ಜೈಲರ್‌ಗೆ ಶೋಕಾಸ್ ನೋಟಿಸ್
ಚಿತ್ರದುರ್ಗ : ಜಿಲ್ಲಾ ಕಾರಾಗೃಹದಲ್ಲಿ ಆರೋಪಿಯೋರ್ವನಿಗೆ ಜೈಲರ್ ಕಿರುಕುಳ ನೀಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ದಾವಣಗೆರೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೈಲರ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಜೈಲರ್ ಶ್ರೀಮಂತ ಗೌಡ ಪಾಟೀಲ್‌ಗೆ ಕಿರುಕುಳ ಆರೋಪದಲ್ಲಿ ಶೋಕಾಸ್ ನೋಟೀಸ್ ಮಾಡಲಾಗಿದ್ದು, ನ್ಯಾಮತಿ ಠಾಣೆ ವ್ಯಾಪ್ತಿಯ ಅಪರಾಧ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿ ಚಂದ್ರಪ್ಪ ದೂರು ನೀಡಿರುವ ಆರೋಪಿ.
ನ್ಯಾಮತಿ ಠಾಣೆ ವ್ಯಾಪ್ತಿಯ ಅಪರಾಧ ಪ್ರಕರಣದಲ್ಲಿ ಬಂಧನದಲ್ಲಿರುವ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಚಿಲೂರು ಗ್ರಾಮದ ಆರೋಪಿ ಚಂದ್ರಪ್ಪ ಪ್ರಕರಣವೊಂದರಲ್ಲಿ ಕಳೆದ 2 ವರ್ಷಗಳ ಹಿಂದೆ ಬಂಧಿಯಾಗಿದ್ದು, ಇವರನ್ನು 1 ವರ್ಷಗಳ ಕಾಲ ದಾವಣಗೆರೆ ಜೈಲಿನಲ್ಲಿ ಹಿರಿಸಲಾಗಿತ್ತು. ನಂತರ ಕಾರಣಾಂತರಗಳಿಂದ ಚಂದ್ರಪ್ಪ ಅವರನ್ನು ದಾವಣಗೆರೆ ಜೈಲಿಂದ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಅಂದಿನಿಂದ ಪ್ರತಿದಿನ ಒಂದೊಂದು ಕಾರಣಗಳನ್ನು ಹೇಳಿ, ಜಾತಿ ಆಧಾರಿತವಾಗಿ ನನ್ನ ಮೇಲೆ ಜೈಲರ್ ಹಲ್ಲೆ ಮಾಡುತ್ತಿದ್ದಾರೆ. ಅವರು ನೀಡಿರುವ ಚಿತ್ರಹಿಂಸೆಯಿಂದ ಗಾಯಗಳಾಗಿದ್ದರೂ ಕೂಡ ನನಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿಲ್ಲ. ಅಲ್ಲದೆ ನನ್ನ ತಾಯಿ ಹಾಗೂ ತಮ್ಮ ನನ್ನನ್ನು ನೋಡಲೆಂದು ಜೈಲಿಗೆ ಬಂದರೂ ಕೂಡ ಸುಮಾರು ಗಂಟೆಗಳ ಕಾಲ ಸತಾಯಿಸಿ ನಂತರ ನೋಡಲು ಅವಕಾಶ ಕೊಡುತ್ತಾರೆ. ಆದ್ದರಿಂದ ನನ್ನನ್ನು ಈ ಜೈಲರ್ ಚಿತ್ರಹಿಂಸೆಯಿಂದ ತಪ್ಪಿಸಿ, ದಾವಣಗೆರೆ ಜೈಲಿಗೆ ವರ್ಗಾವಣೆ ಮಾಡಿಕೊಡಬೇಕು ಎಂದು ಜೈಲರ್ ಶ್ರೀಮಂತಗೌಡ ಪಾಟೀಲ್ ಅವರ ಮೇಲೆ ಜಾತಿ ಆಧಾರಿತ ಹಿಂಸೆ ಮತ್ತು ಥಳಿತ ಎಂಬುದಾಗಿ ದಾವಣಗೆರೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಂದ್ರಪ್ಪ ತನ್ನ ವಕೀಲರ ಮೂಲಕ ಲಿಖಿತ ದೂರು ಸಲ್ಲಿಸಿದ್ದಾರೆ.
ಆರೋಪಿಯ ಈ ದೂರನ್ನು ಪರಿಶೀಲಿಸಿದ ನ್ಯಾಯಾಲಯವು ಜೈಲರ್ ಗೆ ಶೋಕಾಸ್ ನೋಟೀಸ್ ನೀಡುವ ಮೂಲಕ ನೋಟೀಸ್ ತಲುಪಿದ 1 ವಾರದೊಳಗೆ ಜೈಲರ್ ಶ್ರೀಮಂತಗೌಡ ಪಾಟೀಲ್ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ಉತ್ತರಿಸಬೇಕೆಂದು ಸೂಚನೆ ನೀಡಿದೆ.