ಜೆನ್ನಿ ಮಿಲ್ಕ್ ವಂಚನೆ ಪ್ರಕರಣ: ಮೂವರು ಅರೆಸ್ಟ್
ಹೊಸಪೇಟೆ: ಜೆನ್ನಿ ಮಿಲ್ಕ್ ಹೆಸರಲ್ಲಿ ಕತ್ತೆ ಹಾಲಿನ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೆನ್ನಿ ಮಿಲ್ಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನೆಲ್ಲೂರಿನ ನೂತಲಪಾಟಿ ಮುರುಳಿ(೪೩), ಮ್ಯಾನೇಜರ್ ಕಡಪದ ಉಮಾಶಂಕರ್ ರೆಡ್ಡಿ(೩೩) ಹಾಗೂ ಕಡಪಾದ ಸಯ್ಯದ್ ಮೊಹಮ್ಮದ್ ಗೌಸ್(೨೭) ಬಂಧಿತ ಆರೋಪಿಗಳು.
ಕಳೆದ ಮೇ ತಿಂಗಳಿಂದ ಹೊಸಪೇಟೆಯಲ್ಲಿ ಜಿನ್ನಿ ಮಿಲ್ಕ್ ಕಂಪನಿಯನ್ನು ಆರಂಭಿಸಿ, ಈ ಭಾಗದ ೭-೮ ಜಿಲ್ಲೆಗಳ ನೂರಾರು ಜನರಿಗೆ ವಂಚಿಸಿದ್ದಾರೆ. ೩ ಲಕ್ಷ ರೂ. ಪ್ರತಿ ಯುನಿಟ್ ಕತ್ತೆಗಳ ಮಾರಾಟ ಮಾಡಿ ಸುಮಾರು ೧೪.೬೩ ಕೋಟಿ ರೂ. ವಂಚಿಸಿದ್ದಾರೆ. ಈ ಕುರಿತು ೩೧೮ ಜನರು ದಾಖಲೆ ಸಮೇತ ದೂರು ದಾಖಲಿಸಿದ್ದರಿಂದ ಕಳೆದ ೧೯ ದಿನಗಳಿಂದ ವಿವಿಧ ರಾಜ್ಯಗಳಲ್ಲಿ ಶೋಧ ನಡೆಸಿದ್ದರು. ಇಷ್ಟು ದಿನ ತಲೆ ಮರೆಸಿಕೊಂಡಿದ್ದ ಆರೋಪಿಗಳು, ಯಾವುದೋ ದಾಖಲೆಗಳಿಗಾಗಿ ಹೊಸಪೆಟೆ ಕಚೇರಿಗೆ ಆಗಮಿಸುತ್ತಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಹೊಸಪೇಟೆ ನಗರದಲ್ಲೇ ಬಂಧಿಸಲಾಗಿದೆ. ಆರೋಪಿಗಳನ್ನು ಕೋರ್ಟ್ ಹಾಜರುಪಡಿಸಿ, ಬಳಿಕ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಎಸ್ಪಿ ಶ್ರೀಹರಿಬಾಬು ಮಾಹಿತಿ ನೀಡಿದರು.