For the best experience, open
https://m.samyuktakarnataka.in
on your mobile browser.

ಜೈಲು ಕ್ಲಬ್ ಆಗದಿರಲಿ

02:30 AM Aug 28, 2024 IST | Samyukta Karnataka
ಜೈಲು ಕ್ಲಬ್ ಆಗದಿರಲಿ

ರಾಜ್ಯ ಮಾತ್ರವಲ್ಲ, ಇಡೀ ದಕ್ಷಿಣ ಭಾರತಕ್ಕೆ ಬೆಂಗಳೂರು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಹೆಸರುವಾಸಿ. ಶಿಕ್ಷೆಗೆ ಒಳಗಾದವರು, ಅಪರಾಧ ಪ್ರಕರಣಗಳ ಆರೋಪಿಗಳಾದ ಗಣ್ಯರು, ಹೆಸರಾಂತರು, ಸೆಲೆಬ್ರಿಟಿಗಳು, ಸಾಮಾನ್ಯ ಕೈದಿಗಳೆಲ್ಲ ಇರುವ, ಜೊತೆಗೇ ಅನೇಕ ನಕಾರಾತ್ಮಕ ಅಂಶಗಳ ಕುರಿತು ಆರೋಪ ಹೊತ್ತ ಕೇಂದ್ರ ಕಾರಾಗೃಹವಿದು. ಹಣ, ಪ್ರಭಾವ, ರಾಜಕೀಯ ಆಶೀರ್ವಾದ ಮತ್ತು ವೈಯಕ್ತಿಕ ಜನಪ್ರಿಯತೆಗಳು ಜೈಲಿನ ಒಳಗೆ ಎಂತೆಂಥ ಅನುಕೂಲಗಳನ್ನು ಕಲ್ಪಿಸಿಕೊಡುತ್ತವೆ ಎಂಬುದನ್ನು ಕೊಲೆ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ದೊರಕಿರುವ ರಾಜಾತಿಥ್ಯ ಮತ್ತೊಮ್ಮೆ ಬಹಿರಂಗಪಡಿಸಿದೆ. ಜೈಲಿನ ಒಳಗಿನ ಈ ನಿಯಮಬಾಹಿರ ಘಟನೆ ಸರ್ಕಾರಕ್ಕೆ ಇನ್ನಿಲ್ಲದ ಮುಜುಗರ ತಂದೊಡ್ಡಿದೆ. ಅಷ್ಟೇ ಅಲ್ಲ. ಆಡಳಿತ ಯಂತ್ರ ಬಿಗಿ ತಪ್ಪಿರುವುದನ್ನು ಎತ್ತಿ ತೋರಿಸಿದೆ.
ಜೈಲಿನ ಒಳಗೆ ನಟ ದರ್ಶನ್ ಅವರು ಕಾಲ ಮೇಲೆ ಕಾಲು ಹಾಕಿ ಕೂತು, ರೌಡಿ ಆರೋಪ ಹೊತ್ತವರೊಂದಿಗೆ ಹರಟೆ ಹೊಡೆದದ್ದು; ನಟನ ಕೈಯಲ್ಲಿದ್ದ ಚಹಾ ಕಪ್ ಮತ್ತು ಸಿಗರೇಟ್; ಬೆಂಗಳೂರು ವಿಲ್ಸನ್ ಗಾರ್ಡನ್ ಪ್ರದೇಶದ ರೌಡಿ ಶೀಟರ್ ಜೊತೆ ವಿಡಿಯೋ ಕಾಲ್ ಇವ್ಯಾವುವೂ ಹಗುರವಾಗಿ ತೆಗೆದುಕೊಳ್ಳಬೇಕಾದ ವಿಷಯಗಳಲ್ಲ. ಹೀಗಾಗಿಯೇ ಸರ್ಕಾರ ಒಂಬತ್ತು ಸಿಬ್ಬಂದಿಯನ್ನು ಅಮಾನತು ಮಾಡಿದೆ. ಆರೋಪಿ ನಟ ದರ್ಶನ್ ಸೇರಿ ಅನೇಕರ ಮೇಲೆ ಹೊಸದಾಗಿ ಎಫ್‌ಐಆರ್‌ಗಳನ್ನು ದಾಖಲಿಸಿದೆ ಎಂಬುದೆಲ್ಲ ನಿಜ.
