For the best experience, open
https://m.samyuktakarnataka.in
on your mobile browser.

ಜೂನ್ 4ರ ನಂತರ ರಾಜ್ಯ ಸರ್ಕಾರದ ದಿನಗಣನೆ ಆರಂಭ

08:40 PM Apr 03, 2024 IST | Samyukta Karnataka
ಜೂನ್ 4ರ ನಂತರ ರಾಜ್ಯ ಸರ್ಕಾರದ ದಿನಗಣನೆ ಆರಂಭ

ಹಾವೇರಿ: ಜೂನ್ 4ರ ನಂತರ ರಾಜ್ಯ ಸರ್ಕಾರ ದಿನ ಎಣಿಸಬೇಕು. ಈ ಸರ್ಕಾರದ ಆಯುಷ್ಯ ಕಡಿಮೆ ಇದೆ. ರಾಜ್ಯದಲ್ಲಿ ಶೀಘ್ರವೇ ಮತ್ತೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹಿರೆಕೆರೂರು ಕ್ಷೇತ್ರದ ಮೇದೂರು, ಮಾಸೂರು, ರಟ್ಟಿಹಳ್ಳಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಡವರು ಸಂಕಷ್ಟದಲ್ಲಿದ್ದಾರೆ. ಬರಗಾಲ ಬಂದಿದೆ. ಬಿತ್ತಿದ ಬೆಳೆ ಬಾರದೇ ರೈತರ ಪಾಡು ಸಂಕಷ್ಟದಲ್ಲಿದೆ. ದನಗಳಿಗೆ ಕುಡಿಯಲು ನೀರಿಲ್ಲ. ಮೇವಿಲ್ಲ. ಸಾಲ ತೀರಿಸಲು ರೈತರು ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕಿತ್ತು. ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ಮನೆಗಳಿಗೆ ನೀರು ನುಗ್ಗಿದರೆ ತಕ್ಷಣ ಹತ್ತು ಸಾವಿರ ರೂ. ನೀಡಿದೆವು. ಮನೆ ಬಿದ್ದರೆ 5 ಲಕ್ಷ ರೂಪಾಯಿ ನೀಡಿದೆವು. ಬಡವರು ಉತ್ತಮ ಮನೆ ಕಟ್ಟಿಕೊಂಡಿದ್ದಾರೆ. ಸರ್ಕಾರ ಜೀವಂತ ಇದ್ದಾಗ ಮಾತ್ರ ಆ ರೀತಿಯ ಕೆಲಸ ಮಾಡಲು ಸಾಧ್ಯ. ಅಧಿಕಾರಿಗಳು ವಿರೋಧ ಮಾಡಿದರೂ ಯಡಿಯೂರಪ್ಪ ಅವರು ಈ ತೀರ್ಮಾನ ಮಾಡಿದರು ಎಂದು ಹೇಳಿದರು.
ನಾನು ಬಂದಾಗ ಮತ್ತೆ ಪ್ರವಾಹ ಬಂದಿತು. ಕಾಂಗ್ರೆಸ್ ಬಂದಾಗ ಬರಗಾಲ ಬಂದಿದೆ. ನಾವು ಕೇಂದ್ರದ ಅನುದಾನಕ್ಕೆ ಕಾಯದೇ ಪ್ರತಿ ಹೆಕ್ಟೇರ್‌ಗೆ 13500 ರೂ. ಕೊಟ್ಟೆವು. ಇವರು ಕೇವಲ 2000 ರೂ. ಕೊಟ್ಟಿದ್ದಾರೆ. ಅದು ಎಲ್ಲರಿಗೂ ತಲುಪಿಲ್ಲ. ಜನರು ನಿಮ್ಮನ್ನು ಜನರ ಕೆಲಸ ಮಾಡಲು ಆರಿಸಿ ಕಳುಹಿಸಿದ್ದಾರೆ. ನಿಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದ್ದೀರಿ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸರ್ಕಾರದ ಬಳಿ ಹಣ ಇಲ್ಲ. ಸಿದ್ದರಾಮಯ್ಯ 1.5 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಜನರು ದುಡಿದು ತೆರಿಗೆ ಕಟ್ಟಿದರೆ ಮಾತ್ರ ಸಾಲ ತೀರಿಸಲು ಸಾಧ್ಯ. ಹಿಂದೆ ಸಿದ್ದರಾಮಯ್ಯ ಮಾಡಿದ ಸಾಲವನ್ನು ನಾನು ಕಟ್ಟಿದ್ದೇನೆ ಎಂದರು.
