ಜೈಲಿನಲ್ಲಿ ಕೇಜ್ರಿವಾಲ್ ನಿದ್ರೆ ಇಲ್ಲದ ಮೊದಲ ರಾತ್ರಿ
ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಇ.ಡಿ.ಯಿಂದ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನ್ಯಾಯಾಲಯದ ಸದ್ಯದ ಆದೇಶದಂತೆ ಏ.೧೫ರವರೆಗೂ ತಿಹಾರ್ ಜೈಲಿನಲ್ಲಿರುತ್ತಾರೆ. ವೈದ್ಯಕೀಯ ತಪಾಸಣೆಗೊಳಗಾದ ನಂತರ ಸೋಮವಾರ ಸಂಜೆ ೪ ಗಂಟೆಗೆ ಅವರನ್ನು ಜೈಲಿಗೆ ಕರೆತರಲಾಗಿದ್ದರೂ ರಾತ್ರಿ ತುಸು ಹೊತ್ತು ಮಾತ್ರ ನಿದ್ರೆ ಮಾಡಿದರೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನದಲ್ಲಿರುವಾಗಲೇ ಜೈಲು ಸೇರಿರುವ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಏಷ್ಯಾದ ಅತಿದೊಡ್ಡ ಕಾರಾಗೃಹವಾಗಿರುವ ತಿಹಾರ್ ಜೈಲಿನಲ್ಲಿ ಕೈದಿಯಾಗಿದ್ದು ೨ನೇ ಸಂಖ್ಯೆಯ ಜೈಲಿನ ಸೆಲ್‌ನಲ್ಲಿದ್ದಾರೆ.
ಜೈಲಿಗೆ ಬಂದ ಸ್ವಲ್ಪ ಹೊತ್ತಲ್ಲೇ ಅವರಿಗೆ ಚಹಾ ನೀಡಲಾಗಿದ್ದು ರಾತ್ರಿಯೂಟಕ್ಕೆ ಅವರ ಮನೆಯಲ್ಲಿ ಬೇಯಿಸಿದ ಆಹಾರ ನೀಡಲಾಗಿದೆ. ರಾತ್ರಿ ಮಲಗಲು ಹಾಸಿಗೆ, ಹೊದಿಕೆ ಹಾಗೂ ಎರಡು ದಿಂಬುಗಳನ್ನು ನೀಡಲಾಗಿದೆ. ರಾತ್ರಿ ಸ್ವಲ್ಪ ಹೊತ್ತು ಸಿಮೆಂಟ್ ಫ್ಲಾö್ಯಟ್‌ಫಾರ್ಮ್ನಲ್ಲಿ ಮಲಗಿದ್ದರು. ಆನಂತರ ಸೆಲ್‌ನೊಳಗೆಯೇ ನಡೆದಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಸಿಎಂ ಕೇಜ್ರಿವಾಲರ ಮಧುಮೇಹ ಮಟ್ಟ ೫೦ಕ್ಕಿಂತಲೂ ಕೆಳಗಿರುವುದರಿಂದ ವೈದ್ಯರ ಸಲಹೆ ಮೇರೆಗೆ ಮಧ್ಯಾಹ್ನ ಹಾಗೂ ರಾತ್ರಿಯೂಟಕ್ಕೆ ಮನೆಯಿಂದ ತಂದಿರುವ ಆಹಾರ ಸೇವಿಸಲು ಅನುಮತಿ ನೀಡಲಾಗಿದೆ ಮಧುಮೇಹ ಮಟ್ಟ ಸಾಮಾನ್ಯ ಸ್ಥಿತಿಗೆ ಬರುವವರೆಗೂ ಮನೆಯೂಟಕ್ಕೆ ಅವಕಾಶ ನೀಡಲಾಗುತ್ತದೆ. ಈ ದಿನ ಬೆಳಗ್ಗೆ ಅವರು ಸೆಲ್‌ನಲ್ಲಿ ಧ್ಯಾನ ಮಾಡಿದ್ದಾರೆ. ಆ ಬಳಿಕ ಚಹಾ ಹಾಗೂ ಎರಡು ಬಿಸ್ಕತ್‌ಗಳನ್ನು ನೀಡಲಾಗಿದೆ.
ಕೇಜ್ರಿವಾಲ್ ಸೆಲ್ ಹೊರಗೆ ಭದ್ರತೆಗೆ ಇಬ್ಬರು ಸಿಬ್ಬಂದಿ ಹಾಗೂ ಜೈಲು ವಾರ್ಡರ್‌ನ್ನು ನೇಮಿಸಲಾಗಿದೆ. ಜೊತೆಗೆ ಕ್ಷಿಪ್ರಗತಿಯ ಕಾರ್ಯಾಚರಣಾ ತಂಡವನ್ನೂ ನಿಯೋಜಿಸಲಾಗಿದೆ. ಸಿಸಿಟಿವಿ ಮೂಲಕ ಅವರ ಚಲನವಲನವನ್ನು ಗಮನಿಸಲಾಗುತ್ತಿದೆ. ನ್ಯಾಯಾಲಯದಲ್ಲಿ ಅವರು ಕೋರಿಕೊಂಡಂತೆ ರಾಮಾಯಾಣ, ಮಹಾಭಾರತ ಹಾಗೂ ಪ್ರೈಮ್‌ಮಿನಿಸ್ಟರ್ ಹೌಟು ಡಿಸೈಡ್ ಎನ್ನುವ ಪುಸ್ತಕವನ್ನೂ ನೀಡಲಾಗಿದೆ. ಹಾಗೆಯೇ ಅವರ ಅಪೇಕ್ಷೆಯ ಲಾಕೆಟ್ ಧರಿಸುವುದಕ್ಕೂ ಅನುಮತಿ ನೀಡಲಾಗಿದೆ.
ನಿಯಮಾವಳಿಯನುಸಾರ ಕೇಜ್ರಿವಾಲ್ ಅಪೇಕ್ಷಿಸಿದ ಆರು ವ್ಯಕ್ತಿಗಳ ಪಟ್ಟಿಯನ್ನು ಪಡೆಯಲಾಗಿದೆ. ಅದರಂತೆ ಪತ್ನಿ ಸುನೀತಾ, ಮಗ ಹಾಗೂ ಮಗಳು, ಖಾಸಗಿ ಕಾರ್ಯದರ್ಶಿ ಬಿಭವ್ ಕುಮಾರ್ ಹಾಗೂ ಆಪ್ ಸಂಚಾಲಕ ಸಂದೀಪ್ ಪಾಠಕ್ ಅವರನ್ನು ಜೈಲಿನಲ್ಲಿ ಭೇಟಿಯಾಗಲು ಅವಕಾಶ ನೀಡಲಾಗಿದೆ.