ಆದರೆ ಇದು ಪರಪ್ಪನ ಅಗ್ರಹಾರಕ್ಕೆ ಅಂಟಿರುವ ಕಳಂಕವನ್ನು ತೊಡೆದುಹಾಕಲು ಸಾಧ್ಯವೇ? ಬೆಂಗಳೂರು ಪರಪ್ಪನ ಅಗ್ರಹಾರವಷ್ಟೇ ಅಲ್ಲ, ರಾಜ್ಯದ ಎಲ್ಲ ಜೈಲುಗಳಲ್ಲೂ ವಿಐಪಿ ಟ್ರೀಟ್‌ಮೆಂಟ್' ಎಂಬ ಅನಾಚಾರ ನಡೆಯುತ್ತಿರುವುದು ಸುಳ್ಳೇ? ಎಂಬುವು ಈಗ ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಪ್ರಶ್ನೆಗಳಾಗಿವೆ. ಇಂತಹ ಘಟನೆಗಳು ಬೆಳಕಿಗೆ ಬಂದಾಗ ಯಾವ ಸರ್ಕಾರವಿದ್ದರೂ ಒಂದಿಷ್ಟು ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಕೆಲವರನ್ನು ಅಮಾನತು ಮಾಡಿ ತಪ್ಪಿತಸ್ಥ ಸಿಬ್ಬಂದಿಗಳ ತಲೆದಂಡವಾಯಿತು ಎಂಬುದು ಬಿಂಬಿತವಾಗುತ್ತದೆ ಅಷ್ಟೇ. ಘಟನೆ ಮರೆಯುವಷ್ಟರಲ್ಲಿ ಯಾರ ಗಮನಕ್ಕೂ ಬಾರದಂತೆ ಅಮಾನತುಗೊಂಡವರು ಮತ್ತೆ ಯೂನಿಫಾರ್ಮ್ ಧರಿಸಿ ಕರ್ತವ್ಯಕ್ಕೆ ಮರಳಿರುತ್ತಾರೆ. ಹಣವಿದ್ದವರು, ಪ್ರಭಾವಿಗಳು ಮತ್ತು ಬಲಾಢ್ಯರು ಜೈಲಿನೊಳಗೆ ತಮ್ಮಸಹಜ ಅನುಕೂಲ'ಗಳನ್ನು ಪಡೆದುಕೊಳ್ಳುತ್ತಲೇ ಇರುತ್ತಾರೆ ಎಂಬುದು ಕಟು ವಾಸ್ತವ.
ಹಾಗಿದ್ದರೆ ಜೈಲುಗಳ ಇಂತಹ ಕರ್ಮಕಾಂಡಕ್ಕೆ ಕೊನೆ ಎಂದು? ಬೆಂಗಳೂರು ಮಾತ್ರವಲ್ಲ, ಯಾವುದೇ ಜೈಲಿನಲ್ಲೂ ಕೈದಿಗಳಿಗೆ ಕೆಲ ಅನುಕೂಲಗಳು ಇದ್ದೇ ಇರುತ್ತವೆ. ಹಾಗೆಂದು ಐಷಾರಾಮಿ ವಸ್ತುಗಳು, ಮನಸ್ಸಿಗೆ ಬಂದಂತೆ ಆಹಾರ-ವಿಹಾರ, ವಿಶ್ರಾಂತಿಗೆ ಮೆತ್ತನೆಯ ಹಾಸಿಗೆ, ಡಿಜಿಟಲ್ ಸಾಧನಗಳು, ಮೊಬೈಲ್ ವಗೈರೆಗಳು `ಜೈಲ್ ಮ್ಯಾನ್ಯುವಲ್' (ಕಾರಾಗೃಹ ನಿಬಂಧನೆ ಕೈಪಿಡಿ) ಪ್ರಕಾರ ನಿಷೇಧಿತವಾಗಿವೆ. ಆದಾಗ್ಯೂ ಉಳ್ಳವರಿಗೆ ಇವು ಲಭ್ಯವಾಗುತ್ತಲೇ ಇವೆ. ಹಾಗೂ ಇದೇ ಕಾರಣಕ್ಕಾಗಿ ಅನೇಕ ಕ್ರಿಮಿನಲ್‌ಗಳ ಪಾಲಿಗೆ ಜೈಲ್ ಎಂಬುದು ಕ್ಲಬ್‌ನಂತಾಗಿದೆ.
