For the best experience, open
https://m.samyuktakarnataka.in
on your mobile browser.

ಜೂನ್ ಅಂತ್ಯದ ವೇಳೆಗೆ ಭೂ ದಾಖಲೆಗಳ ಡಿಜಿಟಲೀಕರಣ ಪೂರ್ಣ

12:06 PM Jan 26, 2025 IST | Samyukta Karnataka
ಜೂನ್ ಅಂತ್ಯದ ವೇಳೆಗೆ ಭೂ ದಾಖಲೆಗಳ ಡಿಜಿಟಲೀಕರಣ ಪೂರ್ಣ

ಚಿಂಚೋಳಿ ಪೈಲಟ್ ತಾಲೂಕಾಗಿ ಆಯ್ಕೆ

ಕಲಬುರಗಿ: ಭೂ ದಾಖಲೆಗಳ ಡಿಜಿಲಿಕರಣ ಮಾಡುವುದರಿಂದಾಗಿ ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿ ದಾಖಲೆಗಳಾಗಿ ಪರಿವರ್ತನೆ ಹೊಂದಿ ಇದರಿಂದ‌ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಜೂನ್ ಅಂತ್ಯದ ವೇಳೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಭೂ ದಾಖಲೆಗಳ ಎ ಹಾಗೂ ಬಿ ಶ್ರೇಣಿಯ ದಾಖಲೆಗಳ ಡಿಜಿಟಲೀಕರಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕಲಬುರಗಿ ಜಿಲ್ಲೆಯ ಎಲ್ಲ ಕಂದಾಯ ತಾಲೂಕುಗಳ ಅಡಿಯಲ್ಲಿ ಬರುವ ಭೂಮಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಉದ್ದೇಶ ಹೊಂದಿದ್ದು. ನಿಜಾಮನ ಕಾಲದಿಂದಲೂ ಇರುವ ಕೈಬರಹದ ದಾಖಲೆಗಳನ್ನು ಕೂಡಾ ಡಿಜಿಟಲೀಕರಣ‌ ಮಾಡುಲಾಗುವುದು. ಇದರಿಂದಾಗಿ ಭೂ ದಾಖಲೆಗಳ ಸಂರಕ್ಷಣೆ ಮಾಡಿದಂತಾಗುತ್ತದೆ ಎಂದು ಸಚಿವರು ಹೇಳಿದರು.

ಕಂದಾಯ ಇಲಾಖೆಯಲ್ಲಿ ಕೆಲ ದಾಖಲೆಗಳು ಲಭ್ಯವಿರುವುದಿಲ್ಲವಾದ್ದರಿಂದ ಸಾರ್ವಜನಿಕರು ನ್ಯಾಯಾಲಯದ ದಾವೆ ಹೂಡುವಂತಾಗಿದ್ದು, ದಾಖಲೆಗಳ ಡಿಜಿಟಲೀಕರಣ ಮಾಡುವುದರಿಂದ ದಾಖಲೆಗಳು ತಂತ್ರಾಂಶ ದಲ್ಲಿ ಲಭ್ಯವಾಗಲಿವೆ.

ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಂಶದಲ್ಲಿ ದಾಖಲೆ ಅಪ್‌ಲೋಡ್ ಮಾಡಲು ರಾಜ್ಯದ ಪ್ರತಿ ಅಭಿಲೇಖಾಯದ ವಿಷಯ ನಿರ್ವಾಹಕರ, ಶಿರಸ್ತೇದಾರರ, ತಹಸೀಲ್ದಾರರ ಹಾಗೂ ಸಹಾಯಕ ಆಯುಕ್ತರ ಅವರಿಗೆ ಲಾಗಿನ್ ಸೃಜಿಸಲಾಗಿದೆ.

ಚಿಂಚೋಳಿ ಆಯ್ಕೆ: ಕಲಬುರಗಿ ಜಿಲ್ಲೆಯಲ್ಲಿ ಚಿಂಚೋಳಿ ತಾಲೂಕನ್ನು ಪೈಲಟ್ ತಾಲೂಕನ್ನಾಗಿ ಆಯ್ಕೆ ಮಾಡಿಕೊಂಡು ಮಾರ್ಚ್ 1.ರಿಂದ ನವೆಂಬರ್ 10, 2024 ರ ಒಳಗಾಗಿ ತಾಲೂಕು ಕಚೇರಿಯ ಅಭಿಲೇಖಾಲಯದ ಎಲ್ಲ ದಾಖಲೆಗಳ ಸಂಪೂರ್ಣ ಗಣಕೀರಣಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.

ಜಿಲ್ಲೆಯ ಇತರೆ ತಾಲೂಕುಗಳ ದಾಖಲೆಗಳನ್ನೂ ಜನವರಿ 01 ರಿಂದ ಜೂನ್ 30,2025 ರ ಒಳಗಾಗಿ ದಾಖಲೆಗಳ ಎ ಹಾಗೂ ಬಿ ಶ್ರೇಣಿಯ ದಾಖಲೆಗಳ ಡಿಜಿಟಲೀಕರಣ‌ ಮಾಡುವ ಉದ್ದೇಶದಿಂದ ಪ್ರತಿ ತಾಲೂಕು ಕೇಂದ್ರಗಳಲ್ಲಿ ಆರು ಜನ ಕಂಪೂಟರ್ ಆಪರೇಟರ್ ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ‌ ನೇಮಕ ಮಾಡಿಕೊಂಡು ಕ್ರಮವಹಿಸಲಾಗುವುದು ಎಂದರು.

ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುವ ಈ ಪ್ರಕ್ರಿಯೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಶಾಸಕರಾದ‌ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ಎಂಎಲ್ಸಿಗಳಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕುಡಾ ಅಧ್ಯಕ್ಷ ಮಹಜರ್ ಆಲಂ ಖಾನ್ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಹಾಗೂ ಮತ್ತಿತರಿದ್ದರು.

Tags :