For the best experience, open
https://m.samyuktakarnataka.in
on your mobile browser.

ಜೀವನದ ಸಂತೃಪ್ತಿಯಲ್ಲ, ಸನ್ನಿವೇಶ ಮುಖ್ಯ

03:00 AM Apr 30, 2024 IST | Samyukta Karnataka
ಜೀವನದ ಸಂತೃಪ್ತಿಯಲ್ಲ  ಸನ್ನಿವೇಶ ಮುಖ್ಯ

ವರ್ತಮಾನದಲ್ಲಿ ಸರಿಯಾದ ಕ್ರಿಯೆಗಳನ್ನು ಮಾಡುವ ಮೂಲಕ ನಿಮ್ಮ ಭವಿಷ್ಯವನ್ನು ಸರಳವಾಗಿ ಬದಲಿಸಬಹುದು. ಯಾವುದೇ ಅಧ್ಯಾತ್ಮಿಕ ಪ್ರಕ್ರಿಯೆ ಇಲ್ಲದೆ, ಪ್ರಜ್ಞೆಯ ಯಾವುದೇ ಎತ್ತರವನ್ನು ತಲುಪದೆ ನಿಮ್ಮ ಭವಿಷ್ಯವನ್ನು ಪರಿವರ್ತಿಸಬಹುದು. ಇಂದಿನ ಸರಿಯಾದ ಕ್ರಿಯೆಗಳು ಧನಾತ್ಮಕ ಭವಿಷ್ಯವನ್ನು ರೂಪಿಸುತ್ತವೆ. ಅದೇ ಧ್ಯಾನಸ್ಥರಾದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿರುತ್ತೀರಿ. ಧ್ಯಾನಸ್ಥರಾದಾಗ ನೀವು ಕೇವಲ ಧನಾತ್ಮಕ ಕರ್ಮವನ್ನು ಸೃಷ್ಟಿಸುವುದು ಮಾತ್ರವಲ್ಲ; ಸಂಪೂರ್ಣವಾಗಿ ಹೊಸ ಕರ್ಮವನ್ನು ಸಂಗ್ರಹಿಸುವುದನ್ನು ನಿಲ್ಲಿಸುತ್ತೀರಿ.
ಕನಸುಗಳು ಕೇವಲ ನೆನಪುಗಳನ್ನು ಅಥವಾ ಸ್ಮರಣೆಯನ್ನು ಆಧರಿಸಿರುವುದರಿಂದ ನೀವು ಈಗಾಗಲೇ ತಿಳಿದಿರುವ ನೆನಪಿನ ಹೆಚ್ಚು ವರ್ಧಿತ ಮತ್ತು ಹೆಚ್ಚು ಸುಧಾರಿತ ಆವೃತ್ತಿಯೇ ಆಗಿರುತ್ತದಷ್ಟೆ. ನಿಮ್ಮ ಕನಸುಗಳು ನನಸಾದರೆ ಅದರಲ್ಲೇನೂ ವಿಶೇಷತೆಯಿಲ್ಲ; ಆದರೆ ಕನಸುಗಳು ಭಗ್ನವಾದಾಗಲೇ ಜೀವನದಲ್ಲಿ ನೆನಪುಗಳಿಗಿಂತ ದೊಡ್ಡದಾದ ಏನಾದರೂ ಘಟಿಸಲು ಸಾಧ್ಯ. ನೆನಪು ನಮ್ಮನ್ನು ಅನನ್ಯಗೊಳಿಸುತ್ತದೆ. ನೆನಪು ವ್ಯಕ್ತಿಯನ್ನು ವಿಶಿಷ್ಟ ವ್ಯಕ್ತಿಯನ್ನಾಗಿಸುತ್ತದೆ. ನೆನಪು ಇಂದು ನಾವು ನಮ್ಮ ಸುತ್ತಲೂ ಕಾಣುವ ಜೀವವ್ಯವಿಧ್ಯತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ಕಾರಣವಾಗಿದೆ. ನೆನಪು ಜಗತ್ತನ್ನು ಬೆರಗುಗೊಳಿಸುವಷ್ಟು ಬದುಕಲು ಆಸಕ್ತಿದಾಯಕ ಸ್ಥಳವನ್ನಾಗಿಸಿದೆ. ನೆನಪೆಂಬುದು ನಿರ್ವಿವಾದವಾಗಿಯೂ ಒಂದು ಸೌಕರ್ಯ ಮತ್ತು ಪ್ರತಿಷ್ಠೆಯಾಗಿದೆ. ನೀವು ಭೌತಿಕವಾಗಿ ಮಾತ್ರ ತಿಳಿದಿದ್ದರೆ ನೀವು ಯಾವುದೇ ಒಂದು ನಿರ್ಧಿಷ್ಟ ರೀತಿಯಲ್ಲಿ ಬದುಕುತ್ತೀರಿ. ನಿಮ್ಮ ಜೀವನದ ಮಾನಸಿಕ ಮತ್ತು ಭಾವನಾತ್ಮಕ ಆಯಾಮಗಳನ್ನು ತಿಳಿದಿದ್ದರೆ ಆಳವಾದ ಬದುಕನ್ನು ಬದುಕುತ್ತೀರಿ. ಆದರೆ, ನೀವು ಜೀವನದ ಮೂಲ ಆಶಯವನ್ನು ಸ್ಪರ್ಶಿಸಿದರೆ ಬದುಕಿನ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಅಂದರೆ; ನಿಮ್ಮ ಇಡೀ ಜೀವಿತವೇ ದೈವಿಕವಾಗುತ್ತದೆ.
ಜೀವನದ ಸಂತೃಪ್ತಿ ಮುಖ್ಯವೆನಿಸುವುದಿಲ್ಲ; ಜೀವನದ ಸನ್ನಿವೇಶ ಮುಖ್ಯವಾಗುತ್ತದೆ. ಹಾಗಾಗಿ ಕರ್ಮಯೋಗಿಯಾಗುವುದು ಎಂದರೆ ನೀವೀಗ ಏನುಮಾಡುತ್ತಿದ್ದೀರಿ ಅದನ್ನು ತ್ಯಜಿಸಬೇಕೆಂದಲ್ಲ. ಇದರರ್ಥ ನೀವು ಎಲ್ಲೇ ಇರಿ, ನಿಮ್ಮ ಚಟುವಟಿಕೆಯನ್ನು, ಕೆಲಸವನ್ನು ನೀವು ಹೃದಯಪೂರ್ವಕವಾದ ಒಳಗೊಳ್ಳುವಿಕೆಯಿಂದ ಮಾಡುತ್ತಾ ಸಂತೋಷದಾಯಕ ಜಗತ್ತನ್ನು ರಚಿಸಲು ಸಹಾಯಮಾಡುವಂತಿರಬೇಕು. ಇಂದಿನ ಜಗತ್ತಿನ ಸಮಸ್ಯೆಯೇನೆಂದರೆ; ನಾವು ಸಾಕಷ್ಟು ಪ್ರಮಾಣದಲ್ಲಿ ಸರಿ-ತಪ್ಪುಗಳ ಕಟ್ಟುನಿಟ್ಟಿನ ಕಲ್ಪನೆಗಳನ್ನು ಸೃಷ್ಟಿಸಿರುವುದು. ನಮ್ಮ ಮನಸ್ಸು ಶ್ರೇಣೀಕೃತ ಕಲ್ಪನೆಗಳಿಂದ ತುಂಬಿರುವವರೆಗೆ ಯಾವುದೇ ಕಾರ್ಯದಲ್ಲಿ ಪೂರ್ಣಹೃದಯದಿಂದ ತೊಡಗಿಸಿಕೊಳ್ಳುವುದು ಅಸಾಧ್ಯ.
ಯಾವುದಾದರೂ ಶ್ರೇಷ್ಠ ಅಥವಾ ಕೀಳು ಎಂದು ಹೇಳಿದ ಕ್ಷಣದಲ್ಲೇ ಇಷ್ಟಪಡುವುದು ಮತ್ತು ಇಷ್ಟಪಡದಿರುವಿಕೆ; ಬಾಂಧವ್ಯ ಅಥವಾ ವಿರಕ್ತಿಯ ಒಂದು ಕಾರ್ಯವಿಧಾನ ಚಾಲನೆಗೆ ಬರುತ್ತದೆ. ಆದರೆ, ನೀವು ಕೆಲವು ಸಮತೋಲನದೊಂದಿಗೆ ವಿಷಯವನ್ನು ನೋಡಿದಾಗ ಜೀವನದ ಪ್ರತಿಯೊಂದು ಅಂಶದಲ್ಲೂ ಔನ್ನತ್ಯವನ್ನು, ಪ್ರಗತಿಯನ್ನು ಕಾಣುವಿರಿ; ಅದು ಒಂದು ಸಂಸ್ಥೆಯನ್ನು ಮುನ್ನಡೆಸುವುದಾಗಲೀ, ಸಂಸಾರವನ್ನು ನಿಭಾಯಿಸುವುದಾಗಲೀ. ಜೀವನದ ವಿದ್ಯಮಾನವು ಆಲೋಚನೆ ಮತ್ತು ಭಾವನೆಗಳ ವಿದ್ಯಮಾನಕ್ಕಿಂತ ಹಿರಿದು.
ವಿಪರ್ಯಾಸವೆಂದರೆ; ನಿಮ್ಮ ಬದುಕು ಸಂಪೂರ್ಣವಾಗಿ ನಿಮ್ಮಿಂದ ನೇಯಲ್ಪಟ್ಟ ಗೂಡಾಗಿರುವುದಿಲ್ಲ; ಇತರ ಹತ್ತಾರು ಜನರ ಅಭಿಪ್ರಾಯಗಳಿಂದ ಕಟ್ಟಲ್ಪಟ್ಟಿರುತ್ತದೆ! ನೀವು ನಿಮ್ಮ ಅಸ್ತಿತ್ವದ ಸ್ವರೂಪವನ್ನು ನಿರ್ದೇಶಿಸಲು ಅವರ ಅಭಿಪ್ರಾಯಗಳಿಗೆ ಅವಕಾಶ ನೀಡುತ್ತಿದ್ದೀರಿ, ಅಷ್ಟೆ.
ಯಾವುದೇ ಚಟುವಟಿಕೆಯಲ್ಲಿ ನೀವು ಸಂಪೂರ್ಣ ಕಳೆದುಹೋದಾಗ ಅಥವಾ ಮುಳುಗಿದಾಗ ನಿಮ್ಮ ಹಿಂದಿನ ಕರ್ಮದ ಪ್ರಭಾವ ನಿಮ್ಮ ಮೇಲಿರುವುದಿಲ್ಲ. ಅನೇಕ ಕ್ರೀಡಾಪಟುಗಳು ಮತ್ತು ಕಲಾವಿದರು ಈ ಮುಳುಗುವಿಕೆಯ ಸ್ಥಿತಿಯನ್ನು ಚೆನ್ನಾಗಿ ಅರಿತಿದ್ದರೂ ಅದನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುವುದು ವಿಷಾದನೀಯ. ತಲ್ಲೀನಗೊಳಿಸುವ ಚಟುವಟಿಕೆ ನಿಮಗೆ ಸ್ವಾತಂತ್ರ್ಯದ ಸವಿಯನ್ನು ನೀಡುತ್ತದೆ; ಆದರೆ ಅದು ಬಹುಕಾಲ ಉಳಿಯುವುದಿಲ್ಲ.
ನೀವು ಯಾವುದೇ ನಿರೀಕ್ಷೆಯಿಲ್ಲದೆ ಕ್ರಿಯೆಯನ್ನು ಮಾಡಿದಾಗ ನೀವು ನಿರೀಕ್ಷೆಯಿಟ್ಟು ಮಾಡಿದ ಕ್ರಿಯೆಗಿಂತ ಗುಣಾತ್ಮಕವಾಗಿ ಭಿನ್ನವಾಗಿರುತ್ತದೆ. ನೀವು ತುಂಬಾ ಸಂತೋಷದಿಂದ ಆಟವನ್ನು ಆಡುತ್ತಿದ್ದರೆ, ಫಲಿತಾಂಶ ಅಪ್ರಸ್ತುತವಾಗುತ್ತದೆ. ಈ ಅರಿವನ್ನು ಜೀವನದ ಪ್ರತಿಯೊಂದು ಅಂಶಕ್ಕೂ ಅನ್ವಯಿಸಿದಾಗ ಜೀವನಾನುಭವ ತೀವ್ರವಾಗಿ ಬದಲಾಗುತ್ತದೆ. ನೀವು ನಿಮ್ಮ ಜೀವನವನ್ನು ನಿಮ್ಮ ಸಂತೋಷದ ಅಭಿವ್ಯಕ್ತಿಯನ್ನಾಗಿ ಕಂಡರೆ ಸಂತೋಷದ ಅನ್ವೇಷಣೆಗಿಂತ ಹೆಚ್ಚಾಗಿ ಜೀವನದ ದೃಷ್ಟಿಕೋನವನ್ನು ಗಮನಾರ್ಹವಾಗಿ ಬದಲಾಯಿಸಿಕೊಂಡಿದ್ದೀರಿ ಎಂದೇ ಅರ್ಥ!
