For the best experience, open
https://m.samyuktakarnataka.in
on your mobile browser.

ಜೆಡಿಎಸ್ ಕಡೆಗಣನೆಗೆ ಅಸಮಾಧಾನ

11:11 PM Mar 18, 2024 IST | Samyukta Karnataka
ಜೆಡಿಎಸ್ ಕಡೆಗಣನೆಗೆ ಅಸಮಾಧಾನ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ಬಿಜೆಪಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಜೆಡಿಎಸ್ ಮುಖಂಡರು, ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ೨೮ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಕೇವಲು ೩ ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡಲು ಬಿಜೆಪಿ ಒಪ್ಪಿದೆ. ಈ ಮೊದಲು ಹಾಸನ, ಮಂಡ್ಯ ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡುವುದಾಗಿ ಬಿಜೆಪಿ ಹೇಳಿತ್ತು. ಆದರೆ ಇದುವರೆಗೆ ಕ್ಷೇತ್ರಗಳ ಕುರಿತಂತೆ ಅಂತಿಮವಾಗಿ ಪ್ರಕಟಿಸದೇ ಇರುವುದು ಏಕೆ ಎಂದು ಹಲವಾರು ಮುಖಂಡರು ಪ್ರಶ್ನೆ ಮಾಡಿದ್ದಾರೆ.
ಸಭೆಯಲ್ಲಿ ಕೆಲ ನಾಯಕರು ಬಿಜೆಪಿಯ ಏಕಪಕ್ಷೀಯ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿ ಆರಂಭದಲ್ಲಿಯೇ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ. ಚುನಾವಣಾ ಸಭೆ, ಪ್ರಚಾರವನ್ನು ಬಿಜೆಪಿ ನಮ್ಮನ್ನು ಬಿಟ್ಟು ಮಾಡುತ್ತಿದೆ. ಯಾವ ಸಭೆಗೂ ನಮ್ಮನ್ನು ಬಿಜೆಪಿಯವರು ಕರೆಯುತ್ತಿಲ್ಲ. ಏಕಪಕ್ಷೀಯವಾಗಿ ಇಪ್ಪತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಈ ಬಗ್ಗೆ ಜೆಡಿಎಸ್ ವರಿಷ್ಠರನ್ನು ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಆರಂಭದಲ್ಲಿಯೇ ಹೀಗಾದರೆ ಮುಂದೇನು. ಇದು ಪಕ್ಷಕ್ಕೆ ಮಾರಕ ಎಂದು ಮುಖಂಡರು ಕಿಡಿಕಾರಿದ್ದಾರೆ.
ರಾಜ್ಯದ ೧೮ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಶಕ್ತಿ ಜೆಡಿಎಸ್‌ಗೆ ಇದೆ. ಶೇ. ೩ ರಿಂದ ೪ರಷ್ಟು ಜೆಡಿಎಸ್ ಮತ ಬಂದರೆ ೧೮ ಕ್ಷೇತ್ರಗಳಲ್ಲಿ ಬಿಜೆಪಿ ನಿರಾಯಾಸವಾಗಿ ಗೆಲ್ಲುತ್ತದೆ. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದು ಭಾಷಣ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ, ನಮ್ಮ ಪಕ್ಷವನ್ನು ಸ್ಥಳೀಯ ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪ್ರಧಾನಿ ಸಭೆಗಳಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಕರೆಯಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು. ಕಲಬುರಗಿ ಸಭೆಗೂ ಜೆಡಿಎಸ್ ಸ್ಥಳೀಯ ಮುಖಂಡರನ್ನು ಕರೆದಿಲ್ಲ, ಅವರೇ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಸಭೆಗೂ ದೇವೇಗೌಡರು, ಕುಮಾರಸ್ವಾಮಿ ಅವರನ್ನು ಕರೆಯಬಹುದಿತ್ತು. ಏಕೆ ಕರೆದಿಲ್ಲ ಎಂದು ಸಿಡಿಮಿಡಿಗೊಂಡರಲ್ಲದೆ, ನಮ್ಮ ಪಕ್ಷವನ್ನು ಒತ್ತೆ ಇಟ್ಟು ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ. ನಮಗೆ ಮೋದಿ ಅವರ ಬಗ್ಗೆ ಅಪಾರ ಗೌರವ ಇದೆ. ಆದರೆ, ಬಿಜೆಪಿಯಿಂದ ಈ ರೀತಿಯ ನಡವಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ಹೊರಹಾಕಿದರು.
ಕೋಲಾರ, ಹಾಸನ, ಮಂಡ್ಯ ಸೇರಿದಂತೆ ೫ ಕ್ಷೇತ್ರಗಳು ಜೆಡಿಎಸ್‌ಗೆ ಬರುತ್ತವೆ ಎಂದು ನೀವು ಹೇಳಿದ್ದಿರಿ. ಆದರೆ, ಈಗ ನೋಡಿದರೆ ೨ ಸೀಟಿಗೆ ಬಂದು ನಿಂತಿದೆ ಎಂದು ಕುಮಾರಸ್ವಾಮಿ ಅವರನ್ನು ಕೇಳಿದರು. ಈ ವೇಳೆ ಮುಖಂಡರು, ಉಸ್ತುವಾರಿಗಳಿಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಸಮಾಧಾನ ಹೇಳಿದರಲ್ಲದೆ, ಈ ಬಗ್ಗೆ ಇನ್ನೊಮ್ಮೆ ಅಮಿತ್ ಶಾ, ನಡ್ಡಾ ಅವರ ಜತೆ ಮಾತನಾಡುವಂತೆ ದೇವೇಗೌಡ ಅವರು ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದರಲ್ಲದೆ, ಸಾಧ್ಯವಾದರೆ ನಾನೇ ದೆಹಲಿಗೆ ಹೋಗಿ ಬರುತ್ತೇನೆ ಎಂದು ದೇವೇಗೌಡ ಮುಖಂಡರುಗಳಿಗೆ ಹೇಳಿ ಸಮಾಧಾನಪಡಿಸಿದರು.