೋಶಗಳ ಕಾರ್ಯಚಟುವಟಿಕೆಗಳಲ್ಲಿ ಅತಿಕ್ರಮಿಸುವುದಿಲ್ಲ. ಒಂದುವೇಳೆ ಅತಿಕ್ರಮಿಸಿದರೆ ಅದು ದುರಂತವಾಗಿ ಪರಿಣಮಿಸುತ್ತದೆ. ಒಂದೊಮ್ಮೆ ಹಾಗಾಗುವುದು ನಮ್ಮ ಆಲೋಚನಾಕ್ರಮದಲ್ಲಿ ತೀವ್ರಬಗೆಯ ಏರುಪೇರುಗಳುಂಟಾದಾಗ ಮಾತ್ರವೇ. ಇವೆಲ್ಲವೂ ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿಯೂ ಆದಿಯಿಂದ ಅನೂಚಾನವಾಗಿ ಸಂಭವಿಸಿಕೊಂಡು ಬರುತ್ತಿರುವ ವಿದ್ಯಮಾನ. ಈ ಮೇಲಿನ ವಿವರಣೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪದದ ಪ್ರತಿಯೊಂದು ಅರ್ಥದಲ್ಲೂ ಅಧ್ಯಾತ್ಮಿಕಸ್ಪರ್ಶ ಹಾಗೂ ಗುಣಗಳನ್ನು ಕಾಣಬಹುದು.
ಮನುಷ್ಯನ ಮೂಲಭೂತ ಸ್ವಭಾವ ಮತ್ತು ಅಸ್ತಿತ್ವ ಸಂಪೂರ್ಣವಾಗಿ ಜೀವಕೋಶಗಳ ಮೇಲೆಯೇ ಆಧರಿಸಿದೆ ಎಂಬುದು ಹೌದಾದರೆ ಜೀವಕೋಶಗಳಲ್ಲಿ ಇಷ್ಟೆಲ್ಲಾ ಮಹೋನ್ನತ ಗುಣಗಳಿದ್ದರೂ ಮನುಷ್ಯನೇಕೆ ಇಷ್ಟೊಂದು ಪ್ರಮಾಣದಲ್ಲಿ ಸ್ವಾರ್ಥಿಯಾಗುತ್ತಾನೆ? ಅವನ ಚಿಂತನೆಯಲ್ಲೇಕೆ ಅಧ್ಯಾತ್ಮಿಕತೆ ಪ್ರಕಟವಾಗುತ್ತಿಲ್ಲ? ಅಮರತ್ವವು ಸಾವಿನ ನಂತರದ ಜೀವನದಲ್ಲಿ ಮುಂದುವರಿಯುವುದು ನಿಶ್ಚಿತವಾಗಿದ್ದರೂ ಸಾವಿನ ಬಗೆಗೇಕೆ ಅಷ್ಟೊಂದು ಭಯ? ಜೀವಕೋಶಗಳ ಗುಣಗಳ ಪಟ್ಟಿಯನ್ನು ಮತ್ತೊಮ್ಮೆ ಪರಾಮರ್ಶೆ ಮಾಡಿದಾಗ ಗಮನಿಸಿ. ಸ್ವಾರ್ಥ, ನಿರಾಕರಣೆ, ಬಹಿಷ್ಕಾರ, ಅತಿಯಾದ ಬಳಕೆ, ಗೀಳು, ಆಕ್ರಮಣಶೀಲತೆ, ದುರಾಶೆ, ವಿನಾಶಕಾರಿ ಪ್ರವೃತ್ತಿ ಇಂತಹವುಗಳೆಲ್ಲಾ ಜೀವಕೋಶಗಳಲ್ಲಿ ಕಂಡುಬರದಿದ್ದರೂ ನಾವೇಕೆ ಅವುಗಳನ್ನು ಆಕರ್ಷಿಸುತ್ತೇವೆ ಎಂಬ ಪ್ರಶ್ನೆಗೆ ಸಿಗುವ ಉತ್ತರವೇ ಕ್ಯಾನ್ಸರ್, ಹೃದಯರೋಗ, ಅತಿಬೊಜ್ಜು, ಸ್ಥೂಲಕಾಯದಂತಹ ಮಾರಣಾಂತಿಕ ಕಾಯಿಲೆಗಳಿಗೆ ಪರಿಹಾರ. ನಾವು ನಮ್ಮ ದೈಹಿಕ ಬುದ್ಧಿವಂತಿಕೆಗೆ ಮಾಡುವ ದ್ರೋಹ ಅಥವಾ ತೋರುವ ನಿರ್ಲಕ್ಷ್ಯ ನಮ್ಮೊಳಗಿನ ಪರಿಪೂರ್ಣ ಅಧ್ಯಾತ್ಮಿಕಜೀವನದ ವಿನ್ಯಾಸವನ್ನು ನಮ್ಮ ಕೈಯಾರೆ ಹಾಳುಗೆಡವುತ್ತಿರುವುದನ್ನು ಗಮನಿಸುತ್ತಿಲ್ಲ.
ಈ ಸಂಕಟಗಳ ಕಾರಣದಿಂದಲೇ ಅನೇಕರು ದುಃಖವನ್ನು ಅನುಭವಿಸಲು ಹಿಂಜರಿಯುವುದು. ನಮ್ಮ ದೇಹದ ಜೀವಕೋಶಗಳು ಇಂತಹ ಸೋಲಿನ ತರ್ಕವನ್ನು ಒಪ್ಪಿಕೊಳ್ಳುತ್ತವೆಯೇ? ನೀವು ಇರುವ ಸ್ಥಳವು ಸಾಕಷ್ಟು ಉತ್ತಮವಾಗಿಲ್ಲದಿದ್ದರೆ ಪ್ರೀತಿ, ಚಿಕಿತ್ಸೆ ಮತ್ತು ದೇವರನ್ನು ಶಾಶ್ವತವಾಗಿ ತಲುಪುವುದಿಲ್ಲ. ತಲೆಮಾರುಗಳ ಜೀವನವನ್ನು ಗೊಂದಲದಲ್ಲಿ ಕಳೆದ ನಂತರ ಈಗ ಜೀವನದ ನಿಗೂಢತೆಯು ನಮ್ಮನ್ನು ಉಳಿಸುವಂತೆ ಮಾಡಲು ನಾವು ಸಿದ್ಧರಿದ್ದೇವೆಯೇ? ಜೀವನದ ರಹಸ್ಯವು ಯಾದೃಚ್ಛಿಕ ಅಪಘಾತಗಳ ಅಭಿವ್ಯಕ್ತಿಯಲ್ಲ; ಅದು ಎಲ್ಲೆಡೆ ವ್ಯಾಪಿಸಿರುವ ಬ್ರಹ್ಮಾಂಡ ಬುದ್ಧಿಮತ್ತೆಯ ಅಭಿವ್ಯಕ್ತಿಯಾಗಿದೆ.