ಜೈಲಿನಲ್ಲಿ ದರ್ಶನ್‌ಗೆ ಆತ್ಮಕಥೆ ಬರೆಯುವ ಆಸೆ
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿದ ನಟ ದರ್ಶನ್, ಬೆಂಗಳೂರಿನ ಪರಪ್ಪನ ಅಗ್ರಹಾರ, ಬಳ್ಳಾರಿ ಜೈಲಿನಲ್ಲಿ ಅನುಭವಿಸಿದ ದಿನಗಳ ಕುರಿತು ಆತ್ಮಕಥೆ ಬರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಜೈಲು ಸಿಬ್ಬಂದಿ ಬಳಿ ಈ ಮಾತು ಹೇಳಿಕೊಂಡಿರುವ ಅವರು, ಆತ್ಮಕಥೆಯ ರೂಪದಲ್ಲಿ ಬರೆದ ವಾಸ್ತವದ ದಿನಗಳನ್ನು ತೆರೆಯ ಮೇಲೆ ಸಿನಿಮಾ ಮೂಲಕ ಪ್ರದರ್ಶಿಸುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದಾರಂತೆ. ತಮ್ಮನ್ನು ಭೇಟಿಯಾಗಲು ಆಗಮಿ ಸಿದ್ದ ಪತ್ನಿ ವಿಜಯಲಕ್ಷ್ಮೀ ಬಳಿಯೂ ಈ ಮಾತು ಹಂಚಿ ಕೊಂಡಿದ್ದಾರೆ. ಹೀಗಾಗಿ ಜೈಲಿಗೆ ಭೇಟಿ ಕೊಟ್ಟಾಗ ಪತಿ ದರ್ಶನ್ ಕೋರಿಕೆಯ ಮೇರೆಗೆ ನೋಟ್‌ಬುಕ್ ಪೆನ್ನುಗಳು ಹಾಗೂ ಕೆಲವೊಂದು ಪುಸ್ತಕಗಳನ್ನು ಪತ್ನಿ ಪೂರೈಸಿದ್ದಾರೆ.ನನ್ನ ವಿರುದ್ಧ ಬಂದಿರೋ ಆರೋಪಕ್ಕೆ ತಲೆಬಾಗಿದ್ದೇನೆ. ನ್ಯಾಯಾಂಗದ ಮೇಲೆ ನಂಬಿಕೆ ಇದೆ
ಎಂದಿರೋ ದರ್ಶನ್, ಜೈಲು ದಿನಗಳ ಬಗ್ಗೆ ಕಥೆ ಬರೆಯುವ ಹಂಬಲ ವ್ಯಕ್ತಪಡಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಜೈಲಿನ ಜೀವನ, ಅಲ್ಲಿರುವ ವಾತಾವರಣ, ಸೆಲೆಬ್ರಿಟಿಯೊಬ್ಬರು ತಪ್ಪು ಮಾಡಿ ಜೈಲು ಸೇರಿದರೆ ಜೈಲಿನಲ್ಲಿರುವ ಇತರೆ ಕೈದಿಗಳು, ಸಿಬ್ಬಂದಿ ಅವರನ್ನು ನೋಡುವ ಪರಿ, ಒಳ್ಳೆಯ ಮತ್ತು ಕೆಟ್ಟ ಮಾತುಗಳನ್ನು ಸ್ವತಃ ಅನುಭವಿಸಿದ್ದಾರೆ. ಇವೆಲ್ಲವನ್ನೂ ಒಳಗೊಂಡ ಕಥೆ ಬರೆಯುವ ಆಸೆ ಅವರಲ್ಲಿ ಉಂಟಾಗಿದೆ. ಪ್ರತಿದಿನವೂ `ನನ್ನಿಂದ ತಪ್ಪಾಗಿದೆ' ಎಂದು ಪಶ್ಚಾತ್ತಾಪದ ಮಾತುಗಳನ್ನು ಆಡುತ್ತಿದ್ದು, ತಿದ್ದಿಕೊಳ್ಳೋಕೆ ಅವಕಾಶ ಬೇಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಿವಿ ಬೇಕಂತೆ..
ಪರಪ್ಪನ ಅಗ್ರಹಾರದಲ್ಲಿದ್ದಾಗ ಮನೆ ಊಟ ಬೇಕೆಂದು ಒತ್ತಾಯಿಸುತ್ತಿದ್ದ ದರ್ಶನ್ ಬಳ್ಳಾರಿ ಸೆಲ್‌ನಲ್ಲಿ ಟಿವಿ ಸೌಲಭ್ಯ ನೀಡಿ ಎಂದು ಜೈಲು ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ಜೈಲು ನಿಯಮಾವಳಿ ಪ್ರಕಾರ ಟಿವಿ ಪೂರೈಕೆಗೆ ಅನುಮತಿ ಇದ್ದು, ಸದ್ಯ ರಿಪೇರಿಯಲ್ಲಿರುವ ಒಂದು ಟಿವಿಯನ್ನು ದರ್ಶನ್ ಸೆಲ್‌ಗೆ ಅಳವಡಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಸರ್ಜಿಕಲ್ ಚೇರ್ ಬಳಿಕ ಈಗ ಟಿವಿಯ ದರ್ಶನವೂ ಸಿಗಲಿದೆ.