ಜು. ೧ರಿಂದ ಹೊಸ ಕ್ರಿಮಿನಲ್ ಕಾಯ್ದೆ ಜಾರಿಗೆ
ನವದೆಹಲಿ: ಬ್ರಿಟಿಷರ ಕಾಲದ ಕ್ರಿಮಿನಲ್ ಕಾಯ್ದೆಗಳನ್ನು ಕೈಬಿಟ್ಟಿರುವ ಕೇಂದ್ರ ಸರ್ಕಾರ, ಜುಲೈ ಒಂದರಿಂದ ಹೊಸ ಕಾಯ್ದೆಗಳನ್ನು ಜಾರಿಗೊಳಿಸಲಿದೆ. ಹಳೆಯ ಭಾರತೀಯ ದಂಡಸಂಹಿತೆಯನ್ನು ಬದಲಿಸಿ ಅದರ ಜಾಗದಲ್ಲಿ ಮೂರು ಅಪರಾಧ ತಡೆ ಕಾನೂನು ಜಾರಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಶನಿವಾ ಅಧಿಸೂಚನೆ ಹೊರಡಿಸಿದೆ. ಮೂರು ಮಸೂದೆಗಳಿಗೆ ೨೦೨೩ರ ಡಿಸೆಂಬರ್ ೨೧ರಂದು ಸಂಸತ್ತಿನ ಅಧಿವೇಶನದಲ್ಲಿ ಅನುಮೋದನೆ ದೊರೆತಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಡಿ. ೨೫ರಂದು ಮಸೂದೆಗಳಿಗೆ ಸಹಿ ಹಾಕಿದ್ದರು.
ಕಾಯ್ದೆಗಳ ವಿಶೇಷ
ಈ ಮೂರೂ ಹೊಸ ಕಾಯ್ದೆಗಳು ಸಂತ್ರಸ್ತರನ್ನು ಕೇಂದ್ರೀಕರಿಸಿಕೊಂಡ , ಸಾಕ್ಷ್ಯಧಾರಿತ ಮತ್ತು ನ್ಯಾಯ ಪಡೆಯುವುದನ್ನು ಸುಗಮವಾಗಿಸುವ ವ್ಯವಸ್ಥೆಯನ್ನು ಸೃಷ್ಟಿಸಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಹೊಸ ಮಸೂದೆಗಳನ್ನು ಮಂಡಿಸಿದ ವೇಳೆ ಹೇಳಿದ್ದರು. ಸುಪ್ರೀಂ ಕೋರ್ಟ್, ಹೈಕೋರ್ಟ್ಗಳು, ಸಂಸತ್ ಸದಸ್ಯರು, ಶಾಸಕರು, ಐಪಿಎಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಂದ ೩೨೦೦ಕ್ಕೂ ಹೆಚ್ಚು ಸಲಹೆ-ಸೂಚನೆ ಪಡೆದು ಈ ಹೊಸ ಕಾಯ್ದೆಗಳನ್ನು ರೂಪಿಸಲಾಗಿದೆ ಎಂದು ಶಾ ತಿಳಿಸಿದ್ದರು.