ಆದರೆ ನಮ್ಮ ಮುಂದೆ ಎರಡು ಪರ್ಯಾಯಗಳಿವೆ: ನಾವು ಆಳಲು ಬಯಸುತ್ತೇವೋ ಅಥವಾ ಸೇವೆಮಾಡಲು ಬಯಸುತ್ತೇವೋ? ಪ್ರತಿಯೊಬ್ಬ ಮನುಷ್ಯನು ಜಗತ್ತಿನ ಮೇಲೆ ಪ್ರಭಾವ ಬೀರಲು ಬಯಸುತ್ತಾನೆ; ಆದರೆ ಆ ಪ್ರಭಾವವನ್ನು ಹೇಗೆ ಬೀರುತ್ತೀರಿ ಎಂಬುದು ಮುಖ್ಯಪ್ರಶ್ನೆ. ಕೆಲಸದಲ್ಲಿ ಮುಳುಗಿರುವ ವ್ಯಕ್ತಿಗೆ ಮಾತ್ರವೇ ವಿಶ್ರಾಂತಿಯ ನಿಜವಾದ ಅರ್ಥ ತಿಳಿದಿರುತ್ತದೆ! ಜೀವನ ಚೆನ್ನಾಗಿರುವಾಗ ಮತ್ತು ದೇಹದಲ್ಲಿ ಸಾಮರ್ಥ್ಯವಿರುವಾಗ ನೀವು ಹೆಚ್ಚು ಕರ್ಮದ ಭಾರವನ್ನು ತೆಗೆದುಕೊಂಡರೆ ನಂತರದಲ್ಲಿ ಭಾರರಹಿತರಾಗಿ ನಡೆಯಬಹುದು. ಒತ್ತಡಕ್ಕೆ ಒಳಗಾದಾಗ ಜನರು ವಿಭಿನ್ನವಾಗಿ ನಿಲ್ಲುತ್ತಾರೆ. ಒಂದು ದಿನ ಸಂತೋಷ; ಮರುದಿನ ಖಿನ್ನತೆ; ಇನ್ನೊಂದು ದಿನ ಒತ್ತಡ. ಈ ಪ್ರಕ್ರಿಯೆಯಲ್ಲಿ ವಾಸ್ತವ ವಿರೂಪವಾಗುವುದು ಮಾತ್ರವಲ್ಲ; ದೇಹವನ್ನೂ ವಿರೂಪಗೊಳಿಸುತ್ತದೆ. ಈ ವಿರೂಪಗೊಳ್ಳುವಿಕೆ ಶಕ್ತಿಯ ಮಟ್ಟದಲ್ಲಿ ನಾಟಕೀಯವಾಗಿ ಸಂಭವಿಸುತ್ತದೆ; ಆದರೆ ಶಾರೀರಿಕವಾಗಿ ಪ್ರಕಟಗೊಳ್ಳಲು ಸಮಯ ಹಿಡಿಯುತ್ತದೆ. ಭಾವನಾತ್ಮಕ ಒತ್ತಡದಲ್ಲಿ ಸಿಲುಕಿದ ಮಂದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ದೈಹಿಕ ಹಾವಭಾವದಲ್ಲಿ ಬದಲಾವಣೆ ಗುರುತಿಸಬಹುದು.
