For the best experience, open
https://m.samyuktakarnataka.in
on your mobile browser.

ಜೈನ ಮುನಿಗಳಿಂದ ಸುವರ್ಣ ಸೌಧ ಮುತ್ತಿಗೆಯ ಎಚ್ಚರಿಕೆ

02:02 PM Nov 23, 2024 IST | Samyukta Karnataka
ಜೈನ ಮುನಿಗಳಿಂದ ಸುವರ್ಣ ಸೌಧ ಮುತ್ತಿಗೆಯ ಎಚ್ಚರಿಕೆ

ಹುಬ್ಬಳ್ಳಿ: ರಾಜ್ಯ ಸರ್ಕಾರವು ಜೈನ ನಿಗಮ ಮಂಡಳಿ ಸ್ಥಾಪಿಸಬೇಕು. ಸಂಚಾರದಲ್ಲಿರುವ ಜೈನ ಮುನಿಗಳ ವಿಶ್ರಾಂತಿಗೆ ಆವಾಸ್ ನಿರ್ಮಿಸಬೇಕು ಎಂಬ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. 9ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಈತನ ಹಾಕಲಾಗುವುದು ಎಂದು ವರೂರಿನ ಶ್ರೀ ಗುಣಧರನಂದಿ ಮಹಾರಾಜರು ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸರ್ಕಾರ ಇದುವರೆಗೆ ಸಮಾಜದ ಕೆಲ ಬೇಡಿಕೆ ಈಡೇರಿಸಿಲ್ಲ. ಜೈನ ನಿಗಮ ಮಂಡಳಿ ಸ್ಥಾಪಿಸುವುದಾಗಿ ಗೃಹಮಂತ್ರಿ ಡಾ. ಜಿ. ಪರಮೇಶ್ವರ ಆಶ್ವಾಸನೆ ನೀಡಿ ಒಂದೂವರೆ ವರ್ಷವಾಯಿತು. ಇದುವರೆಗೆ ಭರವಸೆ ಈಡೇರಿಲ್ಲ ಎಂದರು.
ಅಲ್ಪಸಂಖ್ಯಾತರ ಮಂಡಳಿ ಇದ್ದರೂ ಬೌದ್ಧ, ಜೈನ ಸಮಾಜಕ್ಕೆ ಅನುದಾನ, ನಿಗಮ ಮಂಡಳಿಯಲ್ಲಿ ಸಮಾಜದವರಿಗೆ ಸ್ಥಾನಮಾನ ನೀಡಿಲ್ಲ.‌ ಚಳಿಗಾಲದ ಅಧಿವೇಶನ ವೇಳೆಯಾದರೂ ಸಮಾಜದವರಿಗೆ ಸ್ಥಾನ ನೀಡಬೇಕು. ಸಮಾಜದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸಬೇಕು. ಮಠ, ಮಾನ್ಯಗಳ ಶಾಲೆಗಳಲ್ಲಾದರೂ ತತ್ತಿ ವಿತರಣೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಅನುಸಾರ ಪ್ರವೇಶಾತಿ ಆಗದಿದ್ದರೆ ಬಾಕಿ ಉಳಿದ ಸೀಟ್‌ಗಳನ್ನು ಸಾಮಾನ್ಯವೆಂದು ಪರಿಗಣಿಸಬೇಕು. ಇದರಿಂದ ಶಿಕ್ಷಣದಿಂದ ವಂಚಿತಗೊಳ್ಳುವ ಇನ್ನುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.‌ ಶಿಷ್ಯವೇತನ(ಸ್ಕಾಲರ್ ಶಿಪ್‌) ಸಮಯಕ್ಕೆ ಸರಿಯಾಗಿ ಕೊಡಬೇಕು. ಸಂಚಾರದಲ್ಲಿರುವ ಜೈನ ಮುನಿಗಳಿಗೆ ಅಲ್ಲಲ್ಲಿ ತಂಗುದಾಣ ನಿರ್ಮಿಸಬೇಕು.‌ ಇವೆಲ್ಲಾ ಬೇಡಿಕೆಗಳಿಗೆ ಆಗ್ರಹಿಸಿ ಬೆಳಗಾವಿಯ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಬೆಳಗಾವಿ ಜೈನ‌ ಯುವ ಸಂಘಟನೆ ವತಿಯಿಂದ ಸುವರ್ಣ ಸೌಧ‌ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ನ. 25ರಿಂದ ವರೂರಿನ ನವಗ್ರಹ ಕ್ಷೇತ್ರದಿಂದ ಪಾದಯಾತ್ರೆ ನಡೆಸಲಾಗುವುದು. ಡಿ. 9ರಂದು ಬಸ್ತವಾಡ ಗ್ರಾಮದಿಂದ ಬೆಳಗಾವಿಯ ಸುವರ್ಣ ಸೌಧ ವರೆಗೆ ಹೋರಾಟ ಮಾಡಲಾಗುವುದು. ಸಿಎಂಗೆ ಮನವಿ ಸಲ್ಲಿಸಲಾಗುವುದು. ಬಡೇ ದಿದ ಸಿದ್ಧತೆ ಸರ್ಕಾರ ಈ ಅಧಿವೇಶನದಲ್ಲಿ ಸಮಾಜದ ಬೇಡಿಕೆ ಈಡೇರಿಸದಿದ್ದರೆ‌ ಮುಂದಿನ‌ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.