ಜೂನ್ 4 ರ ಷೇರು ಮಾರುಕಟ್ಟೆ ಕುಸಿತ: 35 ಲಕ್ಷ ಕೋಟಿ ರೂಪಾಯಿ ನಷ್ಟ
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಸ್ಟಾಕ್ ಮಾರ್ಕೆಟ್ ಅವ್ಯವಹಾರ ಆರೋಪವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾಡಿದ್ದಾರೆ.
ನವದೆಹಲಿ: ಜೂನ್ 4 ರ ಷೇರು ಮಾರುಕಟ್ಟೆ ಕುಸಿತದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಚುನಾವಣಾ ಫಲಿತಾಂಶಗಳ ಘೋಷಣೆಗೆ ಕೆಲವೇ ದಿನಗಳ ಮೊದಲು ಷೇರು ಮಾರುಕಟ್ಟೆಯ ಬಗ್ಗೆ ಏಕೆ ಕಾಮೆಂಟ್ ಮಾಡಿದ್ದಾರೆ, ಚುನಾವಣೆಯ ಸಮಯದಲ್ಲಿ, ಪ್ರಧಾನಿ, ಗೃಹ ಸಚಿವರು ಮತ್ತು ಹಣಕಾಸು ಸಚಿವರು ಷೇರು ಮಾರುಕಟ್ಟೆಗಳ ಬಗ್ಗೆ ಪ್ರತಿಕ್ರಿಯಿಸಿರುವುದನ್ನು ನಾವು ಮೊದಲ ಬಾರಿಗೆ ಗಮನಿಸಿದ್ದೇವೆ. ಷೇರು ಮಾರುಕಟ್ಟೆ ಗಗನಕ್ಕೇರಲಿದೆ ಎಂದು ಪ್ರಧಾನಿ ಮೂರು-ನಾಲ್ಕು ಬಾರಿ ದೇಶಕ್ಕೆ ಹೇಳಿದ್ದಾರೆ. ಷೇರು ಮಾರುಕಟ್ಟೆ ಜೂನ್ 4 ರಂದು ಗಗನಕ್ಕೇರುತ್ತದೆ ಎಂದು ಗೃಹ ಸಚಿವರು ನೇರವಾಗಿ ಹೇಳಿದ್ದರು, ಜೂನ್ 4ರಂದು ಚುನಾವಣೆಯ ಫಲಿತಾಂಶದ ದಿನ ಸ್ಟಾಕ್ ಮಾರ್ಕೆಟ್‌ನಲ್ಲಿ 35 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಇದರಿಂದ ರಿಟೇಲ್ ಹೂಡಿಕೆದಾರರಿಗೆ ದೊಡ್ಡ ಲಾಸ್ ಆಗಿದೆ. ಈ ಕುರಿತಾಗಿ ಜೆಪಿಸಿ ತನಿಖೆಗೆ ಅವರು ಆಗ್ರಹ ಮಾಡಿದ್ದಾರೆ.