ಕರ್ಮಗಳ ಸ್ಮರಣೆಯ ಸ್ವರೂಪವನ್ನು ಅವಲಂಬಿಸಿ ದೇಹದ ಕೆಲವು ನಿರ್ಧಿಷ್ಟ ಭಾಗಗಳು ನಿರ್ದಿಷ್ಟ ರೀತಿಯಲ್ಲಿ ವರ್ತಿಸುತ್ತವೆ. ನೀವು ಎಷ್ಟೇ ವ್ಯಾಯಾಮ, ದೈಹಿಕ ಕಸರತ್ತು ನಡೆಸಿದರೂ ದೇಹದ ಒಂದು ಭಾಗದ ಸ್ನಾಯುಗಳು ನಿಮ್ಮೊಂದಿಗೆ ಸಹಕರಿಸುವುದಿಲ್ಲ. ಇದನ್ನು ಎಂಆರ್‌ಐ ಪರೀಕ್ಷೆಯಲ್ಲಿ ಖಚಿತಪಡಿಸಿಕೊಳ್ಳಬಹುದು. ಅನುವಂಶಿಕಕರ್ಮ ದೇಹದ ಅಸ್ಥಿಪಂಜರದ ಸ್ವರೂಪವನ್ನು ಮತ್ತು ಲಿಂಗವ್ಯವಸ್ಥೆಯನ್ನು ರೂಪಿಸುತ್ತದೆ. ಪ್ರತಿಯೊಂದು ಸ್ನಾಯು ಸಮಾನವಾಗಿ ಶಕ್ತಿಯುತವಾಗಿರುವುದಿಲ್ಲ ದೇಹವನ್ನು ಸೂಕ್ಷö್ಮವಾಗಿ ಪರೀಕ್ಷಿಸಿದರೆ ಕೆಲವು ಭಾಗಗಳಲ್ಲಿ ಸಂವೇದನೆಯೇ ಕಂಡುಬರುವುದಿಲ್ಲ. ಅಂತಹ ಭಾಗಗಳ ಸಂವೇದನಾಶೀಲತೆಯಲ್ಲಿ ಅಡ್ಡಿಗಳಿರುತ್ತವೆ ಅಥವಾ ಬಿರುಕುಗಳಿರುತ್ತವೆ. ಇದು 'ಕರ್ಮವು ತನ್ನದೇ ಆದ ರಚನೆಯನ್ನು ಸೃಷ್ಟಿಸುತ್ತದೆ' ಎಂಬುದನ್ನು ಸಾಬೀತುಪಡಿಸುತ್ತದೆ. ಕರ್ಮದ ಮಾಹಿತಿಯ ಆಧಾರದ ಮೇಲೆ ಭೌತಿಕದೇಹ ನಿರ್ಧಿಷ್ಟ ಆಕಾರವನ್ನು ಪಡೆದುಕೊಳ್ಳುತ್ತದೆ. ನೀವು ಮಾನಸಿಕವಾಗಿ ವಿಚಲಿತರಾದಾಗ ನಿಮ್ಮ ದೇಹವನ್ನು ಪ್ರಜ್ಞಾಪೂರ್ವಕವಾಗಿ ನಿಯಂತ್ರಣದಲ್ಲಿರಿಸುವುದು ಮುಖ್ಯವಾಗುತ್ತದೆ. ಏಕೆಂದರೆ; ಕರ್ಮದ ಸಂಗ್ರಹ ಇಂತಹ ಸಂದರ್ಭಗಳನ್ನೇ ನಿಮ್ಮ ದೇಹವನ್ನು ರೂಪಿಸುವ ಕಾರ್ಯಕ್ಕೆ ಬಳಸಿಕೊಳ್ಳುತ್ತದೆ! ಅಂದರೆ; ವಿರೂಪಗೊಂಡ ಸನ್ನಿವೇಶಗಳೇ ಕರ್ಮದ ಆಯ್ಕೆಯಾಗಿರುತ್ತದೆ. ಈ ಅಂಶಗಳನ್ನು ಪರಿಗಣಿಸಿಯೇ ಯೋಗದಲ್ಲಿ ಆಸನಗಳು ಮತ್ತು ಪ್ರಾಣಾಯಾಮವನ್ನು ನಿರೂಪಿಸಲಾಗಿದೆ.