ಸಿದ್ದರಾಮಯ್ಯ ಅವರು ಈ ರಾಜ್ಯವನ್ನು ದಿವಾಳಿ ಮಾಡಿದ್ದಾರೆ ಬರುವ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಎದುರಾಗಲಿದೆ. ಎಲ್ಲೆಡೆ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಪೊಲೀಸರು ಸಿಕ್ಕವರನ್ನು ಬಂಧಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ಪೊಲೀಸರೆ ಇಸ್ಪೀಟ್, ಮಟ್ಕಾ ದಂಧೆ ಶುರು ಮಾಡಿಸಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ಗ್ಯಾರೆಂಟಿ ಎಂದು ಹೇಳಿದರು.
ತುಂಗಾ ಮೇಲ್ದಂಡೆ ಯೋಜನೆಯನ್ನು ನಾವು ಜಾರಿಗೆ ತಂದಿದ್ದೇವೆ. ಹಾವೇರಿ, ರಾಣೆಬೆನ್ನೂರು, ಹಿರೆಕೆರೂರು, ಬ್ಯಾಡಗಿ ತಾಲೂಕಿನ ಒಂದು ಲಕ್ಷ ಎಕರೆ ಪ್ರದೇಶ ನೀರಾವರಿಯಾಗಿದೆ. ಹಿರೆಕೆರೂರು ತಾಲೂಕಿನಲ್ಲಿ ಏತ ನೀರಾವರಿ ಆದರೆ, ಎಲ್ಲ ಕೆರೆಗಳನ್ನು ತುಂಬಿಸಬಹುದು.
ಕಾಂಗ್ರೆಸ್‌ನವರು ಸಾಮಾಜಿಕ ನ್ಯಾಯ ಎಂದು ಹೇಳುತ್ತಾರೆ. ಎಸಿ ಎಸ್ಪಿ ಸಮುದಾಯಗಳ ಮೀಸಲಾತಿಯನ್ನು ನಾನು ಹೆಚ್ಚಳ ಮಾಡಿದೆ. ಇದರಿಂದ 3200 ಎಂಜನೀಯರಿಂಗ್ ಸೀಟು ಹೆಚ್ಚಳವಾಗಿದೆ. 4013 ಎಸ್ಪಿ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ಸಿಕ್ಕಿವೆ. 'ಎಸ್ಸಿ ಎಸ್ಟಿ ನೌಕರರ ಭಡ್ತಿಗೆ ಕಡತ ಸಿದ್ದವಿದೆ. ಆದರೆ, ಸರ್ಕಾರ ಅದನ್ನು ಇಟ್ಟುಕೊಂಡು ಕುಳಿತಿದೆ. ಎಸ್ಪಿ ಎಸ್ಸಿ ಸಮುದಾಯದ ಶಾಸಕರು ಅಧಿಕಾರಕ್ಕಾಗಿ ಸುಮ್ಮನೆ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾನು ಸಿಎಂ ಆಗಿ ಮೊದಲು ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದೆ. ವೃದ್ದಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ ಹೆಚ್ಚಳ ಮಾಡಿದೆ. ಎಸ್ಪಿ ಸಮುದಾಯಕ್ಕೆ ಪ್ರತ್ಯೇಕ ಖಾತೆ ಆರಂಭಿಸಿದೆ ಎಂದು ಹೇಳಿದರು.