ಜೆಸಿಸಿ ಕೇಂದ್ರ ಸ್ಥಾಪನೆ ಬಾಹ್ಯಾಕಾಶ ನೀತಿ ಸ್ವಾಗತಾರ್ಹ
ಬೆಂಗಳೂರಿನಲ್ಲಿ ನಡೆದ ಟೆಕ್ ಶೃಂಗಸಭೆ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಕೆಲವು ನೀತಿ ಘೋಷಣೆಗೆ ಕಾರಣವಾಗಿದ್ದು ಸಂತಸದ ಸಂಗತಿ. ಎಸ್.ಎಂ. ಕೃಷ್ಣ ಕಾಲದಲ್ಲಿ ಆರಂಭಗೊಂಡ ಐಟಿ-ಬಿಟಿ ನೀತಿ ಜಾಗತಿಕ ಮಟ್ಟದಲ್ಲಿ ಬೆಂಗಳೂರು ನಗರಕ್ಕೆ ವಿಶಿಷ್ಟ ಸ್ಥಾನ ತಂದು ಕೊಟ್ಟಂತೆ ಜಾಗತಿಕ ಸಾಮರ್ಥ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಗೆ ಪ್ರತ್ಯೇಕ ನೀತಿ ರೂಪಿಸುವುದಕ್ಕೆ ತೀರ್ಮಾನಿಸಿರುವುದು ರಾಜ್ಯಕ್ಕೆ ಜಾಗತಿಕ ಭೂಪಟದಲ್ಲಿ ಹೊಸ ಸ್ಥಾನಮಾನ ಕಲ್ಪಿಸಿಕೊಡಲಿದೆ. ಇದಕ್ಕೆ ರಾಜ್ಯ ಸರ್ಕಾರ ತನ್ನ ರಾಜಕೀಯ ಸಂಕೋಲೆಗಳನ್ನು ಕಳಚಿಕೊಂಡು ಜಾಗತಿಕ ಮಟ್ಟದಲ್ಲಿ ಚಿಂತನೆ ನಡೆಸುವುದು ಅಗತ್ಯ. ಇದಕ್ಕೆ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆಯವರ ನೆರವು ಪಡೆಯಲು ಹಿಂಜರಿಯಬಾರದು. ಅತ್ಯಾಧುನಿಕ ತಂತ್ರಜ್ಞಾನದಲ್ಲಿ ನುರಿತವರನ್ನು ಆಹ್ವಾನಿಸಿ ಅವರಿಗೆ ಮುಕ್ತ ಅವಕಾಶ ನೀಡಿ ಜೆಸಿಸಿ ಕೇಂದ್ರ ಸ್ಥಾಪನೆ ಮತ್ತು ಬಾಹ್ಯಾಕಾಶ ನೀತಿ ರೂಪಿಸಲು ಮುಕ್ತ ಅವಕಾಶ ನೀಡಬೇಕು. ಎಸ್.ಎಂ. ಕೃಷ್ಣ ಆ ಕಾಲದಲ್ಲಿ ಈ ಕೆಲಸ ಮಾಡಿದ್ದರಿಂದ ಬೆಂಗಳೂರು ಸಿಲಿಕಾನ್ ಸಿಟಿಯಾಯಿತು.
ಜಾಗತಿಕ ಮಟ್ಟದಲ್ಲಿ ಹೊಸ ಸಂಶೋಧನೆಯ ಕೇಂದ್ರ ಸ್ಥಾಪಿಸಬೇಕು ಎಂದಾಗ ಜಾಗತಿಕ ಮಟ್ಟದಲ್ಲಿ ಪ್ರತಿಭಾವಂತರನ್ನು ಹುಡುಕಬೇಕು. ಅದರಲ್ಲಿ ವಶೀಲಿಬಾಜಿಗೆ ಅವಕಾಶ ಇರಬಾರದು. ಕೃತಕ ಬುದ್ಧಿಮತ್ತೆಗೆ ವಿಶೇಷ ಅಧ್ಯಯನ ಕೇಂದ್ರ ಅಗತ್ಯ. ಯಂತ್ರ ಕಲಿಕೆ, ಅಧುನಿಕ ಮಾರುಕಟ್ಟೆಗೆ ಅನುಗುಣವಾಗಿ ತಂತ್ರಜ್ಞಾನ ರೂಪಿಸುವ ಯುವಪಡೆ ಬೇಕು. ಇವೆಲ್ಲವೂ ನಾವು ನೀಡುವ ಮೂಲಭೂತ ಸವಲತ್ತಿನ ಮೇಲೆ ಅವಲಂಬಿಸಿದೆ. ಬೆಂಗಳೂರು ನಗರದಲ್ಲಿ ಈ ಸಮಸ್ಯೆ ಇಲ್ಲ. ಆದರೆ ಮೈಸೂರು ಮತ್ತು ಬೆಳಗಾವಿಯಲ್ಲಿ ಕೆಲವು ಕೊರತೆಗಳು ಇರುವುದು ನಿಜ. ಮೂಲಭೂತ ಸವಲತ್ತು ಅಭಿವೃದ್ಧಿಪಡಿಸುವಾಗ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿರಬೇಕು. ಈಗ ಬೆಂಗಳೂರಿನಲ್ಲೇ ಕೆಲವು ಸಮಸ್ಯೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ಮೊದಲನೆಯದು ಸಂಚಾರ ಸಮಸ್ಯೆ. ಎರಡನೇಯದು ಸ್ವಚ್ಛತೆ. ಮೂರನೆಯದು ಮಳೆ ಪ್ರವಾಹ ನಿಯಂತ್ರಣ. ಇವುಗಳು ಮೈಸೂರು, ಬೆಳಗಾವಿಯಲ್ಲಿ ಪ್ರಮುಖವಾಗಿಲ್ಲ. ಸ್ವಚ್ಛತೆ ದೃಷ್ಟಿಯಿಂದ ಮೈಸೂರು, ಬೆಳಗಾವಿ ಉತ್ತಮ ಸ್ಥಿತಿಯಲ್ಲಿದೆ. ಹವಾಗುಣ ಕೂಡ ಉತ್ತಮವಾಗಿದೆ. ಅಲ್ಲಿಯ ಸಮಸ್ಯೆ ಎಂದರೆ ಜಾಗತಿಕ ಮಟ್ಟದಲ್ಲಿ ನಿಲ್ಲುವ ಪ್ರತಿಭಾವಂತರನ್ನು ಆಕರ್ಷಿಸುವುದು. ಇದು ಸುಲಭದ ಕೆಲಸವಲ್ಲ. ಯುವ ಪಡೆಗೆ ಪ್ರಪಂಚದ ಜ್ಞಾನವನ್ನು ಕುಳಿತಲ್ಲೇ ಪಡೆಯಲುಬೇಕಾದ ಎಲ್ಲ ಸವಲತ್ತು ಕಲ್ಪಿಸಿಕೊಡಬೇಕು. ಇದನ್ನು ಕಲ್ಪಿಸಬೇಕು ಎಂದು ನುರಿತವರ ನೆರವು ಪಡೆಯಲೇಬೇಕು. ಇದರಲ್ಲಿ ರಾಜಕೀಯ ನುಸುಳಬಾರದು. ಇದರಲ್ಲಿ ಕೇಂದ್ರ ಸರ್ಕಾರದ ಸಕ್ರಿಯ ಪಾತ್ರವೂ ಅಗತ್ಯ.
ಬಾಹ್ಯಾಕಾಶ ತಂತ್ರಜ್ಞಾನ ನೀತಿಯಲ್ಲೂ ಬೆಂಗಳೂರು ಪ್ರಮುಖವಹಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಖಾಸಗಿ ಪಾಲ್ಗೊಳ್ಳುವಿಕೆ ಅಧಿಕಗೊಳ್ಳಬೇಕು. ವೈಜ್ಞಾನಿಕ ಸಂಶೋಧನೆ ಮತ್ತು ರಕ್ಷಣಾ ತಂತ್ರಜ್ಞಾನದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಪ್ರಮುಖ ಪಾತ್ರವಹಿಲಿಸಲಿದೆ. ವಿದೇಶಗಳಲ್ಲಿ ರಕ್ಷಣಾ ರಂಗದಲ್ಲಿ ಖಾಸಗಿ ಕಂಪನಿಗಳು ಕೆಲಸ ಮಾಡುತ್ತವೆ. ಆದರೆ ಆ ಕಂಪನಿಗಳು ತಮ್ಮ ದೇಶದ ಹಿತಕ್ಕೆ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ. ನಮ್ಮ ನೀತಿಯಲ್ಲಿ ಇದು ಪ್ರಮುಖ ಸ್ಥಾನ ಪಡೆಯುವುದು ಮುಖ್ಯ. ಯಾವುದೇ ಹೊಸ ತಂತ್ರಜ್ಞಾನವಾದರೂ ರಕ್ಷಣಾ ರಂಗದಲ್ಲಿ ಅದು ನಮ್ಮ ದೇಶದ ಭದ್ರತೆಗೆ ಬದ್ಧವಾಗಿರಬೇಕು. ಕೇವಲ ಹಣಗಳಿಸುವುದು ಪ್ರಮುಖ ಉದ್ದೇಶ ಆಗುವಂತಿಲ್ಲ. ಅದೇರೀತಿ ಯುವ ಪೀಳಿಗೆಗೆ ಮುಕ್ತ ಅವಕಾಶ ನೀಡುವುದು ಅಗತ್ಯ. ನಮ್ಮ ದೇಶದಲ್ಲಿ ರಕ್ಷಣಾ ರಂಗಕ್ಕೆ ಬೇಕಾದ ಹೊಸ ಉಪಕರಣ ತಯಾರಿಕೆಯಲ್ಲಿ ಕರ್ನಾಟಕದ ಪಾಲು ಶೇ. ೫೦ ಇರಬೇಕೆಂದು ಬಯಸುವುದು ತಪ್ಪೇನಲ್ಲ. ಅದೇರೀತಿ ವಿದೇಶಿ ಮಾರುಕಟ್ಟೆಯಲ್ಲಿ ರಾಜ್ಯ ಶೇ. ೫ರಷ್ಟು ಪಾಲು ಪಡೆಯಬೇಕೆಂಬ ಗುರಿ ತಪ್ಪೇನಲ್ಲ. ರಾಜ್ಯ ಸರ್ಕಾರ ಎರಡೂ ನಿರ್ಧಾರಗಳು ಯುವ ಪೀಳಿಗೆಯಲ್ಲಿ ಹೊಸ ಆಸೆ ಮೂಡಿಸುವುದರಲ್ಲಿ ಸಂದೇಹವಿಲ್ಲ. ಸರ್ಕಾರ ನುಡಿದಂತೆ ನಡೆದುಕೊಳ್ಳಬೇಕು. ಇದು ಮತ ಬ್ಯಾಂಕ್ ರಾಜಕಾರಣದಿಂದ ದೂರ ಇರುವುದು ಮುಖ್ಯ.
ಹೊಸತಂತ್ರಜ್ಞಾನ ಜಾಗತಿಕ ಮಟ್ಟದಲ್ಲಿ ನಿಲ್ಲಬೇಕು. ಅಲ್ಲದೆ ಅದು ಹೆಚ್ಚು ದುಬಾರಿಯಾಗಬಾರದು. ಜಾಗತಿಕ ಸಾಮರ್ಥ್ಯ ಕೇಂದ್ರಗಳು ಜಾಗತಿಕ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಸಂಪರ್ಕ ಕಲ್ಪಿಸುವುದಕ್ಕೆ ಸಿದ್ಧವಾಗಿರಬೇಕು. ಆಗ ವಿದೇಶಿ ಕಂಪನಿಗಳು ನಮ್ಮಲ್ಲೂ ತಮ್ಮ ಕೇಂದ್ರಗಳನ್ನು ತೆರೆಯಲು ಮುಂದೆ ಬರುವುದು ಕಷ್ಟವಾಗುವುದಿಲ್ಲ. ಹಿಂದೆ ಪ್ರತಿಭಾ ಪಲಾಯನ ಹೆಚ್ಚಾಗುತ್ತಿತ್ತು. ಈಗ ಅದರ ಅಗತ್ಯವಿಲ್ಲ. ವಿದೇಶಿ ಕಂಪನಿಗಳು ತಮ್ಮ ಉತ್ಪಾದನಾ ಕೇಂದ್ರಗಳನ್ನು ಇಲ್ಲೇ ತೆರೆಯಬೇಕು. ಅದಕ್ಕೆ ಬೇಕಾದ ತರಬೇತಿಗೊಂಡ ಪ್ರತಿಭಾವಂತ ಯುವಪಡೆಯನ್ನು ನೀಡುವುದಷ್ಟೇ ನಮ್ಮ ಕೆಲಸವಾಗಬೇಕು. ಆಗ ಪ್ರತಿಭಾಪಲಾಯನದ ಅಗತ್ಯ ಇರುವುದಿಲ್ಲ. ವಿದೇಶದಲ್ಲಿ ಪಡೆಯುವ ಸಂಬಳವನ್ನು ನಮ್ಮ ಯುವಕರು ಇಲ್ಲೇ ಪಡೆಯಬಹುದು. ತರಬೇತಿ ಪಡೆದವರಲ್ಲಿ ಶೇ. ೭೦ರಷ್ಟು ಜನರಿಗೆ ಕೂಡಲೇ ಉದ್ಯೋಗ ದೊರಕುವಂತೆ ಮಾಡುವುದು ಕೇಂದ್ರದ ಗುರಿ. ಅದರಲ್ಲಿ ಮಹಿಳೆಯರಿಗೂ ಮುಕ್ತ ಅವಕಾಶ ನೀಡಬೇಕು.