ಸಿಬ್ಬಂದಿ ಕೊರತೆಯಿಂದ ಹೀಗಾಗುತ್ತದೆ ಎನ್ನುವ ನೆಪ ಕೇಳಿ ಬರಬಹುದು. ಆದರೆ ಕಣ್ಣ ಮುಂದೆಯೇ ನಡೆದುದನ್ನು ನೋಡಿ ಕ್ರಮ ತೆಗೆದುಕೊಳ್ಳದಷ್ಟು ಕೊರತೆಯಂತೂ ಪರಪ್ಪನ ಅಗ್ರಹಾರದಲ್ಲಿ ಇರಲಿಲ್ಲ ಎಂಬುದು ಸತ್ಯ. ಇದರರ್ಥ ಸಿಬ್ಬಂದಿ ಶಾಮೀಲಾತಿ ಸ್ಪಷ್ಟ ಮತ್ತು ವ್ಯವಸ್ಥೆಯ ಬಗ್ಗೆ ಅಸಹ್ಯ ಹುಟ್ಟಿಸುವಂಥದ್ದು. ಕೊಲೆಯಂತಹ ಗುರುತರ ಆರೋಪಗಳಿರುವ ವ್ಯಕ್ತಿಗೆ ರಾಜಾತಿಥ್ಯ ದೊರೆಯುತ್ತಿದೆ ಎನ್ನುವ ಕೂಗು ಆರಂಭದಿಂದಲೂ ಇತ್ತು. ಇದು ಈಗ ರುಜುವಾತಾಗಿದೆ.
ಬೆಂಗಳೂರಿನ ಕೇಂದ್ರ ಕಾರಾಗೃಹ ಸೇರಿ ರಾಜ್ಯದ ಜೈಲುಗಳ ಒಳಗೆ ನಡೆಯುತ್ತಿರುವ ಭ್ರಷ್ಟಾಚಾರ, ವಿಐಪಿ ಟ್ರೀಟ್‌ಮೆಂಟ್ ಮತ್ತಿತರ ಆರೋಪಗಳ ಬಗ್ಗೆ ತನಿಖೆ ನಡೆಸಿ ಅನೇಕ ಉನ್ನತಾಧಿಕಾರ ಸಮಿತಿಗಳು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ನ್ಯಾಯಾಲಯ, ವಿಧಾನ ಮಂಡಲ ಸಮಿತಿಗಳ ವರದಿಗಳೂ ಇದರಲ್ಲಿ ಸೇರಿವೆ. ಹಾಗಿದ್ದೂ ಈತನಕ ಸರ್ಕಾರಗಳು ಅದೇಕೋ ಕಾರಾಗೃಹದ ಒಳಗಿನ ಇಂತಹ ಅಪಸವ್ಯಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ನಟ ದರ್ಶನ್ ಪ್ರಕರಣದಿಂದ ಎದುರಾಗಿರುವ ಮುಜುಗರದಿಂದ ಪಾಠ ಕಲಿತು, ಅನಧಿಕೃತ ವಿಐಪಿಗಳಿಗೆ ಮತ್ತು ಇವರನ್ನು ಜೈಲಿನ ಒಳಗೆ ಪೋಷಿಸುವವರ ಚಳಿಯನ್ನು ಇನ್ನಾದರೂ ಬಿಡಿಸಬೇಕಾಗಿದೆ.
ಘಟನೆಯ ನಂತರ ಬೆಂಗಳೂರು ಕೇಂದ್ರ ಕಾರಾಗೃಹವನ್ನು ಮೂರು ಜೈಲುಗಳಾಗಿ ವಿಭಜಿಸುವ ಮಾತು ಕೇಳಿ ಬಂದಿದೆ. ವಿಚಾರಣಾಧೀನ ಕೈದಿಗಳು, ಮಹಿಳಾ ಕೈದಿಗಳು ಮತ್ತು ಶಿಕ್ಷೆಗೆ ಒಳಗಾದವರು ಎಂಬ ಮೂರು ಪ್ರತ್ಯೇಕ ಜೈಲುಗಳನ್ನು ಅಸ್ತಿತ್ವಕ್ಕೆ ತಂದು ಮೂರೂ ಕಾರಾಗೃಹಗಳಿಗೆ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಕುರಿತು ಚಿಂತನೆ ಆರಂಭವಾಗಿರುವುದು ಸಕಾರಾತ್ಮಕವಾಗಿದೆ.